
ಕನ್ನಡ ಬಿಂಬ, ಬೀದರ್
ಬಾಗಿಲು ಮುಚ್ಚಿರುವ ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ಪುನರಾರಂಭಕ್ಕೆ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ.
ಭಾನುವಾರ (Dec 21) ಬೀದರ್ ನಗರಕ್ಕೆ ಭೇಟಿ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ಅವರನ್ನು ಕಾರಖಾನೆ ಅದ್ಯಕ್ಷ ಸುಭಾಷ ಕಲ್ಲೂರ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕಾರಖಾನೆ ಉಪಾಧ್ಯಕ್ಷ ವಿಶ್ವನಾಥ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ದಿಗಂಬರಸ್ವಾಮಿ ಹಾಗೂ ಕಾರಖಾನೆಯ ಕಾರ್ಮಿಕರು ಭೇಟಿಯಾಗಿದ್ದರು.
ಸಕ್ಕರೆ ಸಚಿವರ ಸಮ್ಮುಖದಲ್ಲಿ ಕಷ್ಟ ತೋಡಿಕೊಂಡ ಕಾರ್ಮಿಕರು, ಮಕ್ಕಳ ಮದುವೆ ಮಾಡಲಾಗುತ್ತಿಲ್ಲ. ಶಿಕ್ಷಣ ಕೊಡಿಸಲೂ ಆಗುತ್ತಿಲ್ಲ ಎಂದು ಹೇಳಿದರು. 8 ವರ್ಷಗಳಿಂದ ಒಂದು ಪೈಸೆ ಬಂದಿಲ್ಲ. ಮಗಳ ಮದುವೆ ಮಾಡಲು ಆಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ಕಷ್ಟ ತೋಡಿಕೊಂಡರು. ಪಿಎಫ್ ಸೇರಿದಂತೆ ಯಾವುದೇ ಸೌಲಭ್ಯ ಲಭಿಸಿಲ್ಲ. ಕೋರ್ಟ್ ಆದೇಶದ ನಂತರವೂ ಕಾರಖಾನೆಯವರು ಆರ್ಥಿಕ ಸೌಲಭ್ಯ ಒದಗಿಸಿಲ್ಲ ಎಂದು ಹೇಳಿದರು.
ಕಾರಖಾನೆ ಅದ್ಯಕ್ಷ ಸುಭಾಷ ಕಲ್ಲೂರ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಕಾರಖಾನೆಯ ಪುನರಾರಂಭದ ಅಗತ್ಯ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಕಾರಖಾನೆ ಪುನರಾರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಎನ್‍ಸಿಡಿಸಿ ಸಾಲಕ್ಕೆ ಸರಕಾರದ ಖಾತರಿ ಕೊಡುವುದು ಅಥವಾ ಖಾಸಗಿಯರಿಗೆ ಲೀಸ್ ಕೊಡುವುದು. ಈ ಎರಡರ ಪೈಕಿ ಒಂದು ತೀರ್ಮಾನ ಕೈಗೊಳ್ಳಲಾಗುತ್ತದೆ. ಖಾಸಗಿಯವರು ಮುಂದೆ ಬಂದಲ್ಲಿ ಲೀಸ್ ಕೊಡಲಾಗುತ್ತದೆ. ಹಿಂದೆ ಕೆಲ ಉದ್ಯಮಿಗಳು ಲೀಸ್ ಪಡೆಯಲು ಮುಂದೆ ಬಂದಿದ್ದರು. ಆ ಕುರಿತೂ ಪರಿಶೀಲನೆ ನಡೆಸಲಾಗುತ್ತದೆ. ರೈತರ ಮತ್ತು ಕಾರ್ಮಿಕರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಕ್ಕರೆ ಸಚಿವರು ಭರವಸೆ ನೀಡಿದರು.
ಎನ್‍ಸಿಡಿಸಿಯ 550 ಕೋಟಿ ರೂ. ಸಾಲಕ್ಕೆ ರಾಜ್ಯ ಸರಕಾರ ಖಾತರಿ ಕೊಡುವುದು ಅನುಮಾನ. ಹೀಗಾಗಿ ಖಾಸಗಿಯವರಿಗೆ ಗುತ್ತಿಗೆ ಕೊಡುವ ಸಾಧ್ಯತೆಯೇ ಅಧಿಕ. ಈ ಹಿಂದೆ ಉದ್ಯಮಿಯೊಬ್ಬರು ಗುತ್ತಿಗೆ ಪಡೆಯಲು ಮುಂದೆ ಬಂದಿದ್ದರು. ಆದರೆ, ಕೊನೆ ಗಳಿಗೆಯಲ್ಲಿನ ಬೆಳವಣಿಗೆಯಿಂದಾಗಿ ಗುತ್ತಿಗೆ ಅಂತಿಮಗೊಂಡಿರಲಿಲ್ಲ.
ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ಪುನರಾರಂಭದ ವಿಷಯದಲ್ಲಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಆರಂಭದಿಂದಲೇ ಕಾಳಜಿ ತೋರಿಸುತ್ತಿದ್ದಾರೆ. ಎನ್‍ಸಿಡಿಸಿಗೆ 550 ಕೋಟಿ ರೂ. ನೆರವಿನ ಪ್ರಸ್ತಾವನೆ ಕಳಿಸಿದ್ದರಲ್ಲಿ ಸಚಿವರ ಪಾತ್ರ ಮುಖ್ಯವಾಗಿತ್ತು. ಕಾರಖಾನೆಯನ್ನು ಲೀಸ್ ಕೊಡಲು ಈ ಹಿಂದೆ ಟೆಂಡರ್ ಕರೆದಾಗಲೂ ಅವರು ಹೆಚ್ಚಿನ ಆಸಕ್ತಿ ತೋರಿಸಿದ್ದರು. ಲೀಸ್ ಅಂತಿಮಗೊಳ್ಳುವ ಹಂತದಲ್ಲಿ ಇದ್ದಾಗಲೇ ಕೆಲವರು ಅಪಸ್ವರ ಎತ್ತಿದ್ದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. `ಸಿಹಿ’ ಹಂಚುವ ಹಂತಕ್ಕೆ ಲೀಸ್ ತಲುಪಿತ್ತು. ಕೊನೆಗಳಿಗೆಯಲ್ಲಿನ ಬೆಳವಣಿಗೆಯಿಂದಾಗಿ, ಈ ಸಾಲಿನಲ್ಲಿ ಕ್ರಷಿಂಗ್ ನಡೆಸಬಹುದಾದ ಅವಕಾಶ ಕೈ ತಪ್ಪಿತ್ತು ಎಂದು ಕಾರಖಾನೆಯ ಪುನರಾರಂಭಕ್ಕೆ ಶ್ರಮಿಸುತ್ತಿರುವ ಮುಖಂಡರೊಬ್ಬರು ಹೇಳುತ್ತಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲೂ ಬೀದರ್ ಸಹಕಾರ ಸಕ್ಕರೆ ಕಾರಖಾನೆ ವಿಷಯ ಪ್ರಸ್ತಾಪಗೊಂಡಿದೆ. ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಈ ವಿಷಯ ಪ್ರಸ್ತಾಪಿಸಿ, ಕಾರಖಾನೆಯನ್ನು ಪುನರಾರಂಭ ಮಾಡುವಂತೆ ಒತ್ತಾಯಿಸಿದ್ದರು.
ಇದಕ್ಕೆ ದೀರ್ಘ ಉತ್ತರ ನೀಡಿದ್ದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು, ಸರಕಾರದ ಮಟ್ಟದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ್ದರು.
ಎನ್‍ಸಿಡಿಸಿ (ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ) ನೆರವು ಲಭ್ಯವಾಗದಿದ್ದರೆ ಕಾರಖಾನೆಯನ್ನು ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದ್ದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಸೇರಿದಂತೆ ರಾಜ್ಯದ ಒಟ್ಟು ಆರು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್‍ಸಿಡಿಸಿ ನೆರವು ಪಡೆಯಲು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ಮಾಡಲಾಗುವುದು. ಎನ್‍ಸಿಡಿಸಿ ನೆರವು ಲಭ್ಯವಾಗದಿದ್ದರೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಮತ್ತೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದರು.
ಆರ್ಥಿಕ ಸಂಕಷ್ಟ ಮತ್ತು ಇತರ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಮೂಲಕ ಪುನಶ್ಚೇತನಗೊಳಿಸುವುದು ಸರಕಾರದ ಪ್ರಸ್ತುತ ನೀತಿಯಾಗಿದೆ. ಈಗಾಗಲೇ ಒಟ್ಟು ಹತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಲಾಗಿದೆ. ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್ ಆರ್ ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಪ್ರಿ ಬಿಡ್ ಸಭೆಯಲ್ಲಿ ಬಿಡ್ಡುದಾರರು ಭಾಗವಹಿಸಿದ್ದರೂ ನಿಗದಿಪಡಿಸಿದ ಅವಧಿಯಲ್ಲಿ ಒಬ್ಬರೂ ಭರ್ತಿ ಮಾಡಿದ ಅರ್ಜಿ ಸಲ್ಲಿಸಲಿಲ್ಲ. ಎರಡನೇ ಬಾರಿ ಟೆಂಡರ್ ಕರೆದಾಗ ಸರ್ಕಾರದ ಷರತ್ತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಯಾವ ಬಿಡ್ಡುದಾರರೂ ಭಾಗವಹಿಸಲಿಲ್ಲ. ಹೀಗಾಗಿ ಗುತ್ತಿಗೆ ಪ್ರಕ್ರಿಯೆ ಅಂತಿಮಗೊಂಡಿರಲಿಲ್ಲ.
ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಗುತ್ತಿಗೆ ಕೊಡುವ ಪ್ರಕ್ರಿಯೆ ಬೇಗ ಆರಂಭವಾದಲ್ಲಿ ಕನಿಷ್ಠ ಮುಂದಿನ ಹಂಗಾಮಿನಲ್ಲಾದರೂ ಈ ಕಾರಖಾನೆ ಶುರು ಆಗಬಹುದು.


