
ಕನ್ನಡ ಬಿಂಬ, ಬೀದರ್
ಬೀದರಿನ ಪ್ರಸಿದ್ಧ ಶಾಹೀನ್ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಮೊಬೈಲ್ ಮೋಹದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿದ್ದು ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದಿರುವ ಈ ಸಮೀಕ್ಷೆಯು ಮೊಬೈಲ್ ಮೋಹದಿಂದ ಮಕ್ಕಳನ್ನು ಬಚಾವ್ ಮಾಡಲೇಬೇಕಾದ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ.
ಸಮೀಕ್ಷೆಯಲ್ಲಿ ಶೇ. 80 ರಷ್ಟು ಪಾಲಕರು ಮೊಬೈಲ್ ವೀಕ್ಷಣೆಗೆ ವಯೋಮಾನ ನಿಗದಿಪಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಿಸುವುದನ್ನು ನಿರ್ಬಂಧಿಸುವ ಕಾನೂನು ಜಾರಿಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
16 ವರ್ಷದೊಳಗಿನ ಮಕ್ಕಳು ಮೊಬೈಲ್ ಅನ್ನು ಶೈಕ್ಷಣಿಕೇತರ ಉದ್ದೇಶಕ್ಕೆ ಮೊಬೈಲ್ ಬಳಕೆ ಮಾಡುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಗೇಮ್, ಯುಟ್ಯೂಬ್ ರೀಲ್ಸ್, ಫೇಸ್ ಬುಕ್ ವೀಕ್ಷಣೆ ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 65 ರಷ್ಟು ಪಾಲಕರು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 10 ರಿಂದ ಫೆಬ್ರುವರಿ 5 ರ ವರೆಗೆ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮ, ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಹಾಗೂ ಸ್ವಚ್ಛ ಭಾರತ ಅಭಿಯಾನ ಕುರಿತು ಸಮೀಕ್ಷೆ ನಡೆಸಲಾಗಿದೆ ಎಂದು ಶಾಹೀನ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಅಫ್ರಾನಾಜ್ ಅವರು ಮಾಹಿತಿ ನೀಡಿದರು.
ಫೆಬ್ರವರಿ 21 ರಂದು ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಕುರಿತು ಮಾಹಿತಿ ಹಂಚಿಕೊಂಡರು. ಆಸ್ಟ್ರೇಲಿಯಾದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಬರ್ಂಧ ಹೇರಲಾಗಿದೆ. ಅಂತಹುದೇ ಕಾನೂನನ್ನು ದೇಶದಲ್ಲೂ ಜಾರಿಗೆ ತರಬೇಕು ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ಪಾಲಕರಿಂದ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ಸಮೀಕ್ಷೆಯಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಬಿ.ಸಿ.ಎ. ಓದುತ್ತಿರುವ 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಒಲ್ಡ್ ಸಿಟಿ, ಫೈಜಪುರ, ಶಹಾಪುರ ಗೇಟ್, ರಾಜಗೊಂಡ ಕಾಲೊನಿ ಹಾಗೂ ಗುಂಪಾ ಪ್ರದೇಶದ ಒಟ್ಟು 825 ಮನೆಗಳಿಗೆ ಭೇಟಿ ಕೊಟ್ಟು ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಮೀಕ್ಷೆ ವೇಳೆ ಮೂರು ವಿಷಯಗಳ ತಲಾ 20 ಪ್ರಶ್ನೆಗಳನ್ನು ಕೇಳಿ, ಅವರ ಅಭಿಪ್ರಾಯ ದಾಖಲಿಸಿಕೊಳ್ಳಲಾಗಿದೆ. ಯಾರೊಬ್ಬರ ವ್ಯಯಕ್ತಿಕ ಮಾಹಿತಿ ಅಥವಾ ಮೊಬೈಲ್ ಸಂಖ್ಯೆ ಪಡೆಯಲಾಗಿಲ್ಲ ಎಂದು ಅವರು ತಿಳಿಸಿದರು.
ಶೇ 48 ರಷ್ಟು ಪಾಲಕರ ಪ್ರಕಾರ ಮೊಬೈಲ್ ಬಳಕೆಯ ಕಾರಣಕ್ಕಾಗಿ ಮಕ್ಕಳು ದೈಹಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಶೇ 42 ರಷ್ಟು ಪಾಲಕರ ಪ್ರಕಾರ ಅತಿಯಾದ ಮೊಬೈಲ್ ವೀಕ್ಷಣೆಯಿಂದಾಗಿ ಮಕ್ಕಳಲ್ಲಿ ಕಣ್ಣು ನೋವು, ತಲೆ ನೋವು, ನಿದ್ರಾ ಹೀನತೆ ಸೇರಿ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ಶೇ. 33 ರಷ್ಟು ಪಾಲಕರ ಪ್ರಕಾರ ಮಕ್ಕಳು ವಾಲಕರೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ ಮಾತನಾಡುತ್ತಿಲ್ಲ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮನೆಯಲ್ಲಿ ಮಾತು ಕಡಿಮೆಯಾಗಿದೆ. ಮೊಬೈಲ್‍ನೊಂದಿಗೆ ಕಾಲ ಕಳೆಯುವುದು ಹೆಚ್ಚಿದೆ.
16 ವರ್ಷದೊಳಗಿನ ಮಕ್ಕಳು ಮನೋರಂಜನೆಗಾಗಿಯೇ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ವಿಶೇಷವಾಗಿ ರೀಲ್ಸ್ ನೋಡುವಲ್ಲಿ ಅಧಿಕ ಸಮಯ ಕಳೆಯುತ್ತಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕೆ ಮೊಬೈಲ್ ಬಳಕೆಯಾಗುತ್ತಿರುವುದು ತೀರಾ ಕಡಿಮೆಯಾಗಿದೆ.
ಮಕ್ಕಳ ಮೊಬೈಲ್ ಬಳಕೆ ನಿಯಂತ್ರಿಸುವಲ್ಲಿ ಪಾಲಕರ ಪಾತ್ರ ಹಿರಿದಾಗಿದೆ. ಮನೆಯಲ್ಲಿ ಇದ್ದಾಗ ಮೊಬೈಲ್ ಬಳಕೆಗೆ ಮಿತಿ ಹೇರಬೇಕು. ಒಂದು ನಿರ್ದಿಷ್ಟ ಸಮಯದಲ್ಲಿ ಅಲ್ಪಕಾಲ ಮಾತ್ರ ಶೈಕ್ಷಣಿಕ ಉದ್ದೇಶಕ್ಕೆ ಮೊಬೈಲ್ ಬಳಕೆಯಾಗಬೇಕು. ಈ ವಿಷಯದಲ್ಲಿ ಪಾಲಕರ ಹೊಣೆ ಹೆಚ್ಚು ಎಂದು ಅಫ್ರಾ ನಾಜ್ ತಿಳಿಸಿದರು.
ಸಮೀಕ್ಷೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಗೊತ್ತಿದೆ ಎಂದು ಶೇ 95 ರಷ್ಟು ಮಂದಿ, ಸ್ವಚ್ಛತೆ ತಮ್ಮ ವೈಯಕ್ತಿಕ ಜವಾಬ್ದಾರಿ ಎನ್ನುವುದು ತಿಳಿದಿದೆ ಎಂದು ಶೇ 90 ರಷ್ಟು ಜನ ಹೇಳಿದ್ದಾರೆ. ಸ್ವಚ್ಛ ಭಾರತ ಮೊಬೈಲ್ ಆ್ಯಪ್ ಬಗ್ಗೆ, ಶೇ 60 ರಷ್ಟು ಮಂದಿಗೆ ಗೊತ್ತಿದ್ದರೂ, ಶೇ 10 ರಷ್ಟು ಮಂದಿಯμÉ್ಟೀ ಇದನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಡೌನ್ಲೋಡ್ ಮಾಡಿಕೊಂಡವರಲ್ಲಿ ಶೇ 20 ರಷ್ಟು ಮಂದಿ ಮಾತ್ರ ಸಂತೃಪ್ತರಾಗಿದ್ದಾರೆ ಎಂದು ತಿಳಿಸಿದರು.
ಶೇ 35 ರಷ್ಟು ಮಂದಿ ಒಣ ಕಸ, ಹಸಿ ಕಸ ವಿಂಗಡಿಸಿ ಕೊಡುತ್ತಿಲ್ಲವೆಂದು, ಶೇ 22 ರಷ್ಟು ಜನ ನಗರಸಭೆಯವರು ಮನೆ ಮನೆ ಮನೆಗೆ ಬಂದು ಕಸ ಸಂಗ್ರಹಿಸುತ್ತಿದ್ದಾರೆಂದು, ಶೇ 58 ರಷ್ಟು ಮಂದಿ ಕೆಲವೊಮ್ಮೆ ಬರುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಇನ್ನು ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಕುರಿತ ಸಮೀಕ್ಷೆಯಲ್ಲಿ ಶೇ 20.90 ರಮ್ಮ ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‍ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಶೇ 68 40 ರಷ್ಟು ಮಂದಿ ಕಾನೂನು ತಿಳಿವಳಿಕೆ ಇದೆ. ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿಯೂ ಇದೆ. ಆದರೆ, ಕಾನೂನು ಅರಿವು ಸಿಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಜನರ ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಅದನ್ನು ಆಡಳಿತದ ಮುಂದೆ ಇಡುವುದು ವಿದ್ಯಾರ್ಥಿಗಳ ಸಮೀಕ್ಷೆಯ ಉದ್ದೇಶವಾಗಿತ್ತು. ಸಮೀಕ್ಷೆಯ ಆಧಾರದ ಮೇಲೆ ಆಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದೇ ವಿದ್ಯಾರ್ಥಿಗಳ ಆಶಯವಾಗಿದೆ ಎಂದು ಅಫ್ರಾನಾಜ್ ಹೇಳಿದರು.
ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಅಭಿಲಾಸ ಪೋಲದಾಸ್, ಡಾ.ಸಿರಾಜುಲ್ ಹಸನ್, ಪ್ರೊ.ಮಹಮ್ಮದ್ ಇಕ್ಲಾಕ್, ಪ್ರೊ.ಬಿಲಾಲ್ ಅಹಮ್ಮದ್, ಪ್ರೊ.ಅಶ್ವಿನಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.


