
ಕನ್ನಡ ಬಿಂಬ, ಬೀದರ್
ರಸ್ತೆ ಮತ್ತಿತರ ಮೂಲ ಸೌಲಭ್ಯಗಳು ಬೇಕು. ಆದರೆ, ಈ ಸೌಲಭ್ಯಗಳಿಂದಲೇ ಅಭಿವೃದ್ಧಿಯನ್ನು ಅಳೆಯಬಾರದು. ಉತ್ತಮ, ಚಾರಿತ್ರ್ಯವಂತ ವ್ಯಕ್ತಿಗಳ ನಿರ್ಮಾಣವೇ ನಿಜವಾದ ಅಭಿವೃದ್ಧಿ. ಶಿಕ್ಷಣವೇ ಈ ಅಭಿವೃದ್ಧಿಗಿರುವ ಏಕೈಕ ದಾರಿ ಎಂದು ಹೆಸರಾಂತ ಶಿಕ್ಷಣ ತಜ್ಞ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ನ. 18 ರಂದು ಸಂಸ್ಕøತಿ ಮಂತ್ರಾಲಯ ನವದೆಹಲಿ, ಕರುಣಾಮಯ ಯುವಕ ಸಂಘ ನಾವದಗೇರಿ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ 125ನೇ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ ಸಾಲಿನ ರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಡಾ. ಅಬ್ದುಲ್ ಖದೀರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮೂಲಭೂತ ಸೌಲಭ್ಯಗಳ ಹೆಚ್ಚಳದ ಜೊತೆ ಜೊತೆಗೆಯೇ ಮಾನವ ಅಭಿವೃದ್ದಿಯೂ ಆಗಬೇಕು. ವಿಶೇಷವಾಗಿ ದುಶ್ಚಟರಹಿತ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು. ಗುಟಕಾ, ಮಾದಕ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಡಾ. ಅಬ್ದುಲ್ ಖದೀರ್ ಹೇಳಿದರು.
ಯಾವುದೇ ಧರ್ಮವು ದುಶ್ಚಟಗಳನ್ನು ಬೆಂಬಲಿಸುವುದಿಲ್ಲ. ಉತ್ತಮ ಸಮಾಜ ನಿರ್ಮಾಣವೇ ಎಲ್ಲ ಧರ್ಮಗಳ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಿ ದುಶ್ಚಟರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ರಚಿಸಲಾಗಿದೆ. ಪೂಜ್ಯರೊಂದಿಗೆ ಚರ್ಚಿಸಲಾಗಿದೆ. ಗುಟ್ಕಾ ಸೇವನೆಯಂತಹ ಚಟಗಳಿಂದ ಸಮಾಜವನ್ನು ಮುಕ್ತಗೊಳಿಸಬೇಕಾಗಿದೆ. ಇದರ ಜೊತೆಗೆ ಭೀಕ್ಷಾಟನೆ ವಿರುದ್ಧವೂ ಜಾಗೃತಿ ನಡೆಸಬೇಕಾಗಿದೆ. ಭಿಕ್ಷೆ ಬೇಡುವುದು ಮತ್ತು ಭಿಕ್ಷೆ ಕೊಡುವುದು ಸರಿಯಲ್ಲ. ಇವು ಅಪರಾಧಕ್ಕೆ ಸಮಾನವಾಗಿವೆ ಎಂದು ಡಾ. ಅಬ್ದುಲ್ ಖದೀರ್ ಹೇಳಿದರು.
ಹಸಿವು ಮತ್ತಿತರ ಸಮಸ್ಯೆಗಳಿಂದ ಯಾರಾದರೂ ತೊಂದರೆಗೆ ಒಳಗಾದಲ್ಲಿ ಅಕ್ಕಪಕ್ಕದವರು ಮತ್ತು ಆಯಾ ಬಡಾವಣೆಯವರು ನೆರವು ನೀಡಬೇಕು. ಇದೊಂದು ಮಾನವೀಯ ಕಾರ್ಯ. ಎಲ್ಲರೂ ಭಾಗಿಯಾಗಬೇಕು. ಆದರೆ, ಭಿಕ್ಷೆ ಬೇಡುವುದನ್ನು ಪ್ರೋತ್ಸಾಹಿಸಬಾರದು ಎಂದು ಸಲಹೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸ್ಥಿತಿಗತಿಗಳ ಕುರಿತೂ ಡಾ. ಅಬ್ದುಲ್ ಖದೀರ್ ಅವರು ಪ್ರಸ್ತಾಪ ಮಾಡಿದರು. ಈ ಶಾಲೆಗಳಲ್ಲಿನ ಸ್ಥಿತಿ ಸಮಾಧಾನಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಶೇಷವಾಗಿ ಕನ್ನಡದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.
ರಸ್ತೆಯಲ್ಲಿ ಮೆರವಣಿಗೆ ಮಾಡುವುದರಿಂದಷ್ಟೇ ಕನ್ನಡ ಬೆಳೆಯಲಾರದು. ಮಕ್ಕಳ ಕನ್ನಡ ಕಲಿಕೆ ಮೇಲೆ ಪಾಲಕರು ನಿಗಾ ಇಡಬೇಕು. ಕನ್ನಡ, ಓದು, ಬರಹ ಎಷ್ಟರ ಮಟ್ಟಿಗೆ ಬರುತ್ತದೆ ಎನ್ನುವುದನ್ನು ನೋಡಬೇಕು ಎಂದು ಕಿವಿಮಾತು ಹೇಳಿದರು. ಮುಂಚೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿತ್ತು. ಈಗ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಕನ್ನಡ ಬರೀ ಬಾಯಿ ಮಾತು ಆಗಬಾರದು. ಕನ್ನಡ ಕಲಿಕೆಯೂ ಹೆಚ್ಚಬೇಕು ಎಂದು ಒತ್ತಿ ಹೇಳಿದರು.
ಅದ್ಧೂರಿ ಮದುವೆ, ದುಂದು ವೆಚ್ಚದ ಬಗ್ಗೆಯೂ ಡಾ.ಅಬ್ದುಲ್ ಖದೀರ್ ಅವರು ಬೇಸರ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ ಮಾಡಲಾಗುತ್ತಿರುವುದರಕ್ಕಿಂತ ಅಧಿಕ ಹಣವನ್ನು ಮದುವೆಗೆ ಖರ್ಚು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮದುವೆ ಸರಳವಾಗಿರಬೇಕು. ಆಚರಣೆಗಳು ಖರ್ಚುರಹಿತವಾಗರಬೇಕು. ಅದ್ಧೂರಿ ಮದುವೆ ವಿರುದ್ಧ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಪಾಶ್ಚಾತ್ಯ ಸಂಸ್ಕøತಿಗೆ ಮೊರೆ ಹೋಗಬಾರದು. ನೆಲದ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕು. ಡಾ. ಜಗನ್ನಾಥ ಹೆಬ್ಬಾಳೆ ಮತ್ತು ಡಾ. ರಾಜಕುಮಾರ ಹೆಬ್ಬಾಳೆ ಅವರು ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಬೀದರ್ ಜಿಲ್ಲೆ ಹೆಸರು ಮಾಡುತ್ತಿದೆ. ನಾಲ್ಕು ದಶಕಗಳ ಹಿಂದೆ ಶಿಕ್ಷಣಕ್ಕಾಗಿ ಮಂಗಳೂರು, ಧಾರವಾಡ, ಬೆಂಗಳೂರಿಗೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಮಂಗಳೂರಿನವರೂ ಬೀದರ್ ಜಿಲ್ಲೆಗೆ ಬರುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಬದಲಾವಣೆ ನಿಸರ್ಗದ ನಿಯಮ. ಇದೊಂದು ನಿರಂತರ ಪ್ರಕ್ರಿಯೆ ಆಗಬೇಕು. ವಿಶೇಷವಾಗಿ ಸಕಾರಾತ್ಮಕವಾಗಿ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು. ಎಲ್ಲರೂ ಸೇರಿ ಉತ್ತಮವಾದುದನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅದ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಆದೀಶ್ ರಜನೀಶ್ ವಾಲಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುನೀತಾ ಕೂಡ್ಲಿಕರ್ ಸ್ವಾಗತಿಸಿದರು.


