Ad imageAd image

11 ರಿಂದ 9.5 ಕ್ಕೆ ಕುಸಿದ ಸಕ್ಕರೆ ಇಳುವರಿ

Kannada Bimba Team
4 Min Read
ಒಡಲೊಳಗೆ ಸಿಹಿ, ಬೆಳೆಗಾರನಿಗೆ ಮಾತ್ರ ಕಹಿ. ಇದು ಈ ಬಾರಿಯ ಕಬ್ಬಿನ ಸ್ಥಿತಿ
ಒಡಲೊಳಗೆ ಸಿಹಿ, ಬೆಳೆಗಾರನಿಗೆ ಮಾತ್ರ ಕಹಿ. ಇದು ಈ ಬಾರಿಯ ಕಬ್ಬಿನ ಸ್ಥಿತಿ

 

ಕನ್ನಡ ಬಿಂಬ ಬೀದರ್

ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಇಳುವರಿ ಕುಸಿಯುತ್ತಲೇ ಇದೆ. ಒಂದೂವರೆ ದಶಕದ ಹಿಂದೆ ಸಕ್ಕರೆ ಇಳುವರಿ ಶೇ. 10 ಕ್ಕಿಂತ ಹೆಚ್ಚಿತ್ತು. ಎರಡು ದಶಕಗಳ ಹಿಂದೆ  ಶೇ. 11 ರಷ್ಟಿತ್ತು. ಅದಕ್ಕೂ ಸ್ವಲ್ಪ ಹಿಂದೆ ಶೇ. 12 ರಷ್ಟು ಸಕ್ಕರೆ ಇಳುವರಿ ದಾಖಲಾದ ಇತಿಹಾಸ ಇದೆ. 2004-05 ನೇ ಸಾಲಿನ ಹಂಗಾಮಿನಲ್ಲಿ ಜಿಲ್ಲೆಯ ಸಹಕಾರಿ ಸಕ್ಕರೆ ಕಾರಖಾನೆಯೊಂದರಲ್ಲಿ ಶೇ. 11.51 ರಷ್ಟು ಸಕ್ಕರೆ ಇಳುವರಿ ದಾಖಲಾಗಿತ್ತು.

ಸದ್ಯ ಬಂದ್ ಆಗಿರುವ ಬೀದರ್ ಸಹಕಾರ ಸಕ್ಕರೆ ಕಾರಖಾನೆಯು (ಬಿಎಸ್‍ಎಸ್‍ಕೆ) ಸಕ್ಕರೆ ಇಳುವರಿಗೆ ಹೆಸರಾಗಿತ್ತು. ಅಧಿಕ ಇಳುವರಿ ಪಡೆದ ಕಾರಣಕ್ಕಾಗಿಯೇ ಈ ಕಾರಖಾನೆಗೆ ರಾಜ್ಯ ಸರಕಾರ ಚಿನ್ನದ ಪದಕ ನೀಡಿತ್ತು ಎಂದು ರೈತರು ಸ್ಮರಿಸುತ್ತಾರೆ. ಈ ಕಾರಖಾನೆಯು ಸಕ್ಕರೆ ಇಳುವರಿಯಲ್ಲಷ್ಟೇ ಅಲ್ಲ, ಉತ್ಪಾದನಾ ವೆಚ್ಚದಲ್ಲೂ ಗಮನ ಸೆಳೆಯುವ ಸಾಧನೆ ಮಾಡಿತ್ತು. ಖರೀದಿ ಮತ್ತು ಮಾರಾಟ ವ್ಯವಹಾರದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರಖಾನೆಯಷ್ಟು ಉಜ್ವಲ ಇತಿಹಾಸ ಜಿಲ್ಲೆಯ ಬೇರಾವ ಕಾರಖಾನೆಗೆ ಇದ್ದಿರಲಿಲ್ಲ. ಹಳೆಯ ತಂತ್ರಜ್ಞಾನ, ಯಂತ್ರೋಪಕರಣಗಳ ಹೊರತಾಗಿಯೂ ಈ ಕಾರಖಾನೆಯು ಎಲ್ಲ ವಿಷಯಗಳಲ್ಲಿ ಅನುಕರಣೀಯವಾಗಿತ್ತು.

ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಮತ್ತು ಮಹಾತ್ಮಾಗಾಂಧಿ ಸಹಕಾರ ಸಕ್ಕರೆ ಕಾರಖಾನೆಗಳ ಆರಂಭದ ನಂತರ ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ವೈಭವ ನಿಧಾನವಾಗಿ ಇಳಿಮುಖವಾಯಿತು.

ಆರಂಭದ ವರ್ಷಗಳಲ್ಲಿ ನಾರಂಜಾ ಕಾರಖಾನೆ ಹಾಗೂ ಮಹಾತ್ಮಾಗಾಂಧಿ ಕಾರಖಾನೆಗಳ ಸಕ್ಕರೆ ಇಳುವರಿ ಉತ್ತಮವಾಗಿಯೇ ಇತ್ತು.  ಈ ಎರಡೂ ಕಾರಖಾನೆಗಳ ಇತಿಹಾಸ ಬಲ್ಲ ಎಲ್ಲರಿಗೂ ಇದು ತಿಳಿದಿರುವ ವಿಷಯವೇ ಆಗಿದೆ. ಈ ಕಾರಖಾನೆಗಳ ಮುಖ್ಯಸ್ಥರು ಕಬ್ಬು ಕ್ರಷಿಂಗ್, ಸಕ್ಕರೆ ಇಳುವರಿ, ಸಕ್ಕರೆ ಮಾರಾಟ ಮುಂತಾದವುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನೂ ಜಿಲ್ಲೆಯ ರೈತರು ಕಂಡಿದ್ದಾರೆ.

`..ಒಂದೂವರೆ ದಶಕದ ಅವಧಿಯಲ್ಲಿ ಸಕ್ಕರೆ ಇಳುವರಿ ಕುಸಿಯಲು ಕಾರಣವಾಗುವಂತಹ ಯಾವುದೇ ಬದಲಾವಣೆ ರೈತರ ಹೊಲದಲ್ಲಿ ಆಗಿಲ್ಲ. ಆದರೆ, ಕಾರಖಾನೆಗಳಲ್ಲಿ ಆಗಿದೆ. ಹಿಂದೆ ಕಾರಖಾನೆಯ ಸಿಬ್ಬಂದಿ ಹೊಲಕ್ಕೆ ಹೋಗಿ, ಕಬ್ಬಿನ ಜ್ಯೂಸ್ ತೆಗೆದು ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುತ್ತಿದ್ದರು. ಡೇರಿಗಳಲ್ಲಿ ಹಾಲಿನ ಶುದ್ಧತೆ ಪರೀಕ್ಷಿಸುವಂತೆ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವ ಪದ್ಧತಿ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ, ರೈತ ಹೋರಾಟಗಾರ ಸೂರ್ಯಕಾಂತ ಪಾಟೀಲ್ ಡಾಕುಳಗಿ.

ಜಿಲ್ಲೆಯಲ್ಲಿ ಹೊಸ ಕಾರಖಾನೆ ನಿರ್ಮಾಣವಾದವು. ಅಕ್ಕಪಕ್ಕದ ರಾಜ್ಯಗಳ ಕಾರಖಾನೆಯವರೂ ಕಬ್ಬಿಗಾಗಿ ಜಿಲ್ಲೆಗೆ ಬರಲಾರಂಭಿಸಿದರು. ಹೀಗಾಗಿ ಕಬ್ಬು ಕೊಂಡೊಯ್ಯುವಲ್ಲಿ ಅವಸರ ಮಾಡುವಂತಾಯಿತು. ಕಬ್ಬು ಸಿಗಲಿಕ್ಕಿಲ್ಲ ಎಂಬ ಕಾರಣಕ್ಕೆ ಸಕ್ಕರೆ ಕಾರಖಾನೆಯವರೂ ಅವಸರ ಅವಸರವಾಗಿ ಕಬ್ಬು ಕೊಂಡೊಯ್ಯಲಾರಂಭಿಸಿದರು. ಈ ಅವಸರದಲ್ಲಿ 12 ತಿಂಗಳ ಕಬ್ಬಿನ ಜೊತೆಗೆ 9-10 ತಿಂಗಳ ಕಬ್ಬೂ ಕಾರಖಾನೆಗೆ ಹೋಗಲಾರಂಭಿಸಿತು. ಪಕ್ವಗೊಳ್ಳದ ಕಬ್ಬಿನಿಂದ ಸಿಗುವ ಸಕ್ಕರೆ ಪ್ರಮಾಣವೂ ಸ್ವಲ್ಪ ಕಡಿಮೆ ಆಗಿದ್ದಿರಬಹುದು. ಇದು ಕಾರಖಾನೆಯವರಿಂದ ಆಗಿರುವ ಲೋಪ.

2013-14 ರಲ್ಲಿ ಸಕ್ಕರೆ ಇಳುವರಿ ಶೇ. 10 ರಷ್ಟು ದಾಖಲಾಗಿತ್ತು. ಅದಕ್ಕೂ ಹಿಂದಿನ ವರ್ಷಗಳಲ್ಲಿ  ಶೇ. 10 ರಿಂದ 11 ರಷ್ಟಿತ್ತು. 2002 ರಿಂದ 2010 ರೊಳಗಿನ ಅವಧಿಯಲ್ಲಿ  ನಾಲ್ಕು ಬಾರಿ ಶೇ. 11 ಕ್ಕಿಂತ ಅಧಿಕ ಸಕ್ಕರೆ ಇಳುವರಿ ಇದ್ದಿದ್ದಕ್ಕೆ ದಾಖಲೆಗಳಿವೆ. ಶೇ. 11.51 ರಷ್ಟು ಸಕ್ಕರೆ ಇಳುವರಿ ದಾಖಲಾಗಿದ್ದನ್ನೂ ಕಾಣಬಹುದು.

ಆದರೆ, 2014-15 ನೇ ಸಾಲಿನಿಂದ ಸಕ್ಕರೆ ಇಳುವರಿ ಕುಸಿತ ಶುರುವಾಗಿತ್ತು. ಆರಂಭದಲ್ಲಿ 10 ರ ಆಸುಪಾಸಿನಲ್ಲಿ ಇದ್ದಿದ್ದು, ವರ್ಷ ಕಳೆದಂತೆ ಕಡಿಮೆಯಾಗಲಾರಂಭಿಸಿತು. ಶೇ. 9 ಅಥವಾ 9.5 ರಷ್ಟು ಇರುವುದು ಸಾಮಾನ್ಯವಾಯಿತು. ಆದರೆ, ಈ ಕುಸಿತದ ಹಿಂದಿರುವ ಕಾರಣಗಳನ್ನು ಗುರುತಿಸುವ ಕಾರ್ಯ ನಡೆಯಲಿಲ್ಲ. ಕುಸಿತ ಆರಂಭವಾದಾಗ  ರೈತರು ಸಕ್ಕರೆ ಕಾರಖಾನೆಗಳ ವಿರುದ್ಧ ಆರೋಪ ಮಾಡುವುದು ಸಾಮಾನ್ಯವಾಗಿದ್ದು ನಿಜ.

ಮಣ್ಣು, ನೀರು, ಹಮಾವಾನ, ತಳಿ ಬದಲಾವಣೆ ಆಗದಿದ್ದಾಗ ಸಕ್ಕರೆ ಇಳುವರಿ ಯಾಕೆ ಕುಸಿಯುತ್ತಿದೆ ಎಂಬ ರೈತರ ಪ್ರಶ್ನೆಗೆ ಯಾರೂ ಸಮಾಧಾನದ ಉತ್ತರ ಕೊಡಲಿಲ್ಲ. ಕಡಿಮೆ ರಿಕವರಿ ತೋರಿಸುವುದರ ಜೊತೆಗ ತೂಕದಲ್ಲೂ ಮೋಸ ಮಾಡುವ ಆರೋಪವನ್ನು ಕಾರಖಾನೆಗಳು ಹೊತ್ತುಕೊಳ್ಳಬೇಕಾಯಿತು.  ಸಕ್ಕರೆ ಇಳುವರಿ ಮತ್ತು ತೂಕದಲ್ಲಿನ ಮೋಸದ ಆರೋಪ ಹೆಚ್ಚಿದಾಗ ಸರಕಾರಿ ಸಂಸ್ಥೆಯೊಂದರಿಂದ ತಪಾಸಣೆಯೂ ನಡೆಯಿತು. ಈ ತಪಾಸಣೆಯ ಬಗ್ಗೆಯೂ ರೈತರು ಅನುಮಾನ ವ್ಯಕ್ತಪಡಿಸಿದ್ದುಂಟು.

ಬೀದರ್ ಜಿಲ್ಲೆಯಲ್ಲಿ ತೆರೆದ ಬಾವಿ ಮತ್ತು ಕೊಳವೆಬಾವಿಗಳೇ ನೀರಾವರಿಗೆ ಮುಖ್ಯ ಆಧಾರವಾಗಿವೆ. ಒಂದು ಅಂದಾಜಿನಂತೆ ಶೇ. 60 ರಿಂದ 70 ರಷ್ಟು ಪ್ರದೇಶವು ನೀರುಣ್ಣುವುದು ಬಾವಿ ಮತ್ತು ಬೋರ್‍ವೆಲ್‍ಗಳಿಂದ. ನದಿ ಅಥವಾ ಜಲಾಶಯದಲ್ಲಿ ಸಂಗ್ರಹವಾಗುವ ನೀರಿಗೆ ಹೋಲಿಸಿದ್ದಲ್ಲಿ ಬಾವಿ ನೀರಿನಲ್ಲಿ ಲವಣಾಂಶ ಅಧಿಕ. ಇದಲ್ಲದೆ, ಇಲ್ಲಿನ ಮಣ್ಣು ಮತ್ತು ಹವಾಮಾನವೂ ಕಬ್ಬು ಬೆಳೆಗೆ ಸೂಕ್ತವಾಗಿದೆ. ಇಲ್ಲಿ ಅಧಿಕ ಸಕ್ಕರೆ ಇಳುವರಿ ದೊರೆಯುವುದು ಸಹಜ. ಇದಕ್ಕೆ ಹಿಂದಿನ ವರ್ಷಗಳ ಅಂಕಿಅಂಶಗಳೇ ಸಾಕ್ಷಿಯಾಗಿವೆ. ಈಗ ದಿಢೀರನೇ ಸಕ್ಕರೆ ಪ್ರಮಾಣ ಕಡಿಮೆ ತೋರಿಸಿದರೆ ಅಪನಂಬಿಕೆ ಸಹಜ. ಕಾರಖಾನೆಗಳಲ್ಲಿರುವ ಆಡಳಿತ ವ್ಯವಸ್ಥೆಯನ್ನು ಅಪನಂಬಿಕೆ, ಅನುಮಾನದಿಂದ ನೋಡುವಂತಹ ಸ್ಥಿತಿ ಬೆಳೆದಿರುವುದು ನಿಜ ಎನ್ನುತ್ತಾರೆ, ರೈತ ನಾಯಕ ಸೂರ್ಯಕಾಂತ ಪಾಟೀಲ್ ಡಾಕುಳಗಿ.

ಕಳೆದ ಸಾಲಿನ (2024-25) ಹಂಗಾಮಿನಲ್ಲಿ ಜಿಲ್ಲೆಯ ಕಾರಖಾನೆಗಳ ಸಕ್ಕರೆ ಇಳುವರಿ ಪ್ರಮಾಣ ಏಕರೂಪದಲ್ಲಿ ದಾಖಲಾಗಿಲ್ಲ. ಖಾಸಗಿ ಕ್ಷೇತ್ರದ ಬೀದರ್ ಕಿಸಾನ್ ಸಕ್ಕರೆ ಕಾರಖಾನೆಯ ಸಕ್ಕರೆ ಇಳುವರಿ ಶೇ. 10 ಕ್ಕಿಂತ ಅಧಿಕ ದಾಖಲಾಗಿದೆ. ಸಹಕಾರಿ ಕ್ಷೇತ್ರದ ನಾರಂಜಾ ಮತ್ತು ಮಹಾತ್ಮಾಗಾಂಧಿ ಕಾರಖಾನೆಯ ಸಕ್ಕರೆ ರಿಕವರಿ ಪ್ರಮಾಣ ಶೇ. 10 ಕ್ಕಿಂತ ಕಡಿಮೆ ಇದೆ. ಎದ್ದುಕಾಣವುಂತಹ ಈ ವ್ಯತ್ಯಾಸದ ಬಗ್ಗೆ ಸಕ್ಕರೆ ಕಾರಖಾನೆಗಳೇ ವಿವರಣೆ ಕೊಡಬೇಕು ಎನ್ನುವುದು ರೈತರ ಒತ್ತಾಸೆ.

Share This Article

You cannot copy content of this page