
ಕನ್ನಡ ಬಿಂಬ, ಬೀದರ್
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬೀದರ್ ತಾಲೂಕಿನ ಜನವಾಡಾ ಬಳಿ ಇರುವ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಪುನ:ಶ್ಚೇತನಕ್ಕಾಗಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಈಚೆಗೆ ಮಾಜಿಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ದೇವೇಗೌಡರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಸೂರ್ಯಕಾಂತ ನಾಗಮಾರಪಳ್ಳಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸಹಕಾರ ಸಚಿವ ಮುರಳಿಧರ ಮೊಹೋಳ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ ಎಸ್ ಎಸ್ ಕೆ) ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ (ಎನ್‍ಸಿಡಿಸಿ) 550 ಕೋಟಿ ರೂ.ಸಾಲದ ನೆರವು ನೀಡುವಂತೆ ಕೋರಿದ್ದಾರೆ.
ಕಾರ್ಖಾನೆ ಪುನಶ್ಚೇತನ ಹಾಗೂ ಕೈಗೊಳ್ಳಬೇಕಾಗಿರುವ ವಿಸ್ತರಣಾ ಚಟುವಟಿಕೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವು ಕಲ್ಪಿಸುವಂತೆ ಸೂರ್ಯಕಾಂತ ನಾಗಮಾರಪಳ್ಳಿ ಅವರು ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಕುಮಾರಸ್ವಾಮಿ ಅವರು ಸಹಕಾರ ಸಚಿವರಿಗೆ ಪತ್ರ ಬರೆದು, ರೈತರ ಹಿತದಿಂದ ಎನ್‍ಸಿಡಿಸಿ ನೆರವಿಗಾಗಿ ಒತ್ತಡ ಹೇರಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು ರೈತರಿಂದ-ರೈತರಿಗಾಗಿ ಎಂಬ ಸಹಕಾರಿ ತತ್ವದ ಅಡಿಯಲ್ಲಿ ನಡೆದುಕೊಂಡು ಬರುತ್ತಿದೆ. ಸಾವಿರಾರು ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರಿಗೆ ಇದು ನೇರ ಮತ್ತು ಪರೋಕ್ಷ ಜೀವನೋಪಾಯವನ್ನು ಒದಗಿಸುತ್ತಿದೆ. ಆದರೆ, ಸಂಚಿತ ನಷ್ಟ (ಅಕುಮುಲೇಟೆಡ್ ಲಾಸ್), ಹೆಚ್ಚಿನ ಬಡ್ಡಿ ಹೊರೆ ಹಾಗೂ ಪ್ರತಿಕೂಲ ಮಾರುಕಟ್ಟೆ ಪರಿಸ್ಥಿತಿಯಿಂದಾಗಿ ಕಾರ್ಖಾನೆಯು ಸದ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇದರಿಂದ ರೈತರ ಆದಾಯ, ಗ್ರಾಮೀಣ ಉದ್ಯೋಗದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಕಾರ್ಖಾನೆಗೆ ಪುನಶ್ಚೇತನ ನೀಡುವ ಅಗತ್ಯವಿದೆ ಎಂದು ಕುಮಾರಸ್ವಾಮಿ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಕಾರ್ಖಾನೆ ಕ್ರಷಿಂಗ್ ಸಾಮಥ್ರ್ಯ ಹೆಚ್ಚಿಸುವುದು, ಕೋ-ಜನರೇಶನ್ ಘಟಕಗಳ ವಿಸ್ತರಣೆ, ಎಥನಾಲ್ ಉತ್ಪಾದನೆ ಘಟನೆ, ನವೀಕರಿಸಬಹುದಾದ ಇಂಧನ ಮತ್ತು ಸಂಬಂಧಿತ ಮೂಲಸೌಕರ್ಯ ನಿರ್ಮಾಣಕ್ಕಾಗಿ ಸರ್ಕಾರದ ಭರವಸೆ ಜೊತೆಗೆ ರಿಯಾಯಿತಿ ಬಡ್ಡಿ ದರದಲ್ಲಿ 550 ಕೋಟಿ ರೂ.ಆರ್ಥಿಕ ನೆರವಿನ ಅಗತ್ಯವಿದೆ. ಈ ನೆರವು ನೀಡಲು ಎನ್‍ಸಿಡಿಸಿ ಪ್ರಮುಖ ಸಾಲ ಸಂಸ್ಥೆಯಾಗಿ ಪರಿಗಣಿಸಲಾಗಿದೆ. ಕಾರ್ಖಾನೆಗೆ ನೆರವು ಕಲ್ಪಿಸಿದರೆ ರೈತರಿಗೆ ಸಮಯಕ್ಕೆ ಸರಿಯಾಗಿ ಕಬ್ಬಿನ ಬಿಲ್ ಪಾವತಿ ಮಾಡುವ ಜೊತೆಗೆ ಗ್ರಾಮೀಣ ಜೀವನೋಪಾಯದ ರಕ್ಷಣೆ ಹಾಗೂ ಸಹಕಾರ ಕ್ಷೇತ್ರದ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ತಾವು ಈ ಬೇಡಿಕೆಗೆ ಸ್ಪಂದಿಸಿ, ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು. ಇದರಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ರೈತರು, ಸಹಕಾರ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ತುಂಬಿದಂತಾಗಲಿದೆ ಎಂದು ಕೋರಿದ್ದಾರೆ.
ನಿಖಿಲ್ ರೈತಪರ ಕಾಳಜಿ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಆರ್ಥಿಕ ನೆರವು ಪಡೆಯುವ ವಿಷಯದಲ್ಲಿ ನಿರಂತರ ನಡೆಸುತ್ತಿರುವ ಪ್ರಯತ್ನಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಸಾಕಷ್ಟು ಬೆಂಬಲ ನೀಡಿದ್ದಾರೆ. ಇದು ನಿಖಿಲ್ ಅವರ ರೈತಪರ ಕಾಳಜಿಗೆ ನಿದರ್ಶನವಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಬಣ್ಣಿಸಿದ್ದಾರೆ. ಬೀದರ್ ಸೇರಿ ರಾಜ್ಯದಲ್ಲಿರುವ ಎಲ್ಲ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಎನ್‍ಸಿಡಿಸಿ ನೆರವು ಲಭ್ಯವಾದರೆ ಎಲ್ಲ ಕಾರ್ಖಾನೆಗಳು ಪುನಶ್ಚೇತನಗೊಂಡಲ್ಲಿ ಲಕ್ಷಾಂತರ ರೈತರಿಗೆ, ಕಾರ್ಮಿಕರಿಗೆ ಶಕ್ತಿ ತುಂಬಲಿವೆ ಎಂದಿದ್ದಾರೆ. ಈ ವಿಷಯದ ಬಗ್ಗೆ ನಿಖಿಲ್ ಅವರು ತಂದೆಯವರಾದ ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೆ ಸುದೀರ್ಘ ಚರ್ಚಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಎನ್‍ಸಿಡಿಸಿಯಿಂದ ನೆರವು
ಕಲ್ಪಿಸುವುದಕ್ಕೆ ಶ್ರಮಿಸಲು ಮನವಿ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ ನಾನು ನಡೆಸಿರುವ ಪ್ರಯತ್ನಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲ ಸಿಕ್ಕಿರುವುದು ಮತ್ತಷ್ಟು ಖುಷಿ ತಂದಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.


