
ಕನ್ನಡ ಬಿಂಬ, ಬೀದರ್
ಭಾಲ್ಕಿ ತಾಲೂಕಿಗೆ ಸೇರಿದ 16 ಗ್ರಾಮಗಳನ್ನು ಹುಲಸೂರು ತಾಲೂಕಿಗೆ ಸೇರಿಸಬೇಕೆಂಬ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಹುಲಸೂರಿನಲ್ಲಿ ಸೋಮವಾರ ನಡೆದ ಪ್ರಜಾಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಗ್ರಾಮ ಸೇರ್ಪಡೆ ವಿಷಯ ಪ್ರಸ್ತಾಪವಾಯಿತು. ಬಸವಕಲ್ಯಾಣ ಶಾಸಕ ಶರಣು ಸಲಗರ್ ಮಾತನಾಡಿ, ಹುಲಸೂರು ತಾಲೂಕಿನಲ್ಲಿ ಬರೀ 18 ಗ್ರಾಮಗಳಿವೆ. ಭಾಲ್ಕಿ ತಾಲೂಕಿನ ಸಾಯಗಾಂವ್ ಕ್ಷೇತ್ರದ 16 ಗ್ರಾಮಗಳನ್ನು ಹುಲಸೂರು ತಾಲೂಕಿಗೆ ಸೇರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ ಎಂದು ಹೇಳಿದ್ದರು.
ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಜಗತ್ತು ಒಂದು ಹಳ್ಳಿ ಆಗಿದೆ. ಹುಲಸೂರು ತಾಲೂಕಿನಲ್ಲಿ 18 ಊರುಗಳಿದ್ದರೂ ಯಾಕೆ ಸಮಾಧಾನ ಇಲ್ಲ. ನಿಮಗೆ ಏನಾಗಿದೆ ?, ಏನು ತೊಂದರೆ, ಆ ಊರುಗಳು (ಸಾಯಗಾಂವ್ ವೃತ್ತದ ಊರುಗಳು) ಯಾಕೆ ಬೇಕು ಎಂದು ಪ್ರಶ್ನಿಸಿದರು.
`ಅದು ಅವರ ಇಚ್ಛೆ. ಅಲ್ಲಿ ನಾನು ಅಭಿವೃದ್ದಿ ಮಾಡಿದ್ದೇನೆ. ಅವರ ಅಭಿವೃದ್ದಿ ಆಗಬಾರದಾ, ಸಣ್ಣ ತಾಲೂಕು ಆದರೆ ಏನಾಯಿತು, ಏನು ಸಮಸ್ಯೆ, ಸಣ್ಣದು ಇದ್ದಷ್ಟು ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಅದು ಬೇಕು, ಇದು ಬೇಕು ಎಂದರೆ ಹೇಗೆ ಎಂದು ಕೇಳಿದರು. ಸಾಯಗಾಂವ್ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿನ ಊರುಗಳ ಜನರಿಗೆ ಹುಲಸೂರು ತಾಲೂಕು ಸೇರುವುದು ಬೇಕಾಗಿಲ್ಲ ಎಂದು ಸಚಿವರು ಪರೋಕ್ಷವಾಗಿ ಹೇಳಿದರು. ಜನಾಭಿಪ್ರಾಯ ಮುಖ್ಯ ಎಂದೂ ನುಡಿದರು.
ಹುಲಸೂರು ತಾಲೂಕು ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ರಾಜೋಳೆ ಸೇರಿದಂತೆ ರಾಜಕೀಯ ಮುಖಂಡರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಸಚಿವ ಈಶ್ವರ ಖಂಡ್ರೆ ಅವರ ಈ ಹೇಳಿಕೆ ನಂತರ ಗ್ರಾಮ ಸೇರ್ಪಡೆ ವಿಷಯವು ಚರ್ಚೆಯ ಕೇಂದ್ರವಾಗಿದೆ. ಹುಲಸೂರು ತಾಲೂಕು ರಚನೆ ಆಗಿದ್ದು 2018 ರಲ್ಲಿ. ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕಿನ ಕೆಲ ಗ್ರಾಮಗಳನ್ನು ಸೇರಿಸಿಯೇ ಹುಲಸೂರು ತಾಲೂಕು ರಚನೆ ಮಾಡಲಾಗಿತ್ತು. ಭಾಲ್ಕಿ ತಾಲೂಕಿನ ಸಾಯಗಾಂವ್ ವೃತ್ತದ 16 ಗ್ರಾಮಗಳನ್ನು ಹುಲಸೂರು ತಾಲೂಕಿನಲ್ಲಿ ಸೇರಿಸುವ ಕುರಿತು 2023 ರಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯ ನಂತರವೂ ಗ್ರಾಮಗಳ ಸೇರ್ಪಡೆ ಆಗಿರಲಿಲ್ಲ.
ಈ ಮಧ್ಯೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಭಾಲ್ಕಿ ತಾಲೂಕಿನ 16 ಗ್ರಾಮಗಳನ್ನು ಹೊಸದಾಗಿ ರಚಿಸಲಾಗಿರುವ ಹುಲಸೂರು ತಾಲೂಕಿಗೆ ಸೇರಿಸುವ ಕುರಿತು 2023 ರ ಫೆಬ್ರವರಿ 3 ರಂದು ಹೊರಡಿಸಲಾಗಿರುವ ಅಧಿಸೂಚನೆಯನ್ನು
ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಗುರುನಾಥ ವಡ್ಡೆ ಮನವಿ ಮಾಡಿದ್ದರು.
ಈ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವು, `ಅರ್ಜಿದಾರರು ಉಲ್ಲೇಖಿಸಿರುವ ಅಧಿಸೂಚನೆಯು ಜಾರಿಯಲ್ಲಿದ್ದರೆ, ಅದನ್ನು ಜಾರಿಗೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಧಿಸೂಚನೆ ಜಾರಿಗೊಳಿಸಬೇಕು ಎಂಬ ಸ್ಪಷ್ಟ ನಿರ್ದೇಶನ ಹೈಕೋರ್ಟ್ ಆದೇಶದಲ್ಲಿದೆ. ಆದರೆ, ಹುಲಸೂರು ತಾಲೂಕು ಸೇರಲು ಸಾಯಗಾಂವ್ ವೃತ್ತದ ಜನ ಸಿದ್ದರಿಲ್ಲ. ಗೆಜೆಟ್ ಅಧಿಸೂಚನೆಯಂತೆ ಸಾಯಗಾಂವ್ ಸುತ್ತಲಿನ ಊರುಗಳನ್ನು ಸೇರಿಸಬೇಕು ಎನ್ನುವುದು ಹುಲಸೂರು ಜನರ ಬೇಡಿಕೆ. ಅಧಿಸೂಚನೆ ನಿಜಕ್ಕೂ ಜಾರಿಗೆ ಬರುತ್ತದೆಯೇ ಎನ್ನುವುದು ಸದ್ಯದ ಪ್ರಶ್ನೆ. ಕಾನೂನು ಹೋರಾಟಕ್ಕೆ ಮುಂದಾಗಿರುವ ಹೋರಾಟಗಾರ ಗುರುನಾಥ ವಡ್ಡೆ ಅವರ ಮುಂದಿನ ನಡೆಯ ಬಗ್ಗೆಯೂ ಜನರಲ್ಲಿ ಕುತೂಹಲ ಇದೆ.


