
ಕನ್ನಡ ಬಿಂಬ, ಬೀದರ್
ಒಳ ಮೀಸಲಾತಿ ಬಗ್ಗೆ ಇರುವ ಗೊಂದಲ, ಸಮಸ್ಯೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆಗೆ ಹಳೆ ಮೀಸಲಾತಿ ಜಾರಿಗೆ ತಂದು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಲಗೈ ಜಾತಿಗಳÀ ಒಕ್ಕೂಟದ ಅಧ್ಯಕ್ಷ, ಸಂವಿಧಾನ ಸಂರಕ್ಷಣಾ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಇಲ್ಲಿ ಒತ್ತಾಯಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಪ್ರವರ್ಗ-ಎ.ಬಿ.ಸಿ ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.
ಕಳೆದ 2 ವರ್ಷಗಳಿಂದ ಒಳಮೀಸಲಾತಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಅಲ್ಲದೇ ಇತರೆ ಸಮುದಾಯದವರಿಗೂ ಉದ್ಯೋಗ ನೇಮಕಾತಿಯಲ್ಲಿ ಸಮಸ್ಯೆಯಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗಿನ ಒಳಮೀಸಲಾತಿ ಪದ್ದತಿಯು ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದ್ದು, ಮುಖ್ಯಮಂತ್ರಿಗಳು ಅದನ್ನು ತಕ್ಷಣ ಹಿಂಪಡೆಯಬೇಕು. ಕಾಂಗ್ರೆಸ್ ಪಕ್ಷಕ್ಕೆ ಶೇ. 90 ರಷ್ಟು ಮತ ನೀಡಬಹುದಾದ ಬಲಗೈ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಸಿಎಂ ಅವರು ಮುಂದಾಗಬೇಕು ಎಂದು ಮನವಿ ಮಾಡಿದರು.
ಸದ್ಯ ಒಳಮೀಸಲಾತಿ ಕಾನೂನು ರಾಜ್ಯಪಾಲರ ಅಂಗಳದಲ್ಲಿದ್ದು, ಯಾವಾಗ ಬೇಕಾದರೂ ರಾಜ್ಯಪಾಲರು ಅದನ್ನು ಜಾರಿ ಮಾಡಬಹುದಾಗಿದೆ. ರಾಜ್ಯ ಸರ್ಕಾರ ಕೂಡಲೇ ಅದನ್ನು ಹಿಂಪಡೆದು ಅದರಲ್ಲಿನ ಅವೈಜ್ಞಾನಿಕ ಗೊಂದಲಗಳನ್ನು ಸರಿಪಡಿಸಿ ಎಲ್ಲ ಶೋಷಿತ ಸಮುದಾಯಗಳಿಗೆ ಅವರವರ ಹಕ್ಕು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೀದರ್‍ನಿಂದ ಚಾಮರಾಜನಗರವರೆಗೆ ಗುರುವಾರ ಪತ್ರಿಕಾಗೋಷ್ಟಿಗಳು ಹಾಗೂ ಪ್ರಕಟಣೆ ಹೊರಡಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈಗಾಗಲೇ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಜಿ ನೇತೃತ್ವದಲ್ಲಿ ಚಂದ್ರಶೇಖರಯ್ಯ ಒಳಗೊಂಡಂತೆ ಬಲಗೈ ಸಮುದಾಯದ ಬಾಂಧವರು ಹೋರಾಟದ ರೂಪರೇಷ ಸಿದ್ದಪಡಿಸುತ್ತಿದ್ದಾರೆ ಎಂದರು.
ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೆಶ ಡಾಕುಳಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮತಗಳು ಬೇಕು, ಆದರೆ ನಮ್ಮ ಏಳಿಗೆ ಬೇಕಾಗಿಲ್ಲ ಎಂದು ಟೀಕಿಸಿದರು. ಸಮುದಾಯದ ನಾಯಕರು ಪ್ರಭಾವಿ ಹುದ್ದೆಗಳಲ್ಲಿ ಇದ್ದರೂ ಸಮಾಜಕ್ಕೆ ಅನ್ಯಾಯ ಆಗುತ್ತಿದೆ. ಇವರಾರು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಬಾಬುರಾವ ಪಾಸ್ವಾನ್ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ 19 ಜಾತಿಗಳನ್ನು ಬಲಗೈ ಸಮುದಾಯವೆಂದು ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ಕಳೆದ ನವೆಂಬರ್ 13 ರಂದು ಸೌಲಭ್ಯ ಪಡೆಯಲು ಹೊರಡಿಸಿರುವ ಆದೇಶದಲ್ಲಿ 63 ಜಾತಿಗಳನ್ನು ಬಲಗೈ ಸಮುದಾಯವೆಂದು ಗುರುತಿಸಿದ್ದು ಈ ಸಮುದಾಯದ ಎಲ್ಲಾ 63 ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿರುವಂತೆ ಸಂವಿಧಾನದ ಅನುಚ್ಛೇದ 15 ಮತ್ತು 16ರಂತೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳಮೀಸಲಾತಿಯನ್ನು ಸೀಮಿತಗೊಳಿಸಬೇಕು. ಉಳಿದ ಯಾವುದೇ ಕ್ಷೇತ್ರಗಳಿಗೆ ಒಳಮೀಸಲಾತಿಯ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರ ಬಳಿ ಪ್ರತ್ಯೇಕ ನಿಯೋಗ ಕೊಂಡೊಯ್ದು ಈ ಕುರಿತು ಮನವಿ ಸಲ್ಲಿಸಿಲಾಗುತ್ತದೆ ಎಂದರು.
ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ಡಿ.ಎಸ್.ಎಸ್ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಬಿವಿಪಿ ಅಧ್ಯಕ್ಷ ಸಂದೀಪ ಕಾಂಟೆ, ಬಿವಿಎಸ್ ಅಧ್ಯಕ್ಷ ಪ್ರದೀಪ ನಾಟೇಕರ್, ಅಂಬಾದಾಸ ಗಾಯಕವಾಡ, ಪುಟ್ಟು ದೀನೆ, ದಿಲೀಪ ಭೋಸ್ಲೆ, ರಮೇಶ ಪಾಸ್ವಾನ್, ಸೂರ್ಯಕಾಂತ ಸಾದೂರೆ, ಗೌರಿಶಂಕರ ವಾಘಮಾರೆ, ಭೀಮರಾವ ಮತ್ತಿತರ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


