
ಕನ್ನಡ ಬಿಂಬ, ಬೀದರ್
ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಫೆ. 22 ರಂದು ಬೆಳಿಗ್ಗೆ 10.30 ರಿಂದ ಸಂಜೆ ವರೆಗೆ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ-2026 ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.
ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ಕಲಾವಿದರು ಭರತ ನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಶಾಸ್ತ್ರೀಯ ಸಂಗೀತ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಾಟ್ಯಶ್ರೀ ಸಾಂಸ್ಕøತಿಕ ವೈಭವ ಜರುಗಲಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್ಜಿ ಸಾನಿಧ್ಯ ವಹಿಸುವರು. ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಪ್ರಾಚಾರ್ಯ ಶರಣಪ್ಪ ಬಿರಾದಾರ, ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್ ಗೌರವ ಉಪಸ್ಥಿತಿ ವಹಿಸುವರು.
ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ತ್ರೀವೇಣಿ ಆರ್. ಕೊಳಾರಕರ್, ರೇಣುಕಾದೇವಿ ಎಂ. ಮಳ್ಳಿ ಸ್ವಾಮಿ, ಮಲ್ಲಿಕಾರ್ಜುನ ನಾಗಮಾರಪಳ್ಳಿ ಹಾಗೂ ಪ್ರವೀಣಕುಮಾರ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಆಕಾಶವಾಣಿ ಕಲಾವಿದೆ ಸರಸ್ವತಿ ಶೀಲವಂತ ಬೋರಾಳಕರ್ ಲಘು ಸಂಗೀತ- ಭಕ್ತಿ ಗೀತೆ ಪ್ರಸ್ತುತಪಡಿಸುವರು.
ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಗಣೇಶ ಸ್ತುತಿ, ಅಲರಿಪು ಶ್ಲೋಕ, ದೇವರನಾಮ, ಜತಿ ಸ್ವರ, ಕರ್ನಾಟಕ ಮಾತೆ, ದುರ್ಗಾ ಸ್ತುತಿ, ದೀಪ ನೃತ್ಯ, ವಚನ ನೃತ್ಯ, ತಿಲ್ಲಾನ ನೃತ್ಯ, ದಶಾವತಾರ, ಗೋಕರ್ಣ ಕ್ಷೇತ್ರ ಮಹಾತ್ಮೆ, ಗಣೇಶನ ಜನನ ನೃತ್ಯ ಪ್ರದರ್ಶಿಸುವರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಜಾನಪದ ಗೀತೆ, ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ ದಾಸರ ಪದಗಳನ್ನು ಹಾಡುವರು.
ಮಧ್ಯಾಹ್ನ 3ಕ್ಕೆ ಸಭಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಜರುಗಲಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ದೀಪ ಪ್ರಜ್ವಲಿಸುವರು. ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಕಲಾವಿದೆ ಸುಧಾ ಬರಗೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರರಾವ್ ಪಾಟೀಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಅಕ್ಕ ನಾಗಲಾಂಬಿಕಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ ಉಪಸ್ಥಿತರಿರುವರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಸನಾತನ ನೃತ್ಯಾಲಯದ ಮುಖ್ಯಸ್ಥೆಯೂ ಆದ ಖ್ಯಾತ ಕಲಾವಿದೆ ಶಾರದಾಮಣಿ ಶೇಖರ್ ಅವರಿಗೆ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಷ್ಟೂರ ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಪಾಟೀಲ, ಅಕ್ಕ ಪಡೆ ಪ್ರಭಾರಿ ಸಂಗೀತಾ ಎಂ.ಬಿ, ಪುಸ್ತಕ ಸಂತೆ ರೂವಾರಿ ಗುರುನಾಥ ರಾಜಗೀರಾ, ಜಗಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುವರ್ಣಾ ಪಿ. ಉಡುಪ ಹಾಗೂ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಪುರಸ್ಕøತ ಸೃಷ್ಟಿ ಅಡಿಗ ಅವರನ್ನು ಸನ್ಮಾನಿಸಲಾಗುವುದು.
ಖ್ಯಾತ ಹಾಸ್ಯ ಕಲಾವಿದೆ ಸುಧಾ ಬರಗೂರು ಅವರು ನಡೆಸಿಕೊಡಲಿರುವ ಹಾಸ್ಯ ಸಂಜೆ ಕಾರ್ಯಕ್ರಮವು ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವಕ್ಕೆ ವಿಶೇಷ ಮೆರುಗು ನೀಡಲಿದೆ. ಹಾಸ್ಯ ಪ್ರಸಂಗಗಳು, ನಗೆ ಹನಿಗಳು ಕಾರ್ಯಕ್ರಮದಲ್ಲಿ ನಕ್ಕು ನಲಿಸಲಿವೆ. ಹೈದರಾಬಾದ್ನ ಸ್ವರ್ಣಾಂಜನಿ ನೃತ್ಯಾಲಯದ ವಿದುಷಿ ಸ್ವರ್ಣ ಗೌರಿ ಜೋಶಿ ಭರತ ನಾಟ್ಯ ಪ್ರದರ್ಶನ ನೀಡುವರು.
ಕಲಾವಿದರಿಂದ ಪರಿಸರ ಗೀತೆ ರೂಪಕ, ಕೃಷ್ಣನ ಗೀತೆ, ಶಿವ ಸ್ತುತಿ, ಕೊರವಂಜಿ, ಕೋಲಾಟ, ಲಂಬಾಣಿ ನೃತ್ಯ, ಮಾತೆಯರ ನೃತ್ಯ, 15 ಶೈಲಿಯ ಜಾನಪದ ನೃತ್ಯ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಕೋರಿದ್ದಾರೆ.


