
ಮಹಾಶಿವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಆಚರಿಸಲಾಗುತ್ತದೆ. ಇದು ಶಿವ ಪಾರ್ವತಿಯರ ವಿವಾಹ, ಶಿವನು ಲಿಂಗರೂಪದಲ್ಲಿ ಉದ್ಭವಿಸಿದ ದಿನ.ಈ ದಿನದಂದು ಜಾಗರಣೆ, ಉಪವಾಸ ಮತ್ತು ಶಿವಲಿಂಗ ಪೂಜೆಯ ಮೂಲಕ ಅಜ್ಞಾನವನ್ನು ನೀಗಿಸಿ, ಜ್ಞಾನೋದಯ, ಆತ್ಮವಾಲೋಕನ ಮತ್ತು ಆಧ್ಯಾತ್ಮಿಕ ಜಾಗೃತಿಗೊಳಿಸುವುದು ಈ ಹಬ್ಬದ ಪ್ರಮುಖವಾಗಿದೆ. ಭಕ್ತರು ಬಿಲ್ವಪತ್ರಿ, ಹಾಲು, ಜೇನುತುಪ್ಪ, ಗಂಗಾಜಲದಿಂದ ಶಿವಲಿಂಗದ ಅಭೀಷಕ ಮಾಡುತ್ತಾರೆ. ಓಂ ನಮಃ ಶಿವಾಯ ಎಂಬ ಮಂತ್ರ ಪಠಣ ಧ್ಯಾನದಲ್ಲಿ ತೋಡಗುತ್ತಾರೆ. ಈ ಹಬ್ಬವು ಕತ್ತಲೆ (ಅಜ್ಞಾನ)ಯಿಂದ ಬೆಳಕು(ಜ್ಞಾನ) ನೆಡಗೆ ತರುವ ಸಂಕೇತವಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವg ತ್ರೀಮೂರ್ತಿಗಳಲ್ಲಿ ಬರುವ ಮಹೇಶ್ವರರೇ, ಮಹಾದೇವ, ಮಹಾರುದ್ರ,ಕೈಲಾಸಗಿರಿವಾಸ, ಶಿವ ಎಂಬದು ಸರ್ವಸಾಮಾನ್ಯರ ತಿಳುವಳಿಕೆ.
ವಿಷ್ಣು ಭಕ್ತಿಯೇ ಪ್ರಮುಖಗುಣವಿರುವ ಹಾರಿದಾಸ ಸಾಹಿತ್ಯದಲ್ಲಿ ಶಿವ ಭಕ್ತಿ ಪಾರಮ್ಯ ಮೇರೆದಿರುವುದು ವೈಶಿಷ್ಠವಾಗಿದೆ. ಹರಿದಾಸರು ಹರಿ ಭಕ್ತಿ ಪಾರಮ್ಯಕ್ಕೆ ಮಹತ್ವ ನೀಡಿದರೂ, ಶಿವ, ರುದ್ರದೇವರನ್ನು ಆರಾಧಿಸಿದ್ದಾರೆ. ಹರಿದಾಸರು ರುದ್ರದೇವರನ್ನು ಆಪ್ತ ದೇವರಾಗಿ ಸ್ತುತಿಸಿದ್ದಾರೆ. ಹರಿದಾಸ ಸಾಹಿತ್ಯದಲ್ಲಿ ಶಿವ, ಮಹಾದೇವ, ಮಹರುದ್ರರ ಭಕ್ತಿ ಪರಾಕಾಷ್ಠೆ ಪ್ರಸ್ತಾಪವಾಗಿವೆ.
ಶ್ರೀಪಾದರಾಜರ “ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ” ಕೀರ್ತನೆಯಲ್ಲಿ ಮಹಾರುದ್ರದೇವರ ಅವತಾರಗಳ ಮಹಿಮೆಗಳನ್ನು ಸವಿವರವಾಗಿ ಬಿಡಿಸಿದ್ದಾರೆ.
ಕೈಲಾಸಗಿರಿಯ ದೊರೆಯಿವನಮ್ಮ- ಅದು ಅಲ್ಲದೆ ಕೇಳೆ
ಬೈಲು ಸ್ಮಶಾನದಿ ಮನೆಯಿವÀಗಮ್ಮ ಸಂಕರ್ಷಣನೆಂದು
ಕೇಳೆ ಮಹಿಯೊಳು ಜನ ಪೊಗಳುವರಮ್ಮ ಇದು ನಿಜವಮ್ಮ
ನಾಲಿಗೆ ಸಾಸಿರಘಣೀ ಭೂಷಣಮ್ಮ
ಹರಿದಾಸ ಪರಂಪರೆಯಲ್ಲಿ ಅಶ್ವಿನಿದೇವತೆಗಳೆಂದರೆ, ಪುರಂದರದಾಸರು ಮತ್ತು ಕನಕದಾಸರು. ಇವರು ಶಿವನ ಮಹಿಮೆ ಮತು ಸ್ತುತಿಯ ಮಹತ್ವವನ್ನು ಒತ್ತಿ ಒತ್ತಿ ಹೇಳಿದ್ದಾರೆ. ಪುರಂದರದಾಸರು ಈ ಕೀರ್ತನೆಯಲ್ಲಿ
ಚಂದ್ರಚೂಡ ಶಿವಶಂಕರ ಪಾರ್ವತಿರಮಣ ನಿನಗೆ ನಮೋ ನಮೋ
ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ
ನಂದಿವಾಹನಾನಂದದಿಂದ ಮೂಜಗದಿ ಮೆರÀವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ನಾಮವ ಚಂದದಿ ಪೋಗಳುವ ನೀನೇ
ಬಾಲಮೃಕಂಡನ ಕಾಲನು ಎಳೆದಾಗ ಪಾಲಿಸಿದವ ನೀನೇ
ಕಾಲಕೂಟವ ಪಾನಮಾಡಿದ ನೀಲಕಂಠನ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಜಾಲ ಮಾಡಿದ ಗೋಪಾಲನೆಂಬೋ ಹೆಣ್ಣಿಗೆ ಮರಳಾದವನೇ
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕರದೊಳು ವೀಣೆಯ ಗಾನವ ಮಾಡೊ ಉರಗಭೂಷಣನು ನೀನೇ
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೇ
ಗರುಡಗಮನ ಶ್ರೀ ಪುರಂದರವಿಠಲನಿಗೆ ಪ್ರಾಣಪ್ರಿಯನು ನೀನೇ
ಇಲ್ಲಿ ಅಂದು ಅಮೃತ ಘಟದಿಂದ ವಿಷ ತಂದು ಭಜಿಸಿದವ ನೀನೇ, ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ, ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ ಎಂದು ಬಗೆ ಬಗೆಯಾಗಿ ಶಿವನ ಬಣ್ಣನೇ ಮಾಡುತ್ತಾ, ಶಿವನನ್ನು ದಿಗಂಬರ, ನೀಲಕಂಠ, ಕುಂಭಪುರವಾಸ, ಪರಮ ವೈಷ್ಣವ, ಉರಗಭೂಷಣ, ಶ್ರೀ ಪುರಂದರವಿಠ್ಠಲನಿಗೆ ಪ್ರಾಣಪ್ರಿಯನೆಂದು ಆರಾಧಿಸಿ, ಶ್ರೀ ಮಹಾದೇವರ ಉಗ್ರರೂಪ ಮತ್ತು ಕರುಣಾಮಯಿಯ ಗುಣಗಳನ್ನು ಕೊಂಡಾಡಿದ್ದಾರೆ. ಈ ಕೀರ್ತನೆಯಲ್ಲಿ ಶಿವನ ದಯೆ, ಶಕ್ತಿ ಮತ್ತು ಪರಮ ಭಕ್ತರ ಮೇಲಿನ ಪ್ರತಿಯನ್ನು ಏಳೆಏಳೆಯಾಗಿ ತಿಳಿಸಿದ್ದಾರೆ.ಶಿವನ ದಿವ್ಯ ರೂಪ ಮತ್ತು ಹರಿ ಹರರಲ್ಲಿ ಭೇದವಿಲ್ಲವೆಂಬ ತತ್ವವನ್ನು ಸಾರುವ ಸುಪ್ರಸಿದ್ದ ಕೀರ್ತನೆಯಾಗಿದೆ.
ದಾಸ ಕೂಟದಲ್ಲಿ ಬರುವ ಕವಿಗಳು ಮತ್ತು ದಾಸರಾದ ಕನಕದಾಸರು, ಕೀರ್ತನೆಗಳು ಮತ್ತು ಕಾವ್ಯಗಳಲ್ಲಿ ಶಿವಪಾರಮ್ಯವನ್ನು ಮೇರೆದಿದ್ದಾರೆ. ಅವರ ಮೋಹನತರಂಗಿಣಿ ಕಾವ್ಯದಲ್ಲಿ ಧ್ಯಾನಸತ್ತನಾದ ಶಿವನು, ಜಗದ ಕಲ್ಯಾಣಕ್ಕಾಗಿ ಕ್ರಿಯಾಶೀಲನಾಗಿರುವಂತೆ ಪ್ರಸ್ತಾಪಿಸಿದ್ದಾರೆ. ಇನ್ನೂ ಕೀರ್ತನೆಗಳಲ್ಲಂತೂ ಶಿವಾರಾಧನೆಯಲ್ಲಿ ನಟರಾಜನನ್ನು ವಿಧವಿಧವಾಗಿ ಗುಣಗಾನ ಮಾಡಿದ್ದಾರೆ.
ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೋ
ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ ಎನ್ನಿರೋ
ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ಎನ್ನಿರೊ
ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವ ಶಿವ ಶಿವ ಎನ್ನಿರೋ
ನಿಮ್ಮ ತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವ ಶಿವ ಶಿವ ಎನ್ನಿರೋ |
ಅಪರಾಧಕೋಟಿ ತ್ಯಜಿಸಬೇಕಾದರೆ ಶಿವ ಶಿವ ಶಿವ ಎನ್ನಿರೋ –
ಮುಂದೆ ಉಪಮಿತರೋರ್ಮಿತರರಿಯದ ಜಪವಿದು ಶಿವ ಶಿವ ಶಿವ ಎನ್ನಿರೊ
ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವ ಶಿವ ಶಿವ ಎನ್ನಿರೋ
ನಿಜ ಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೋ
ಭುವನಕೆ ಬಲ್ಲಿದರಾಗಬೇಕಾದರೆ ಶಿವ ಶಿವ ಶಿವ ಎನ್ನಿರೋ
ನೀವು ಭವನ ಪದವಿಯನು ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೋ
ಗುರುಲಿಂಗ ಜಂಗಮನ ಅರಿಯಬೇಕಾದರೆ ಶಿವ ಶೀವ ಶಿವ ಎನ್ನಿರೋ
ಮುಂದೆ ಪರಮಾತ್ಮನ ನೀವು ತಿಳಿಯಬೇಕಾದರೆ ಶಿವ ಶಿವ ಶಿವ ಎನ್ನಿರೊ
ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವ ಶಿವ ಶಿವ ಎನ್ನಿರೋ
ನೀವು ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವ ಶಿವ ಶಿವ ಎನ್ನಿರೋ
ಮಾನವ ಜನ್ಮವನ್ನು ಸಾರ್ಥಕತೆ ಪಡೆಯ ಬೇಕಾದರೆ, ಮಾಡಿದ ಅಪರಾಧಗಳಿಗೆ ಕ್ಷೇಮೆ ದೊರೆಯಬೇಕಾದರೆ, ಹುಟ್ಟಿನ ಬಾಧೆಯು ನೀಗಬೇಕಾದರೆ ಒಟ್ಟಾರೆ ಪರಮಾತ್ನನನ್ನು ಅರಿಯಬೇಕಾದರೆ ಶಿವ ಶಿವ ಎಂದು ಧ್ಯಾನಿಸುವಂತೆ ಕರೆ ನೀಡಿದ್ದಾರೆ. ಇಲ್ಲಿ ಶಿವ ನಾಮಸ್ಮರಣೆಯ ಮಹತ್ವವನ್ನು ಸಾರುತ್ತದೆ. ಈ ಕೀರ್ತನೆಯು ಸಂಸಾರದ ದುಃಖಗಳನ್ನು ನಿಗಿಸಿ, ಮನಸ್ಸಿನ ಶಾಂತಿ ಮತ್ತು ಭಗವಂತನನ್ನು ಸಾಕ್ಷತ್ಕಾರಗೊಳಿಸಕೊಳ್ಳಲು ಶಿವನಾಮವನ್ನು ಧ್ಯಾನಿಸಲು ಪ್ರೇರಿಪಿಸುತ್ತದೆ.
ದಾಸನಾಗಬೇಕು ಸದಾ ಶಿವದಾಸನಾಗಬೇಕು ಎಂಬ ಕೀರ್ತನೆಯಲ್ಲಿ ಮಹಾದೇವನ ಮಹಿಮೆಯ ತಿಳಿದು, ಈ ಜಗವೆಲ್ಲ ಈಶ್ವರಮಯವೆಂದು, ಅತಿಯಾದ ಮೋಹದ ಗಡಿಯನು ದಾಟುತ ಶಿವದಾಸನಾಗಬೇಕೆಂದಿದ್ದಾರೆ.
ಸುಳಾದಿ ದಾಸರೆಂದೇ ಪ್ರಖ್ಯಾತರಾದ ವಿಜಯದಾಸರು, ಮಹಾರುದ್ರದೇವರ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಕೈಲಾಸವಾಸ ಗೌರೀಶ ಈಶ ಎಂಬ ಕೀರ್ತನೆಯಲ್ಲಿ ಜನಪದರ ಧಾಟಿಯಲ್ಲಿ ಶಿವನ ಮಹಿಮೆಯನ್ನು ಕೊಂಡಾಡಿದ್ದಾರೆ.
ಕೈಲಾಸವಾಸ ಗೌರೀಶ ಈಶಾ
ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ
ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತ ಧರ್ಮದಿ ಕೊಡು ವಿಷ್ಣಭಕುತಿಯ ಶಂಭೋ ||
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನೆ ಪ್ರೇರಣಯಲ್ಲದೆ
ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ
ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ ||
ಭಾಗೀರಥಿಧರನೆ ಭಯವ ಪರಿಹರಿಸೈಯ ಲೇ
ಸಾಗಿ ಒಲಿದು ಸಂತತ ಶರ್ವದೇವ
ಭಾಗವತ ಜನಪ್ರಿಯ ವಿಜಯವಿಠ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನು ಕೊಡೊ ಶಂಭೋ ||
ಭಗವಂತನಲ್ಲಿ ನಿರ್ಮಲ ಭಕ್ತಿ ಮತ್ತು ಮನಸ್ಸನ್ನು ನಿಯಂತ್ರಿಯಸಲು ಪ್ರಾರ್ಥಿಸಿಸುವ ಪ್ರಸಿದ್ಧ ದಾಸವಾಣಿಯಾಗಿದೆ. ಎಣ್ಣೆ ಧಾರೆಯಂತೆ ಭಕ್ತಿ ಪ್ರವಾಹ ಹರಿಸಿ, ಹರಿಭಕ್ತನಾಗಿಸುವಂತೆ ಬೇಡಿಕೆಯಿಡುತ್ತಾರೆ. ನನ್ನಲಿರುವ ಅಹಂಕಾರ, ಅವಗುಣಗಳನ್ನು ನೋಡದೇ ವಿಹಿತ ಧರ್ಮದಲ್ಲಿಟ್ಟು ಹರಿಭಕ್ತಿಯನ್ನು ಕರುಣಿಸು. ನನ್ನನ್ನು ಸಜ್ಜನರ ಸಂಗಗಳಲ್ಲಿ ನೆಲೆಸುವಂತೆ ಮಾಡು. ಹೀಗೆ ಬಗೆ ಬಗೆಯಾಗಿ ಬೇಡಿಕೆಯಿಡುವ ಕೀರ್ತನೆಯು ಮನುಷ್ಯನ ವ್ಯಕೀತ್ವ ನಿರ್ಮಾಣಕ್ಕೆ ಅವಶ್ಯಕವಿರುವ ಶಿವಶಕ್ತಿಯ ಮಹಿಮೆ ಹಾಗೂ ಶಿವಸಂಸ್ಕಾರದ ನೀವೆದನೆಯು ಅದ್ಭೂತವಾಗಿದೆ.
ಕಾಖಂಡಕಿ ಕೃಷ್ಣದಾಸರು “ಶಿವ ಶಿವಯನ್ನಿ ಮನದೊಳೂ ಹರಹರಯನ್ನಿ” ಎಂಬ ಈ ಕೀರ್ತನೆಯು ಮನಸ್ಸಿನ ಶಾಂತಿ, ಏಕಾಗ್ರತೆ ಮತ್ತು ಆಂತರಿಕ ಅರಿವುವನ್ನು ವೃದ್ಧಿಸಲು ಶಿವಧ್ಯಾನ ಮಾಡಲು ತಿಳಿಸುತ್ತದೆ.
ಶಿವ ಶಿವಯನ್ನಿ ಮನದೊಳೂ ಹರಹರಯನ್ನಿ
ಸಾಂಬಸದಾಶಿವ ಶಂಭುವೆಯನ್ನಿ
ಅಂಬಿಕಾರಮಣ ತೃಯಂಬಕ ನೆನ್ನಿ
ಗಂಗಾಧರ ಜಿತ ನುಂಗನುಯನ್ನಿ
ಮಂಗಳ ಮಹಿಮೆ ಸಿತಾಂಗನುಯೆನ್ನಿ
ಅದ್ರಿನಿವಾಸ ಕಪದಿಯೆಯನ್ನಿ
ರುದ್ರಗುಣದ ಸಮುದ್ರನೆಯನ್ನಿ
ಆಗಮ ವೇದ್ಯ ವಿರಾಗಿಯೆಯನ್ನಿ
ಭೋಗ ಭೂಷಣ ಮಹಾಯೋಗಿಯನ್ನಿ
ಸುರಮುನಿಧೇಯ ಸುಚರಣನುಯನ್ನಿ
ಗುರುಮಹಿಮೆಪತಿಪ್ರಭು ಕರುಣನುಯನ್ನಿ
ಈ ಕೀರ್ತನೆಯು ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೋಡೆದು ಹಾಕಿ, ಅಹಂ ಭಾವ ಕೊಂದಿ, ಆತ್ಮಸಾಕ್ಷಾತ್ಕಾರದತ್ತ ಒಯ್ಯುತ್ತದೆ. ಪರಮ ಶಾಂತಿಯತ್ತ ಒಯ್ಯುವ ಮಾರ್ಗವೇ ಶಿವನಾಮ ಸ್ಮರಣೆಯಾಗಿದೆ.
ತಿಮ್ಮಪದಾಸರು, “ಶಿವ ಶಿವ ಶಿವ ಶಿವ ಶೋಭನಂ ಭವಭಯನಾಶಕ” ಈ ಕೀರ್ತನೆಯಲ್ಲಿ ಶಿವನು ಬ್ರಹ್ಮಾಂಡದ ಅನಿಷ್ಠಗಳನ್ನು ನಾಶ ಮಾಡಿ ಭಕ್ತಿರಿಗೆ ಜ್ಞಾನ ಮತ್ತು ಶುಭವನ್ನು ಕರುಣಿಸುವನು. ಇಂತಹ ಮಹಿಮೆ ಹೊಂದಿರುವ ಮಹೇಶ್ವರನಿಗೆ “ಕೋಟಿಸೂರ್ಯಸಮಪ್ರಭಾಯ ನಮಃ” ಎಂದಿದ್ದಾರೆ.
ಹಲವಾರು ಹರಿದಾಸರು ಶಿವ (ರುದ್ರದೇವರು) ಕುರಿತು ಸ್ತುತಿಸಿರುವ ಕೀರ್ತನೆಗಳನ್ನು ರಚಿಸಿದ್ದಾರೆ. ಶಿವನ ಮಹಿಮೆಯ ಸ್ವರೂಪ ದರ್ಶನ ಮಾಡಿಸಿದ್ದಾರೆ. ಇಲ್ಲಿ ಸಾಂಕೇತಿಕವಾಗಿ ಕೆಲವು ಹರಿದಾಸರ ಹಾಡುಗಳನ್ನು ಮಾತ್ರ ಪಡೆಯಲಾಗಿದೆ. ಹರಿದಾಸ ಸಾಹಿತ್ಯ ಸಂಪತ್ತಿನಲ್ಲಿ ಶಿವ ಮತ್ತು ಅವನ ಮಹಾಲೀಲೆಗಳನ್ನು ನಾಮ ವಿಶೇಷತೆಗಳು ಹಾಗೂ ಮಹಿಮೆಗಳನ್ನು ಬಣ್ಣಿಸಿದ್ದಾರೆ.ಇವರು ಹರಿ ಹರರಲ್ಲಿ ಅವಿನಾಭಾವ ಸಂಬಂಧಗಳನ್ನು ಎತ್ತಿ ಹಿಡಿದಿದ್ದಾರೆ ಮತ್ತು ಶಿವಧ್ಯಾನ ಮಾಡಿ ಮನದಲ್ಲಿರುವ ಅಜ್ಞಾನವನ್ನು ನಾಶಪಡಿಸಿಕೊಂಡು ಅಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರೇರಿಪಿಸಿದ್ದಾರೆ. ದಾಸರು ಶಿವಲೀಲೆಗಳನ್ನು ಜೀವಂತ ಸಾಹಿತ್ಯದಲ್ಲಿ ಸೇರೆಹಿಡಿದಿರುವುದು ಚಿರಸ್ಮರಣಿಯವಾಗಿದೆ. ಹಾರಿದಾಸರು ಸಾರಿದಂತೆ ಹರಿಹರರಲ್ಲಿ ಭೇದ ಬಗೆಯದೇ ಶಿವರಾತ್ರಿ ಆಚರಿಸೋಣ. ಶಿವರಾತ್ರಿಯಂದು ಶಿವ ಧ್ಯಾನ ಮತ್ತು ಜಾಗರಣೆ ಮಾಡಿ, ಶಿವ ಭಕ್ತಿಯಲ್ಲಿ ಮಿಂದು, ಶಿವನ ಅನುಗ್ರಹಕ್ಕೆ ಪಾತ್ರರಾಗಿ, ಪುನಿತರಾಗೋಣ. ನಿರ್ಮಲ ಮನಸ್ಸು ಮತ್ತು ಸಾತ್ವೀಕ ಗುಣಗಳು ವೃದ್ಧಿಸಿಕೊಳ್ಳೋಣ. ಆ ಶಿವ ಪರಮಾತ್ಮನು ನಮ್ಮೆಲ್ಲರಿಗೂ ಸದಾ ಸಕಲ ಸೌಭಾಗ್ಯಗಳನ್ನು ಕರುಣಿಸಲೆಂದು ಪ್ರಾರ್ಥಿಸುವೆ. “ಓಂ ನಮಃ ಶಿವಾಯ”
ಲೇಖಕರು:
ಡಾ. ರವೀಂದ್ರ ಲಂಜವಾಡಕರ್
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ಬೀದರ


