
ಕನ್ನಡ ಬಿಂಬ, ಬೀದರ್
ತಲಾ ಆದಾಯದಲ್ಲಿ ಎಲ್ಲಕ್ಕೂ ಕಡೆಯ ಸ್ಥಾನದಲ್ಲಿರುವುದು ಕಲಬುರಗಿ ಜಿಲ್ಲೆ. 31 ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ 27 ನೇ ಸ್ಥಾನದಲ್ಲಿದೆ. ಕಲಬುರಗಿ ಇರುವುದು 31 ನೇ ಸ್ಥಾನದಲ್ಲಿ. ಯಾದಗಿರಿ ಜಿಲ್ಲೆ 30, ಕೊಪ್ಪಳ 29, ರಾಯಚೂರು 24 ನೇ ಸ್ಥಾನದಲ್ಲಿದೆ.
2023-24 ನೇ ಸಾಲಿನ ಜಿಲ್ಲಾವಾರು ತಲಾ ಆದಾಯ ವರದಿ ಪ್ರಕಾರ ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಶಿವಮೊಗ್ಗ ಜಿಲ್ಲೆಗಳು ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಅಧಿಕ ತಲಾ ಆದಾಯ ಹೊಂದಿರುವುದು ವಿಶೇಷ. ರಾಜ್ಯದ ತಲಾ ಆದಾಯ 3,39,813 ರೂ. ಆಗಿದ್ದು, ಬೆಂಗಳೂರು ನಗರ ಜಿಲ್ಲೆಯ ತಲಾ ಆದಾಯ 7,38,910 ರೂ. ಆಗಿದೆ. 31 ಜಿಲ್ಲೆಗಳ ಪೈಕಿ 6 ಜಿಲ್ಲೆಗಳ ತಲಾ ಆದಾಯವು ರಾಜ್ಯದ ಸರಾಸರಿಗಿಂತ ಹೆಚ್ಚಿದೆ. ಉಳಿದ ಜಿಲ್ಲೆಗಳ ತಲಾ ಆದಾಯ ರಾಜ್ಯಕ್ಕಿಂತ ಕಡಿಮೆ ಇದೆ.
ಮಂಡ್ಯ 7 ನೇ ಸ್ಥಾನದಲ್ಲಿದೆ. ತುಮಕೂರು, ಕೊಡಗು, ಹಾಸನ, ಬಳ್ಳಾರಿ, ರಾಮನಗರ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ, ಬಾಗಲಕೋಟೆ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೇರೆ, ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಒಟ್ಟು 25 ಜಿಲ್ಲೆಗಳ ತಲಾ ಆದಾಯವು ರಾಜ್ಯದ ತಲಾ ಆದಾಯಕ್ಕಿಂತ ಕಡಿಮೆ ಇರುವುದು ಗಮನಾರ್ಹ.
ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಬೀದರ ಜಿಲ್ಲೆಯ ತಲಾ ಆದಾಯವು ಬೆಳಗಾವಿ ಜಿಲ್ಲೆಗಿಂತ ಹೆಚಿದೆ. ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳು ಬೀದರ್ ಜಿಲ್ಲೆಗಿಂತ ಕಡಿಮೆ ತಲಾ ಆದಾಯ ಹೊಂದಿರುವುದು 2023-24 ನೇ ಸಾಲಿನ ಜಿಲ್ಲಾವಾರು ತಲಾ ಆದಾಯ ವರದಿಯಲ್ಲಿದೆ.
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತ: ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶವು ಅಭಿವೃದ್ದಿಯಲ್ಲಿ ಹಿಂದುಳಿಯಲು ಕಾರಣವಾದ ಅಂಶಗಳ ಬಗ್ಗೆಯೂ ಮುಖ್ಯಮಂತ್ರಿಯವರು ಪ್ರಸ್ತಾಪ ಮಾಡಿದ್ದಾರೆ.
ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಅನುದಾನ ಒದಗಿಸಿದರೂ ಈ ಭಾಗ ಯಾಕೆ ಹಿಂದುಳಿದಿದೆ ?, ಇದರಲ್ಲಿ ಚಾರಿತ್ರಿಕ ಸಂಗತಿಗಳೇನಾದರೂ ಇವೆಯೆ ? ಹೇಗೆ ಅಭಿವೃದ್ಧಿ ಸಾಧಿಸುವುದು ?, ಅನುದಾನಗಳಿಂದ ಮಾತ್ರವೇ ಅಭಿವೃದ್ಧಿ ಸಾಧ್ಯವಾಗುತ್ತದೆಯೆ ?, ಜನರ ಮನಸ್ಥಿತಿಯಲ್ಲಿ ಉಂಟು ಮಾಡಬೇಕಾದ ಬದಲಾವಣೆಗಳೇನು? ಎಂಬ ಪ್ರಶ್ನೆಗಳನ್ನೂ ಮುಖ್ಯಮಂತ್ರಿಯವರು ಜನತೆಯ ಮುಂದಿಟ್ಟಿದ್ದಾರೆ.
ನಾವು ತಲಾ ಆದಾಯವನ್ನು ಅಭಿವೃದ್ಧಿಯ ಮಾನದಂಡವಾಗಿರಿಸಿಕೊಳ್ಳುತ್ತೇವೆ. ತಲಾ ಆದಾಯವೆಂದರೆ ಒಟ್ಟಾರೆ ಆ ಜಿಲ್ಲೆಯ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಿ ಅದನ್ನು ಆ ಜಿಲ್ಲೆಯ ಎಲ್ಲಾ ಜನರಲ್ಲಿ ವಿಭಜಿಸಿದಾಗ ಸಿಗುವ ಮೌಲ್ಯವಾಗಿರುತ್ತದೆ. ಕೈಗಾರಿಕೀಕರಣ, ವಾಣಿಜ್ಯ ಚಟುವಟಿಕೆ ಹೆಚ್ಚಿರುವ ಜಿಲ್ಲೆಗಳಲ್ಲಿ ಆದಾಯವೂ ಹೆಚ್ಚು. ಕೃಷಿ ಮುಖ್ಯವಾಗಿರುವ ಜಿಲ್ಲೆಗಳಲ್ಲಿ ಆದಾಯ ಕಡಿಮೆ ಎಂದು ಸಿಎಂ ಹೇಳಿದರು.
ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾ ಆದಾಯ ಅದರಲ್ಲೂ ಕಲ್ಯಾಣ ಕರ್ನಾಟಕದ ಜನರ ತಲಾ ಆದಾಯ ಕಡಿಮೆ ಇರಲು ಕಾರಣಗಳೇನು ಎಂದು ಹುಡುಕುತ್ತಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇರುವುದನ್ನು ಕಾಣಬಹುದು. ಈ ಕುರಿತು ಹೆಚ್ಚು ಚರ್ಚೆ ನಡೆಯಬೇಕಾಗಿದೆ ಎಂದು ಸಿಎಂ ಹೇಳಿದರು.
ಹಸು, ಎಮ್ಮೆ ಸಾಕಾಣಿಕೆಯು ತಕ್ಷಣದ ಆದಾಯವನ್ನು ಹೆಚ್ಚು ಮಾಡುತ್ತದೆ. ಜನರು ಗುಳೆ ಹೋಗುವುದನ್ನು ತಪ್ಪಿಸುತ್ತದೆ. ಜನ ಒಂದೇ ಕಡೆ ನೆಲೆಸಿದರೆ ಅಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶಿಕ್ಷಣವು ಉತ್ತಮ ಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದರು. ತಲಾ ಆದಾಯ ಹೆಚ್ಚಳದಲ್ಲಿ ಹೈನುಗಾರಿಕೆ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಅದು ಹೇಗೆ ಜೀವನಮಟ್ಟ ಸುಧಾರಿಸಲು ನೆರವಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿಯವರು ಸದನಕ್ಕೆ ವಿವರಿಸಿದರು.
ನಾನು ಹಾಲು ಒಕ್ಕೂಟಗಳ ಮಾಹಿತಿ ತರಿಸಿಕೊಂಡು ನೋಡಿದ್ದೇನೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಪ್ರತಿ ದಿನ ಸರಾಸರಿ 17.13 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಹಾಸನ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ಕೋಲಾರ ಹಾಲು ಒಕ್ಕೂಟಗಳಲ್ಲಿ ಪ್ರತಿ ದಿನ ಸರಾಸರಿ 7.2 ರಿಂದ 14.08 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಆದರೆ, ಕಲ್ಬುರ್ಗಿ ಹಾಲು ಒಕ್ಕೂಟದಲ್ಲಿ (ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆ ಸೇರಿ) ದಿನಕ್ಕೆ ಕೇವಲ 67 ಸಾವಿರ ಲೀಟರ್ ಹಾಲು ಮಾತ್ರ ಸಂಗ್ರಹವಾಗುತ್ತದೆ. ವಿಜಯಪುರ ಒಕ್ಕೂಟದಲ್ಲಿ 1.47 ಲಕ್ಷ, ಹಾವೇರಿ ಒಕ್ಕೂಟದಲ್ಲಿ 1.55 ಲಕ್ಷ ಲೀಟರ್ ಮಾತ್ರ ಸಂಗ್ರಹವಾಗುತ್ತದೆ. ಬೆಳಗಾವಿಯಲ್ಲಿ 2.39 ಲಕ್ಷ ಲೀಟರ್ ಸಂಗ್ರಹವಾಗುತ್ತದೆ ಎಂದು ಮುಖ್ಯಮಂತ್ರಿಯವರು ಸದನಕ್ಕೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಲೀಟರ್ ಮಾತ್ರ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಉಡುಪಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹದ ಪ್ರಮಾಣ ದಿನಕ್ಕೆ 22.4 ಲೀಟರುಗಳು. ಈ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಹೇಳಿದರು.
ನಮ್ಮ ಜೇವರ್ಗಿ ಕ್ಷೇತ್ರದ ಶಾಸಕರು ಮಹಿಳೆಯರ ಬಹಿರ್ದೆಸೆಗೆ ಅಡ್ಡ ಗೋಡೆಗಳನ್ನು ನಿರ್ಮಿಸಬೇಕಾಗಿದೆ ಎಂದು ಕೇಳುತ್ತಿದ್ದಾರೆ. ಶೌಚಾಲಯಗಳಿದ್ದಾವಲ್ಲ ಅಂದೆ ನಾನು. ಜನ ಬಳಸುವುದಿಲ್ಲ ಸಾರ್ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳುವುದು. ಸರ್ಕಾರ ಅನುದಾನ ನೀಡಿ ಶೌಚಾಲಯ ಕಟ್ಟಿಸಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿಗಳನ್ನು ಅಳವಡಿಸಿ ನೀರನ್ನೂ ಸರಬರಾಜು ಮಾಡಲಾಗುತ್ತಿದೆ. ಆದರೂ ಜನ ಬಳಸುವುದಿಲ್ಲ ಎನ್ನುತ್ತಾರೆ. ಹೇಗೆ ಈ ಸಮಸ್ಯೆಯನ್ನು ಸರಿ ಪಡಿಸುವುದು ? ಇವೆಲ್ಲ ಸರಳವಾದ ಸಂಗತಿಗಳಲ್ಲ. ಇವಕ್ಕೆ ಪರಿಹಾರಗಳನ್ನು ನಾವುಗಳು ಹುಡುಕಬೇಕಾಗಿದೆ ಎಂದು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು.


