Ad imageAd image

ಝೀರಾ ಲೇಔಟ್ ಅನುಮೋದನೆ, ಯಾವುದು ಸತ್ಯ, ಯಾವುದು ಸುಳ್ಳು ?

Kannada Bimba Team
3 Min Read

ಕನ್ನಡ ಬಿಂಬ, ಬೀದರ್

ಬೀದರ ನಗರದ ಚಿಕಪೇಟನಲ್ಲಿರುವ ಸರ್ವೆ ಸಂಖ್ಯೆ 30,31 ಮತ್ತು 34 ರಲ್ಲಿ ನಿರ್ಮಿಸಲಾಗಿರುವ ನಾನಕ ಝೀರಾ ಫೌಂಡೇಶನ್‍ ನವರ ಲೇಔಟ್  ಸದ್ಯ ಸುದ್ದಿಯಲ್ಲಿದೆ. ಲೇಔಟ್  ಅನುಮೋದನೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ಸದನದಲ್ಲಿಯೇ ಹೇಳಿದ್ದಾರೆ. ಲೇಔಟ್ ಅನುಮೋದನೆ ಸೇರಿದಂತೆ ಎಲ್ಲೂ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಫೌಂಡೇಶನ್ ಅಧ್ಯಕ್ಷ ಡಾ. ಎಸ್.  ಬಲಬೀರಸಿಂಗ್ ಹೇಳಿದ್ದಾರೆ. ಈ ಎರಡು ಹೇಳಿಕೆಯಲ್ಲಿ ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಬೀದರ್  ಜಿಲ್ಲೆಯ ಜನರ ಪ್ರಶ್ನೆ.

ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾರಾಮಾರಿ ನಡೆಯುವಂತಹ ಪರಿಸ್ಥಿತಿ ಸೃಷ್ಟಿಸಿದ್ದ ಈ ಲೇಔಟ್ ವಿಷಯವೀಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಲೇಔಟ್‍ಗೆ ಅನುಮೋದನೆ ನೀಡಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ. ಆಗ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಬಿಜೆಪಿಯವರು ಎನ್ನುವುದು ಕಾಂಗ್ರೆಸ್ ನಾಯಕರ ವಾದ.

ಲೇಔಟ್‍ಗೆ ಅನುಮೋದನೆ ನೀಡಿದವರು ಯಾರೇ ಆಗಲಿರಲಿ. ಆ ಬಗ್ಗೆ ತನಿಖೆ ಆಗಲೇಬೇಕು. ತಪ್ಪು ಮಾಡಿದವರು ಬಿಜೆಪಿಯವರೇ ಆಗಿರಲಿ, ಅಥವಾ ಇತರ ಪಕ್ಷದವರೇ ಆಗಿರಲಿ. ಯಾರು ಮಾಡಿದರೂ ತಪ್ಪು ತಪ್ಪೇ, ನಾನು ಮಾಡಿದರೂ ತಪ್ಪು, ಬಿಜೆಪಿಯ ಬಾಬು ವಾಲಿ ಮಾಡಿದರೂ ತಪ್ಪೇ ಎನ್ನುತ್ತಾರೆ,  ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್.

ಝೀರಾ ಲೇಔಟ್ ಸಂಬಂಧ ಹುಮನಾಬಾದಿನ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲರು ಕಳೆದೊಂದು ವರ್ಷದಿಂದ ರಾಜ್ಯ ಸರಕಾರವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಶಾಸಕರ ಪ್ರಶ್ನೆಗೆ ನಗರಾಭಿವೃದ್ದಿ ಸಚಿವರು ನೀಡಿರುವ ಉತ್ತರದಲ್ಲಿ ನಿಯಮ ಉಲ್ಲಂಘನೆ ಆಗಿದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಯಾವ ಯಾವ ಹಂತದಲ್ಲಿ ನಿಯಮ ಉಲ್ಲಂಘನೆ ಆಗಿದೆ, ಈ ನಿಯಮ ಉಲ್ಲಂಘನೆಗೆ ಯಾರು ಯಾರು ಕಾರಣರು ಎಂಬ ಮಾಹಿತಿಯೂ ಸಚಿವರ ಉತ್ತರದಲ್ಲಿದೆ.

ಆದರೆ, ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಾನಕ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್ ಅವರು ಯಾವುದೇ ಹಂತದಲ್ಲಿ, ನಿಯಮ ಉಲ್ಲಂಘನೆ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಟ್ರಸ್ಟ್‍ಗೆ ಸೇರಿದ  ಭೂಮಿಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಲಬೀರಸಿಂಗ್ ಆರೋಪಿಸಿದ್ದಾರೆ.

ಬಲಬೀರಸಿಂಗ್ ಅವರ ಈ ಹೇಳಿಕೆಗೆ ಜಿಲ್ಲಾ ಬಿಜೆಪಿ ಅದ್ಯಕ್ಷ ಸೋಮನಾಥ ಪಾಟೀಲ್ ಅವರೂ ಸ್ಪಷ್ಟನೆ ನೀಡಿದ್ದಾರೆ. ನಾವು ದಾರಿ ತಪ್ಪಿಸುತ್ತಿಲ್ಲ. ಸದನದಲ್ಲಿ ನಗರಾಭಿವೃದ್ಧಿ ಸಚಿವರು ಹೇಳಿದ್ದನ್ನೇ ಪ್ರಸ್ತಾಪಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಲೇಔಟ್ ಅನುಮೋದನೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ನಗರಾಭಿವದ್ದಿ ಸಚಿವರೇ ಹೇಳಿದ್ದಾರೆ. ಆ ಕುರಿತು ತನಿಖೆ ನಡೆಸಬೇಕು ಎನ್ನುವುದು ಬಿಜೆಪಿ ಬೇಡಿಕೆಯಾಗಿದೆ. ಲೇಔಟ್  ಅಕ್ರಮ ಆಗಿದ್ದಲ್ಲಿ, ಅದನ್ನು ರದ್ದುಪಡಿಸಬೇಕು. ಎಲ್ಲವೂ ನಿಯಮಾನುಸಾರ ನಡೆದಿದ್ದಲ್ಲಿ ನಮ್ಮದೇನೂ ತಕರಾರು ಇರುವುದಿಲ್ಲ. ಮುಖ್ಯವಾಗಿ ನಿವೇಶನ ಖರೀದಿಸಿದವರಿಗೆ ಅನ್ಯಾಯ ಆಗಬಾರದು ಎನ್ನುವುದಷ್ಟೇ ಬಿಜೆಪಿ ಕಾಳಜಿಯಾಗಿದೆ ಎಂದೂ ಸೋಮನಾಥ ಪಾಟೀಲರು ಗುರುವಾರ (ಜ.8) ಬೀದರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಝೀರಾ ಲೇಔಟ್‍ಗೆ ಸಂಬಂಧಿಸಿದಂತೆ ಮತ್ತೊಂದು ಸಂಗತಿಯೂ ಮುನ್ನೆಲೆಗೆ ಬಂದಿದೆ. ಸರ್ವೆ ಸಂಖ್ಯೆ 34 ರಲ್ಲಿರುವ 26.8 ಎಕರೆ ಜಮೀನಿಗೆ ಸಂಬಂದಿಸಿದಂತೆ  ಟೈಟಲ್  ಡೀಡ್  ಇಲ್ಲ, ಪಹಣಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸಿ, ಖೊಟ್ಟಿ ದಾಖಲೆ ಸಿದ್ಧಪಡಿಸಲಾಗಿದೆ ಎಂದು ವೀರಕುಮಾರ ಎಂಬುವರು ಆರೋಪಿಸಿದ್ದಾರೆ. ಇದೇ ಸರ್ವೆ ಸಂಖ್ಯೆಗೆ ಸಂಬಂಧಿಸಿದ ಪ್ರಕರಣ ಸದ್ಯ ಕಲಬುರಗಿ ಹೈಕೋರ್ಟ್ ಪೀಠದಲ್ಲಿದೆ.

ವೀರಕುಮಾರ ಹೇಳುವಂತೆ ಕಾಸರಾ ಪಹಣಿಯಲ್ಲಿ ಇರುವ ಹೆಸರು ಬೇರೆ. ಆದರೆ, ನಂತರ ಹೆಸರು ಬದಲಾಯಿಸಲಾಗಿದೆ.  ಸರ್ವೆ ಸಂಖ್ಯೆ 34 ಕ್ಕೆ ಸಂಬಂಧಿಸಿದಂತೆ ಮೂಲ ಮಾಲಿಕತ್ವ ದಾಖಲೆ ಎಲ್ಲಿದೆ ಎನ್ನುವುದು ವೀರಕುಮಾರ ಪ್ರಶ್ನೆ. ಈ ಕುರಿತು ಜಿಲ್ಲಾಧಿಕಾರಿಗೂ ಅವರು ದೂರು ಸಲ್ಲಿಸಿದ್ದಾರೆ.

ಹೀಗೆ ಒಂದು ಲೇಔಟ್‍ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ವಿಷಯವು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿಯವರು ಇದನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಹುಮನಾಬಾದ್ ಶಾಸಕರ ಮೇಲೆನ ಹಲ್ಲೆ ಯತ್ನ ಹಾಗೂ ಈ ಲೇಔಟ್  ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ದಿ. 12 ರಂದು ಪ್ರತಿಭಟನೆ ನಡೆಸಲೂ ಬಿಜೆಪಿ ನಿರ್ಧರಿಸಿದೆ.

Share This Article

You cannot copy content of this page