Ad imageAd image

ಹೋರಾಟದ ಮೂಲಕ ಹಕ್ಕು ಪಡೆದುಕೊಂಡ ಅಲೆಮಾರಿ ಸಮುದಾಯ

Kannada Bimba Team
2 Min Read

 

ಕನ್ನಡ ಬಿಂಬ, ಬೀದರ್

ಔರಾದ್  ಪಟ್ಟಣದಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ಹನ್ನೊಂದು ದಿನ ಹಗಲೂ ರಾತ್ರಿ ನಡೆಸಿದ ಧರಣಿ ಫಲಪ್ರದವಾಗಿದೆ. ಸರ್ವೆ ಸಂಖ್ಯೆ 205 ರಲ್ಲಿರುವ ಎರಡು ಎಕರೆ ಜಮೀನಿನಲ್ಲಿ ಮನೆ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಜಿಲ್ಲಾ ಆಡಳಿತ ಒಪ್ಪಿಕೊಂಡಿದೆ. ಇದರೊಂದಿಗೆ ಅಲೆಮಾರಿ ಜನಾಂಗದವರು  ನಡೆಸುತ್ತಿದ್ದ ಧರಣಿ ಕೊನೆಗೊಂಡಿದೆ.

ನಾಲ್ಕು ದಶಕಗಳಿಂದ ರಸ್ತೆ ಬದಿಯಲ್ಲಿ ಜೋಪಡಿ ಹಾಕಿಕೊಂಡು ಕಷ್ಟದ ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯದವರು ಹೋರಾಟದ ಮೂಲಕವೇ ತಮ್ಮ ಹಕ್ಕು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಕೊನೆಯವರೆಗೆ ಅಲೆಮಾರಿ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಗಮನ ಸೆಳೆದಿದ್ದಾರೆ.

ಸರ್ವೆ ಸಂಖ್ಯೆ 183 ರಲ್ಲಿ ಹಿಂದೆ ಕಾಯ್ದಿರಿಸಿದ ಎರಡು ಎಕರೆ ಜಮೀನಿನಲ್ಲಿಯೇ ನಿವೇಶನ ಕೊಡಬೇಕು ಎಂಬ ಅಲೆಮಾರಿ ಸಮುದಾಯದ ಬೇಡಿಕೆ ಈಡೇರಿಲ್ಲ. ಬದಲಾಗಿ ಸರ್ವೆ ಸಂಖ್ಯೆ 205 ರಲ್ಲಿರುವ ಜಮೀನಿನಲ್ಲಿ ನಿವೇಶನ ಮತ್ತಿತರ ಸೌಕರ್ಯಗಳನ್ನು ಒದಗಿಸಿಕೊಡುವ ಪ್ರಸ್ತಾವನೆಗೆ ಅಲೆಮಾರಿ ಸಮುದಾಯದ ಪ್ರಮುಖರು ಒಪ್ಪಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಜನವರಿ 29  ರಂದು ರಾತ್ರಿ  ಸಂಬಂಧಿಸಿದ ಅಧಿಕಾರಿಗಳೊಂದಿಗೆ ಔರಾದ್ ಪಟ್ಟಣದಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು. ಸರ್ವೆ ಸಂಖ್ಯೆ 183 ರಲ್ಲಿಯೇ ಎರಡು ಎಕರೆ ಜಮೀನು ನೀಡಬೇಕು ಎನ್ನುವುದು ಅಲೆಮಾರಿ ಜನಾಂಗದವರ ಬೇಡಿಕೆಯಾಗಿತ್ತು. ಕೊನೆಗೆ ಸರ್ವೆ ಸಂಖ್ಯೆ 205 ರಲ್ಲಿ ಎರಡು ಎಕರೆ ಜಮೀನು ನೀಡುವ ಪ್ರಸ್ತಾವಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಹುಲ್  ಖಂದಾರೆ, ಉಪಾಧ್ಯಕ್ಷ ನಾಗನಾಥ ವಾಖುಡೆ, ಪ್ರಧಾನ ಕಾರ್ಯದರ್ಶಿ ಸುಭಾಷ ಲಾಧಾ ತಿಳಿಸಿದ್ದಾರೆ.

ನಿವೇಶನ, ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಜನವರಿ 19 ರಿಂದ ಅಲೆಮಾರಿ ಸಮುದಾಯದವರು ಆಹೋರಾತ್ರಿ ಧರಣಿ ಆರಂಭಿಸಿದ್ದರು. ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಈ ಹೋರಾಟವನ್ನು ಬೆಂಬಲಿಸಿದ್ದರು.

ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ 85 ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ 143 ಕುಟುಂಬಗಳಿಗೆ 6 ತಿಂಗಳ ಅವಧಿಯಲ್ಲಿ ನಿವೇಶನ ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಲಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು  ಔರಾದ್ ತಹಸೀಲ್ದಾರರು  ತಿಳಿಸಿದ್ದಾರೆ.

ಸರಕಾರದಿಂದ ಬರುವ ಅನುದಾನವನ್ನು ಆಧರಿಸಿ ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಹೆಚ್ಚಿನ ವಿಳಂಬಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭರವಸೆ ನೀಡಿದ್ದಾರೆ.

ಸರ್ವೆ ನಂಬರ್ 183 ರಲ್ಲಿ ಹಿಂದೆ ಕಾಯ್ದಿರಿಸಿದ ಸ್ಥಳದಲ್ಲಿಯೇ ನಿವೇಶನ ನೀಡುವಂತೆ ಹೋರಾಟಗಾರರು ಒತ್ತಾಯಿಸಿದ್ದರು. ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲೂ ಈ ಬೇಡಿಕೆಯನ್ನು ಮಂಡಿಸಿದ್ದರು. ರಾಜಕೀಯ ಕಾರಣಕ್ಕಾಗಿ ಅಲೆಮಾರಿ ಸಮುದಾಯಕ್ಕೆ ಈ ಜಮೀನು ನಿರಾಕರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಈ ಹಿಂದೆಯೂ ಸರ್ವೆ ಸಂಖ್ಯೆ 205 ರಲ್ಲಿರುವ ಎರಡು ಎಕರೆ ಜಮೀನನ್ನು ಅಲೆಮಾರಿ ಸಮುದಾಯದ ನಿವೇಶನಕ್ಕಾಗಿ ಕಾಯ್ದಿರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂತಿಮವಾಗಿ ಅಲೆಮಾರಿ ಸಮುದಾಯದವರು ಮತ್ತು ಹೋರಾಟಗಾರರು ಜಿಲ್ಲಾ ಆಡಳಿತದ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ. ನಾಲ್ಕು ದಶಕಗಳಿಂದ ರಸ್ತೆ ಬದಿಯಲ್ಲಿ ಕಚ್ಚಾ ಜೋಪಡಿ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿಗಳ ಕಷ್ಟದ ಬದುಕು ಮುಂದಿನ ದಿನಗಳಲ್ಲಿ ಕೊನೆಗೊಳ್ಳಬಹುದು. ಬೆಚ್ಚನೆಯ ಮನೆ ಹೊಂದುವ ಕನಸೂ ಸಾಕಾರಗೊಳ್ಳಬಹುದು.

 

Share This Article

You cannot copy content of this page