Ad imageAd image

ಕುರ್ ಆನ್ ಸೃಷ್ಟಿಕರ್ತ-ಮಾನವ ಸಂಬಂಧ ಮಾರ್ಗದರ್ಶಿ

Kannada Bimba Team
3 Min Read
ಬೀದರ್ ನಗರದ ಡಾ. ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶಾಂತಿ ಮತ್ತು ಸಮೃದ್ಧಿ ಕುರ್ಆನ್ ಬೆಳಕಿನಲ್ಲಿ ಕುರಿತು ಪ್ರವಚನ ನಡೆಯಿತು.
ಬೀದರ್ ನಗರದ ಡಾ. ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶಾಂತಿ ಮತ್ತು ಸಮೃದ್ಧಿ ಕುರ್ಆನ್ ಬೆಳಕಿನಲ್ಲಿ ಕುರಿತು ಪ್ರವಚನ ನಡೆಯಿತು.

 

ಕನ್ನಡ ಬಿಂಬ, ಬೀದರ್

ಕುರ್‍ ಆನ್ ಸೃಷ್ಟಿಕರ್ತ-ಮಾನವ ಹಾಗೂ ಮಾನವ-ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಡಿಸೆಂಬರ್ 7 ರಂದು ನಡೆದ ‘ಶಾಂತಿ ಮತ್ತು ಸಮೃದ್ಧಿ ಕುರ್‍ ಆನ್ ಬೆಳಕಿನಲ್ಲಿ’ ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ಕುರ್‍ ಆನ್ ಅಧ್ಯಾಯ 17 ರ ಸೂಕ್ತ 23 ರಿಂದ 30 ರ ವರೆಗೆ ಪಠಿಸಿ, ಅವುಗಳ ವಿವರಣೆ ನೀಡಿದರು. ಸೃಷ್ಟಿಕರ್ತ-ಮಾನವ ಮತ್ತು ಮಾನವ- ಮಾನವರ ಮಧ್ಯದ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ ಎಂದು ತಿಳಿಸಿದರು.

ಅಸ್ಸಲಾಮ್  ಅಲೈಕುಮ್  ರಹಮತುಲ್ಲಾಹೀ ಬರಕಾತುಹು’ ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು ಎಂದು ಹೇಳಿದರು.

ನಮ್ಮೆಲ್ಲರ ಪ್ರಭು ಏಕದೇವನು, ಚಿರಂತನನು, ಸ್ವಯಂ ಜೀವಂತನು, ಇಡೀ ಪ್ರಪಂಚದ ನಿಯಂತ್ರಕನೂ ಆಗಿದ್ದಾನೆ. ಅವನ ಹೊರತು ಬೇರಾರೂ ಆರಾಧ್ಯರಿಲ್ಲ. ಅವನಿಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಬಾಧಿಸುವುದಿಲ್ಲ. ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಎಂದು ಗುಣ ವಿಶೇಷತೆಗಳನ್ನು ವಿವರಿಸಿದರು.

ತಂದೆ-ತಾಯಿಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಂಬಂಧಿಕರು, ದರಿದ್ರರು, ಪ್ರಯಾಣಿಕರಿಗೆ ಅವರ ಹಕ್ಕು ಕೊಡಬೇಕು. ಅವರೊಂದಿಗೆ ಸೌಜನ್ಯ ನೀತಿ ಅನುಸರಿಸಬೇಕು. ಅಂದಾಗ ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ತಿಳಿಸಿದರು.

ದಿವ್ಯ ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ, ಪ್ರಸ್ತುತ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ. ದೇವರ ಆರಾಧನೆ, ಕರುಣೆ, ದಯೆ, ನ್ಯಾಯ, ಸಮಾನತೆಯಿಂದ ಶಾಂತಿ ಲಭಿಸುತ್ತದೆ ಎಂದು ತಿಳಿಸಿದರು. ಮುಹಮ್ಮದ್ (ಸ) ಹಾಗೂ ಬಸವಣ್ಣ ಶಾಂತಿ, ಸೌಹಾರ್ದತೆಯ ಪ್ರತೀಕ ಎಂದು ಬಣ್ಣಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍  ಮಾತನಾಡಿ, ದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ. ಆರಾಮ ವಲಯ ಹಾಗೂ ವಿಜ್ಞಾನ ಪ್ರಗತಿಯಿಂದ ಶಾಂತಿ ಸಿಗುವುದಿಲ್ಲ. ಮನುಷ್ಯ ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಸ್ವರೂಪನಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ. ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ, ಅನ್ಯಾಯವೇ ಅಶಾಂತಿಗೆ ಕಾರಣ ಎಂದು ಹೇಳಿದರು.

ಮನಸ್ಸಿನ ಶಾಂತಿ ಪ್ರಭುವಿನ ಸ್ಮರಣೆಯಲ್ಲಿದೆ. ನಾವು ಯಾವಾಗಲೂ ಸೃಷ್ಟಿಕರ್ತನ್ನು ಸ್ಮರಿಸುತ್ತ. ಅವನನ್ನೇ ಪ್ರಶಂಸಿಸಬೇಕು ಎಂದರು. ನಮ್ಮ ತಂದೆ-ತಾಯಿ ಒಂದೇ. ನಾವೆಲ್ಲ ಸಹೋದರರು ಎಂಬ ಭಾವನೆಯಿಂದ ಸಮಾನತೆ, ಶಾಂತಿ ಸ್ಥಾಪನೆಯಾಗುತ್ತದೆ ಎಂದು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್  ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್  ಕೌರ್ , ಶಾಹೀನ್  ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್  ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ. ಶೇಖ ಸುಮಯ್ಯಾ ಕುಲ್‍ಸುಮ್, ಡಾ. ವಿಜಯಶ್ರೀ ಎಸ್. ಬಶೆಟ್ಟಿ, ಡಾ. ಸುಮಯ್ಯ ಫಾತಿಮಾ, ಸಾಹಿತಿ ಡಾ. ಸುನಿತಾ ಕೂಡ್ಲಿಕರ್ ,  ಡಾ. ಅಮಲ್ ಷರೀಫ್ ,  ಡಾ. ದೀಪಾ ನಂದಿ, ಬಿಲ್ಕೀಸ್  ಫಾತಿಮಾ, ಬುಶ್ರಾ  ಜಮಾಲ್, ಬುತುಲ್  ಸಯೀದ್  ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ  ಐಮನ್ ,  ರುಖಯ್ಯಾ ಫಾತಿಮಾ, ಡಾ. ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಉಪಸ್ಥಿತರಿದ್ದರು.

ವಾಯಫಾ ಆಶ್ರಫ್  ಅವರ ಕುರ್‍ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಾಜರಾ ಬೇಗಂ ಕುರ್‍ ಆನ್ ಪಠಣ ಕನ್ನಡಕ್ಕೆ ಅನುವಾದಿಸಿದರು. ಅಫ್ರಾ  ನಾಜ್  ನಿರೂಪಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ತೌಹೀದ್  ಸಿಂಧೆ ವಂದಿಸಿದರು. ಇದೇ ವೇಳೆ ಕುರ್‍ ಆನ್  ಸಂದೇಶಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

 

Share This Article

You cannot copy content of this page