Ad imageAd image

ಏಳು ಹಗಲು, ಏಳು ರಾತ್ರಿ ಮತ್ತು ಐವತ್ತು ರೂಪಾಯಿ….!

Kannada Bimba Team
3 Min Read

 

ಕನ್ನಡ ಬಿಂಬ, ಬೀದರ್

ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಏಳು ಹಗಲು, ಏಳು ರಾತ್ರಿ ಧರಣಿ ನಡೆಸಿದ ನಂತರವೇ ಸರಕಾರ ಟನ್ ಕಬ್ಬಿನ ಬೆಲೆಯನ್ನು 50 ರೂಪಾಯಿಯಷ್ಟು ಹೆಚ್ಚಿಸಿದೆ. ಅಂತಿಮವಾಗಿ ಬೀದರ್ ಜಿಲ್ಲೆಯ ರೈತರಿಗೆ ಸಿಗಲಿರುವುದು ಟನ್ ಕಬ್ಬಿಗೆ 2,950 ರೂಪಾಯಿ.

ಟನ್ ಕಬ್ಬಿಗೆ 3100 ರೂ. ನೀಡುವಂತೆ ರೈತರು ಪಟ್ಟು ಹಿಡಿದಿದ್ದರು. ಜಿಲ್ಲಾ ಆಡಳಿತವು 2800 ರೂ. ನಿಗದಿಪಡಿಸಿತ್ತು. ರಾಜ್ಯ ಸರಕಾರದ 50 ರೂಪಾಯಿ ಮತ್ತು ಸಕ್ಕರೆ ಕಾರಖಾನೆಗಳ 50 ರೂ.ಸೇರಿ, ಟನ್ ಕಬ್ಬಿಗೆ 2900 ರೂ. ಕೊಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದ್ದರು. ಇದಕ್ಕೆ ಒಪ್ಪದ ರೈತರು ಧರಣಿ ಮುಂದುವರೆಸಿದ್ದರು. ಬೆಲೆ ಹೆಚ್ಚಳದ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ದಿ. 21 ರಂದು ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದರು. ಒಂದು ದಿನ ಮೊದಲೇ 50 ರೂಪಾಯಿ ಹೆಚ್ಚಳ ಘೋಷಿಸಲಾಗಿದೆ. ರೈತರ ಅಹೋರಾತ್ರಿ ಧರಣಿ ಕೊನೆಗೊಂಡಿದೆ.

ನವೆಂಬರ್ 12 ರಂದು ಹುಮನಾಬಾದ್ ಬಳಿಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ದಿ. 13 ರಿಂದ ಬೀದರ್ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹತ್ತಿರ ಟೆಂಟ್ ಹಾಕಿ ಹಗಲೂರಾತ್ರಿ ಧರಣಿ ಆರಂಭಿಸಿದ್ದರು. 7 ದಿನ ಪೂರೈಸಿದ ಧರಣಿ, ಗುರುವಾರ 8 ನೇ ದಿನಕ್ಕೆ ಕಾಲಿರಿಸಿತು. ಮಧ್ಯಾಹ್ನ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ  ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರ ಈಶ್ವರ ಖಂಡ್ರೆ ಅವರೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದರು. ಟನ್ ಕಬ್ಬಿಗೆ ಅಂತಿಮವಾಗಿ ಸರಕಾರ ಮತ್ತು ಕಾರಖಾನೆಗಳ ಮೊತ್ತ ಸೇರಿ 2,950 ರೂ. ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು.

ರೈತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಆರಂಭಿಸಲಾದ ಧರಣಿ ಸಾಕಷ್ಟು ಸುದ್ದಿ ಮಾಡಿದೆ. ಎಲ್ಲಕ್ಕೂ ವಿಶೇಷ ಎನ್ನಿಸುವುದು ಕೊರೆಯುವ ಚಳಿಯಲ್ಲಿ ರೈತರು ನಡೆಸಿದ ಅಹೋರಾತ್ರಿ ಧರಣಿ.

ಜಲಸಂಗಿಯ ಖಾಸೀಮ್ ಅಲಿ, ಎಣಕೂರಿನ ಸೋಮನಾಥ, ಚವಳಿಯ ಕಲ್ಲಪ್ಪ, ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಮದ ವೀರಶೆಟ್ಟಿ,  ಕೇಸರಜವಳಗಾದ ಓಂಪ್ರಕಾಶ , ಅಣದೂರಿನ ಷಣ್ಮುಖಪ್ಪ, ರಾಮಣ್ಣ ಅಲಮಾಸಪುರ, ಬಸವರಾಜ ಅಷ್ಟೂರು, ವೀರಶೆಟ್ಟಿ ಕಲ್ಲಾ… ಹೀಗೆ ಧರಣಿ ನಡೆಸಿದ ರೈತರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರಲ್ಲಿ ಕೆಲವರು 70 ವರ್ಷ ದಾಟಿದವರೂ ಇದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಬಳಿ ಇದ್ದಿದ್ದು ಸಾಮಾನ್ಯ ಟೆಂಟ್. ಚಳಿ ಮತ್ತು ಶೀತಗಾಳಿಯಿಂದ ರಕ್ಷಣೆ ಕೊಡುವಷ್ಟು ಇದು ಗಟ್ಟಿಯಾಗಿರಲಿಲ್ಲ. ಇಂತಹ ಟೆಂಟ್‍ನಲ್ಲಿಯೆ 55 ರಿಂದ 70 ವರ್ಷದ ರೈತರು ಹಗಲೂರಾತ್ರಿ ಧರಣಿ ನಡೆಸಿದರು. ಹೊಟ್ಟೆ ತುಂಬ ಊಟ ಇಲ್ಲ, ಬೆಚ್ಚನೆಯ ಹೊದಿಕೆ ಇಲ್ಲ, ಕಣ್ತುಂಬ ನಿದ್ದೆಯೂ ಇಲ್ಲ.

ಬೆಳಿಗ್ಗೆ 6 ಗಂಟೆಗೆ ಎಚ್ಚರ. ಪಕ್ಕದಲ್ಲಿ ಪ್ರವಾಸಿ ಮಂದಿರದ ಕೋಣೆಗಳು ಇದ್ದರೂ, ಅಲ್ಲಿ ಬಿಸಿ ನೀರಿನ ವ್ಯವಸ್ಥೆ ಇದ್ದಿರಲಿಲ್ಲ. ಹೀಗಾಗಿ ರೈತರೇ ಸಣ್ಣ ಹೀಟರ್ ಖರೀದಿಸಿ ತಂದರು. ಪ್ರವಾಸಿ ಮಂದಿರದಲ್ಲಿ ಸ್ನಾನ ಮುಗಿಸಿದ ನಂತರ ತಿಂಡಿ.  ಶಾಹೀನ್  ಕಾಲೇಜಿನಿಂದ ಪ್ರತಿ ದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಬರುತಿತ್ತು. ಸಂಜೆ ಹಸಿವು ಆದಾಗ ಬಾಳೆ ಹಣ್ಣು ಅಥವಾ ಚಹ ಕುಡಿಯುತ್ತಿದ್ದೇವು ಎನ್ನುತ್ತಾರೆ, ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ.

ಶಾಹೀನ್ ಕಾಲೇಜಿನವರು ತಿಂಡಿ, ಊಟದ ವ್ಯವಸ್ಥೆ ಮಾಡಿದ್ದರು. ಹಳ್ಳಿಖೇಡ (ಕೆ) ಸ್ವಾಮಿಜಿಯವರೂ ಊಟದ ವ್ಯವಸ್ಥೆ ಮಾಡಿದ್ದರು. ಜಿಲ್ಲೆಯ ಪ್ರಮುಖ ಮಠಾಧೀಶರೊಬ್ಬರನ್ನು ಸಂಪರ್ಕಿಸಿ, ಬೆಂಬಲ ಕೋರಿದ್ದೇವು. ಕಾರ್ಯಕ್ರಮದ ಸಿದ್ಧತೆಯಲ್ಲಿ ಇರುವುದರಿಂದ ಸಮಯ ಸಿಗುತ್ತಿಲ್ಲ ಎಂದು ಈ ಸ್ವಾಮೀಜಿ ಹೇಳಿದರು. ಕೆಲವರು ಬೆಂಬಲ ವ್ಯಕ್ತಪಡಿಸಿದರು. ಇನ್ನೂ ಕೆಲವರು ನಿರ್ಲಕ್ಷ್ಯ ತೋರಿದರು. ಆದರೂ, ಹೋರಾಟವನ್ನು ಮುಂದುವರೆಸಿಕೊಂಡು ಹೋದೇವು ಎಂದು ಮಲ್ಲಿಕಾರ್ಜುನ ಸ್ವಾಮಿ ಮಾಹಿತಿ ನೀಡಿದರು.

ಧರಣಿಗೆ ಕುಳಿತವರ ಪೈಕಿ ಹಲವು ರೈತರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಪ್ರತಿ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಚಳಿಯಲ್ಲಿ ರಾತ್ರಿ ಕಳೆಯುವುದು ಸವಾಲಿನ ಕೆಲಸವಾಗಿತ್ತು. ಈ ನಡುವ ಖಾಸೀಂ ಅಲಿ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆಯಿತು.

ಒಂದು ವಾರ ಹಗಲೂ ರಾತ್ರಿ ನಡೆದ ಧರಣಿಯ ಪ್ರತಿಫಲದ ರೂಪದಲ್ಲಿ 50 ರೂಪಾಯಿ ಹೆಚ್ಚುವರಿಯಾಗಿ ಲಭಿಸಿದೆ. ಇದು ದೊಡ್ಡ ಮೊತ್ತವೇನಲ್ಲ. ಆದರೆ, ಈ ಹೋರಾಟವು ಒಡೆದುಹೋಗಿದ್ದ ರೈತ ಸಂಘಟನೆಗಳನ್ನು, ರೈತ ಮುಖಂಡರನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ರೈತ ಸಂಘದ ಶಕ್ತಿ ಹೆಚ್ಚಿಸಿದೆ.

 

Share This Article

You cannot copy content of this page