
ಮಾರುತಿ ಸೋನಾರ್ ಬೀದರ್
ಉತ್ತರ ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಬೆಳಗಾವಿ ನಡುವೆ ಸುಮಾರು 350 ಕಿಲೋ ಮೀಟರ್ ಉದ್ದದ ಹಸಿರು ಗೋಡೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಅಭಿವೃದ್ದಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ದೊಡ್ಡ ದೊಡ್ಡ ಯೋಜನೆಗಳು ಬರುತ್ತಿವೆ. ಪರಿಸರ ಸಂರಕ್ಷಣೆಗೆ ನೆರವಾಗುವ ಒಂದಾದರೂ ದೊಡ್ಡ ಯೋಜನೆಯನ್ನು ಕಾಂಗ್ರೆಸ್ ಸರಕಾರ ಆರಂಭಿಸಬೇಕಾಗಿದೆ ಎಂದು ಆಯೋಗ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರು ಈ ಕುರಿತಾದ ವರದಿಯನ್ನು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಈ ಸಾಲಿನ ಬಜೆಟ್‍ನಲ್ಲಿ ಪರಿಗಣಿಸುವುದಕ್ಕಾಗಿ ಐದು ಉಪಸಮಿತಿಗಳು ಇಲಾಖಾವಾರು ಅದ್ಯಯನ ನಡೆಸಿ ಸಿದ್ಧಪಡಿಸಿದ ಈ ವರದಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರ, ಕೃಷಿಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಶಿಫಾರಸ್ಸುಗಳನ್ನು ಮಾಡಲಾಗಿದೆ. ವರದಿಯಲ್ಲಿ ಬೀದರ್ ಮತ್ತು ಬೆಳಗಾವಿ ನಡುವೆ ಹಸಿರು ಗೋಡೆ ನಿರ್ಮಿಸುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ.
ಬೀದರ್ ಜಿಲ್ಲೆಯವರೇ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದ ಪ್ರಭಾವಿ ನಾಯಕರಾಗಿದ್ದಾರೆ. ಅರಣ್ಯ ಖಾತೆಯ ಜವಾವ್ದಾರಿ ವಹಿಸಿಕೊಂಡ ನಂತರ ಹಸಿರು ಹೆಚ್ಚಿಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಕೋಟ್ಯಂತರ ಸಸಿ ನೆಡಲಾಗುತ್ತಿದೆ. ಅದರಲ್ಲೂ ಅರಣ್ಯ ಪ್ರದೇಶ ಕಡಿಮೆ ಇರುವ ಪ್ರದೇಶಗಳಿಗೆ ಸಚಿವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಮಾಣದ ಅರಣ್ಯ ಇರುವ ಜಿಲ್ಲೆಗಳಲ್ಲಿ ಅರಣ್ಯೀಕರಣಕ್ಕೆ ಸಚಿವರು ಹೆಚ್ಚಿನ ಒತ್ತು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ದೇಶಿತ ಹಸಿರು ಗೋಡೆ ನಿರ್ಮಾಣಕ್ಕೆ ಸಚಿವ ಈಶ್ವರ ಖಂಡ್ರೆ ಅವರು ವಿಶೇಷ ಕಾಳಜಿ ವಹಿಸಬೇಕು ಎನ್ನುವುದು ಈ ಭಾಗದ ಪರಿಸರ ಪ್ರೇಮಿಗಳ ಒತ್ತಾಸೆ. ಮುಖ್ಯಮಂತ್ರಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಖಂಡ್ರೆ ಅವರು ಬೀದರ್ ಬೆಳಗಾವಿ ನಡುವೆ ಹಸಿರು ಗೋಡೆ ನಿರ್ಮಿಸುವ ಉದ್ದೇಶಿತ ಯೋಜನೆಯ ಅನುಷ್ಠಾನಕ್ಕೆ ಶ್ರಮವಹಿಸುವ ನಿರೀಕ್ಷೆ ಇದೆ.
ಗ್ರೇಟ್ ಗ್ರೀನ್ ವಾಲ್ ಪ್ರೇರಣೆ
ಆಫ್ರಿಕೆಯಲ್ಲಿ 22 ರಾಷ್ಟ್ರಗಳು ಸೇರಿಕೊಂಡು 780 ಕಿ.ಮೀ. ಉದ್ದದ ದಿ ಗ್ರೇಟ್ ಗ್ರೀನ್ ವಾಲ್ ನಿರ್ಮಿಸುತ್ತಿವೆ. ಭಾರತದಲ್ಲಿ ಗುಜರಾತ್‍ನಿಂದ ಹರಿಯಾಣಾವರೆಗೆ 4 ರಾಜ್ಯಗಳು ಸೇರಿ 1400 ಕಿ.ಮೀ. ಉದ್ದದ ಗ್ರೇಟ್ ಗ್ರೀನ್ ವಾಲ್ ಆಫ್ ಇಂಡಿಯಾ ನಿರ್ಮಿಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬೆಳಗಾವಿಯಿಂದ ಬೀದರವರೆಗೆ ಐದು ಜಿಲ್ಲೆಗಳು ಸೇರಿ 350 ಕಿ.ಮೀ. ಉದ್ದದ ಹಸಿರು ಗೋಡೆ ನಿರ್ಮಿಸಲು ಪ್ರಾರಂಭಿಕ ಅಧ್ಯಯನಕ್ಕೆ ಈ ಸಾಲಿನ ಬಜೆಟ್‍ನಲ್ಲಿ 15 ಕೋಟಿ ರೂ. ಮೀಸಲಿಡಬೇಕು ಎಂದು ಆಯೋಗ ಸಲಹೆ ನೀಡಿದೆ.
ದೇಶದ ಪಶ್ಚಿಮ ಭಾಗದಲ್ಲಿ ಥಾರ್ ಮರುಭೂಮಿಯ ವಿಸ್ತರಣೆಯು ಹಲವು ವರ್ಷಗಳಿಂದ ಪರಿಸರ ತಜ್ಞರನ್ನು ಕಳವಳಗೊಳಿಸುತ್ತಿದೆ. ಮಣ್ಣು ಬರಡಾಗುತ್ತಿದೆ, ಹಸಿರು ಆವರಣ ಕಡಿಮೆಯಾಗುತ್ತಿದೆ. ಗ್ರಾಮೀಣ ಜೀವನ ಕ್ರಮೇಣ ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಪರಿಸ್ಥಿತಿಗೆ ತಡೆಯೊಡ್ಡಲು ರೂಪುಗೊಂಡದ್ದೇ ಗ್ರೇಟ್ ಗ್ರೀನ್ ವಾಲ್ ಆಫ್ ಇಂಡಿಯಾ ಎಂಬ ಮಹತ್ವಾಕಾಂಕ್ಷಿ ಯೋಜನೆ.
ಗುಜರಾತ್‍ನಿಂದ ಆರಂಭವಾಗಿ ರಾಜಸ್ಥಾನ, ಹರಿಯಾಣ ಮೂಲಕ ದೆಹಲಿ ತನಕ ಹರಡಿರುವ ಅರಾವಳಿ ಪರ್ವತ ಶ್ರೇಣಿಯುದ್ದಕ್ಕೂ ಸುಮಾರು 1,400 ಕಿಲೋಮೀಟರ್ ಉದ್ದದ ಹಸಿರು ಪಟ್ಟೆ ನಿರ್ಮಿಸುವ ಉದ್ದೇಶ ಈ ಯೋಜನೆಗಿದೆ. ಒಣಗಿದ ಭೂಮಿಯನ್ನು ಪುನಃ ಹಸಿರುಗೊಳಿಸುವುದು, ಮರುಭೂಮೀಕರಣದ ವೇಗವನ್ನು ಕಡಿಮೆ ಮಾಡುವುದು ಮತ್ತು ಜೀವ ವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸುವುದು ಇದರ ಮುಖ್ಯ ಗುರಿಗಳು.
ಇದು ಕೇವಲ ಮರ ನೆಡುವ ಅಭಿಯಾನವಲ್ಲ. ಬದಲಾಗಿ ಮಣ್ಣು, ನೀರು, ವನ್ಯಜೀವಿ ಮತ್ತು ಗ್ರಾಮೀಣ ಜೀವನವನ್ನು ಏಕಕಾಲದಲ್ಲಿ, ಒಟ್ಟುಗೂಡಿಸುವ ಪರಿಸರ ಪುನರುತ್ಥಾನದ ಪ್ರಯತ್ನ ಎಂದು ಬಣ್ಣಿಸಲಾಗಿದೆ.
ಗಣಿಗಾರಿಕೆ, ಅರಣ್ಯ ನಾಶ ಮತ್ತು ಅನಿಯಂತ್ರಿತ ಅಭಿವೃದ್ಧಿಯಿಂದ ಹಸಿರು ಆವರಣ ಕುಗ್ಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಭೂಕ್ಷಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಥಳೀಯ ಜಾತಿಯ ಮರಗಳನ್ನು ನೆಡುವ ಮೂಲಕ ಹಾಳಾದ ಅರಣ್ಯ ಪ್ರದೇಶಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ.
ಸ್ಥಳೀಯ ಸಮುದಾಯದ ಸಹಭಾಗಿತ್ವ ಈ ಯೋಜನೆಯ ಬಲ. ಗ್ರಾಮೀಣ ಯುವಕರು, ಸ್ವಯಂಸೇವಾ ಸಂಘಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನೆಡುವ ಕಾರ್ಯ ಕೈಗೊಂಡಿದ್ದಾರೆ. ಮಣ್ಣಿನ ಸಂರಕ್ಷಣೆ, ಜಲ ಸಂಗ್ರಹಣೆ ಮತ್ತು ಚಿಕ್ಕ-ಚಿಕ್ಕ ತಡೆಗೋಡೆಗಳ ನಿರ್ಮಾಣವೂ ಜೊತೆಯಾಗಿ ನಡೆಯುತ್ತಿದೆ.
ಈ ಯೋಜನೆಗೆ ಪ್ರೇರಣೆ ನೀಡಿದ್ದು ಆಫ್ರಿಕಾ ಖಂಡದಲ್ಲಿ ಸಹಾರಾ ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಕೈಗೊಳ್ಳಲಾದ ಗ್ರೇಟ್ ಗ್ರೀನ್ ವಾಲ್ ಯೋಜನೆ. ಮರುಭೂಮಿಯನ್ನು ಹಸಿರು ಗೋಡೆಯ ಮೂಲಕ ನಿಯಂತ್ರಿಸುವ ಆ ಕಲ್ಪನೆ ಭಾರತದಲ್ಲೂ ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ನೀಡಿದೆ.
ಈ ಯೋಜನೆ ಅನುಷ್ಠಾನದಿಂದ ಮಣ್ಣಿನ ಹರಿವು ಮತ್ತು ಭೂಕ್ಷಯ ಕಡಿಮೆಯಾಗುತ್ತದೆ ಭೂಗರ್ಭ ಜಲಮಟ್ಟ ಸುಧಾರಿಸುತ್ತದೆ. ವನ್ಯಜೀವಿಗಳಿಗೆ ಹೊಸ ಆಶ್ರಯ ದೊರೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯೋಜನೆಯ ಅನುಷ್ಠಾನದಲ್ಲಿ ಹಲವು ಸವಾಲು ಎದುರಾಗಿವೆ. ಮುಖ್ಯವಾಗಿ ನೀರಿನ ಕೊರತೆ, ಜಮೀನು ಸಮಸ್ಯೆ, ನಿರಂತರ ನಿರ್ವಹಣೆ ಅಗತ್ಯತೆ ಮುಂತಾದವು. ಆದರೆ ಪರಿಸರ ಉಳಿಸುವ ಸಂಕಲ್ಪದ ಮುಂದೆ ಈ ಅಡೆತಡೆಗಳು ತಾತ್ಕಾಲಿಕವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಗ್ರೇಟ್ ಗ್ರೀನ್ ವಾಲ್ ಆಫ್ ಇಂಡಿಯಾ ಕೇವಲ ಒಂದು ಯೋಜನೆ ಅಲ್ಲ; ಇದು ಭವಿಷ್ಯದ ಪೀಳಿಗೆಗಳಿಗೆ ಹಸಿರು ಪರಂಪರೆ ನೀಡುವ ಸಂಕಲ್ಪ. ಮರುಭೂಮಿಯ ವಿಸ್ತರಣೆಗೆ ಅಡ್ಡಗಾಲು ಹಾಕಿ, ಹಸಿರು ಹೆಚ್ಚಿಸುವ ರಾಷ್ಟ್ರೀಯ ಚಳುವಳಿಯಾಗಿದೆ ಎಂದು ಬಣ್ಣಿಸಲಾಗಿದೆ.
ಭಾರತದ ಪರಿಸರ ಇತಿಹಾಸದಲ್ಲಿ ಇದು ಒಂದು ಮಹತ್ವದ ಅಧ್ಯಾಯವಾಗಬಹುದೇ ಎಂಬ ಪರಿಸರ ಪ್ರೇಮಿಗಳ ಪ್ರಶ್ನೆಗೆ ಸಮಯವೇ ಉತ್ತರ ನೀಡಬೇಕು. ಅದಕ್ಕಾಗಿ ಕಾಯಬೇಕು.


