
ಕನ್ನಡ ಬಿಂಬ, ಬೆಳಗಾವಿ
ಕಲ್ಯಾಣ ಕರ್ನಾಟಕ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು ಕೆಕೆಆರ್‍ಡಿಬಿ ವತಿಯಿಂದ ಜಾರಿಗೊಳಿಸುವಂತೆ ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ಅಧ್ಯಯನ ನಡೆಸಿರುವ ತಜ್ಞರ ಸಮಿತಿಯು ಡಿಸೆಂಬರ್ 16 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವರದಿ ಸಲ್ಲಿಸಿದೆ. ಶಾಲಾ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಲಾಗಿದೆ. ಜೊತೆಗೆ ಬೋಧನಾ ವ್ಯವಸ್ಥೆಯ ಸುಧಾರಣೆ, ಶಿಕ್ಷಕರ ಹುದ್ದೆ ಭರ್ತಿ ಮಾಡುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
ತಜ್ಞರ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿ, ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಮಗ್ರ ಮತ್ತು ಗುಣಮಟ್ಟದ ಶಿಕ್ಷಣ ಅಭಿವೃದ್ಧಿಗೆ ತಜ್ಞರ ಸಲಹೆ ಪಡೆಯುವ ಉದ್ದೇಶದಿಂದ ರಾಜ್ಯ ಸರಕಾರವು ಕಳೆದ ಫೆಬ್ರವರಿಯಲ್ಲಿ ಶಿಕ್ಷಣ ತಜ್ಞರಾದ ಡಾ. ಛಾಯಾ ದೇಗಾಂವಕರ ಅಧ್ಯಕ್ಷತೆಯಲ್ಲಿ ಡಾ. ಅಬ್ದುಲ್ ಖದೀರ್, ಮಲ್ಲಿಕಾರ್ಜುನ ಎಂ.ಎಸ್., ಫಾ. ಫ್ರಾನ್ಸಿಸ್ ಬಾಷ್ಯಂ, ಡಾ. ರುದ್ರೇಶ್ ಎಸ್., ಎನ್.ಬಿ. ಪಾಟೀಲ್, ಯಶವಂತ್ ಹರಸೂರ್ ಮತ್ತು ಡಾ. ನಾಗಬಾಯಿ ಬಿ. ಬುಳ್ಳಾ ಅವರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿಯು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸುಮಾರು 100 ಸರ್ಕಾರಿ ಶಾಲೆಗಳ ಕ್ಷೇತ್ರ ಭೇಟಿ ಮೂಲಕ ಮಾಹಿತಿ ಪಡೆದು ಸಮಗ್ರ ಅಧ್ಯಯನ ವರದಿಯನ್ನು ಸಿದ್ದಪಡಿಸಿ, ಸರಕಾರಕ್ಕೆ ಸಲ್ಲಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿರುವ ಒಟ್ಟು ಶಾಲೆಗಳಲ್ಲಿ ಸರ್ಕಾರಿ ಶಾಲೆಗಳ ಪಾಲು (ಶೇ.57.35) ಇದ್ದು, ನಂತರದ ಸ್ಥಾನದಲ್ಲಿ ಖಾಸಗಿ ಶಾಲೆಗಳು (ಶೇ.33.42) ಇವೆ. ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದುವ ವಿದ್ಯಾರ್ಥಿಗಳ ಪ್ರಮಾಣ 7ನೇ ತರಗತಿ ಬಳಿಕ ನಿರಂತರವಾಗಿ ಕಡಿಮೆಯಾಗುತ್ತಿದೆ. ಶೇ. 12 ರಷ್ಟು ವಿದ್ಯಾರ್ಥಿಗಳಿಗೆ 9 ರಿಂದ 10ನೇ ತರಗತಿಗೆ ತೇರ್ಗಡೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳಕಾರಿ ಸಂಗತಿ ತಜ್ಞರ ಸಮಿತಿ ವರದಿಯಲ್ಲಿದೆ.
ಈ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 17,274 ಹುದ್ದೆಗಳು (ಶೇ. 38.2) ಮತ್ತು ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು (ಶೇ.34.8) ಖಾಲಿ ಇವೆ. ಇದರಿಂದ ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತಿದೆ.
ಈ ಪ್ರದೇಶದ ಮೊದಲ ಹಂತದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇ. 53.40 ಆಗಿದ್ದು, ಇದು ರಾಜ್ಯದ ಸರಾಸರಿ (ಶೇ.66.14) ಗಿಂತ ಕಡಿಮೆಯಾಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ, ಶೇ. 42.43 ರಷ್ಟು ಉತ್ತೀರ್ಣ ಪ್ರಮಾಣ ಇರುವುದನ್ನು ತಮಿತಿ ಗುರುತಿಸಿದೆ. ರಾಜ್ಯ ಮಟ್ಟದಲ್ಲಿ ಮೂರು ಪರೀಕ್ಷೆಗಳ ಸರಾಸರಿ ಫಲಿತಾಂಶ ಶೇ. 79.97 ಆಗಿದ್ದು, ವಿಜಯನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ ದಾಖಲಿಸಿವೆ.
ವಿಷಯ ಶಿಕ್ಷಕರನ್ನೂ ಒಳಗೊಂಡಂತೆ ಶಿಕ್ಷಕರ ಕೊರತೆ ಇರುವುದು, ಬೋಧನಾ ವಿಧಾನಗಳಲ್ಲಿ ಕಡಿಮೆ ಮಟ್ಟದ ಸಾಮಥ್ರ್ಯ ವೃದ್ಧಿ, ಸೂಕ್ತ ತರಬೇತಿಯಿಲ್ಲದ ಅತಿಥಿ ಶಿಕ್ಷಕರೇ ಹೆಚ್ಚಾಗಿರುವುದು, ಪರಿಣಿತ ಅಧ್ಯಾಪಕರ ಕೊರತೆಯಿಂದಾಗಿ ಡಯಟ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಕೊರತೆ, ಬಿ ಆರ್ ಸಿ ಮತ್ತು ಸಿ ಆರ್ ಸಿ ಗಳಿಂದ ಸಮರ್ಪಕ ಗುಣಮಟ್ಟದ ಶೈಕ್ಷಣಿಕ ಮಾರ್ಗದರ್ಶನದ ಕೊರತೆ ಹಾಗೂ ಶಾಲಾ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿಶೀಲನೆಯಲ್ಲಿ ದುರ್ಬಲತೆ ಇರುವುದು ಫಲಿತಾಂಶ ಕಳಪೆಯಾಗಲು ಕಾರಣವಾಗಿವೆ ಎಂದು ಸಮಿತಿ ತಿಳಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆ ಖಚಿತಪಡಿಸಲು ವರ್ಗಾವಣೆ ನೀತಿಯ ಪರಿಶೀಲನೆ ನಡೆಸುವ ಅಗತ್ಯವಿದೆ. ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆ ಕಾರ್ಯಕ್ರಮದ ಪರಿಣಾಮಕಾರಿ ಮತ್ತು ಫಲಿತಾಂಶಾಧಾರಿತ ಅನುμÁ್ಠನಕ್ಕೆ ತಂತ್ರ ರೂಪಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶ ಸುಧಾರಿಸಲು ಸಾಧ್ಯವಿರುವ ಮತ್ತು ಕಾರ್ಯನಿರ್ವಹಣೆಯಲ್ಲಿರುವ ಕಡೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಬೇಕು. ಕೆಳ ಹಂತದಲ್ಲಿ ಕಲಿಕಾ ಪ್ರಕ್ರಿಯೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು. 1 ರಿಂದ 3ನೇ ತರಗತಿಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ತರಗತಿಗಳಲ್ಲಿಯೂ ಅವುಗಳನ್ನು ನಿರಂತರವಾಗಿರಿಸಬೇಕು. ಮಧ್ಯವರ್ತಿ ಕಲಿಕಾ ವಿಧಾನಗಳು 4ನೇ ತರಗತಿಯಿಂದ ಆರಂಭವಾಗಬೇಕು. ನಿಧಾನ ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಂಬಲ ಒದಗಿಸಬೇಕು ಎಂದು ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.
ಶಾಲೆಗಳು ಮತ್ತು ಶಿಕ್ಷಕರಿಗೆ ಕಲಿಕಾ ಫಲಿತಾಂಶ ಗುರಿಗಳೊಂದಿಗೆ ಸ್ವಾಯತ್ತತೆ ಮತ್ತು ಜವಾಬ್ದಾರಿ ನೀಡುವುದು ಹಾಗೂ ಶಾಲೆಗಳಿಗೆ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವುದು ಸಮಿತಿಯ ಶಿಫಾರಸ್ಸುಗಳಲ್ಲಿ ಸೇರಿವೆ.
ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೇಡಿಕೆ ಇದ್ದು, ಇಂಗ್ಲಿμï ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಥವಾ ಸಮರ್ಪಕ ಇಂಗ್ಲಿμï ಜ್ಞಾನ ಹೊಂದಿದ ಶಿಕ್ಷಕರನ್ನು ಈ ತರಗತಿಗಳಿಗೆ ವರ್ಗಾಯಿಸಬೇಕು. ಆರಂಭಿಕ ಬಾಲ್ಯ ಶಿಕ್ಷಣವನ್ನು ಐಸಿಡಿಎಸ್ ಜೊತೆ ಸಂಯೋಜಿಸಿ ಜಾರಿ ಮಾಡಬೇಕು. ಪ್ರಸ್ತುತ ನಲಿ–ಕಲಿ ಕಾರ್ಯಕ್ರಮದಲ್ಲಿ ಅನೇಕ ಶೈಕ್ಷಣಿಕ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಕೊರತೆಗಳಿದ್ದು, ಇದನ್ನು ಸುಧಾರಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಈ ಪ್ರದೇಶದಲ್ಲಿ ಹೆಚ್ಚಿನ ಉಪಯೋಗ ಮತ್ತು ಸಾಮಥ್ರ್ಯ ಹೊಂದಿದ್ದು, ಇವು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 350 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಬೇಕು. ಇದರಲ್ಲಿ 200 ಶಾಲೆಗಳನ್ನು ಮಂಡಳಿಯಡಿಯಲ್ಲಿ ಆರಂಭಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ಯೋಜನೆಗಳ ಪರಿಣಾಮಗಳ ಮೌಲ್ಯಮಾಪನ, ಶಾಲಾ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಶಿಕ್ಷಣ ಗುರಿಗಳನ್ನು ಆಧರಿಸಿ ದೀರ್ಘಕಾಲೀನ ಯೋಜನೆ ಸಿದ್ಧಪಡಿಸಬೇಕು. ಎಲ್ಲಾ ಕಾರ್ಯಕ್ರಮಗಳ ಅನುμÁ್ಠನದ ಗುಣಮಟ್ಟ ಪರಿಶೀಲನೆಯನ್ನು ಎರಡು ವರ್ಷಕ್ಕೊಮ್ಮೆ ನಡೆಸಬೇಕು ಎಂದು ಸಲಹೆ ನೀಡಲಾಗಿದೆ.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು ಕೆಕೆಆರ್‍ಡಿಬಿ ವತಿಯಿಂದ ಜಾರಿಗೆ ತರಲು ಶಿಫಾರಸ್ಸು ಮಾಡಲಾಗಿದೆ. ಹಾಜರಾತಿ ಮತ್ತು ಕಲಿಕಾ ಫಲಿತಾಂಶ ಗುರಿಗಳನ್ನು ಸಾಧಿಸಿದ ಶಾಲೆಗಳಿಗೆ ಪ್ರಶಸ್ತಿ ಮತ್ತು ಗೌರವ ನೀಡುವ ಮೂಲಕ ಉತ್ತಮ ಸಾಧನೆ ಮಾಡುವ ಶಾಲೆಗಳು, ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಕಾರ್ಯನಿರ್ವಾಹಕರನ್ನು ಉತ್ತೇಜಿಸಬೇಕು ಎಂದು ತಿಳಿಸಲಾಗಿದೆ.


