
ಕನ್ನಡ ಬಿಂಬ, ಬೀದರ್
ರಾಜ್ಯದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದಿಂದಾಗಿ ಕಳೆದ ಆರು ವರ್ಷಗಳ ಅವಧಿಯಲ್ಲಿ 289 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಹುಲಿ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗಿಂತ ಆನೆ ದಾಳಿಯಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಿರುವುದು. 6 ವರ್ಷಗಳ ಅವಧಿಯಲ್ಲಿ ಹುಲಿಗಳಿಂದಾಗಿ 24 ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಆನೆಗಳಿಂದಾಗಿ 192 ಪ್ರಾಣ ಹಾನಿ ಆಗಿದೆ. ಮಾನವ ಪ್ರಾಣ ಹಾನಿಯಲ್ಲಿ ಆನೆಗಳು ಹುಲಿಯನ್ನೂ ಮೀರಿಸಿವೆ !. ಒಟ್ಟು ಪ್ರಾಣ ಹಾನಿ ಪ್ರಕಣಗಳಲ್ಲಿ ಆನೆಗಳದ್ದೇ ಸಿಂಹಪಾಲು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅವರ ಲಿಖಿತ ಪ್ರಶ್ನೆಗೆ ಅರಣ್ಯ ಸಚಿವರೂ ಆಗಿರುವ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.
ಆನೆ ದಾಳಿಯಿಂದಾಗಿ 2020-21 ರಲ್ಲಿ 26, 2021-22 ರಲ್ಲಿ 28, 2022-23 ರಲ್ಲಿ 32, 2023-24 ರಲ್ಲಿ 48, 2024-25 ರಲ್ಲಿ 36 ಮತ್ತು 2025-26 ನೇ ಸಾಲಿನಲ್ಲಿ 22 ಪ್ರಾಣ ಹಾನಿ ಸಂಭವಿಸಿದೆ. ಇದೇ ಅವಧಿಯಲ್ಲಿ ಅಂದರೆ, 6 ವರ್ಷಗಳಲ್ಲಿ ಹುಲಿ ದಾಳಿಯಿಂದ 24, ಚಿರತೆ ದಾಳಿಯಿಂದ 19, ಮೊಸಳೆ ದಾಳಿಯಿಂದ 16, ಕಾಡು ಹಂದಿ ದಾಳಿಯಿಂದ 16, ಕರಡಿ ದಾಳಿಯಿಂದ 8, ತೋಳ ದಾಳಿಯಿಂದ 3, ಕಾಡುಕೋಣ ದಾಳಿಯಿಂದ 8 ಜನ ಪ್ರಾಣ ಕಳೆದುಕೊಂಡಿರುವ ಮಾಹಿತಿ ಸಚಿವರ ಉತ್ತರದಲ್ಲಿದೆ.
ವನ್ಯಜೀವಿ ಮತ್ತು ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಸರಕಾರ ಹಲವು ಕ್ರಮ ಕೈಗೊಂಡಿದೆ. ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಯಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ಆನೆ ತಡೆ ಕಂದಕಗಳ ನಿರ್ಮಾಣ, ರೈಲ್ವೆ ಹಳಿ ಬಳಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಮಾನವ – ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶದಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ರೈಲ್ವೆ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದ್ದು, ಒಟ್ಟು 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡುಗು, ಚಾಮರಾಜನಗರ, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ 8 ಆನೆ ಕಾರ್ಯಪಡೆ ರಚಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಚಿರತೆ ಹಾವಳಿ ತಡೆಯಲು ವಿವಿಧ ಜಿಲ್ಲೆಗಳಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ವನ್ಯ ಪ್ರಾಣಿಗಳಿಗೆ ಅರಣ್ಯ ಪ್ರದೇಶದ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ. ವನ್ಯ ಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.
ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಹಾಗೂ ಅಭಿವೃದ್ದಿಗೊಳಿಸಲು ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ಅಡಚಣೆಯಾಗುತ್ತಿರುವುದರಿಂದ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತಿ ಸ್ವಚ್ಛಗೊಳಸಲಾಗುತ್ತಿದೆ.
ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಗಳು ನಿರಂತರ ಕಾರ್ಯನಿರ್ವಹಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು ನಿಯಂತ್ರಣ ಕೊಠಡಿಗೆಬರುವ ಕರೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಚಿರತೆ ಮತ್ತು ಹುಲಿ ಹಾವಳಿ ಹೆಚ್ಚಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಬೋನುಗಳನ್ನು ಇರಿಸಿ,ಸೆರೆ ಹಿಡಿದು, ಸೂಕ್ತ ಆವಾಸಸ್ಥಾನಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕಾಡಾನೆ ಹಾವಳಿ ತುರ್ತು ನಿರ್ವಹಣೆಗಾಗಿ ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಕಾಡಾನೆ ಹಿಮ್ಮೆಟ್ಟಿಸುವ ತಮಡಗಳನ್ನು ರಚಿಸಿ, ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗಿದೆ. ನಿಸ್ತಂತು ಜಾಲದ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ. ಕಾಡಾನೆಗಳ ಮಾಹಿತಿ ಸಂಗ್ರಹಿಸಲು 24 ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಕಾಡಾನೆ ಗುಂಪಿನಲ್ಲಿರುವ ವಯಸ್ಕ ಹೆಣ್ಣಾನೆಯನ್ನು ಗುರುತಿಸಿ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಆನೆಗಳ ಚಲನವಲನಗಳ ಬಗ್ಗೆ ಮೆಸೆಜ್ ಮತ್ತು ವಾಟ್ಸಾಪ್ ಮೂಲಕ ಜನರಿಗೆ ಮಾಹಿತಿ ನೀಡಿ, ಮಾನವ ಪ್ರಾಣಹಾನಿ ಹಾಗೂ ಮಾನವ ಗಾಯ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ಐದು ವರ್ಷಗಳಲ್ಲಿ 572 ಆನೆ, ಹುಲಿ ಮತ್ತು ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ. 2020-21 ರಲ್ಲಿ 18 ಆನೆ, 7 ಹುಲಿ, 53 ಚಿರತೆಗಳನ್ನು ಸೆರೆ ಹಿಡಿದು, ಸ್ಥಳಾಂತರಿಸಲಾಗಿದೆ. 2021-22 ರಲ್ಲಿ ಅನೆ,ಹುಲಿ ಚಿರತೆ ಸೇರಿ ಒಟ್ಟು 62, 2022-23 ರಲ್ಲಿ 129, 2023-24 ರಲ್ಲಿ 127, 2024-25 ರಲ್ಲಿ 131 ಪ್ರಾಣಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ. 2025-26 ನೇ ಸಾಲಿನಲ್ಲಿ ನವೆಂಬರ್ ಅಂತ್ಯದವರೆಗೆ 7 ಆನೆ ಮತ್ತು 70 ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.
ವನ್ಯಪ್ರಾಣಿಗಳ ದಾಳಿಯಿಂದ ಪ್ರಾಣಹಾನಿ ಆದ ಪ್ರಕರಣಗಳಲ್ಲಿ ಸಂತ್ರಸ್ತ ಪರಿವಾರಗಳಿಗೆ ಪರಿಹಾರ ನೀಡಲಾಗಿದೆ. 2022-23 ರಲ್ಲಿ ವರದಿಯಾದ 57 ಪ್ರಕರಣಗಳಲ್ಲಿ 376 ಲಕ್ಷ ರೂ., 2023-24 ನೇ ಸಾಲಿನಲ್ಲಿ 65 ಪ್ರಕರಣಗಳಲ್ಲಿ 955 ಲಕ್ಷ, 2024-25 ನೇ ಸಾಲಿನಲ್ಲಿ 46 ಪ್ರಕರಣಗಳಲ್ಲಿ 660 ಲಕ್ಷ ಮತ್ತು 2025 -26 ನೇ ಸಾಲಿನಲ್ಲಿ 35 ಪ್ರಕರಣಗಳಲ್ಲಿ 575 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.


