Ad imageAd image

ಜನಪದರ ಯುಗಾದಿ

Kannada Bimba Team
6 Min Read

ಯುಗಾದಿ ಬಂತೆಂದರೆ ವಸಂತ ಮಾಸವನ್ನು ಕರೆತರುತ್ತದೆ. ಅಬ್ಬಾ ! ವೈಶಾಖದ ಎಂಥಾ ಕಡುಬೇಸಿಗೆ; ಮನೆಯೊಳಗಿದ್ದರೆ ಬಿಸಿಲ ಬೇಗೆ. ಹೊರಬಂದರೆ ನೆತ್ತಿ ಚುರುಗುಡುತ್ತದೆ. ಇಂತಹ ಸುಡುಬಿಸಿಲಿನ ಕಾಲವು ಕಳೆದು ವಸಂತ ಮಾಸದ ಆಗಮನವಾಗುತ್ತದೆ. ಹಸಿರೆಲೆಗಳಿಂದ ಕಂಗೊಳಿಸುವ ಗಿಡಮರಗಳು, ಚಿಗುರಿದ ತರುಲತೆಗಳು, ಅರಳಿನಿಂತು ದುಂಬಿಯ ಕರೆಯುವ ಸುಮಗಳು. ಸುವಾಸನೆ ಬೀರುವ ಕುಸುಮಗಳು. ಸುಡುಬಿಸಿಲಿನ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ ವಸಂತ ಮಾಸದ ಪ್ರಕೃತಿಯ ಸೋಜಿಗಗಳಿವು. ಜನಪದರು ಯುಗದ ಆದಿಯೆಂದು ಕರೆಯಲ್ಪಡುವ ಯುಗಾದಿಯ ಹೊಸತನಕ್ಕೆ ಹರ್ಷದಿಂದ ಹಾಡುತ್ತಾರೆ: ಕುಣಿದು ನಲಿಯುತ್ತಾರೆ. ಬಹು ಸಂಭ್ರಮದಿಂದ ಆಚರಿಸುತ್ತಾರೆ.

 

ಹೊಸದಿನಕೆ ಹೊಸತನ, ಹೊಸಮಳೆ ಹೊಸಬೆಳೆಯು

ಹೊಸದೀಪ ಹಚ್ಚಿ ಬೆಳವಲವು | ಎಳೆಯುವುದು

ಬಸವಣ್ಣ ನಿಮ್ಮ ತೇರು |

 

ವಸಂತ ಋತುವಿನ ಚೈತ್ರಮಾಸದ ಪ್ರತಿಪದೆಯು ಯುಗಾದಿ. ಇದು ಚಾಂದ್ರಮಾನ ವರ್ಷದಂತೆ ಶಾಲಿವಾಹನ ಶಕೆಯಂತೆ ಪ್ರತಿವರ್ಷದ ಮೊದಲ ದಿನ. ಹೋಳಿಯಾದ ಹದಿನೈದು ದಿನಕ್ಕೆ ಹಿಂದೂಗಳ ವರ್ಷದ ಕೊನೆಯ ದಿನವೇ ಯುಗಾದಿ ಅಮವಾಸ್ಯೆ. ಮರುದಿನ ಪ್ರತಿಪದೆಯೇ ಯುಗಾದಿ ವರ್ಷದ ಹೊಸದಿನ. ಬಹುಸಡಗರದಿಂದ ಆಚರಿಸುವ ಯುಗಾದಿ ಹಿಂದೂ ಸಂಪ್ರದಾಯದ ಬಹುದೊಡ್ಡ ಹಬ್ಬ. ಭಾರತದೆಲ್ಲೆಡೆ ಬಡವ-ಬಲ್ಲಿದರೆನದೆ ಎಲ್ಲರೂ ಆಚರಣೆ ಮಾಡುತ್ತಾರೆ. ಜನಪದರು ತಮ್ಮ ಬದುಕಿನಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಪಡೆಯುವ ಆಸೆಯಿಂದ ಯುಗಾದಿಯನ್ನು ಆಚರಿಸುತ್ತಾರೆ. ಯುಗಾದಿಯು ಯುಗದ ಆದಿ, ಹೊಸವರ್ಷದ ಆರಂಭ ಎಂಬರ್ಥವನ್ನು ನೀಡುತ್ತದೆ.

 

ಯುಗಾದಿಯ ಹಿನ್ನಲೆ

ಬ್ರಹ್ಮನು ಸೃಷ್ಟಿಕರ್ತ. ಆತನ ಸೃಷ್ಟಿಕಾರ್ಯವಾದ ದಿನವೇ ಯುಗಾದಿ. ಜಗದ ಕಣ್ಣು ಸೂರ್ಯನಂತೆ. ಆತನ ಉದಯವಾದಾಗಲೇ ಕಾಲದೆಣಿಕೆ ಆರಂಭವಾಯಿತಂತೆ. ಈ ಶುಭದಿನವು ಅಸುರೀ ಶಕ್ತಿಯನ್ನು ದಮನಮಾಡಿ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ. ಬ್ರಹ್ಮ ಈ ಜಗತ್ತನ್ನು ಚೈತ್ರಶುದ್ಧ ಪ್ರಥಮ ಸೂರ್ಯೋದಯದ ಕಾಲಕ್ಕೆ ಸೃಷ್ಟಿಸಿದನಂತೆ. ಅಲ್ಲಿಂದ ಹೊಸವರ್ಷ ಯುಗಾದಿ ಆಚರಣೆ ಆರಂಭವಾಯಿತು. ಇನ್ನೊಂದು ಹಿನ್ನಲೆಯ ಪ್ರಕಾರ ಶ್ರೀರಾಮನು ರಾವಣಾದಿಗಳನ್ನು ಸಂಹರಿಸಿ, ಅಯೋಧ್ಯೆಗೆ ಮರಳಿ ಸಿಂಹಾಸನಾರೂಢನಾಗಿದ್ದು, ಇದೇ ಚೈತ್ರಶುದ್ಧ ಪ್ರತಿಪದೆÉಯಂದೇ ಈ ಕಾರಣದಿಂದಲೂ ಉತ್ತರ ಭಾರತದಲ್ಲಿ ಅನೇಕರು ಯುಗಾದಿಯನ್ನು ಆಚರಿಸುತ್ತಾರೆ. ಆದರೆ ಜನಪದರ ಆಚರಣೆಯು ಇವೆಲ್ಲ ಕಾರಣಗಳನ್ನು ನಂಬಿದರೂ ಅಷ್ಟಾಗಿ ಒಪ್ಪುವುದಿಲ್ಲ. ಅವರಿಗೆ ಪ್ರಕೃತಿಯ ಆರಾಧನೆಯೇ ಮುಖ್ಯ.

 

ಜನಪದರ ಯುಗಾದಿಯ ಆಚರಣೆ

ಜನಪದರು ಮೈಗೆಲ್ಲ ಎಣ್ಣೆ ಹಚ್ಚಿಕೊಂಡು, ಬೇವು ಬೆರೆಸಿದ ನೀರಿನಿಂದ ಸ್ನಾನ ಮಾಡುತ್ತಾರೆ. ಇಲ್ಲಿ ಬೇವು ಚರ್ಮರೋಗ ನಿವಾರಕ. ನಂತರ ಎಲ್ಲರು ಹೊಸ ಬಟ್ಟೆ ಧರಿಸಿ, ಮನೆದೇವರ ಪೂಜೆಗೆ ಸಿದ್ಧತೆ ನಡೆಸುತ್ತಾರೆ. ಹೆಣ್ಣುಮಕ್ಕಳು ಮನೆ ಸಾರಿಸಿ, ರಂಗೋಲಿ ಹಾಕಿ ಸಿಂಗರಿಸಿದರೆ, ಗಂಡಸರು ಬೇವು-ಮಾವಿನ ತೋರಣಗಳನ್ನು ಬಾಗಿಲಿಗೆ ಅಲಂಕರಿಸುತ್ತಾರೆ. ಕೆಲವು ಕಡೆಗಳಲ್ಲಿ  ಮನೆಯ ಮುಂದೆ ಧ್ವಜ ನೆಡುವ ಸಂಪ್ರದಾಯವಿದೆ. ಧ್ವಜವೆಂದರೆ ಬಿದಿರು ಇಲ್ಲವೇ ಕಟ್ಟಿಗೆಯ ತುದಿಯನ್ನು ರೇಷ್ಮೆ ಬಟ್ಟೆಯಿಂದ ಅಲಂಕರಿಸಿ, ಬೇವು ಮಾವಿನ ತಳಿರನ್ನು ಕಟ್ಟಿ, ಆ ಬಿದಿರಿಗೆ ಬೆಳ್ಳಿ, ತಾಮ್ರದ ಪಾತ್ರೆಯನ್ನು ಡಬ್ಬು ಹಾಕುವರು. ಇದನ್ನು ಗುಡಿಯೆತ್ತುವುದು ಅಥವಾ ಗುಡಿಪಾಡ್ಯ ಎಂತಲೂ ಕರೆಯುತ್ತಾರೆ.

ಗುಡಿಯ ತೋರಣಕಟ್ಟಿ, ಸಡಗರವು ಹೊಸತನವು

ಉಡುಗರೆಯ ನಾಡು ಬೆಳವಲವು | ಹೊಸತನವ

ಎಡೆಮಾಡಿ ಉಣ್ಣು ಶಿವನೆಂದು |

 

ಗುಡಿಗಟ್ಟುವುದು ಅಥವಾ ಧ್ವಜ ಕಟ್ಟುವುದಕ್ಕೆ ವಿಶೇಷವಾದ ಹಿನ್ನೆಲೆಯಿದೆ. ಮಹಾಭಾರತದಲ್ಲಿ ಚೇದಿ ರಾಜ್ಯದ ವಸು ಚಕ್ರವರ್ತಿ ತಪಸ್ಸನ್ನಾಚರಿಸಲು, ಭಯಗೊಂಡ ದೇವೇಂದ್ರನು ತಪೋಭಂಗಕ್ಕೆ ತೆರಳಿ, ವಸುವಿಗೆ ಭೂಲೋಕದ ಒಡೆತನದ ಆಮಿಷವೊಡ್ಡಿ ಯುಗಾದಿಯ ದಿನವೇ ವಸುವಿಗೆ ಚಕ್ರವರ್ತಿ ಕಿರೀಟವಿರಿಸಿದನಂತೆ. ಅದರ ನೆನಪಿಗಾಗಿ ಇಂದು ಧ್ವಜವನ್ನು ಮನೆಯ ಮುಂದೆ ಕಟ್ಟುವರು.

 

ಉಗಾದಿ ಪಾಡ್ಯಾಕ ಹೊಲಕ ಕುಂಟಿ ಹಾಕಿ

ಸುತ್ತೈದು ಹರಗಿ ನಿಲಿಸಣ್ಣ | ಭೂಮ್ಯಾಗ

ಬಸವನ ಪೂಜೆ ಮಾಡಣ್ಣ |

 

ರೈತರು ತಮ್ಮ ಎತ್ತುಗಳನ್ನು ಸಿಂಗರಿಸುತ್ತಾರೆ.ತಮ್ಮ ತಮ್ಮ ಹೊಲಗಳಿಗೆ ತೆರಳಿ ಪೂರ್ವಾಭಿಮುಖವಾಗಿ ಗಳೆಹೂಡಿ ನಿಲ್ಲಿಸಿ ಪೂಜಿಸುತ್ತಾರೆ. ಅದೇ ಸಮಯದಲ್ಲಿ ಭೂದೇವಿಯನ್ನು ಪೂಜಿಸಿ ಐದು ಸುತ್ತು ರಂಟೆ ಅಥವಾ ಕುಂಟೆಯನ್ನು ಹೊಡೆಯುತ್ತಾರೆ. ನೈವೈದ್ಯವನ್ನು ಎತ್ತುಗಳಿಗೆ ತಿನ್ನಿಸಿ, ಭೂದೇವಿಗೆ ತಮ್ಮನ್ನು ಕಾಪಾಡೆಂದು ಕೈಮುಗಿದು ಬೇಡುವ ಸಂಪ್ರದಾಯವಿದೆ.

 

ರಂಟಿಯ ಹೊಡೆದು ಮಣ್ಣ ಬುಡಮೇಲು ಮಾಡಿ

ಕೋಲಿ ಮುರಿದು ಕಟ್ಟಿಗೆ ಹಿಡಿಯಣ್ಣ | ಭೂಮ್ಯಾಗ

ಬೆಳತನಕ ದುಡಿಯೋ ರೈತಣ್ಣ |

 

ಜನಪದರು ಅಂದು ಉಳಲುಬಳಸುವ ಎಲ್ಲ ಸಲಕರಣೆ ಹಾಗೂ ವಸ್ತುಗಳು ಹೊಸದಾಗಿರುತ್ತವೆ. ಹೊಸ ಉಡುಗೊರೆಯ ವಿನಿಮಯ, ಊಟೋಪಚಾರ, ಆದರಾತಿಥ್ಯಗಳು ಅವರ  ಮನೆಯಲ್ಲಿ ನಡೆಯುವವು. ಹೋಳಿಗೆ, ಶಾವಿಗೆಪಾಯಸದೊಂದಿಗೆ ಅಂಬಲಿ, ಹುಳಿಮಜ್ಜಿಗೆ ಯುಗಾದಿಯ ಅಡುಗೆ ಮನೆಯ ವಿಶೇಷ.ಜನಪದರು ಈ ದಿನದಂದು ದಾನ ಮಾಡುವುದು, ವರ್ಷದ ಫಲಾಫಲಗಳನ್ನು ಪಂಚಾಂಗ ಓದಿಸಿ ಕೇಳುವುದು ರೂಢಿಯಲ್ಲಿದೆ. ಬಹುಪಾಲು ರೈತರಾದ ಜನಪದರು ಮುಂಬರುವ ಮಳೆ-ಬೆಳೆಯ ಲಾಭ-ನಷ್ಟಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

 

ಬೇವು-ಬೆಲ್ಲದ ತಾತ್ಪರ್ಯ

 

ಜನಪದರು ಯುಗಾದಿಯ ದಿನದಂದು ಬೇವು-ಬೆಲ್ಲವನ್ನು ದೇವರಿಗೆ ನೈವೇದ್ಯಮಾಡಿ ಮನೆಗೆ ಬಂದವರಿಗೆಲ್ಲ ಹಂಚಿ ತಿನ್ನುತ್ತಾರೆ. ಅವÀರು ಅಂದು ಬೆಲ್ಲದೊಡನೆ ಬೇವು ಸ್ವೀಕರಿಸುತ್ತಾರೆ. ಜನಪದÀರ ಪ್ರಕಾರ ಬದುಕಿನಲ್ಲಿ ಸುಖ-ದುಃಖಗಳು ಹೇಗೋ ಹಾಗೆಯೇ ಸಿಹಿ-ಕಹಿಯ ಅನುಭವವಾಗಬೇಕು. ಬದುಕಿನಲ್ಲಿ ಸುಖ-ದುಃಖ ಇವೆರೆಡು ಸಮಾನವೆಂದು ತಿಳಿದುಕೊಳ್ಳುವುದೇ ಬೇವು ಬೆಲ್ಲದ ತಾತ್ಪರ್ಯ.

ಯುಗಾದಿಯ ಆಚರಣೆಯ ಉದ್ದೇಶವು ಸಕಲರಿಗೂ ಸುಖ ಶಾಂತಿ ನೆಮ್ಮದಿ ಸಿಗಲಿ ಎಂಬುದಾಗಿದೆ. ಜನಪದರು ಬಲು ಹುಮ್ಮಸ್ಸಿನಿಂದ ಹಬ್ಬ ಆಚರಿಸುವರು. ಹೊಸಹುರುಪು ಮೋಜಮಜಲುಗಳನನು ಮಾಡಿಸಲು, ಎಲ್ಲರೂ ಹಾಡಿ, ಕುಣಿದು ತಣಿಯುವರು. ಮಲೆನಾಡಿನೊಳಗೆ ಎತ್ತುಗಳನ್ನು ಸಿಂಗರಿಸಿ ಮೆರೆಸುತ್ತಾರೆ. ಕೆಲವು ಕಡೆಗಳಲ್ಲಿ ಎತ್ತುಗಳ ಶಕ್ತಿ ಪ್ರದರ್ಶನವೂ ನಡೆಯುವುದು. ಜನರು ಕುಸ್ತಿ, ಕಸರತ್ತು, ಜಾತ್ರೆ, ಉತ್ಸವಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೊಸತನವನ್ನು ಹೊಮ್ಮಿಸುವರು. ಜನಪದರ ಹೊಸ ವರ್ಷದ ಸಡಗರಕ್ಕೆ ಮರಗಳ ಚಿಗುರು, ಕೋಗಿಲೆ ಹಾಡು, ಪ್ರಕೃತಿಯ ಇಂಪು-ತಂಪುಗಳು ಸಾಕ್ಷಿಯೆನಿಸುತ್ತವೆ.

 

ಯುಗಾದಿಗೆ ವಸಂತದ ಚಿಗುರಿನ ಕಳೆ

ಮನುಷ್ಯ ಎಷ್ಟೇ ಬುದ್ದಿವಂತನಾಗಿದ್ದರೂ, ಇಂದು ಆಧುನಿಕ ತಂತ್ರಜ್ಞಾನ ಹೊಂದಿದ್ದರೂ ಆತ ಪ್ರಕೃತಿಯ ಕೂಸು. ಪ್ರಕೃತಿಯು ಇಡೀ ಜೀವಸಂಕುಲಕ್ಕೆ ಪಾಠವನ್ನೇ ಹೇಳಿಕೊಡುತ್ತದೆ. ಹೂದುಂಬಿಯ ಸ್ನೇಹ-ಪ್ರೀತಿ, ಪಶು-ಪಕ್ಷಿಗಳಲ್ಲಿನ ಸೌಹಾರ್ದತೆ ಇವೆಲ್ಲ ಅನುಕರಣೀಯ. ಒಣಗಿದ ಮರಗಳ ಎಲೆಗಳು ಉದುರಿದ ಬಳಿಕ ಈ ವಸಂತಮಾಸದಲ್ಲಿಯೇ ಚಿಗುರೊಡೆಯುತ್ತವೆ. ಜನಪದರಿಗೆ ಪ್ರಕೃತಿಯ ಮಾವು-ಬೇವುಗಳು ಜೀವನದ ನೋವು-ನಲಿವುಗಳಾಗಿ ಕಂಡುಬರುತ್ತದೆ. ಬೇಸಿಗೆಯ ಬೇಗೆಯಲಿ ಆಹ್ಲಾದ ತರುವ ತಂಗಾಳಿಗಾಗಿ ಒಣಗಿನಿಂತ ಗಿಡಮರಗಳಲಿ ಚಿಗುರೆಲೆಗಲು ತಮ್ಮದೇ ತನ್ಮಯತೆಯಲಿ ಬಿಸಿಲಿನ ಬೇಗೆಗೂ ದಣಿಯದೇ ನಗುನಗುತಾ ನಳಿನಳಿಸುತಿವೆ. ಇದೇ ಪ್ರಕೃತಿಯ ವಿಸ್ಮಯ.

ವನದ ತುಂಬೆಲ್ಲ ಹಸಿರೆಲೆಯ ತೋರಣ

ನೋಡಿದಾಗ ಅರುಳುದೆಮ್ಮ ಮೈಮನ | ವನದಲಿ

ವಸಂತ ಚಿಗುರನು ತಂದ ವನಗಿಡಗಳಲಿ

ಜೇನುದುಂಬಿಗಳ ನಿನಾದ, ಪಕ್ಷಿಗಳ ಸಂಗೀತಗೋಷ್ಠಿ, ಜೊತೆಯಲ್ಲಿಯೇ ಕೋಗಿಲೆಯ ಹಾಡು ಇವೆಲ್ಲವುಜನಪದರ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಹಕ್ಕಿಗಳ ಇಂಪು, ಪ್ರಕೃತಿಯ ತಂಪು ಇವರೆಡರ ನಡುವೆ ಮನುಷ್ಯನ ಮನಸ್ಸು ನವೋಲ್ಲಾಸವನ್ನು ಪಡೆಯುತ್ತದೆ. ಜನಪದರು ಪರಿಸರವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದಾರೆ. ಪ್ರಕೃತಿಯನ್ನುಆರಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ವನಗಿಡಮರಗಳಲ್ಲಿ ನವ ಚಿಗುರು ಪಲ್ಲವಿಸಿದೆ. ಹಸಿರೆಲೆಗಳಿಂದ ಗಿಡಗಳು ತುಂಬಿಕೊಂಡಿವೆ. ಈ ಸೊಬಗಿನ ಸೌಂದರ್ಯವು ಪದಗಳಲ್ಲಿ ಸಿಗದು.

ಇಂಪಾಗಿ ಹಾಡಲು ಕುಹೂಕುಹೂ ರಾಗವನು

ಕೋಗಿಲೆ ಬಯಸಿದೆ ಮಾವಿನ ಕುಡಿಯನು | ಭಗವಂತನು

ವಧುವಂತೆ ಶೃಂಗಾರ ಮಾಡಿರುವ ಪ್ರಕೃತಿಯನು

ಜನಪದರ ನಂಬಿಕೆಯಂತೆ ಬ್ರಹ್ಮನಿಂದ ಭೂಮಿಯುಸೃಷ್ಟಿಯಾಗಿದೆ.ಭೂಮಿಯ ಮೇಲಿನ ಪ್ರಕೃತಿಯು ನಿಜವಾದ ಸ್ವರ್ಗ. ಅಂತಹ ಸ್ವರ್ಗವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ನಾನಾ ರೀತಿಯ ಯೋಜನೆಗಳಿಂದಪರಿಸರ ಮಾಲಿನ್ಯ ಉಂಟಾಗುತ್ತಿದೆ. ಊರಮುಂದಿನ ವನ, ರಸ್ತೆ ಬದಿಯ ಗಿಡಮರಗಳು ಮಾಯವಾಗಿವೆ. ನಗರಗಳಲ್ಲಿ ಅಲ್ಲಲ್ಲಿದ್ದ  ಮರಗಳ ಬದಲಿಗೆ ವಿದ್ಯುತ್‍ಕಂಬಗಳು, ದೊಡ್ಡ ಕಟ್ಟಡಗಳು, ಮೊಬೈಲ್ ಟಾವರ್‍ಗಳು ಬಂದಿವೆ. ಆದ್ದರಿಂದ ನಾವಿಂದು ಪ್ರಕೃತಿಯ ಸೊಬಗನ್ನು ಸವಿಯಲು ಹತ್ತಾರು ಕಿಲೋಮೀಟರ್ ದೂರ ಕ್ರಮಿಸಬೇಕಾಗಿದೆ. ಯುಗಾದಿಯ ಹೊಸವರ್ಷದ ಆಗಮನದ ನವೋಲ್ಲಾಸದಲ್ಲಿ ಸಂಭ್ರಮಿಸುವ ನಾವು ಒಂದಿಷ್ಟು ಪ್ರಮಾಣಗಳನ್ನು ನಮ್ಮಷ್ಟಕ್ಕೆ ನಾವೇ ಮಾಡಬೇಕಾಗಿದೆ. ಜನಪದರಂತೆ ಮರಗಳನ್ನು ಆರಾಧಿಸಲು ಆಗದಿದ್ದರೂ ಸಾಧ್ಯವಾದಷ್ಟು ಉಳಿಸಬೇಕು. ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಗಳನ್ನು ಕೈಗೊಳ್ಳಬೇಕು. ಜೀವನೋತ್ಸಾಹ ಹಾಗೂ ಸೃಜನಶೀಲತೆಯ ಪ್ರತೀಕವಾದ ಪ್ರಕೃತಿಯನ್ನು ಕಾಪಾಡುವ ಹೊಣೆ ನಮ್ಮೆಲ್ಲರದ್ದಾಗಿದೆ. ಜನಪದರ ಉತ್ತಮ ಸಂಪ್ರದಾಯಗಳನ್ನು ಸಾಧ್ಯವಾದಷ್ಟು ಆಚರಿಸೋಣ.

 

ಡಾ. ಶಿವಾನಂದ ಬ. ಟವಳಿ

ಸಹಾಯಕ ಪ್ರಾಧ್ಯಾಪಕರು,

ಭಾμÁ ವಿಭಾಗ, ಕ್ರೈಸ್ಟ್ ವಿಶ್ವವಿದ್ಯಾಲಯ,

ಬೆಂಗಳೂರು-29

 

 

Share This Article

You cannot copy content of this page