
ಕನ್ನಡ ಬಿಂಬ, ಬೀದರ್
ಅಂಗವಿಕಲತೆಯು ದೇಹದಲ್ಲಿರಬಹುದು. ಆದರೆ, ಸಾಧನೆ ಮಾಡುವ ಶಕ್ತಿ ಎಲ್ಲರ ಬಳಿ ಒಂದೇ ಇರುತ್ತದೆ. ಸಾಧಿಸುವ ಛಲವಿದ್ದರೆ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು. ಅಂಗವೈಕಲ್ಯವನ್ನು ನೂನ್ಯತೆ ಎಂದು ಭಾವಿಸದೆ ಅದು ಸಾಧನೆಗೆ ಇರುವ ಮಾರ್ಗ ಎಂದು ಭಾವಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಮ್.ಆರ್.ಡಬ್ಲ್ಯೂ ವಿ.ಆರ್. ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಡಿ. 3 ರಂದು ಬೀದರ್ ನಗರದಲ್ಲಿ ನಡೆದ ವೀಕಲಚೇತನರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿಸ್ ಬ್ರೈಲ್ ಬಾಲ್ಯದಲ್ಲಿ ಸಂಭವಿಸಿದ ಅಪಘಾತದಿಂದ ಸಂಪೂರ್ಣವಾಗಿ ದೃಷ್ಟಿಹೀನರಾದರೂ, ಅಸಾಮಾನ್ಯ ಬುದ್ಧಿ ಮತ್ತು ಸಾಧನೆಯ ಮೂಲಕ ಅಂಧರಿಗೆ ಓದು-ಬರಹದ ಹೊಸ ಲೋಕವನ್ನು ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅದೇ ರೀತಿ ಇರಾ ಸಿಂಗಲ್ ಅವರು ದೈಹಿಕ ವಿಕಲತೆಯಿದ್ದರೂ ಅದನ್ನು ಅಡ್ಡಿಯಾಗಲು ಬಿಡದೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಐಎಎಸ್ ಆದ ಧೈರ್ಯಶಾಲಿ ಹಾಗೂ ಮಾದರಿ ಮಹಿಳೆಯಾಗಿದ್ದಾರೆ. ಅಡತಡೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಕರೆ ನೀಡಿದರು.
ಸ್ಥಳಿಯ ಸಂಸ್ಥೆಗಳಲ್ಲಿ ಶೇ.5 ರಷ್ಟು ಅನುಧಾನವನ್ನು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಬಳಸುವಂತೆ ನಿರ್ದೇಶನ ನೀಡಲಾಗುವುದು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತರಿಗಾಗಿ ಸುರಕ್ಷಿತ ರಾಂಪ್ ವಾಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು ನೃತ್ಯ ಪ್ರದರ್ಶಿಸಿದರು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ರತ್ನ ಸುಭಾμï, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ.ಎಂ, ಅನಿಲಕುಮಾರ್ ಬೆಲ್ದಾರ ಸೇರಿದಂತೆ ವಿಕಲಚೇತನರ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು


