
ಕನ್ನಡ ಬಿಂಬ, ಬೀದರ್
ಕಬ್ಬು ಪೂರೈಸಿದ ರೈತರಿಗೆ ಉಚಿತವಾಗಿ ಸಕ್ಕರೆ ವಿತರಿಸುವ ಮೂಲಕ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಂಕ್ರಾಂತಿ ಹಬ್ಬದ ಸಿಹಿ ಹೆಚ್ಚಿಸಿದ್ದಾರೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಆರಂಭಿಸಿದ್ದ ಪರಂಪರೆಯನ್ನು ಮುಂದುವರೆಸಿದ್ದಾರೆ. ಕಹಿ ಮರೆತು ಸಿಹಿ ವಿತರಿಸಿ, ಸಂಭ್ರಮಿಸುವ ಸಂಕ್ರಾಂತಿ ಹಬ್ಬಕ್ಕೆ ಮೊದಲೇ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಕ್ಕರೆ ವಿತರಿಸುವ ಮೂಲಕ ಕಬ್ಬು ಬೆಳೆಗಾರರ, ರೈತರ ಮನಸ್ಸು ಗೆದ್ದುಕೊಂಡಿದ್ದಾರೆ. ಕಾರಖಾನೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಡೆದ ಮೊದಲ ಸಭೆಯಲ್ಲಿಯೇ ಸಂಕ್ತಾಂತಿಗೆ ಮುನ್ನ ಉಚಿತ ಸಕ್ಕರೆ ವಿತರಿಸಲಾಗುತ್ತದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಅವರು ಭರವಸೆ ನೀಡಿದ್ದರು. ಅದನ್ನು ಪೂರ್ಣಗೊಳಿಸುವ ಮೂಲಕ ನುಡಿದಂತೆ ನಡೆದಿದ್ದಾರೆ.
ಬೀದರ್ ತಾಲೂಕಿನ ಜನವಾಡಾ ಗ್ರಾಮದಲ್ಲಿರುವ ಕಾರಖಾನೆಯ ಕಚೇರಿಯಲ್ಲಿ ಸಕ್ಕರೆ ವಿತರಣೆಗೆ ಚಾಲನೆ ನೀಡಲಾಯಿತು. ರೈತ ಸಂಘದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಭಾಲ್ಕಿ ಮಾತನಾಡಿ, ನಾಗಮಾರಪಳ್ಳಿ ಪರಿವಾರದ ಕೊಡುಗೆ ಸ್ಮರಿಸಿದರು. ಸೂರ್ಯಕಾಂತ ನಾಗಮಾರಪಳ್ಳಿ ಅವರು ಹಿಂದೆ ನೀಡಿದ್ದ ಆಶ್ವಾಸನೆಯಂತೆ ಸಂಕ್ರಾಂತಿ ಹಬ್ಬಕ್ಕೆ ಮೊದಲೇ ಸಕ್ಕರೆ ವಿತರಣೆಗೆ ಚಾಲನೆ ನೀಡಿರುವುದು ಸಂತೋಷದ ಸಂಗತಿ. ನಿಜಕ್ಕೂ ಈ ಬಾರಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಲಿದೆ ಎಂದು ಹೇಳಿದರು.
ಹಂಗಾಮು ಶುರುವಾಗುತ್ತಲೇ ಸಕ್ಕರೆ ಇಳುವರಿ ಕುಸಿತದ ಮಾತು ಕೇಳಿ ಬರುತಿತ್ತು. ಈ ಬಾರಿ ಎಲ್ಲ ಕಾರಖಾನೆಗಳಲ್ಲಿ ಸಕ್ಕರೆ ಇಳುವರಿ ಉತ್ತಮವಾಗಿದೆ. ಇದೊಂದು ಉತ್ತಮ ಬೆಳವಣಿಗೆ. ಇದು ಕಬ್ಬು ಬೆಳೆಗಾರರಿಗೆ, ರೈತರಿಗೆ ಆನಂದವುಂಟು ಮಾಡಿದೆ. ಇದು ಸೂರ್ಯಕಾಂತ ನಾಗಮಾರಪಳ್ಳಿ ಅವರ ಶುಭ ಹಾರೈಕೆಯ ಫಲವೇ ಆಗಿರಬಹುದು ಎಂದು ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಸಕ್ಕರೆ ಇಳುವರಿ ಉತ್ತಮವಾಗಿರುವುದರಿಂದ ಸರಕಾರ ನಿಗದಿಪಡಿಸಿದಂತೆ ಟನ್ ಕಬ್ಬಿಗೆ 2950 ರೂ. ಕೊಡುವುದು ಸಕ್ಕರೆ ಕಾರಖಾನೆಗಳಿಗೆ ಭಾರ ಆಗಲಿಕ್ಕಿಲ್ಲ. ಹಿಂದಿನ ಸಾಲಿನ ಹಂಗಾಮಿನ ಬಾಕಿ 50 ರೂ.ಗಳನ್ನೂ ನಂತರ ಕೊಡುವುದಾಗಿ ಹೇಳಿದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ಅವರ ಮೇಲೆ ಭರವಸೆ ಇದೆ ಎಂದು ಮಲ್ಲಿಕಾರ್ಜುನ ಸ್ವಾಮಿ ಭಾಲ್ಕಿ ಹೇಳಿದರು.
ಕಬ್ಬಿನ ತಳಿ ಕುರಿತಂತೆ ರೈತ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ. ಜಿಲ್ಲೆಯ ಮಣ್ಣು, ನೀರು, ವಾತಾವರಣಕ್ಕೆ ಸೂಕ್ತವಾದ, ಅಧಿಕ ಸಕ್ಕರೆ ಇಳುವರಿ ನೀಡುವ ತಳಿ ಬೇಕಾಗಿದೆ. ಜಿಲ್ಲೆಯಲ್ಲಿ ಕಬ್ಬು ಸಂಶೋಧನಾ ಸಂಸ್ಥೆ ಸ್ಥಾಪನೆಗೊಂಡಲ್ಲಿ ಅನುಕೂಲವಾಗುತ್ತದೆ. ಈ ಸಂಬಂಧ ಜಿಲ್ಲಾ ಆಡಳಿತಕ್ಕೆ, ಜಿಲ್ಲೆಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಕ್ಕರೆ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ. ಸಚಿವರ ಬಳಿ ಈ ಫೈಲು ಇದೆ. ಕಾರಖಾನೆ ಅಧ್ಯಕ್ಷರೂ ಈ ದಿಸೆಯಲ್ಲಿ ಪ್ರಯತ್ನಿಸಬೇಕು. ಕಬ್ಬು ಸಂಶೋಧನಾ ಸಂಸ್ಥೆ ಸ್ಥಾಪನೆಯಾದಲ್ಲಿ ರೈತರಿಗೆ, ಸಕ್ಕರೆ ಕಾರಖಾನೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.
ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಇದ್ದಾಗ ರೈತರ ಯಾವುದೇ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರಲಿಲ್ಲ. ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ಅವರನ್ನೇ ಭೇಟಿಯಾಗುತ್ತಿದ್ದೇವು. ಪ್ರತಿ ಬಾರಿ ಅವರು ಬೇಡಿಕೆಗೆ ಸ್ಪಂದಿಸುತ್ತಿದ್ದರು. ರೈತರು ಸೇರಿದಂತೆ ಎಲ್ಲರ ಏಳಿಗೆಗೆ ನೆರವು ನೀಡಿದವರು ಗುರುಪಾದಪ್ಪ ನಾಗಮಾರಪಳ್ಳಿಯವರು ಎಂದು ಸ್ಮರಿಸಿದರು.
ಸಹಕಾರಿ ಕ್ಷೇತ್ರದ ಸಕ್ಕರೆ ಕಾರಖಾನೆಗಳನ್ನು ಸದೃಢಗೊಳಿಸಲು ಸರಕಾರ ಮುಂದಾಗಬೇಕು. ಸಾಲದ ಹೊರೆ ಇರುವ ಕಾರಖಾನೆಗಳಿಗೆ ಆರ್ಥಿಕವಾಗಿ ನೆರವಾಗಬೇಕು. ಒಟಿಎಸ್ ಸೇರಿದಂತೆ ಸಾಲದ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕಾರಖಾನೆಯ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಾತನಾಡಿ, ಹಿಂದೆ ನೀಡಿದ್ದ ಭರವಸೆಯಂತೆ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ವಿತರಿಸಲಾಗುತ್ತಿದೆ. ರೈತರು, ಬಡವರು, ಮಹಿಳೆಯರು, ಹಿಂದುಳಿದವರು, ಶೋಷಿತರು ಸೇರಿದಂತೆ ಎಲ್ಲರ ಕಲ್ಯಾಣದ ಬಗ್ಗೆ ಚಿಂತನೆ ಮಾಡಿದವರು ದಿ.ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರು. ಬಡವರು ಮತ್ತು ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವುದು ನಾಗಮಾರಪಳ್ಳಿ ಪರಿವಾರದ ಪರಂಪರೆಯೇ ಆಗಿದೆ. ನಾಗಮಾರಪಳ್ಳಿ ಎನ್ನುವುದು ರೈತರ, ಬಡವರ ಪರವಾದ ಬ್ರ್ಯಾಂಡ್ ನ ಹೆಸರಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ನನೆಗುದಿಗೆ ಬಿದ್ದಿದ್ದ ನಾರಂಜಾ ಕಾರಖಾನೆಯನ್ನು ತಂದೆಯವರಾದ ದಿ.ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರು 18 ತಿಂಗಳಲ್ಲಿಯೇ ನಿರ್ಮಿಸಿ, ಯಶಸ್ವಿಯಾಗಿ ಮುನ್ನಡೆಸಿದ್ದರು. ಹಿರಿಯ ಸಹೋದರ ಉಮಾಕಾಂತ ನಾಗಮಾರಪಳ್ಳಿ ಅವರು ಕಾರಖಾನೆಯ ಅಧ್ಯಕ್ಷರಾಗಿ ಅದನ್ನು ಸಶಕ್ತಿಗೊಳಿಸಿದ್ದರು. ಜಿಲ್ಲೆಯ ರೈತರ ಆಶಿರ್ವಾದದಿಂದ ಕಾರಖಾನೆಯ ಅದ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ. ರೈತರ ನಿರೀಕ್ಷೆಯಂತೆ ಈ ಕಾರಖಾನೆಯನ್ನು ಸಶಕ್ತಗೊಳಿಸಲಾಗುತ್ತದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಕಬ್ಬು ಪೂರೈಸಿದ ರೈತರಿಗೆ ಉಚಿತವಾಗಿ ಸಕ್ಕರೆ ವಿತರಿಸುವ ಪದ್ಧತಿಯನ್ನು ಆರಂಭಿಸಿದವರೇ ದಿ. ಗುರುಪಾದಪ್ಪ ನಾಗಮಾರಪಳ್ಳಿಯವರು. ಈ ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ ಎಂದು ಸೂರ್ಯಕಾಂತ ಹೇಳಿದರು.
ರೈತ ಮುಖಂಡ ಸಿದ್ರಾಮಪ್ಪ ಅಣದೂರೆ, ದಯಾನಂದ ಸ್ವಾಮಿ ಸಿರ್ಸಿ ಮಾತನಾಡಿ, ಹಳ್ಳದಕೇರಿಯಲ್ಲಿ 34 ಎಕರೆ ಜಮೀನು ಲಭ್ಯವಿದ್ದು, ಅಲ್ಲಿಯೇ ಕಬ್ಬು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಕಾರಖಾನೆ ಅಧ್ಯಕ್ಷರು ಸೇರಿದಂತೆ ಎಲ್ಲರೂ ಈ ವಿಷಯದಲ್ಲಿ ಕಾಳಜಿ ವಹಿಸಬೇಕು. ಕಬ್ಬು ಸಂಶೋಧನಾ ಸಂಸ್ಥೆ ಆರಂಭವಾದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಪ್ರಮುಖರಾದ ವೈಜನಾಥ ಬುಯ್ಯ, ಶಂಕರಪ್ಪ ಪಾರಾ, ರಮೇಶ ಪಾರಾ, ಕಾರಖಾನೆಯ ಉಪಾಧ್ಯಕ್ಷ ಬಾಲಾಜಿ ಚಹ್ವಾಣ್, ನಿರ್ದೇಶಕರಾದ ಸಿದ್ರಾಮ ವಾಘಮಾರೆ, ರಾಜಕುಮಾರ ಕರಂಜೆ, ವಿಜಯಕುಮಾರ ಪಾಟೀಲ್, ಸಂಗಮೇಶ ಪಾಟೀಲ್ ಅಲಿಯಂಬರ್, ಚಂದ್ರಕಾಂತ ಹಿಪ್ಪಳಗಾಂವ್, ಕುಶಾಲ ಯಾಬಾ, ಅಂಬರೀಶ ಗಂಗಾಪುರೆ, ಶೋಭಾವತಿ ಶಂಕರ ಪಾಟೀಲ್, ಬಾಲಾಜಿ ರೆಡ್ಡಿ, ಪ್ರಮುಖರಾದ ಶಿವಕುಮಾರ ಭಾಲ್ಕೆ, ಮಾದಪ್ಪ ಬೋರಗೆ, ಘಾಳೆಪ್ಪ, ಸಂಗನಹಳ್ಳಿ ನಿರಂಜನ, ವೀರಶೆಟ್ಟಿ ಕವಳೆ, ಸತೀಶ ಕುಲಕರ್ಣಿ ಕೊಳಾರ, ನಾರಂಜಾ ಕಾರಖಾನೆ ಸಿಬ್ಬಂದಿ ಅರುಣಕುಮಾರ ಬಂಬಶೆಟ್ಟಿ, ಹಾವಗಿರಾವ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.


