
ಕನ್ನಡ ಬಿಂಬ, ಬೀದರ್
ಎಲ್ಲಾ ಮಾಧ್ಯಮಗಳ ತಾಯಿ ಬೇರು ರಂಗಭೂಮಿಯಾಗಿದೆ. ಹೀಗಾಗಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಶ್ರೇಷ್ಠ ಮಾಧ್ಯಮವಾಗಿದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ, ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದ ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಉಪನ್ಯಾಸ, ರಂಗಗೀತೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಸಿನಿಮಾ, ಅಭಿನಯ, ವಿವಿಧ ಮಾಧ್ಯಮದಗಳಲ್ಲಿ ಬೆಳೆದು ನಿಂತವರು ರಂಗಭೂಮಿಯಿಂದಲೇ ಬಂದವರು. ಸಿನಿಮಾಗಳಲ್ಲಿ ಜಾಹಿರಾತುಗಳ ಹಾವಳಿಯಿದ್ದರೆ, ರಂಗಭೂಮಿ ನಾಟಕದಲ್ಲಿ ನೇರಾನೇರ ದೃಶ್ಯಾವಳಿ ಇರುತ್ತವೆ. ನಾಟಕಗಳಿಂದ ಹೃದಯತುಂಬಿ ಬಂದು ಕಣ್ಣೀರು ಬರುತ್ತವೆ. ಸಾಮಾಜಿಕ ಜಾಲತಾಣದ ಫಾಲೋವರ್ಸ್ ಮತ್ತು ಅಲ್ಲಿಯ ಸ್ನೇಹಿತರನ್ನು ನಂಬದೆ ನಚ್ಚದೆ, ನಿಜವಾದ ಸ್ನೇಹಿತರನ್ನು ನಂಬಿ ಬದುಕಿಬೇಕಾಗಿದೆ. ರಂಗಭೂಮಿ ಸಹಕಾರದಿಂದ ನಟ ನಟಿಯರಾಗಿ ಬದುಕಬೇಕಾಗಿದೆ. ರಂಗಭೂಮಿ ಕಲೆಗಳಿಂದ ವಿದೇಶದಲ್ಲಿ ದೀರ್ಘಕಾಲೀನ ಕಾಯಿಲೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಅತಿಯಾದ ಮೊಬೈಲ್ ಸಾಮಾಜಿಕ ಜಾಲತಾಣ ಬಳಸಿ ದೃಷ್ಟಿಹೀನ, ಮತಿಹೀನ ಮತ್ತು ಕಾಯಕಹೀನರಾಗಿ ಬದುಕುತ್ತಿರುವುದು ನಿಜಕ್ಕೂ ದುರದೃಷ್ವಕರ ಎಂದರಲ್ಲದೆ ರಂಗಕಲಾವಿದರ ಒಂದು ಪಟ್ಟಿ ತಯಾರಾಗಬೇಕು. ಅವರ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ನಂತರ ಅವರಿಗೆ ಕಾಲಕಾಲಕ್ಕೆ ಸನ್ಮಾನಿಸಿದಾಗ ರಂಗಭೂಮಿ ಬೆಳೆಯುತ್ತದೆ ಎಂದು ಪಾಟೀಲ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಹೈ.ಕ.ಶಿಕ್ಷಣ ಸಂಸ್ಥೆಯ ಕಲಬುರಗಿಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ ಮಾತನಾಡಿ, ಜನಪದ ಕಲೆ, ರಂಗಕಲೆ ಮತ್ತು ದೇಶಿ ಕಲಾ ಸಂಸ್ಕøತಿ ಉಳಿಸಿ ಬೆಳೆಸುತ್ತಿರುವ ಡಾ. ಹೆಬ್ಬಾಳೆದ್ವಯರ ಕಾರ್ಯ ಶ್ಲಾಘನೀಯ. ಕಲೆ ಸಾಹಿತ್ಯ ಸಂಸ್ಕತಿ ಸಂವರ್ಧನೆಗಾಗಿ ಕಾಲೇಜಿನ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಹಾಗೂ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ, ರಂಗಭೂಮಿ ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ರಂಗಭೂಮಿ ನಮಗೆ ಶಿಸ್ತು, ಸಂಯಮ, ನಮೃತೆ, ಆದರ್ಶ, ತಾಳ್ಮೆ ಕಲಿಸುತ್ತದೆ. ಮನೋರಂಜನೆ ಒದಗಿಸುತ್ತದೆ. ರಂಗಭೂಮಿ ನಮ್ಮ ದೇಶದ ಶ್ರೀಮಂತ ಸಂಸ್ಕತಿಯ ಪ್ರತೀಕ. ಇದನ್ನು ಮುಂದಿನ ಯುವ ಪೀಳಿಗೆ ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ತಿಳಿಸಿದರು.
ವಿಶೇಷ ಸನ್ಮಾನ ಸ್ವೀಕರಿಸಿದ ಪತ್ರಕರ್ತ ಆದೀಶ ವಾಲಿ ಮಾತನಾಡಿ, ಮುಂಬರುವ ಮೇ ತಿಂಗಳ ಒಳಗಾಗಿ ರೋಟರಿ ಸಂಸ್ಥೆ ಹಾಗೂ ಜಾನಪದ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಬೀದರನಲ್ಲಿ ಭವ್ಯ ಸಾಂಸ್ಕøತಿಕ ಕಾರ್ಯಕ್ರಮ ಆಯೋಸಲಾಗುವುದು ಎಂದರು.
ವಿಶೇಷ ಉಪನ್ಯಾಸ ನೀಡಿದ ಕಲಬುರಗಿಯ ಹಿರಿಯ ರಂಗ ಕಲಾವಿದ ಶಂಕರಯ್ಯ ಆರ್.ಘಂಟಿ ಮಾತನಾಡಿ ವಿದ್ಯಾರ್ಥಿಗಳು ಇಂದು ರಂಗಭೂಮಿಯಿಂದ ವಿಮುಖರಾಗುತ್ತಿದ್ದಾರೆ. ದೇಶದ ಆಸ್ತಿಗಳಾದ ವಿದ್ಯಾರ್ಥಿಗಳು ರಂಗಭೂಮಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು. ಇದೇ ವೇಳೆ ಜನಪದ ರಂಗಭೂಮಿ ಕುರಿತು ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಡಾ. ಸಂಜೀವಕುಮಾರ ಜುಮ್ಮಾ ವಿಶೇಷ ಉಪನ್ಯಾಸ ನೀಡಿದರು.
ಕಲಬುರಗಿಯ ಕಲಾವಿದರಾದ ಸಂಗಯ್ಯ ಹಳ್ಳದಮಠ, ವಾದಿರಾಜ ಕುಲಕರ್ಣಿ, ಸಚಿನ ಮೊಘ ರಂಗಗೀತೆಗಳ ಗಾಯನ ನಡೆಸಿಕೊಟ್ಟರು. ಕಲಾವಿದರಾದ ರಾಮಶೆಟ್ಟಿ ಬಂಬುಳಗೆ, ಗಣಪತಿ ದೇಶಪಾಂಡೆ, ಬಾಬುರಾವ ಬಾಬಣೆ, ಧನರಾಜ ಬಂಬುಳಗೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಬಿ.ವಿ.ಭೂಮರೆಡ್ಡಿ ಕಾಲೇಜಿನ ಪ್ರಾಚಾರ್ಯೆ ಡಾ. ದೀಪಾ ರಾಗಾ ಉಪಸ್ಥಿತರಿದ್ದರು. ಕು. ದೇವಿಕಾ ಪ್ರಾರ್ಥಿಸಿದರು. ಕಾವೇರಿ ಖಂಡ್ರೆ ಸ್ವಾಗತಿಸಿದರು. ರೇಣುಕಾ ಮಳ್ಳಿ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.


