
ಕನ್ನಡ ಬಿಂಬ, ಬೆಳಗಾವಿ
ಎನ್‍ಸಿಡಿಸಿ (ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ) ನೆರವು ಲಭ್ಯವಾಗದಿದ್ದರೆ ಬೀದರ್ ಸಹಕಾರ ಸಕ್ಕರೆ ಕಾರಖಾನೆ (ಬಿ ಎಸ್ ಎಸ್ ಕೆ) ಯನ್ನು ಎಲ್ ಆರ್ ಓ ಟಿ ಆಧಾರದ ಮೇಲೆ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ (ಡಿಸೆಂಬರ್ 9) ಪ್ರಶ್ನೋತ್ತರ ವೇಳೆಯಲ್ಲಿ ಭೀಮರಾವ ಬಸವರಾಜ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ಸಹಕಾರ ಸಕ್ಕರೆ ಕಾರಖಾನೆ ಸೇರಿದಂತೆ ರಾಜ್ಯದ ಒಟ್ಟು ಆರು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್ ಸಿ ಡಿ ಸಿ ನೆರವು ಪಡೆಯಲು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ಮಾಡಲಾಗುವುದು. ನೆರವು ಲಭ್ಯವಾಗದಿದ್ದರೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಮತ್ತೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಆರ್ಥಿಕ ಸಂಕಷ್ಟ ಮತ್ತು ಇತರ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಮೂಲಕ ಪುನಶ್ಚೇತನಗೊಳಿಸುವುದು ಸರಕಾರದ ಪ್ರಸ್ತುತ ನೀತಿಯಾಗಿದೆ. ಈಗಾಗಲೇ ಒಟ್ಟು ಹತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಲಾಗಿದೆ ಎಂದು ವಿವರಿಸಿದರು.
ಬಿಎಸ್‍ಎಸ್‍ಕೆ 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್ ಆರ್ ಒ ಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಪ್ರಿ ಬಿಡ್ ಸಭೆಯಲ್ಲಿ ಬಿಡ್ಡುದಾರರು ಭಾಗವಹಿಸಿದ್ದರೂ ನಿಗದಿಪಡಿಸಿದ ಅವಧಿಯಲ್ಲಿ ಒಬ್ಬರೂ ಭರ್ತಿ ಮಾಡಿದ ಅರ್ಜಿ ಸಲ್ಲಿಸಲಿಲ್ಲ. ಎರಡನೇ ಬಾರಿ ಟೆಂಡರ್ ಕರೆದಾಗ ಸರ್ಕಾರದ ಷರತ್ತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಯಾವ ಬಿಡ್ಡುದಾರರೂ ಭಾಗವಹಿಸಲಿಲ್ಲ. ಹೀಗಾಗಿ ಬಿಡ್ಡುದಾರರು ಸರ್ಕಾರದ ಷರತ್ತುಗಳ ಸಡಿಲಿಕೆ ಕೋರಿ ಸಲ್ಲಿಸಿರುವ ಮನವಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತರು 2023 ರ ಮಾರ್ಚ್ 16ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ಏಕ ಕಾಲ ತೀರುವಳಿ ಯೋಜನೆಯಲ್ಲಿ ಎಷ್ಟು ಮೊತ್ತಕ್ಕೆ ಒಪ್ಪಲಿವೆ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕಾರ್ಖಾನೆಗೆ ಸೂಚನೆ ನೀಡಲಾಗಿತ್ತು ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಏಕ ತೀರುವಳಿ ಯೋಜನೆಯಲ್ಲಿ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆಗೆ ಬ್ಯಾಂಕುಗಳಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಸರ್ಕಾರದ ಹಂತದಲ್ಲಿಯೇ ಬಡ್ಡಿ ಮನ್ನಾ ಮಾಡಬೇಕು ಹಾಗೂ ಲೀಸ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಖಾನೆ ಪುನರಾರಂಭ ಮಾಡಬೇಕು ಎಂದು ಕಾರ್ಖಾನೆ ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿತ್ತು.
ಈ ನಡುವೆ ಕಾರ್ಖಾನೆಗೆ ಪಡೆದಿದ್ದ ಸಾಲ ಸುಸ್ತಿಯಾಗಿದ್ದರಿಂದ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಬೀದರ್ ಜಿಲ್ಲಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಕಾರ್ಖಾನೆಯ ಚರ ಮತ್ತು ಸ್ಥಿರ ಆಸ್ತಿಯನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿ, 184 ಕೋಟಿ ರೂ.ಗಳಿಗೆ ಸುಭಾμï ಗಂಗಾ ಹುಮನಾಬಾದ ಎಂಬುವರಿಗೆ ನೀಡಲಾಗಿತ್ತು ಎಂದು ಹೇಳಿದರು.
ಜಿಲ್ಲಾಧಿಕಾರಿಯವರು ಸರ್ಕಾರದ ಅನುಮತಿ ಪಡೆಯದೆ ಕಾರಖಾನೆಯನ್ನು ಹರಾಜು ಮಾಡಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಕಾರ್ಖಾನೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಳಗಾವಿಯಲ್ಲೇ ನಡೆದ ಚಳಿಗಾಲದ ಅಧಿವೇಶನದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು ಎಂದು ವಿವರಿಸಿದರು.
ಕಾರ್ಖಾನೆ ಪುನರಾರಂಭಕ್ಕೆ ಕಳೆದ ಜೂನ್ 26ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಸರ್ಕಾರದಿಂದ ಆರ್ಥಿಕ ನೆರವು ಪಡೆಯಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಹಾಗೂ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಮತ್ತು ಸಹ ವಿದ್ಯುತ್ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಮೂಲಕ 550 ಕೋಟಿ ರೂ. ಆರ್ಥಿಕ ನೆರವು ಕೋರಿ ಎನ್ ಸಿ ಡಿ ಸಿ ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನೇರ ಹಣಕಾಸು ಮಾನದಂಡಗಳನ್ನು ಪೂರೈಸದ ಕಾರಣ ರಾಜ್ಯ ಸರ್ಕಾರವೇ ಪ್ರಾಥಮಿಕ ಸಾಲಗಾರನಾಗಿ ಶಿಫಾರಸ್ಸು ಮಾಡಬಹುದು ಎಂದು ಎನ್ ಸಿ ಡಿ ಸಿ ತಿಳಿಸಿತ್ತು ಎಂದು ಸಚಿವರು ವಿವರಿಸಿದರು.
ಈ ಸಾಲಿನ ಕಬ್ಬು ನುರಿಸುವ ಹಂಗಾಮು ಕೈತಪ್ಪಿದೆ. ಕನಿಷ್ಠ ಮುಂದಿನ ಸಾಲಿನ ಹಂಗಾಮಿನಲ್ಲಾದರೂ ಈ ಕಾರಖಾನೆಯು ಕಬ್ಬು ನುರಿಸುವಂತಾಗಲು ಖಾಸಗಿಯವರಿಗೆ ಗುತ್ತಿಗೆ ಕೊಡುವ ಅಥವಾ ಎನ್‍ಸಿಡಿಸಿಯಿಂದ ಆರ್ಥಿಕ ನೆರವು ಪಡೆಯುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎನ್ನುವುದು ಬೀದರ್ ಜಿಲ್ಲೆಯ ರೈತರ ಒತ್ತಾಸೆಯಾಗಿದೆ.


