
ಕನ್ನಡ ಬಿಂಬ, ಬೀದರ್
ಸೂರ್ಯನಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ. ಈಗ ಸೂರ್ಯ ಪ್ರಕಾಶಿಸುವ ಸಮಯ. ಇನ್ನು ಮುಂದೆ ಬರೀ ಬೆಳಕು, ಎಲ್ಲೂ ಕತ್ತಲೆ ಇರಲ್ಲ.. ಹೀಗೆ ಹೇಳಿದವರು ಬಸವಮುಕ್ತಿ ಮಂದಿರದ ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿ.
ಬೀದರ್ ತಾಲೂಕಿನ ಜನವಾಡಾ ಬಳಿ ಇರುವ ನಾರಂಜ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ನಡೆದ ಈ ಸಾಲಿನ ಕ್ರಷಿಂಗ್ ಚಾಲನೆ ಮತ್ತು ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಜನ್ಮದಿನ ಸಮಾರಂಭದಲ್ಲಿ ಆಶಿರ್ವಚನ ನೀಡಿದ ಪೂಜ್ಯರು, ಸೂರ್ಯಕಾಂತ ನಾಗಮಾರಪಳ್ಳಿ ಅವರು ನಾರಂಜಾ ಸಹಕಾರ ಸಕ್ಕರೆ ಕಾರಖಾನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು ಮೇಲಿನಂತೆ ವಿಶ್ಲೇಷಣೆ ಮಾಡಿದರು.
ಸೂರ್ಯಕಾಂತ ನಾಗಮಾರಪಳ್ಳಿ ಅವರು ಈ ಹಿಂದೆ ಸ್ಪರ್ಧಿಸಿದ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದ್ದರು. ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಚುನಾವಣೆಯಲ್ಲಿ ಗೆದ್ದಿದ್ದಲ್ಲದೆ, ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಇದು ಅವರ ಮೊದಲ ಚುನಾವಣಾ ಗೆಲುವು ಆಗಿತ್ತು. ಹಿಂದಿನ ಸೋಲುಗಳನ್ನು ಗ್ರಹಣಕ್ಕೆ ಹೋಲಿಸಿದ ಶಿವಯೋಗೀಶ್ವರ ಶ್ರೀಗಳು, ನಾರಂಜಾ ಗೆಲುವನ್ನು ಗ್ರಹಣ ಬಿಟ್ಟಿದ್ದರ ಸಂಕೇತ ಎಂದು ಹೇಳಿದರು. ಪೂಜ್ಯರು ಗ್ರಹಣ ಮುಕ್ತಿಯ ವಿಷಯ ಪ್ರಸ್ತಾಪಿಸುತ್ತಲ್ಲೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ಕಾರ್ಯಕರ್ತರು, ರೈತರು ಹರ್ಷೋದ್ಘಾರ ಮಾಡಿ ಸಂಭ್ರಮಿಸಿದರು.
ಸೂರ್ಯ ಬೆಳಕಿನ ಸಂಕೇತ. ಸೂರ್ಯ ಇರುವಲ್ಲಿ ಬರೀ ಬೆಳಕು. ಅಲ್ಲಿ ಕತ್ತಲೆ ಇರುವುದಿಲ್ಲ. ಸೂರ್ಯಕಾಂತ ನಾಗಮಾರಪಳ್ಳಿ ಅವರ ಮುಂದಿನ ಜೀವನವೂ ಬೆಳಕಿನಿಂದ ತುಂಬಿರಲಿದೆ ಎಂದು ಪೂಜ್ಯರು ಹೇಳಿದರು.
ನಾನು ಬೇರೆ ಬೇರೆ ಕಾರಖಾನೆಗಳ ಕ್ರಷಿಂಗ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲ ಕಡೆ ಒಬ್ಬರೇ ಇದ್ದರು. ಇಲ್ಲಿ ಮಾತ್ರ ಇಬ್ಬರು ಇದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಉಮಾಕಾಂತ ನಾಗಮಾರಪಳ್ಳಿ ಅವರ ಬೆಂಬಲ, ಮಾರ್ಗದರ್ಶನ ಇದೆ. ಕಿರಿಯ ಸಹೋದರನ ಏಳಿಗೆ ಬಯಸುವ ಉಮಾಕಾಂತ ನಾಗಮಾರಪಳ್ಳಿ ಅವರ ವ್ಯಕ್ತಿತ್ವ ಅದ್ಭುತವಾಗಿದೆ. ಅವರೊಬ್ಬ ತ್ಯಾಗಜೀವಿ ಎಂದು ಪೂಜ್ಯರು ಶ್ಲಾಘಿಸಿದರು. ಈ ಸಹೋದರರ ಜೋಡಿಯ ಶ್ರಮದಿಂದಾಗಿ ಸುಖ, ಸಮೃದ್ದಿ ನೆಲೆಗೊಳ್ಳಲಿ ಎಂದು ಪೂಜ್ಯರು ಹಾರೈಸಿದರು.
ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ದಯಾವಂತ, ದಾನವಂತ, ಹೃದಯವಂತ ನಾಯಕರಾಗಿದ್ದರು. ಅವರ ಪುತ್ರರಾದ ಉಮಾಕಾಂತ ನಾಗಮಾರಪಳ್ಳಿ ಮತ್ತು ಸೂರ್ಯಕಾಂತ ನಾಗಮಾರಪಳ್ಳಿ ಅವರು ಭಾಗ್ಯವಂತ ಪುತ್ರರಾಗಿದ್ದಾರೆ. ಭಾಗ್ಯವಂತರಲ್ಲಿ ವಿದ್ಯೆ, ಸಾಹಸ ಹೀಗೆ ಎಲ್ಲ ಗುಣಗಳಿರುತ್ತವೆ ಎಂದು ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಕಾರ್ಯಕರ್ತರ ಏಳಿಗೆ, ಶ್ರೇಯಸ್ಸು ಬಯಸಿದ ನಿಜವಾದ ನಾಯಕ ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರು.
ನಾಗಮಾರಪಳ್ಳಿಯವರ ಬೆಂಬಲಿಗರು ಹೊಲ, ಮನೆ ಮಾರಿಕೊಂಡವರಲ್ಲ. ಕಾರ್ಯಕರ್ತರು, ಬೆಂಬಲಿಗರ ಬದುಕಿನಲ್ಲಿ ನೆಮ್ಮದಿ ನೆಲೆಗೊಳ್ಳುವಂತೆ ಮಾಡುವ ದೊಡ್ಡ ಗುಣ ಗುರುಪಾದಪ್ಪ ನಾಗಮಾರಪಳ್ಳಿ ಅವರಲ್ಲಿತ್ತು. ಈ ಹಿನ್ನೆಲೆಯಲ್ಲಿಯೇ ಈಗಲೂ ಅಸಂಖ್ಯಾತ ಕಾರ್ಯಕರ್ತರು, ಬೆಂಬಲಿಗರು ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಸ್ಮರಿಸುತ್ತಾರೆ. ಇದು ಎಲ್ಲ ನಾಯಕರಿಗೆ ಸಿಗುವ ಭಾಗ್ಯ ಅಲ್ಲ ಎಂದು ಪೂಜ್ಯರು ಹೇಳಿದರು.
ಕಷ್ಟ ಹೇಳಿಕೊಂಡ ಬಂದವರತ್ತ ಸಹಾಯಹಸ್ತ ಚಾಚಿದವರು ದಿ. ನಾಗಮಾರಪಳ್ಳಿಯವರು. ಕಷ್ಟ ಹೇಳಿಕೊಂಡು ಬಂದವರಾರೂ ಬರಿಗೈಯಲ್ಲಿ ಮರಳುತ್ತಿರಲಿಲ್ಲ. ಗುರುಪಾದಪ್ಪ ನಾಗಮಾರಪಳ್ಳಿಯವರದು ಇನ್ನೊಬ್ಬರ ಕಷ್ಟಕ್ಕೆ ಮರಗುವ ಹೃದಯವಾಗಿತ್ತು. ಅವರೊಬ್ಬ ಹೃದಯವಂತ ನಾಯಕರಾಗಿದ್ದರು ಎಂದು ಪೂಜ್ಯರು ಶ್ಲಾಘಿಸಿದರು.
ಸಮಾರಂಭದಲ್ಲಿ ನಾರಂಜಾ ಕಾರಖಾನೆಯ ಈ ಸಾಲಿನ ಹಂಗಾಮಿನ ಕ್ರಷಿಂಗ್‍ಗೆ ಚಾಲನೆ ನೀಡಲಾಯಿತು. ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನವನ್ನು ವೈಭವಪೂರ್ಣವಾಗಿ ಆಚರಿಸಲಾಯಿತು. ಹುಲಸೂರಿನ ಶಿವಾನಂದ ಸ್ವಾಮೀಜಿ, ತಡೋಳಾದ ರಾಜೇಶ್ವರ ಶಿವಾಚಾರ್ಯರು, ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯ, ಬರ್ದಿಪುರದ ಅವಧೂತಗಿರಿ ಮಹಾರಾಜ, ಚಾಂಬೋಳದ ರುದ್ರಮುನಿ ಶಿವಾಚಾರ್ಯರು, ಕಾರಖಾನೆಯ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ, ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಕಾರಖಾನೆಯ ಎಲ್ಲ ನಿರ್ದೇಶಕರು, ಗಣ್ಯರು ಉಪಸ್ಥಿತರಿದ್ದರು.


