
ಕನ್ನಡ ಬಿಂಬ, ಬೀದರ್
ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಅವಧಿಯಲ್ಲಿನ ಆಡಳಿತಾತ್ಮಕ ಮತ್ತು ಹಣಕಾಸು ತೀರ್ಮಾನಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ರಾಜ್ಯ ಸರಕಾರಕ್ಕೆ ಮತ್ತೆ ಹಿನ್ನಡೆಯುಂಟಾಗಿದೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರಕಾರ ಅಕ್ಟೋಬರ್ 31 ರಂದು ಹೊರಡಿಸಿದ ಆದೇಶವನ್ನು ಕಲಬುರಗಿ ಹೈಕೋರ್ಟ್ ಪೀಠ ರದ್ದುಪಡಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಈ ತನಿಖಾ ಆದೇಶವನ್ನು ರದ್ದುಪಡಿಸಲಾಗಿದೆ.
ಅವಧಿಗೆ ಮುನ್ನ ವರ್ಗಾವಣೆ ಮಾಡಿದಾಗ ಮತ್ತು ಜಿಲ್ಲಾಧಿಕಾರಿಯವರ ಮೂಲಕ ತನಿಖೆ ನಡೆಸಲು ಆದೇಶ ಹೊರಡಿಸಿದಾಗಲೂ ಡಾ. ಶಿವಕುಮಾರ ಶೆಟಕಾರ್ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಹೈಕೋರ್ಟು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನಂತರದ ದಿನಗಳಲ್ಲಿ ರಾಜ್ಯ ಸರಕಾರ ಸ್ವತ: ತಾನೇ ಹೊರಡಿಸಿದ ಎರಡೂ ಆದೇಶಗಳನ್ನು ವಾಪಸ್ ಪಡೆದುಕೊಂಡಿತ್ತು.
ಇದೀಗ ಮೂರನೇ ಬಾರಿಯೂ ರಾಜ್ಯ ಸರಕಾರಕ್ಕೆ ಹಿನ್ನಡೆಯುಂಟಾಗಿದೆ. ಸರಕಾರದ ಆದೇಶದಂತೆ ನಿವೃತ್ತ ನ್ಯಾಯಾಧೀಶರು ಬೀದರ್ ಮೇಡಿಕಲ್ ಕಾಲೇಜಿಗೆ ಭೇಟಿ ನೀಡಿ, ತನಿಖೆ ಪೂರ್ಣಗೊಳಿಸಿದ್ದಾರೆ. ಆದರೆ, ತನಿಖೆ ನಡೆಸುವಂತೆ ಹೊರಡಿಸಿದ ಆದೇಶವೇ ರದ್ದಾಗಿದ್ದರಿಂದ ತನಿಖಾ ವರದಿಯ ಸ್ಥಿತಿಗತಿ ಏನಾಗಬಹುದು ಎಂಬ ಪ್ರಶ್ನೆ ಎದುರಾಗಿದೆ.
ಡಾ. ಶಿವಕುಮಾರ ಶೆಟಕಾರ್ ಅವರಿಗೆ ಸಂಬಂದಿಸಿದಂತೆ ರಾಜ್ಯ ಸರಕಾರ ಮೂರು ಬಾರಿ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಆದರೆ, ಎಲ್ಲ ಮೂರೂ ಆದೇಶಗಳು ಜಾರಿಯಲ್ಲಿರುವ ನಿಯಮಗಳಿಗೆ ಅನುಗುಣವಾಗಿರಲಿಲ್ಲ. ಮೇಡಿಕಲ್ ಕಾಲೇಜಿನ ಬೈಲಾ ಪ್ರಕಾರ ನಿರ್ದೇಶಕರನ್ನು ಅವಧಿಗೆ ಮುನ್ನ ಕರ್ತವ್ಯದಿಂದ ಬಿಡುಗಡೆ ಮಾಡುವಂತಿರಲಿಲ್ಲ. ಆದರೆ, ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಅವಧಿಗೆ ಮೊದಲೇ ಡಾ. ಶೆಟಕಾರ್ ಅವರನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಡಾ. ಶೆಟಕಾರ್ ಅವರು ಈ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
ಎರಡನೇ ಬಾರಿ ಡಾ. ಶೆಟಕಾರ್ ವಿರುದ್ಧ ಜಿಲ್ಲಾಧಿಕಾರಿಯವರ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಬ್ರಿಮ್ಸ್ ಬೈಲಾ ಪ್ರಕಾರ, ಆಡಳಿತ ಮಂಡಳಿಯಲ್ಲಿ ತೀರ್ಮಾನ ಕೈಗೊಂಡು, ನಿವೃತ್ತ ನ್ಯಾಯಾಧೀಶರ ಮೂಲಕವೇ ತನಿಖೆ ನಡೆಸಬೇಕಾಗುತ್ತದೆ. ಜಿಲ್ಲಾಧಿಕಾರಿ ಮೂಲಕ ತನಿಖೆ ನಡೆಸುವ ಆದೇಶವು ಬೈಲಾ ನಿಯಮಕ್ಕೆ ಅನುಗುಣವಾಗಿರಲಿಲ್ಲ. ಹೀಗಾಗಿ ಎರಡನೇ ಬಾರಿಯೂ ರಾಜ್ಯ ಸರಕಾರಕ್ಕೆ ಹಿನ್ನಡೆ ಆಯಿತು.
ಮೂರನೇ ಬಾರಿ ತನಿಖೆಗೆ ಆದೇಶ ಹೊರಡಿಸುವ ಮುನ್ನ ಬೈಲಾ ನಿಯಮವನ್ನು ಪಾಲಿಸಲಾಗಿತ್ತು. ಬೈಲಾ ನಿಯಮಕ್ಕೆ ಅನುಗುಣವಾಗಿ ರಾಜ್ಯ ಸರಕಾರ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿಯೇ ಡಾ. ಶೆಟಕಾರ್ ಅವಧಿಯಲ್ಲಿನ ತೀರ್ಮಾನಗಳ ಬಗ್ಗೆ ತನಿಖೆ ನಡೆಸುವ ತೀರ್ಮಾನ ಕೈಗೊಂಡಿತ್ತು. ಬೈಲಾ ಪ್ರಕಾರವೇ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ಮುಂದಾಗಿತ್ತು. ಆದರೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪಾಲನೆ ಆಗದಿರುವುದನ್ನು ಡಾ. ಶಿವಕುಮಾರ ಶೆಟಕಾರ್ ಪರ ವಕೀಲರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಮೂರನೇ ಬಾರಿಯೂ ಶೆಟಕಾರ್ ಕಾನೂನು ಕ್ರಮದಿಂದ ಪಾರಾಗುವಂತಾಯಿತು.
ಡಾ. ಶಿವಕುಮಾರ ಶೆಟಕಾರ್ ಅವರು ಬ್ರಿಮ್ಸ್ ನಿರ್ದೇಶಕರಾಗಿ ಮೂರು ವರ್ಷ ಪೂರ್ಣಗೊಂಡಿವೆ. ನಿರ್ದೇಶಕರ ಕಾರ್ಯಾವಧಿ ನಾಲ್ಕು ವರ್ಷ. ಶೆಟಕಾರ್ ಅವಧಿ ಇನ್ನೊಂದು ವರ್ಷವಷ್ಟೇ ಬಾಕಿ ಉಳಿದಿದೆ. ರಾಜ್ಯ ಸರಕಾರದ ಮುಂದಿನ ನಡೆ ಏನಾಗಬಹುದು ಎಂಬ ಕುತೂಹಲ ಇದ್ದೇ ಇದೆ.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಶುರುವಾಗಿದ್ದು ವರ್ಷದ ಹಿಂದೆ. ಕಳೆದ ಸಾಲಿನ ಅಕ್ಟೋಬರ್ 24 ರಂದು ಶೆಟಕಾರ್ ಅವರನ್ನು ಬ್ರಿಮ್ಸ್ ನಿರ್ದೇಶಕ ಸ್ಥಾನದಿಂದ ಬಿಡುಗಡೆ ಮಾಡಲಾಗಿತ್ತು. ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಕುರಿತಾದ ಆದೇಶದಲ್ಲಿ ತಿಳಿಸಲಾಗಿತ್ತು. ಶೆಟಕಾರ್ ಸ್ಥಳಕ್ಕೆ ಡಾ. ಶಾಂತಲಾ ಕೌಜಲಗಿ ಅವರನ್ನು ನೇಮಕ ಮಾಡಲಾಗಿತ್ತು.
ಆದರೆ, ತಮ್ಮನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆ ಮಾಡಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ಡಾ. ಶಿವಕುಮಾರ ಶೆಟಕಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಅಕ್ಟೋಬರ್ 28 ರಂದೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದ ಶೆಟಕಾರ್ ಪುನ: ನಿರ್ದೇಶಕ ಹುದ್ದೆಯನ್ನು ವಹಿಸಿಕೊಂಡಿದ್ದರು.
ಇದಾದ ಕೆಲವೇ ದಿನಗಳ ನಂತರ (2024 ರ ನವೆಂಬರ್ 7) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಸರಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್ ಅವರು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಪತ್ರ ಬರೆದು, ತನಿಖೆ ನಡೆಸುವಂತೆ ಸೂಚಿಸಿದ್ದರು. ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ಸ್ವೀಕೃತವಾಗಿರುವ ದೂರುಗಳ ಹಿನ್ನೆಲೆಯಲ್ಲಿ ಬ್ರಿಮ್ಸ್ ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಾದ ತೀರ್ಮಾನ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ತನಿಖೆ ನಡೆಸಿ, 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಈ ಪತ್ರದಲ್ಲಿ ತಿಳಿಸಲಾಗಿತ್ತು.
ನಿಗದಿತ ಅವಧಿಗೆ ಮುನ್ನ ಹುದ್ದೆಯಿಂದ ಬಿಡುಗಡೆ ಮಾಡುವ ಮತ್ತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖೆಗೆ ಸಮಿತಿ ರಚಿಸುವ ಸರಕಾರದ ತೀರ್ಮಾನಗಳು ಬ್ರಿಮ್ಸ್ ಬೈಲಾ ನಿಯಮಕ್ಕೆ ಅನುಗುಣವಾಗಿರಲಿಲ್ಲ. ಹೀಗಾಗಿ ಸ್ವತ: ರಾಜ್ಯ ಸರಕಾರವೇ ತನ್ನ ಎರಡೂ ಆದೇಶಗಳನ್ನು ವಾಪಸ್ ಪಡೆದಿತ್ತು.
ಈ ಸಾಲಿನ ಜುಲೈ 31 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತನಿಖೆ ನಡೆಸುವ ನಿರ್ಣಯ ಕೈಗೊಳ್ಳಲಾಗಿತ್ತು. ಇದಾದ ಮೂರು ತಿಂಗಳ ನಂತರ ಅಕ್ಟೋಬರ್ 31 ರಂದು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಡಾ. ಶೆಟಕಾರ್ ಅವರು ನವೆಂಬರ್ 22 ರಂದು ಸರಕಾರದ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠವು ಡಿಸೆಂಬರ್ 3 ರಂದು ತೀರ್ಪು ನೀಡಿದೆ. ಮುಂದೆ ಏನಾಗಬಹುದು ಎಂಬ ಕುತೂಹಲ ಉಳಿದುಕೊಂಡಿದೆ.


