Ad imageAd image

ನಿಷೇಧದ ನಂತರವೂ ನಿಲ್ಲದ ಪ್ಲಾಸ್ಟಿಕ್ ಬಳಕೆ

Kannada Bimba Team
2 Min Read

 

 

ಕನ್ನಡ ಬಿಂಬ, ಬೀದರ್

ರಾಜ್ಯದಲ್ಲಿ ನಿಷೇಧದ ನಂತರವೂ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದು ಮುಂದುವರೆದಿದೆ. ನಿಷೇಧಾಜ್ಞೆಯ ಅನುಸಾರ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್  ಮೈಕ್ರೋ ಬೀಡ್ಸ್‍ನಿಂದ ತಯ್ಯಾರಾಗುವ ವಸ್ತುಗಳ ತಯ್ಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವಂತಿಲ್ಲ.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಲಿಖಿತ  ಉತ್ತರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮುಂದುವರೆದಿರುವುದನ್ನು ಪ್ರಸ್ತಾಪಿಸಲಾಗಿದೆ. ಕೆಲ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಸರಕಾರ 2016ರ ಮಾರ್ಚ್ 11 ರಂದೇ ಆದೇಶ ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಾಲಿಸೈರೀನ್ ಮತ್ತು ವಿಸ್ತರಿತ ಪಾಲಿಸೈರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯ್ಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು  ಜುಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಿ ಹಿಂದೆಯೇ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರ ಮಾರ್ಗಸೂಚಿಯಂತೆ ಮಂಡಳಿಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜೊತೆಗೂಡಿ, ಪರಿವೀಕ್ಷಣೆ ನಡೆಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ 18,111 ಪರಿವೀಕ್ಷಣೆ ನಡೆಸಿ, 223 ಮೆಟ್ರಿಕ್ ಟನ್‍ಗಳಷ್ಟು ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದರ ಮೌಲ್ಯ 63 ಲಕ್ಷ ರೂ. ಆಗಿದೆ ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.

2025-26 ನೇ ಸಾಲಿನಲ್ಲಿ 15,928 ಪರಿವೀಕ್ಷಣೆ ನಡೆಸಿ, 180 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಈ ವಸ್ತುಗಳ ಮೌಲ್ಯ 94 ಲಕ್ಷ ರೂ. ಆಗಿದೆ. ರಾಜ್ಯ ಸರಕಾರದ ಆದೇಶದಂತೆ ಈಗಾಗಲೇ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ. 2024-25 ರಲ್ಲಿ 62 ಮತ್ತು ಈ ಸಾಲಿನಲ್ಲಿ 34 ಸಭೆಗಳನ್ನು ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳಿಗೆ ಪರ್ಯಾಯವಾಗಿ ಕಾಗದ, ಬಟ್ಟೆ, ಅಡಿಕೆ ಎಲೆ ಮುಂತಾದವುಗಳಿಂದ ತಯ್ಯಾರಿಸಿದ ಉತ್ಪನ್ನಗಳಿಗೆ ಪ್ರೋತ್ಸಾಹಿಸಲು ಅನುಮತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸದ್ಯ 33 ಘಟಕಗಳು ಪರ್ಯಾಯ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿವೆ.

ಸಚಿವ ಈಶ್ವರ ಖಂಡ್ರೆ ಅವರು ನೀಡಿರುವ ಮಾಹಿತಿಯಂತೆ ಬೆಂಗಳೂರು, ರಾಮನಗರ, ಸರ್ಜಾಪುರ, ಹೊಸಕೋಟೆ, ಚಿಕ್ಕಬಳ್ಳಾಪುರ,  ರಾಯಚೂರು, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ಗದಗ ಮುಂತಾದ ಕಡೆ ಪರ್ಯಾಯ ವಸ್ತುಗಳ ಉತ್ಪಾದನಾ ಘಟಕಗಳಿವೆ. ಕಲಬುರಗಿಯಲ್ಲಿಯೂ ಒಂದು ಘಟಕ ಇದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಒಂದೂ ಘಟಕ ಇಲ್ಲ.

Share This Article

You cannot copy content of this page