
ಕನ್ನಡ ಬಿಂಬ, ಬೀದರ್
ಬೀದರ್ ಮೇಡಿಕಲ್ ಕಾಲೇಜಿಗೆ (ಬ್ರಿಮ್ಸ್ ಬೀದರ್) ಮೇಜರ್ ಸರ್ಜರಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದು, ಇದು ಹಲವರಿಗೆ ನಡುಕ ಉಂಟು ಮಾಡಿದೆ. ವಿಶೇಷವಾಗಿ ಸ್ವಜನಪಕ್ಷಪಾತ, ನಿಯಮ ಉಲ್ಲಂಘನೆ, ಅಕ್ರಮಗಳಲ್ಲಿ ತೊಡಗಿಸಿಕೊಂಡವರು ಬೆಚ್ಚಿ ಬಿದ್ದಿದ್ದಾರೆ.
ವಾರದೊಳಗೆ ಬದಲಾವಣೆ ಕಾಣುವೀರಿ ಎಂಬ ಸಚಿವರ ಹೇಳಿಕೆಯು ಮೇಜರ್ ಸರ್ಜರಿಗೆ ಎಲ್ಲವೂ ಸಿದ್ಧವಾಗಿರುವದನ್ನು ಖಚಿತಪಡಿಸಿದೆ. ನಿಯಮದ ಚೌಕಟ್ಟಿನಲ್ಲಿ, ಅಧಿಕಾರ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ನೀಲನಕ್ಷೆ ಸಿದ್ಧವಾಗಿರುವಂತೆ ಭಾಸವಾಗುತ್ತಿದೆ. ಬ್ರಿಮ್ಸ್ ಬೈಲಾ ಮತ್ತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವ ಸಚಿವರ ಹೇಳಿಕೆಯೇ ಮೇಜರ್ ಸರ್ಜರಿಗೆ ಮಾಡಿಕೊಂಡಿರುವ ಸಿದ್ಧತೆಗೆ ಸಾಕ್ಷಿಯಾಗಿದೆ.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಶುರುವಾಗಿದ್ದು ವರ್ಷದ ಹಿಂದೆ. ಕಳೆದ ಸಾಲಿನ ಅಕ್ಟೋಬರ್ 24 ರಂದು ಶೆಟಕಾರ್ ಅವರನ್ನು ಬ್ರಿಮ್ಸ್ ನಿರ್ದೇಶಕ ಸ್ಥಾನದಿಂದ ಬಿಡುಗಡೆ ಮಾಡಲಾಗಿತ್ತು. ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಕುರಿತಾದ ಆದೇಶದಲ್ಲಿ ತಿಳಿಸಲಾಗಿತ್ತು. ಶೆಟಕಾರ್ ಸ್ಥಳಕ್ಕೆ ಡಾ. ಶಾಂತಲಾ ಕೌಜಲಗಿ ಅವರನ್ನು ನೇಮಕ ಮಾಡಲಾಗಿತ್ತು.
ಆದರೆ, ತಮ್ಮನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆ ಮಾಡಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ಡಾ. ಶಿವಕುಮಾರ ಶೆಟಕಾರ್ ಹೈಕೋರ್ಟ್ ಮೊರೆ ಹೋಗುತ್ತಾರೆ. ಅಕ್ಟೋಬರ್ 28 ರಂದೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುತ್ತದೆ. ಶೆಟಕಾರ್ ಪುನ: ನಿರ್ದೇಶಕ ಹುದ್ದೆಯನ್ನು ವಹಿಸಿಕೊಳ್ಳುತ್ತಾರೆ.
ಇದಾದ ಕೆಲವೇ ದಿನಗಳ ನಂತರ (2024 ರ ನವೆಂಬರ್ 7) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಸರಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್ ಅವರು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಪತ್ರ ಬರೆದು, ತನಿಖೆ ನಡೆಸುವಂತೆ ಸೂಚಿಸುತ್ತಾರೆ. ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ಸ್ವೀಕೃತವಾಗಿರುವ ದೂರುಗಳ ಹಿನ್ನೆಲೆಯಲ್ಲಿ ಬ್ರಿಮ್ಸ್‍ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಾದ ತೀರ್ಮಾನ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ತನಿಖೆ ನಡೆಸಿ, 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಈ ಪತ್ರದಲ್ಲಿ ತಿಳಿಸಲಾಗಿರುತ್ತದೆ.
ಡಾ. ಶಿವಕುಮಾರ ಶೆಟಕಾರ್ ಪುನ: ಹೈಕೋರ್ಟ್ ಮೊರೆ ಹೋಗುತ್ತಾರೆ. ಬ್ರಿಮ್ಸ್ ಬೈಲಾ ಪ್ರಕಾರ ನಿರ್ದೇಶಕರನ್ನು ನೇಮಕ ಮಾಡುವುದು ಬ್ರಿಮ್ಸ್ ಆಡಳಿತ ಮಂಡಳಿ. ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವೂ ಆಡಳಿತ ಮಂಡಳಿಯೇ ಆಗಿರುತ್ತದೆ. ಹೀಗಾಗಿ ತನಿಖೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಜಿಲ್ಲಾ ನ್ಯಾಯಾಧೀಶರ ಹುದ್ದೆಗಿಂತ ಕೆಳಗಿನ ಹುದ್ದೆಯಲ್ಲಿರುವವರು ತನಿಖೆ ನಡೆಸುವಂತಿಲ್ಲ ಎಂಬ ಬೈಲಾದಲ್ಲಿನ ನಿಯಮವನ್ನು ಶೆಟಕಾರ್ ಪರ ವಕೀಲರು ಪ್ರಸ್ತಾಪಿಸುತ್ತಾರೆ. ಈ ಪ್ರಕರಣದಲ್ಲೂ ಹೈಕೋರ್ಟು ಮಧ್ಯಂತರ ತಡೆಯಾಜ್ಞೆ ನೀಡುತ್ತದೆ. ಹೀಗೆ ಸರಕಾರದ ಎರಡೂ ಆದೇಶಗಳಿಗೆ ಡಾ. ಶೆಟಕಾರ್ ತಡೆಯಾಜ್ಞೆ ತರುತ್ತಾರೆ.
ನಿಗದಿತ ಅವಧಿಗೆ ಮುನ್ನ ಹುದ್ದೆಯಿಂದ ಬಿಡುಗಡೆ ಮಾಡುವ ಮತ್ತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖೆಗೆ ಸಮಿತಿ ರಚಿಸುವ ಸರಕಾರದ ತೀರ್ಮಾನಗಳು ಬ್ರಿಮ್ಸ್ ಬೈಲಾ ನಿಯಮಕ್ಕೆ ಅನುಗುಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ, ಜುಲೈ 31 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬ್ರಿಮ್ಸ್ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುವ ತೀರ್ಮಾನ ಕೈಗೊಳ್ಳುವ ಮೂಲಕ ಬ್ರಿಮ್ಸ್‍ನಲ್ಲಿರುವ ಭ್ರಷ್ಟರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸರಕಾರ ಆರಂಭಿಸಿದೆ.
ಬ್ರಿಮ್ಸ್ ಬೈಲಾದಲ್ಲಿರುವ ನಿಯಮ 2013 ರ ಕಂಡಿಕೆ 18 (6) ಅನ್ವಯ ತನಿಖೆ ನಡೆಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತಿಯಿಂದ ತೀರ್ಮಾನಿಸಿದ್ದರಿಂದ ರಾಜ್ಯ ಸರಕಾರ, ಈ ಹಿಂದೆ ಸ್ವತ:ಹೊರಡಿಸಿದ್ದ ಡಾ. ಶೆಟಕಾರ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡುವ ಮತ್ತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖೆಗೆ ಸಮಿತಿ ರಚಿಸುವ ಆದೇಶಗಳನ್ನು ಅಕ್ಟೋಬರ್ 13 ರಂದೇ ವಾಪಸ್ ಪಡೆದುಕೊಂಡಿದೆ.
ಬ್ರಿಮ್ಸ್ ಕುರಿತಂತೆ ಸ್ವೀಕೃತವಾಗಿರುವ ದೂರುಗಳ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಟೆಂಡರ್ ಕರೆಯದೇ ಔಷಧಿ ಖರೀದಿ ಮಾಡಿರುವುದು ಸೇರಿದಂತೆ ಹಲವು ಸಂಗತಿಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಒಟ್ಟು ಮೇಜರ್ ಸರ್ಜರಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವಂತೆ ಭಾಸವಾಗುತ್ತಿದೆ. ವಾರದೊಳಗೆ ಬದಲಾವಣೆ ಕಾಣುವೀರಿ ಎಂದು ಸಚಿವರು ಹೇಳಿದ್ದು, ಏನೆಲ್ಲ ಬದಲಾಗಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.


