
ಕನ್ನಡ ಬಿಂಬ, ಬೀದರ್
ಬೀದರ್ ಜಿಲ್ಲಾ ಆಡಳಿತ ಸೂಕ್ತವಾದ ಜಮೀನು ನೀಡಿದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ವತಿಯಿಂದ ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಸಂಸ್ಥೆ ರಾಯಚೂರು ವಲಯ ನೂತನ ಸಂಚಾಲಕ ಕುಶಾಲ ಪಾಟೀಲ್ ಗಾದಗಿ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಗಜಾನನ ಕ್ರಿಕೆಟ್ ಕ್ಲಬ್, ವಿಜಯ್ ಕ್ರಿಕೆಟ್ ಕ್ಲಬ್, ಬೀದರ್ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟ್ ತರಬೇತಿದಾರರಿಂದ ಸನ್ಮಾನಿತರಾಗಿ ಮಾತನಾಡಿದರು. ಇಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆಗೆ ದಶಕದ ಹಿಂದೆಯೇ ಕೆಎಸ್‍ಸಿಎ ಚಾಲನೆ ನೀಡಿತ್ತು. ಕಾರಣಾಂತರಕ್ಕೆ ಅದು ನನೆಗುದಿಗೆ ಬಿದ್ದಿತ್ತು. ಈ ಪ್ರಕ್ರಿಯೆಗೆ ಮತ್ತೆ ಈಗ ಮರುಚಾಲನೆ ನೀಡುವೆ. ಶೀಘ್ರವೇ ಈ ಸಂಬಂಧ ಸಂಸ್ಥೆ ನೂತನ ಅಧ್ಯಕ್ಷ ವೆಂಕಟೇಶಪ್ರಸಾದ್ ಅವರೊಂದಿಗೆ ಚರ್ಚಿಸುವೆ ಎಂದು ಹೇಳಿದರು.
ಹೈಟೆಕ್ ಕ್ರೀಡಾಂಗಣ ನಿರ್ಮಾಣ ಸಂಬಂಧ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಎರಡು ಕಡೆ ಜಾಗ ಪರಿಶೀಲಿಸಿದ್ದಾರೆ. ಸಚಿವರು ವೀಕ್ಷಿಸಿದ ಜಾಗದಲ್ಲಿ ರೇಷ್ಮೆ ಇಲಾಖೆ ಜಾಗ ಉತ್ತಮವಿದೆ ಎಂಬ ಅಭಿಪ್ರಾಯವಿದೆ. ಈ ಕುರಿತು ಸಚಿವ ಖಂಡ್ರೆ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಜಿಲ್ಲಾಡಳಿತ ಸೂಕ್ತ ಜಾಗ ಒದಗಿಸಿದರೆ ಸಂಸ್ಥೆಯಿಂದ ಕ್ರೀಡಾಂಗಣ ನಿರ್ಮಾಣದ ಯೋಜನೆಗೆ ಚಾಲನೆ ನೀಡಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಜಿಲ್ಲೆಯಲ್ಲಿ ಶಾಲಾ- ಕಾಲೇಜು ಮಟ್ಟದಲ್ಲಿ ಟೂರ್ನಿ ನಡೆಸಲಾಗುವುದು. ಇದಕ್ಕಾಗಿ ಸ್ಥಳೀಯ ದೈಹಿಕ ಶಿಕ್ಷಕರಿಗೆ ಸಂಸ್ಥೆ ವತಿಯಿಂದ ಕ್ರಿಕೆಟ್ ಕೋಚಿಂಗ್ ನೀಡಲಾಗುವುದು. ಶಾಲಾ-ಕಾಲೇಜು ಮಟ್ಟದಲ್ಲಿ ಕ್ರಿಕೆಟ್ ತಂಡ ಸಕ್ರಿಯವಾದರೆ ಪ್ರತಿಭೆಗಳು ಹೊರಬರಲು ಸಾಧ್ಯವಾಗಲಿದೆ. ಈ ಭಾಗದ ಎಲ್ಲ ಏಳು ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ಸಮಸ್ಯೆ ಅರಿತು ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಅವರಿಗೆ ಕೆಎಸ್‍ಸಿಎನಿಂದ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ನಮ್ಮ ಕ್ರೀಡಾಪಟುಗಳು ಸಹ ರಣಿಜಿ, ಐಪಿಎಲ್, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತಾಗಬೇಕು ಎಂದು ಕುಶಾಲ ಪಾಟೀಲ್ ಹೇಳಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಅವರಿಗೆ ಅಗತ್ಯ ಸೌಲಭ್ಯ, ಪ್ರೋತ್ಸಾಹ, ತರಬೇತಿ ಕೊರತೆ ತೀವ್ರವಿದೆ. ಕುಶಾಲ್ ಪಾಟೀಲ್ ಅವರು ಕೆಎಸ್‍ಸಿಎ ಮೂಲಕ ತಮ್ಮ ಅವಧಿಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣವನ್ನು ಕೊಡುಗೆಯಾಗಿ ಜಿಲ್ಲೆಗೆ ನೀಡಲಿ ಎಂದು ಹೇಳಿದರು.
ರೋಟರಿ ಕಲ್ಯಾಣ ಝೋನ್ ಅಸಿಸ್ಟಂಟ್ ಗವರ್ನರ್ ಹಾವಶೆಟ್ಟಿ ಪಾಟೀಲ್ ಮಾತನಾಡಿ, ಇಲ್ಲಿನ ಯುವಕರ ತಂಡ ಸಾಕಷ್ಟು ಪ್ರಯತ್ನ ಮಾಡಿ ಕ್ರಿಕೆಟ್‍ಗೆ ಉತ್ತೇಜನ ನೀಡುತ್ತಿದೆ. ಇದೀಗ ಕುಶಾಲ್ ಅವರು ಕೆಎಸ್‍ಸಿಎ ವಲಯ ಸಂಚಾಲಕರಾದ ಕಾರಣ ನಮ್ಮ ಪ್ರತಿಭೆಗಳ ಕನಸುಗಳು ಚಿಗುರೊಡೆದಿವೆ ಎಂದರು.
ಬೀದರ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅನೀಲಕುಮಾರ ದೇಶಮುಖ ಮಾತನಾಡಿ, ಕುಶಾಲ್ ಪಾಟೀಲ್ ಅವರ ಗೆಲುವು ಈ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆಯ ವೇಗ ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಎಸ್‍ಸಿಎ ಬೀದರ್ ಜಿಲ್ಲಾ ಮುಖ್ಯ ಕೋಚ್ ಸಂಜಯ್ ಜಾಧವ್, ಪ್ರಮುಖರಾದ ಯುವರಾಜ ಉನ್ನಿ, ವಿಕ್ಕಿ ಅಥವಾಲ್, ಮಹ್ಮದ್ ಅಝರ್, ಮುಕ್ರಮ್ ಖಾನ್, ಸಚಿನ್ ಕೊಳ್ಳುರ್, ರವೀಂದ್ರ, ರಾಜೇಂದ್ರ ಶರ್ಮಾ, ಮಲ್ಲಿಕಾರ್ಜುನ ಕ್ಯಾಸಾ, ಮಹೇಶ ರಾಗಾ, ನಿತಿನ್ ಕರ್ಪೂರ್, ಕಾಶೀನಾಥ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


