
ಕನ್ನಡ ಬಿಂಬ, ಬೀದರ್
ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿರುವ ಭಾಸನ್ ಎಂಟರ್‍ಪ್ರೈಸೆಸ್ ಹೆಸರಿನ ಸಿರಿಧಾನ್ಯ ಗಂಜಿ ಪೌಡರ್ ತಯಾರಿಕೆ ಕಾರ್ಖಾನೆಗೆ ವಿವಿಧ ದೇಶಗಳ ಪ್ರತಿನಿಧಿಗಳ ತಂಡ ಈಚೆಗೆ ಭೇಟಿ ನೀಡಿದೆ. ಭಾಸನ್ ಎಂಟರ್‍ಪ್ರೈಸೆಸ್ ಸಿರಿಧಾನ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಅತ್ಯಧಿಕ ಪೌಷ್ಠಿಕಾಂಶವುಳ್ಳ ಈ ಧಾನ್ಯಗಳ ಬಳಕೆ ಹೆಚ್ಚಿಸಲು ಶ್ರಮಿಸುತ್ತಿದೆ. ಸಿರಿಧಾನ್ಯಗಳಿಂದ ಹಲವು ಉತ್ಪನ್ನಗಳನ್ನು ತಯ್ಯಾರಿಸಿ ಗಮನ ಸೆಳೆದಿದೆ. ಇದೀಗ ಈ ಘಟಕದ ಖ್ಯಾತಿಯು ವಿದೇಶಗಳಿಗೂ ತಲುಪಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೆದರ್‍ಲ್ಯಾಂಡ್, ಬ್ರೆಜಿಲ್, ಜರ್ಮನಿ, ಜಪಾನ್, ಜಿಂಬಾವ್ವೆ, ರೋಮೆನಿಯಾ, ಯುಎಸ್‍ಎ, ಚಿಲಿ ದೇಶದ ಸಂಶೋಧಕರು, ವ್ಯಾಪಾರಸ್ಥರು, ರಫ್ತುದಾರರು ಹಾಗೂ ಖರೀದಿದಾರರು ಇದ್ದ ಈ ತಂಡದ ಸದಸ್ಯರು ಸಿರಿಧಾನ್ಯ ಗಂಜಿ ಪೌಡರ ತಯಾರಿಕೆ ವಿಧಾನ, ಬಳಕೆಯಿಂದ ಆರೋಗ್ಯಕ್ಕೆ ಆಗುವ ಲಾಭ ಇತ್ಯಾದಿಗಳ ಕುರಿತು ಕಾರ್ಖಾನೆಯ ಮುಖ್ಯಸ್ಥರಾದ ಶಶಿಧರ ಭಾಸನ್ ಹಾಗೂ ಸಂಜೀವಕುಮಾರ ಭಾಸನ್ ಅವರಿಂದ ಮಾಹಿತಿ ಪಡೆದರು.
ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಮನೆಯಲ್ಲಿ ಸಿರಿಧಾನ್ಯ ಗಂಜಿ ಸಿದ್ಧಪಡಿಸಿ ಬಳಸುತ್ತಿದ್ದೇವು. ಇತರರಿಗೆ ಪರಿಚಯಿಸಿದೇವು. ಎಲ್ಲರಿಂದ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ನೆರವಿನಿಂದ ಸಿರಿಧಾನ್ಯದ ಗಂಜಿ ಪೌಡರ್ ತಯಾರಿಕೆ ಘಟಕ ಆರಂಭಿಸಿದವು. ನಮ್ಮ ಸಿರಿಧಾನ್ಯ ಗಂಜಿ ಪೌಡರ್ ಇದೀಗ ‘ರುಚಿತ್ ಬಿ’ ಹೆಸರಲ್ಲಿ ಆರೋಗ್ಯ ವರ್ಧನೆ ಪೇಯವಾಗಿ ಪ್ರಸಿದ್ಧಿ ಪಡೆದಿದೆ ಎಂದು ಎಂಜಿನಿಯರಿಂಗ್ ಪದವೀಧರರಾದ ಶಶಿಧರ ಭಾಸನ್ ಹಾಗೂ ಸಂಜೀವಕುಮಾರ ಭಾಸನ್ ತಿಳಿಸಿದರು.
ಮೊದಲು ನಾವು ಎಂಜಿನಿಯರ್ ವೃತ್ತಿಯಲ್ಲಿದ್ದೇವು. ಸಿರಿಧಾನ್ಯ ಗಂಜಿ ಪೌಡರ್‍ನಿಂದಾಗಿ ಉದ್ಯಮಿಗಳಾಗಲು ಸಾಧ್ಯವಾಯಿತು. ಈಗ 15 ಜನರ ಉದ್ಯೋಗ ನೀಡಿದ ಸಂತೃಪ್ತಿ ಇದೆ. ಯುವಕರು ಉದ್ಯಮ ಆರಂಭಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬೀದರ್‍ನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಿರಿಧಾನ್ಯದ ಉತ್ಪನ್ನಗಳ ಕುರಿತು ವಿವರಿಸಿದರು.


