
ಕನ್ನಡ ಬಿಂಬ, ಬೀದರ್
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕ ಸಂಬಂಧ 2024 ರ ಸೆಪ್ಟೆಂಬರ್ 23 ರಂದು ಕಲಬುರಗಿ ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಜಾರಿಗೊಳಿಸದೇ ಇರುವ ಹಿನ್ನೆಲೆಯಲ್ಲಿ ಅರ್ಜಿದಾರರಾದ ಡಾ.ನಾಗವೇಣಿ ಅವರು ಬೀದರ್ ಸರಕಾರಿ ವೈದ್ಯಕೀಯ ಕಾಲೇಜು (ಬ್ರಿಮ್ಸ್) ವಿರುದ್ಧ ಪುನ: ಕಾನೂನು ಸಮರ ಸಾರಿದ್ದಾರೆ.
ಭಾರತದ ಸಂವಿಧಾನದ 215 ನೇ ವಿಧಿಯೊಂದಿಗೆ ಓದಲಾದ ನ್ಯಾಯಾಲಯ ನಿಂದನೆ ಕಾಯ್ದೆಯ ಸೆಕ್ಷನ್ 11 ಮತ್ತು 12 ರ ಅಡಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯವು ದಿನಾಂಕ: 23-09-2024 ರಂದು ನೀಡಿದ ತೀರ್ಪನ್ನು ಉದ್ದೇಶಪೂರ್ವಕವಾಗಿ ಜಾರಿಗೊಳಿಸದೆ ಉಲ್ಲಂಘಿಸಿರುವ ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಆರಂಭಿಸಬೇಕು ಎಂದು ನವೆಂಬರ್ 12 ರಂದು ಸಲ್ಲಿಸಿರುವ ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಸೂಕ್ತವೆಂದು ಪರಿಗಣಿಸಬಹುದಾದ ಹೆಚ್ಚಿನ ಆದೇಶ ಹೊರಡಿಸಬೇಕು ಎಂದೂ ಕೋರಿದ್ದಾರೆ.
ಡಾ. ನಾಗವೇಣಿ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿದೆ. ನಾಗವೇಣಿ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೊಹಸಿನ್, ಮೇಡಿಕಲ್ ಕಾಲೇಜಿನ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್, ಆಡಳಿತಾಧಿಕಾರಿ ಮೊಹಮ್ಮದ್ ಶಕೀಲ್ ಅವರನ್ನು ಹೆಸರಿಸಲಾಗಿದೆ.
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕ ನಡೆದಿದ್ದು 2017 ರಲ್ಲಿ. ನೇಮಕಾತಿ ಮಾನದಂಡ ಉಲ್ಲಂಘಿಸಲಾಗಿದೆ ಎಂದು ಈ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ನಾಗವೇಣಿ ಅವರು ಸರಕಾರಕ್ಕೆ ದೂರು ಸಲ್ಲಿಸಿದ್ದರು. ನಂತರ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕಲಬುರಗಿ ಹೈಕೋರ್ಟ್ ಪೀಠವು 2024 ರ ಸೆಪ್ಟೆಂಬರ್ 23 ರಂದು ತೀರ್ಪು ನೀಡಿತ್ತು. ನೇಮಕಾತಿ ಮಾನದಂಡ ಉಲ್ಲಂಘಿಸಲಾಗಿದೆ ಎಂದು ಸ್ಪಷ್ಟ ಅಭಿಪ್ರಾಯ ದಾಖಲಿಸಿದ್ದ ಹೈಕೋರ್ಟು, ನಾಗವೇಣಿ ಅವರನ್ನು ನೇಮಕ ಮಾಡಬೇಕು ಎಂದು ತನ್ನ ತೀರ್ಪಿನಲ್ಲಿ ನಿರ್ದೇಶನ ನೀಡಿತ್ತು.
ಮೇಡಿಕಲ್ ಕಾಲೇಜು ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್ ಅವರು ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪುನ್ನು ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಎಚ್.ಪಿ. ಸಂದೇಶ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಕಳೆದ ಸೆಪ್ಟೆಂಬರ್ 2 ರಂದು ತೀರ್ಪು ನೀಡಿದ್ದು, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದ್ದಲ್ಲದೆ, ವಿಳಂಬವಾಗಿ ರಿಟ್ ಅರ್ಜಿ ಸಲ್ಲಿಸಿದ ಕಾಲೇಜಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಅವರಿಗೆ ಒಂದು ಲಕ್ಷ ರೂ. ದಂಡ ಸಹ ವಿಧಿಸಿತ್ತು.
ಈ ಮಧ್ಯೆ ಕೋರ್ಟ್‍ನಲ್ಲಿರುವ ಪ್ರಕರಣಗಳ ವಿಷಯದಲ್ಲಿ ವಿಳಂಬ, ನಿರ್ಲಕ್ಷ್ಯ ಅಥವಾ ಅನುಷ್ಠಾನದ ಕೊರತೆಯಿಂದ ಯಾವುದೇ ವ್ಯತಿರಿಕ್ತ ಆದೇಶಗಳು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ವೈಯುಕ್ತಿಕ ಹೊಣೆಗಾರಿಕೆ ನಿಗದಿಪಡಿಸಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 26 ರಂದು ಈ ಕುರಿತು ಎಲ್ಲ ಇಲಾಖೆಗಳ ಮುಖ್ಯಸ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಅವರು ಪತ್ರ ಬರೆದಿದ್ದಾರೆ.
ಬೀದರ್ ಮೇಡಿಕಲ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ಆಡಳಿತಾತ್ಮಕ ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗಿದೆ. ವರದಿ ಬಂದ ನಂತರ ಮೇಡಿಕಲ್ ಕಾಲೇಜಿನಲ್ಲಿ ಅಮೂಲಾಗ್ರ ಬದಲಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.


