
ಕನ್ನಡ ಬಿಂಬ, ಬೀದರ್
ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್, ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮತ್ತು ಡಾ. ಚಂದ್ರಶೇಖರ ಪಾಟೀಲರು ಜನವರಿ 5 ರಂದು ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬಯ್ದಾಡಿಕೊಂಡಿರುವ ಘಟನೆ ಹಿಂದೆ ಹತ್ತಾರು ಕಾರಣ ಇದ್ದಿರಬಹುದು. 2023 ರ ವಿಧಾನಸಭಾ ಚುನಾವಣೆ ನಂತರ ಈ ಗೌಡರ ನಡುವೆ ಶೀತಲ ಸಮರ ಶುರುವಾಗಿದ್ದಕ್ಕೆ ಹುಮನಾಬಾದ್ ಜನರೇ ಸಾಕ್ಷಿಯಾಗಿದ್ದಾರೆ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳುವ ಸಭೆ, ಸಮಾರಂಭಗಳಲ್ಲಿ ಮಾತಿನ ಚಕಮಕಿ, ಗದ್ದಲ ಗ್ಯಾರಂಟಿ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣರಾದವರು ಇದೇ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು. ಆಯಾ ಪಕ್ಷದಲ್ಲಿರುವ ಈ ಮುಖಂಡರ ಬೆಂಬಲಿಗ ಕಾರ್ಯಕರ್ತರೂ ಈ ದ್ವೇಷದ ಜ್ವಾಲೆಗೆ ಆಗಾಗ ತಮ್ಮ ಪಾಲಿನ ಕೊಡುಗೆ ನೀಡುತ್ತಲೇ ಬಂದಿದ್ದಾರೆ.
ಜನವರಿ 5 ರಂದು ಜಿಪಂ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆಗೆ ಬೀದರ್ ನಗರದ ಗುರುನಾನಕ ಝೀರಾ ಬಳಿ ಇರುವ ಖಾಸಗಿ ಲೇಔಟ್ ವಿಷಯವೇ ಕಾರಣವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಬೇರೆ ಕಾರಣಗಳೂ ಇದ್ದಿರಬಹುದು. ಶಾಸಕ ಡಾ. ಸಿದ್ದು ಪಾಟೀಲ್ ಅವರು ಸ್ವತ: ಈ ವಿಷಯ ಪ್ರಸ್ತಾಪಿಸಿರುವುದು ಮಾದ್ಯಮಗಳಲ್ಲಿ ವರದಿಯಾಗಿದೆ.
ಸದ್ಯ ಈ ಲೇಔಟ್ ವಿಷಯ ಚರ್ಚೆಯ ಕೇಂದ್ರವಾಗಿದೆ. ಗುರುನಾನಕ ಝೀರಾ ಪ್ರದೇಶದಲ್ಲಿನ ಜಮೀನಿಗೆ ಬಂಗಾರಕ್ಕಿಂತ ಹೆಚ್ಚು ಬೆಲೆ ಇದೆ. ಜಮೀನು ವ್ಯವಹಾರದಿಂದ ಕೈ, ಜೇಬು ಮಾತ್ರವಲ್ಲ, ಖಜಾನೆಯೂ ತುಂಬುವಷ್ಟು ಆದಾಯ ಬರುತ್ತದೆ ಎಂಬ ಮಾತಿದೆ. ಜಗಳಕ್ಕೆ ಮೂಲ ಅಥವಾ ತಕ್ಷಣಕ್ಕೆ ಕಾರಣವಾದ ಈ ಲೇಔಟ್ ವಿಷಯದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ನಿಲುವು ಬಹಿರಂಗಪಡಿಸಿಲ್ಲ. ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಆರೋಪಿಸಿರುವಂತೆ ಈ ಲೇಔಟ್‍ಗೂ ಕಾಂಗ್ರೆಸ್ ನಾಯಕರಿಗೂ ಸಂಬಂಧ ಇದೆ. ಭೀಮರಾವ ಪಾಟಿಲ್ ಪರಿವಾರದವರು ಈ ಬೆಲೆ ಬಾಳುವ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಅವರು ನೇರವಾಗಿಯೇ ಆರೋಪಿಸಿದ್ದಾರೆ.
ಲೇಔಟ್ ವಿಷಯವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರು ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದಾರೆ. ಭೂ ಉಪಯೋಗ ಬದಲಾವಣೆಗೆ ಅನುಮತಿ ಪಡೆಯದೇ, ಶುಲ್ಕ ಪಾವತಿ ಮಾಡದೆ, ನಿಯಮಬಾಹಿರವಾಗಿ ವಿನ್ಯಾಸಕ್ಕೆ ಅನುಮೋದನೆ ನೀಡಲಾಗಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಸರಕಾರ ವಿಧಾನಸಭೆಯಲ್ಲಿಯೇ ಉತ್ತರ ನೀಡಿದೆ. ನಿಯಮ ಉಲ್ಲಂಘನೆ ಆಗಿದೆ ಎಂದು ತಿಳಿಸಿದೆ.
ಡಾ. ಸಿದ್ದು ಪಾಟೀಲರು ನಿಯಮ 73 ರ ಅಡಿಯಲ್ಲಿ ಸಲ್ಲಿಸಿರುವ ಗಮನ ಸೆಳೆಯುವ ಸೂಚನೆಗೆ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್. ಸುರೇಶ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಹಲವು ಅಚ್ಚರಿಯ ವಿಷಯಗಳಿರುವುದನ್ನು ಕಾಣಬಹುದು.
ಶಾಸಕ ಡಾ. ಸಿದ್ದು ಪಾಟೀಲ್ ಅವರು ಕಳೆದ ಸಾಲಿನ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಬೀದರ್ ತಾಲೂಕಿನ ಚಿಕಪೇಟ ಗ್ರಾಮದ ಸರ್ವೆ ನಂ. 30, 31 ಮತ್ತು ಸರ್ವೆ ಸಂಖ್ಯೆ 34 ರಲ್ಲಿ ಒಟ್ಟು 48.36 ಎಕರೆ ಜಾಗದಲ್ಲಿ ನಿಯಮಬಾಹಿರವಗಿ ಲೇಔಟ್ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ತಪ್ಪು ನಡೆದಿದೆ ಎಂದು ಸಚಿವರು ಉತ್ತರ ನೀಡಿದರೂ, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಿದ್ದು ಪಾಟೀಲರು ನಗರಾಭಿವೃದ್ದಿ ಸಚಿವರ ಗಮನ ಸೆಳೆದಿದ್ದರು.
ಡಾ. ಸಿದ್ದು ಪಾಟೀಲರಿಗೆ ಸಚಿವರು ನೀಡಿರುವ ಉತ್ತರದಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಬೀದರ್ ತಾಲೂಕಿನ ಚಿಕಪೇಟ್ ಗ್ರಾಮದ ಸರ್ವೆ ನಂ. 30, 31 ಮತ್ತು 34 ರಲ್ಲಿರುವ ಒಟ್ಟು 48 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿಯಮಬಾಹಿರವಾಗಿ ವಿನ್ಯಾಸಕ್ಕೆ ಅನುಮೋದನೆ ನೀಡಿ, ರೇರಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಶೇ. 40 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಸದರಿ ಜಮೀನುಗಳು ದಿನಾಂಕ 25-02-1988 ರಂದು ಭೂ ಪರಿವರ್ತನೆ ಮಾಡಲಾಗಿತ್ತು. ಆದರೆ, ಯಾವ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುತ್ತಾರೆ ಎಂಬ ಸ್ಪಷ್ಟನೆ ಇರುವುದಿಲ್ಲ.
35 ವರ್ಷಗಳ ಹಿಂದೆ, 1988 ರಲ್ಲಿ ಮಾಡಲಾದ ಭೂ ಪರಿವರ್ತನೆ ಆದೇಶವನ್ನು ಪರಿಗಣಿಸಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿರುತ್ತಾರೆ. ಸದರಿ ಸರ್ವೆ ಸಂಖ್ಯೆಯ ಜಮೀನುಗಳು ಅನುಮೋದನೆಯಾದ ಮಹಾ ಯೋಜನೆಯಲ್ಲಿ ಭಾಗಶ: ವಸತಿ, ಭಾಗಶ: ಉದ್ಯಾನವನ, ಭಾಗಶ: ಸಾರ್ವಜನಿಕ ಮತ್ತು ಅರೆಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುತ್ತದೆ. ಆದರೆ, ಭೂ ಉಪಯೋಗ ಬದಲಾವಣೆಗೆ ಅನುಮತಿ ಪಡೆಯದೇ ಶುಲ್ಕ ಪಾವತಿ ಮಾಡದೆ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ, ನಿಯಮಬಾಹಿರವಾಗಿ ಮೇಲಿನ ಎಲ್ಲ ಸರ್ವೆ ನಂಬರುಗಳನ್ನು ವಸತಿ ವಲಯವೆಂದು ಪರಿಗಣಿಸಿ, ವಿನ್ಯಾಸಕ್ಕೆ ಅನುಮೋದನೆ ನೀಡಿರುವುದು ಕಂಡು ಬಂದಿರುತ್ತದೆ ಎಂಬ ಮಾಹಿತಿ ಸಚಿವರ ಉತ್ತರದಲ್ಲಿದೆ.
ಈ ಹಿನ್ನೆಲೆಯಲ್ಲಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರದ ಹಿಂದಿನ ಆಯುಕ್ತ ಅಭಯಕುಮಾರ, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕ ಭಂಡಾರಿ ಎಚ್. ವಿಷ್ಣು ಇವರುಗಳಿಗೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರನ್ವಯ ದಿನಾಂಕ 17-05-2025 ರಂದು ಸರಕಾರದಿಂದ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿರುತ್ತದೆ.
ಸದ್ಯ ಪೌರಾಡಳಿತ ಇಲಾಖೆಯಲ್ಲಿ ಪರಿಸರ ಅಭಿಯಂತರ ಆಗಿರುವ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಅಭಯಕುಮಾರ, ನಗರ ಮತ್ತು ಗ್ರಾಮಂತರ ಯೋಜನಾ ಸಹಾಯಕ ನಿರ್ದೇಶಕ ಭಂಡಾರಿ ಎಚ್. ವಿಷ್ಣು ಅವರು ದಿನಾಂಕ 26-05-2025 ಮತ್ತು 30-07-2025 ರಂದು ಲಿಖಿತ ಸಮಜಾಯಿಷಿ ನೀಡಿದ್ದು, ತಾವು ನಿಯಮಾನುಸಾರ ಕರ್ತವ್ಯ ನಿರ್ವಹಿಸಿದ್ದಾಗಿ ಮತ್ತು ತಮ್ಮ ವಿರುದ್ದದ ಶುಸ್ತು ಕ್ರಮವನ್ನು ಕೈ ಬಿಡುವಂತೆ ಕೋರಿರುತ್ತಾರೆ. ಆದರೆ, ಸದರಿ ಅಧಿಕಾರಿಗಳು ನೀಡಿರುವ ಲಿಖಿತ ಸಮಜಾಯಿಷಿಯನ್ನು ಪರಿಗಣಿಸಿ, ಅವರ ವಿರುದ್ಧದ ಶಿಸ್ತು ಕ್ರಮವನ್ನು ಕೈ ಬಿಡುವಂತಹ ಪರಿಗಣನಾರ್ಹವಾದ ಅಂಶಗಳು, ದಾಖಲೆಗಳು ಕಂಡು ಬಂದಿರುವುದಿಲ್ಲ ಎಂದು ಸ್ವತ: ನಗರಾಭಿವೃದ್ದಿ ಸಚಿವರೇ ತಮ್ಮ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸದರಿ ಅಧಿಕಾರಿಗಳು ಶ್ರೀ ಗುರುನಾನಕ ಝೀರಾ ಸಾಹೇಬ್ ಫೌಂಡೇಶನ್ ಬೀದರ್ ಇವರಿಗೆ ಬೀದರ್ ತಾಲೂಕಿನ ಚಿಕಪೇಟ್ ಗ್ರಾಮದ ಸರ್ವೆ ಸಂ. 30, 31 ಮತ್ತು 34 ರಲ್ಲಿರುವ ಒಟ್ಟು 48.36 ಎಕರೆ ಜಾಗದಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಭೂಉಪಯೋಗ ಬದಲಾವಣೆಗೆ ಅನುಮತಿ ಪಡೆಯದೇ ನಿಯಮಬಾಹಿರವಾಗಿ ವಸತಿ ವಲಯವೆಂದು ಪರಿಗಣಿಸಿ ಲೇಔಟ್‍ಗೆ ಅನುಮೋದನೆ ನೀಡಿ, ನಿಗದಿತ ಶುಲ್ಕ ಪಾವತಿಸಿಕೊಳ್ಳದೆ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದೂ ಸಚಿವ ಬಿ.ಎಸ್. ಸುರೇಶ ಅವರು ತಿಳಿಸಿದ್ದಾರೆ.
ಸದರಿ ಅಧಿಕಾರಿಗಳು (ಅಭಯಕುಮಾರ ಮತ್ತು ಭಂಡಾರಿ ಎಚ್. ವಿಷ್ಣು) ನೀಡಿರುವ ಲಿಖಿತ ಸಮಜಾಯಿಷಿಯನ್ನು ಒಪ್ಪದೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕರ್ನಾಟಕ ನಾಗರಿಕ ಸೇವ ನಿಯಮ 1957 ರ ನಿಯಮ 11 ರಡಿ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮ 214 ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ, ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂಬ ಮಾಹಿತಿ ನಗರಾಭಿವೃದ್ದಿ ಸಚಿವರ ಉತ್ತರದಲ್ಲಿದೆ.
ಭೂ ಉಪಯೋಗ ಬದಲಾವಣೆಗೆ ಅನುಮತಿ ಪಡೆಯದೇ ಲೇಔಟ್ ಗೆ ಅನುಮೋದನೆ ನೀಡಲಾಗಿದೆ ಎಂಬ ಸಂಗತಿಯನ್ನು ನಗರಾಭಿವೃದ್ದಿ ಸಚಿವ ಬಿ.ಎಸ್. ಸುರೇಶ ಬಹುಸ್ಪಷ್ಟವಾಗಿ ತಮ್ಮ ಉತ್ತರದಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು.


