Ad imageAd image

ಹುಮನಾಬಾದ್ ಜೆಜೆಎಂ ಕಾಮಗಾರಿ ಇಲಾಖಾ ತನಿಖೆ

Kannada Bimba Team
4 Min Read

 

 

ಕನ್ನಡ ಬಿಂಬ, ಬೀದರ್

ಹುಮನಾಬಾದ್  ಕ್ಷೇತ್ರದ ಮೂರು ಗ್ರಾಮಗಳ ಜೆಜೆಎಂ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್  ರಾಜ್  ಸಚಿವರು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆ ವೇಳೆ, ಇಲಾಖಾ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್  ಸದಸ್ಯ ಭೀಮರಾವ ಪಾಟೀಲ್  ಹುಮನಾಬಾದ್ ಅವರು, ಸಚಿವರು ನೀಡಿದ ಲಿಖಿತ ಉತ್ತರವನ್ನು ಒಪ್ಪಿಕೊಳ್ಳದೆ ಮರುಪ್ರಶ್ನೆ ಮಾಡಿದ್ದರ ಫಲವಿದು.

ಹುಮನಾಬಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮೊಳಕೇರಾ, ಘಾಟಬೋರಾಳ, ಹುಣಸಗೇರಾ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ನಡೆದಿರಬಹುದಾದ ಅಕ್ರಮಗಳ ಬಗ್ಗೆ ಇಲಾಖಾ ತನಿಖೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭರವಸೆ ನೀಡಿದ್ದಾರೆ.

ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಭೀಮರಾವ ಪಾಟೀಲ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು,  ಯೋಜನೆ ಅನುಷ್ಠಾನದಲ್ಲಿ ಆಗಿರುವ ವಿಳಂಬ ಸೇರಿದಂತೆ ಎಲ್ಲ ಸಂಗತಿಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ. ಕಾಮಗಾರಿಯ ಪೂರ್ಣಗೊಂಡು, ನೀರು ಪೂರೈಕೆ ಆರಂಭವಾದ ನಂತರವೇ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಲಿಖಿತ ಪ್ರಶ್ನೆ ಕೇಳಿದ್ದರು. ಸಚಿವರು ನೀಡಿದ ಲಿಖಿತ ಉತ್ತರದಲ್ಲಿ  ಜೆಜೆಎಂ ಕಾಮಗಾರಿ ಅನುಷ್ಠಾನದಲ್ಲಿ ಯಾವುದೆ ಅಕ್ರಮ ನಡೆದಿಲ್ಲ, ಕಾಮಗಾರಿ ಕಳಪೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಲಿಖಿತ ಉತ್ತರದಿಂದ ತೃಪ್ತರಾಗದ ಭೀಮರಾವ ಪಾಟೀಲ್ ಹುಮನಾಬಾದ್ ಅವರು ಸದನದಲ್ಲಿ ಗಮನ ಸೆಳೆದಿದ್ದರು. ಕಾಮಗಾರಿ ಕುರಿತು ಪ್ರಕಟವಾಗಿರುವ ವರದಿಗಳು, ಗ್ರಾಮಸ್ಥರ ದೂರುಗಳು, ನೀರು ಪೂರೈಕೆ ಆಗದಿರುವುದು, 3 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಸೇರಿದಂತೆ ಹಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿರುವುದು ಖಚಿತಪಟ್ಟಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ  ಸಚಿವರು ನೀಡಿರುವ ಲಿಖಿತ ಉತ್ತರದಲ್ಲಿ ಯಾವ ಯಾವ ಸಂಗತಿಗಳನ್ನು ಪ್ರಸ್ತಾಪಿಸಲಾಗಿತ್ತು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.

ಮೊಳಕೇರಾ ಗ್ರಾಮದಲ್ಲಿ ಜಲ ಜೀವನ ಮಿಷನ್ ಕಾಮಗರಿಯು ಶೇ. 90 ರಷ್ಟು ಪ್ರಗತಿ ಹಂತದಲ್ಲಿದೆ. 3 ನೇ ತಪಾಸಣಾ ತಂಡವು ಚಾಲ್ತಿಯಲ್ಲಿರುವ ಕಾಮಗಾರಿಯ ಗುಣಮಟ್ಟವನ್ನು ಪರಿವೀಕ್ಷಿಸಿದ್ದು, ಕಾಮಗಾರಿ ತೃಪ್ತಿಕರವಾಗಿರುವುದಾಗಿ ವರದಿ ಸಲ್ಲಿಸಿದೆ. 2024 ರ ಸೆಪ್ಟೆಂಬರ್ 14 ರಂದು ರಾಜ್ಯ ಗುಣಮಟ್ಟ ಸಮಾಲೋಚಕರು ಈ ಗ್ರಾಮದ ಕಾಮಗಾರಿಯನ್ನು ಪರಿಶೀಲಿಸಿದ್ದು, ಕಾಮಗಾರಿಯು ತೃಪ್ತಿಕರವಾಗಿದ್ದಾಗಿ ಮೌಲ್ಯಾಂಕ ಶ್ರೇಣಿ ನೀಡಿದ್ದಾರೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಎಲ್ಲ ಮನೆಗಳಿಗೆ ಕಾರ್ಯಾತ್ಮಕ ನಳಗಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ಹಾಯಿಸಿ, ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಘಾಟಬೋರಾಳ ಗ್ರಾಮದ ಕಾಮಗಾರಿಯು ಮುಕ್ತಾಯ ಹಂತದಲ್ಲಿರುತ್ತದೆ. 3 ನೇ ತಪಾಸಣಾ ತಂಡವು ಚಾಲ್ತಿಯಲ್ಲಿರುವಾಗ ಕಾಮಗಾರಿಯನ್ನು ಪರಿಶೀಲಿಸಿದ್ದು, ತೃಪ್ತಿಕರವಾಗಿದ್ದಾಗಿ ವರದಿ ಸಲ್ಲಿಸಿದೆ. 2025 ರ ಅಕ್ಟೋಬರ್ 11 ರಂದು ರಾಜ್ಯ ಗುಣಮಟ್ಟ ಸಮಾಲೋಚಕರು ಸದರಿ ಕಾಮಗಾರಿಯನ್ನು ಪರಿಶೀಲಿಸಿದ್ದು, ತೃಪ್ತಿಕರವಾಗಿದ್ದರ ಬಗ್ಗೆ ವರದಿ ಸಲ್ಲಿಸಿದ್ದಾರೆ.

ಈ ಗ್ರಾಮದಲ್ಲಿ ಸದ್ಯ ಎಲ್ಲ ಮನೆಗಳಿಗೆ ಕಾರ್ಯಾತ್ಮಾಕ ನಳ ಸಂಪರ್ಕಗಳ ಮೂಲಕ ಶುದ್ದ ಕುಡಿಯುವ ನೀರು ಪ್ರಾಯೋಗಿಕವಾಗಿ ಹಾಯಿಸಿ ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗುತ್ತದೆ.

ಹುಣಸಗೇರಾ ಗ್ರಾಮ ಜೆಜೆಎಂ ಕಾಮಗಾರಿಯು ಶೇ. 100 ರಷ್ಟು ಭೌತಿಕವಾಗಿ ಪೂರ್ಣಗೊಂಡಿದೆ.  3 ನೇ ತಪಾಸಣಾ ತಂಡವು ಕಾಮಗಾರಿ ಚಾಲ್ತಿಯಲ್ಲಿದ್ದಾಗ ಗುಣಮಟ್ಟ ಪರೀಕ್ಷಿಸಿದ್ದು, ತೃಪ್ತಿಕರವಾಗಿದ್ದಾಗಿ ವರದಿ ಸಲ್ಲಿಸಿದೆ. ಈ ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸಿ, ಶುದ್ಧ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ಹಾಯಿಸಿದ್ದು, ಕಾಮಗಾರಿಯನ್ನು ಸಂಬಂಧಪಟ್ಟ ಪಂಚಾಯತಿಗೆ ಇದೇ ಸಾಲಿನ ಜನವರಿ 21 ರಂದು ಹಸ್ತಾಂತರಿಸಲಾಗಿದೆ ಎಂದು ಸಚಿವ ಖರ್ಗೆ ಮಾಹಿತಿ ನೀಡಿದ್ದಾರೆ.

ಕಾಮಗಾರಿಗಳ ಕುರಿತು ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮಾಧ್ಯಮಗಳಲ್ಲೂ ವರದಿಯಾದರೂ ಯಾಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಎಂಎಲ್‍ಸಿ ಭೀಮರಾವ ಪಾಟೀಲರ ಪ್ರಶ್ನೆಗೂ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ. ಟೆಂಡರ್ ಕರಾರಿನಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಗುತ್ತೇದಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹುಣಸಗೇರಾ  ಗ್ರಾಮದ ಕಾಮಗಾರಿಯನ್ನು ಪೂರ್ಣಗೊಳಿಸಿ, ಈಗಾಗಲೇ ಹಸ್ತಾಂತರ ಮಾಡಲಾಗಿದೆ. ಗುತ್ತಿಗೆದಾರರ ದೋಷ ನಿರ್ವಹಣಾ ಅವಧಿಯಲ್ಲಿ ಸಣ್ಣಪುಟ್ಟ ನ್ಯೂನತೆಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಸದ್ಯ ಗ್ರಾಮದ ಎಲ್ಲ ಮನೆಗಳಿಗೆ ನಳಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಮೊಳಕೇರಾ ಗ್ರಾಮದಲ್ಲಿರುವ ಜೆಜೆಎಂ ಕಾಮಗಾರಿಯು ಶೇ. 90 ರಷ್ಟು ಪೂರ್ಣಗೊಂಡಿದ್ದು, ಪ್ರಗತಿಯಲ್ಲಿದೆ. ಎಲ್ಲ ಮನೆಗಳಿಗೆ ಪ್ರಾಯೋಗಿಕವಾಗಿ  ನೀರು ಸರಬರಾಜು ಮಾಡಿ, ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಜೆಜೆಎಂ ಕಾಮಗಾರಿಯಲ್ಲಿ ಯಾವುದೆ ಅಕ್ರಮ ನಡೆದಿಲ್ಲ. ಕಾಮಗಾರಿ ಕಳಪೆ ಆಗಿಲ್ಲ. ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಆಗಿದ್ದರಿಂದ ಗುತ್ತೇದಾರರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Share This Article

You cannot copy content of this page