`ಉತ್ತಮ್ ಖೇತಿ ಮಧ್ಯಮ್ ಬೇಪಾರ್, ಕನಿಷ್ಠ ಚಾಕರಿ’ ಅಂದರೆ, ಬೇಸಾಯ ಶ್ರೇಷ್ಠ, ವ್ಯಾಪಾರ ಮಧ್ಯಮ ಮತ್ತು ನೌಕರಿ ಕನಿಷ್ಠ ಎಂದು ಹಿರಿಯರು ಹೇಳಿದ್ದಾರೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂದು ಸರ್ವಜ್ಞ ಸಾರಿದ್ದಾನೆ. ಬೆಳಗಾಗಿ ನಾನೆದ್ದು ಯಾರ್ಯಾರ್ನ ನೆನೆಯಲಿ ಎಳ್ಳು ಜೀರಿಗೆ ಬೆಳೆವಂಥ ಭೂಮಿತಾಯಿನ ಎದ್ದೊಂದು ಗಳಿಗಿ ನೆನೆದೇನ ಎಂದು ಜನಪದರು ಹಾಡಿ ಹೊಗಳಿದ್ದಾರೆ.
ಹೀಗೆ ವಿಶ್ವದ ಉಗಮದೊಂದಿಗೆ ಶ್ರೇಷ್ಠತ್ವ ಪಡೆದುಕೊಂಡಿದ್ದ ಬೇಸಾಯ ಈಗ ಕನಿಷ್ಠ ಸ್ಥಾನಕ್ಕೆ ತಳ್ಳತ್ಪಟ್ಟಿದೆ. ಶ್ರೇಷ್ಠ ಕಾಯಕವಾಗಿದ್ದ, ಜೀವನ ವಿಧಾನವೇ ಆಗಿದ್ದ ಬೇಸಾಯವನ್ನು ಗೌರವದಿಂದ ಕಾಣುವ ಕಾಲ ಮರೆಯಾಗಿದೆ. ಬೇರೇನೂ ಮಾಡಲು ಬಾರದಾತ ಮಾಡುವ ವøತ್ತಿಯನ್ನಾಗಿ ಬೇಸಾಯವನ್ನು ಪರಿಗಣಿಸುವ ಕೆಟ್ಟ ಕಾಲಘಟ್ಟವಿದು. ಇಂತಹ ಸಂಕಟದ ಸಮಯದಲ್ಲಿ ಯುವಕರನ್ನು ಬೇಸಾಯದಲ್ಲಿ ಉಳಿಸಿಕೊಳ್ಳುವ ದಿಸೆಯಲ್ಲಿ ಚಿಂತನೆ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕಾಗಿದೆ.
ಯುವಕರನ್ನು ಬೇಸಾಯದಲ್ಲಿ ಉಳಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚಿಸುವ ಮೊದಲು, ಬೇಸಾಯದಲ್ಲಿನ ತಲ್ಲಣಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಹಸಿರು ಕ್ರಾಂತಿಯ ನಂತರ ಬೇಸಾಯ ಬದಲಾಗಿದೆ. ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿರಬಹುದು. ಆದರೆ, ಅನ್ನ ಕೊಡುವ ರೈತ ಮಾತ್ರ ಪೂರ್ತಿ ಪರಾವಲಂಬಿಯಾಗಿದ್ದಾನೆ. ರೈತರ ಬಳಿ ಈಗ ಎತ್ತುಗಳಿಲ್ಲ. ಬಂಡಿ ಇಲ್ಲ. ಬೀಜ ಇಲ್ಲ. ತಿಪ್ಪೆಗಳೂ ಉಳಿದಿಲ್ಲ. ಬಿತ್ತನೆಯಿಂದ ಸಾಗುವಳಿವರೆಗಿನ ಎಲ್ಲ ಕೆಲಸ ಕಾರ್ಯಗಳಿಗಾಗಿ ಆತ ಮತ್ತೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.
ಹಿಂದೆ ಸಾಂಪ್ರದಾಯಿಕ ಬೀಜಗಳಿದ್ದವು. ಕೊಟ್ಟಿಗೆಯಲ್ಲಿ ಗಂಟೆಗಳ ನಿನಾದ ತುಂಬಿಕೊಂಡಿರುತಿತ್ತು. ಬೆಳಗಾಗುತ್ತಿದ್ದಂತೆಯೇ ಅಂಬಾ ಎಂಬ ಇಂಪಾದ ಧ್ವನಿ ಕಿವಿಯೊಳಗಿಂದ ಹøದಯವನ್ನು ತಟ್ಟುತಿತ್ತು. ಒಂದು ಭಾಗದಲ್ಲಿ ಅಡಕಿಲ. ಮತ್ತೊಂದು ಕಡೆ ಮೆತ್ತಿಗೆ ಹಾಕಿಟ್ಟ ಬಿತ್ತನೆ ಬೀಜ. ಅಂಗಳದಲ್ಲಿ ಬಂಡಿ, ನೇಗಿಲು, ಕೂರಿಗೆ. ಮನೆಯ ಹೊರಗೆ ತಿಪ್ಪೆ. ಹೀಗೆ ಬಿತ್ತನೆಯಿಂದ ರಾಶಿ ಮಾಡುವವರೆಗೆ ಬೇಕಾದ ಎಲ್ಲ ಸಾಧನ ಸಾಮಗ್ರಿಗಳು ರೈತನ ಮನೆಯಲ್ಲಿ ಇರುತ್ತಿದ್ದವು.
ಈಗ ಎಲ್ಲವೂ ಬದಲಾಗಿದೆ. ಬರೀ ಒಂದಿಷ್ಟು ಬದಲಾವಣೆ ಮಾತ್ರ ಆಗಿದೆ ಎಂದುಕೊಂಡು ಸುಮ್ಮನಿರುವಷ್ಟು ಒಳ್ಳೆಯ ಪರಿಸ್ಥಿತಿ ಈಗ ಇಲ್ಲ. ನಾಡ ಜನ ಬದುಕಲಿ ಎಂದು ಅನ್ನ ಕೊಡುವ ರೈತ, ತಾನು ಮಾತ್ರ ಬದುಕಿನ ಬದಲು ಸಾವನ್ನು ಆಯ್ದುಕೊಳ್ಳುವಂತಹ ಸಂಕಟದ ಸ್ಥಿತಿ ಈಗಿದೆ.
ಈ ಹೊತ್ತಿನ ಬಹು ಗಂಭೀರವಾದ ಪ್ರಶ್ನೆ ಎಂದರೆ, ಯುವಕರನ್ನು ಬೇಸಾಯದಲ್ಲಿ ಉಳಿಸಿಕೊಳ್ಳುವುದು ಹೇಗೆ ಎನ್ನುವುದು. ಇದೇನು ಉತ್ತರ ರಹಿತ ಪ್ರಶ್ನೆಯಲ್ಲ. ಉತ್ತರಗಳಿವೆ. ಮಾರ್ಗೋಪಾಯಗಳೂ ಇವೆ.
ಈ ಹೊತ್ತಿನಲ್ಲಿ ಎಲ್ಲರಿಗೂ ಮುಖ್ಯವಾಗಿರುವುದು ಬದುಕು. ತಲ್ಲಣಗಳ ಈ ಸಮಯದಲ್ಲಿ ಪ್ರತಿಯೊಬ್ಬರು ಭದ್ರತೆ ಬಯಸುವದು ಸಾಮಾನ್ಯವಾಗಿದೆ. ಅದರಲ್ಲೂ ಯುವಕರು, ಸವಾಲುಗಳನ್ನು ಎದುರಿಸುವ ಮನಸ್ಥಿತಿಯಲ್ಲಿ ಇಲ್ಲ. ಗಳಿಕೆ ಎಷ್ಟೇ ಆಗಿದ್ದರೂ ಬದುಕಿಗೆ ಭದ್ರತೆ ಬೇಕು ಎಂಬ ಮನೋಸ್ಥಿತಿ ಯುವಕರಲ್ಲಿ ಸಾಮಾನ್ಯವಾಗಿದೆ. ಹೀಗಾಗಿಯೇ ಉತ್ತಮ ಮತ್ತು ಸಾರ್ವಕಾಲಿಕ ಶ್ರೇಷ್ಠತ್ವ ಹೊಂದಿರುವ ನಂತರವೂ ಯುವಕರು ಒಕ್ಕಲುತನದತ್ತ ಕಣ್ಣೆತ್ತಿ ನೋಡುತ್ತಿಲ್ಲ.
ಹಾಗಾದರೆ, ಯುವಕರನ್ನು ಬೇಸಾಯದಲ್ಲಿ ಆಕರ್ಷಿಸಲು, ಬೇಸಾಯದಲ್ಲಿ ಉಳಿಸಿಕೊಳ್ಳಲು ಏನು ಮಾಡಬೇಕು ?.
ಈ ಹೊತ್ತಿನಲ್ಲಿ ತೀವ್ರವಾಗಿ ಕಾಡುತ್ತಿರುವ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನಾವು ಒಂದಿಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಬೇಸಾಯ ಎಲ್ಲ ರೀತಿಯಿಂದ ಸ್ವಾವಲಂಬಿಯಾಗಿದ್ದ ದಿನಗಳನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಈ ನೆನಪುಗಳನ್ನು ಆಧಾರವಾಗಿಟ್ಟುಕೊಂಡು ಹೊಸದಾಗಿ ಬೇಸಾಯವನ್ನು ಕಟ್ಟಿಕೊಳ್ಳಲು ಮುಂದಾಗಬೇಕಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೇ, ಬೇಸಾಯದಲ್ಲಿನ ಪರಾವಲಂಬನೆಯನ್ನು ನಿವಾರಿಸಿ, ಸ್ವಾವಲಂಬನೆ ಸಾಧಿಸಬೇಕಾಗಿದೆ.
ಸದ್ಯ ಕಾಡುತ್ತಿರುವ ಮತ್ತೊಂದು ಮಹತ್ವದ ಪ್ರಶ್ನೆ ಎಂದರೆ, ಒಕ್ಕಲುತನ ಕೈಗೊಂಡು ಹೊಟ್ಟೆ ತುಂಬ ಉಣ್ಣಬಹುದೇ ಎನ್ನುವುದು. ಭತ್ತ ಬಿತ್ತಿದರೂ ಬೋನ ಸಿಗೊಲ್ಲ, ಹತ್ತಿ ಬೆಳೆದರೂ ಬಟ್ಟೆ ಸಿಗೊಲ್ಲ ಎಂಬ ಆತಂಕ ಯುವಕರನ್ನು ಕಾಡತೊಡಗಿದೆ. ಈ ಆತಂಕವನ್ನು ಹೆಚ್ಚಿಸುವ ರೀತಿಯಲ್ಲಿ ರೈತರ ಆತ್ಮಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಬದುಕಿನ ಬದಲು ಸಾವನ್ನು ಆಯ್ದುಕೊಳ್ಳುವಂತಹ ಕಷ್ಟಕರ ಸ್ಥಿತಿ ಕøಷಿಯಲ್ಲಿದೆ ಎಂಬ ಆತಂಕದ ಭಾವನೆ ಯುವಕರಲ್ಲಿದೆ.
ಖರ್ಚಿಲ್ಲದ ಕøಷಿ ಕೈಗೊಂಡು ಅಮøತ ಸಮಾನ ಆಹಾರ ಬೆಳೆಯುತ್ತಿರುವ ರೈತರನ್ನು ಯುವಕರಿಗೆ ಪರಿಚಯ ಮಾಡಿಕೊಡಬೇಕಾಗಿದೆ. ಇದರ ಜೊತೆಗೆ ಮಾರುಕಟ್ಟೆ ಭದ್ರತೆ, ಬೆಲೆ ಸ್ಥಿರತೆ, ಸಾಗುವಳಿ ವೆಚ್ಚ ತಗ್ಗಿಸುವ ಮಾರ್ಗೋಪಾಯಗಳ ಕುರಿತು ಮನವರಿಕೆ ಮಾಡಿಕೊಡಬೇಕಾಗಿದೆ. ಬೇಸಾಯ ಕೈಗೊಂಡೂ ನೆಮ್ಮದಿಯ ಜೀವನ ನಡೆಸಬಹುದು ಎನ್ನುವುದನ್ನು ಉತ್ತಮ ಮಾದರಿಗಳೊಂದಿಗೆ ಯುವಕರ ಮುಂದೆ ಇಡಬೇಕಾಗಿದೆ.
ಬೇಸಾಯವನ್ನು ಹತ್ತಾರು ಬಗೆಯ ಸಮಸ್ಯೆಗಳು ಕಾಡುತ್ತಿವೆ ಎನ್ನುವುದು ವಾಸ್ತವ. ಇವು ನಾವೇ ಸøಷ್ಟಿಸಿಕೊಂಡ ಸಮಸ್ಯೆಗಳು. ಪರಿಹಾರವನ್ನು ಕಂಡುಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ನಾಡಿನ ನಾನಾ ಭಾಗಗಳಲ್ಲಿ ಸುಸ್ಥಿರ ಬೇಸಾಯ ಕೈಗೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ, ಎಲ್ಲರಿಗೂ, ಎಲ್ಲ ಕಾಲಕ್ಕೂ ಮಾದರಿಯಾಗಬಹುದಾದ ರೈತರು ಇದ್ದಾರೆ. ಈ ರೈತರ ಬದುಕನ್ನು ಯುವಕರಿಗೆ ಪರಿಚಯ ಮಾಡಿಕೊಡಬೇಕಾಗಿದೆ.
ಬೇಸಾಯದಲ್ಲಿ ಮಳೆ, ರೋಗರುಜಿನಗಳ ಕಾಟ ಇದ್ದಿದ್ದೆ. ಮಳೆ ನಮ್ಮ ಕೈಯಲ್ಲಿ ಇಲ್ಲ. ಆದರೆ, ಮಳೆಯಿಂದ ಆಗುವ ಹಾನಿಯ ಪ್ರಮಾಣವನ್ನು ತಗ್ಗಿಸಲು ಯತ್ನಿಸಬಹುದಾಗಿದೆ. ರೋಗರುಜಿನಗಳ ಕಾಟದಿಂದ ಬೆಳೆಯನ್ನು ರಕ್ಷಿಸಬಹುದು. ಆದರೆ, ಈ ರಕ್ಷಣೆಯ ಮಾರ್ಗ ಮಾತ್ರ ನಿಸರ್ಗಕ್ಕೆ ಹತ್ತಿರವಾಗಿರಬೇಕಾಗುತ್ತದೆ. ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ದೂರ ಇದ್ದುಕೊಂಡೇ ಇದನ್ನು ಸಾಧಿಸಬೇಕಾಗುತ್ತದೆ.
ಬೇಸಾಯದಲ್ಲಿ ಲಾಭ ಎಲ್ಲಿದೆ ಎನ್ನುವುದು ಬಹಳಷ್ಟು ಯುವಕರ ಪ್ರಶ್ನೆ. ಇದಕ್ಕೆ ಅವರು ಕೊಡುವ ಕಾರಣ ಕøಷಿ ಉತ್ಪನ್ನಗಳ ಬೆಲೆಯಲ್ಲಿನ ಅಸ್ಥಿರತೆ. ನಿಜ. ಬಿತ್ತನೆ ಮಾಡಿದಾಗ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಆಕಾಶದಲ್ಲಿರುತ್ತದೆ. ರಾಶಿ ಮುಗಿಯುವ ಹೊತ್ತಿನಲ್ಲಿ ಪಾತಾಳ ತಲುಪುತ್ತದೆ. ವರ್ಷಪೂರ್ತಿ ದುಡಿಯುವ ರೈತನ ಬೆವರಿಗೆ ನ್ಯಾಯಸಮ್ಮತ, ಲಾಭದಾಯಕ ಬೆಲೆ ಸಿಗುವುದೇ ಇಲ್ಲ.
ಕøಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಬೇಕು ಎನ್ನುವುದು ತುಂಬಾ ಹಳೆಯ ಬೇಡಿಕೆ. ಇದನ್ನು ಈಡೇರಿಸಿಕೊಳ್ಳುವುದು ರೈತರ ಕೈಯಲ್ಲಿ ಇಲ್ಲ. ಈಡೇರಿಸುವ ಶಕ್ತಿ ಹೊಂದಿರುವ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಬೆಲೆಯ ಬೇಡಿಕೆಯನ್ನು ಪಕ್ಕಕ್ಕಿಟ್ಟು, ಸಾಗುವಳಿ ಖರ್ಚನ್ನು ತಗ್ಗಿಸುವ ಕೆಲಸ ಆಗಬೇಕು. ಖರ್ಚು ಕಡಿಮೆಯಾದರೆ, ಲಾಭದ ಪ್ರಮಾಣ ತಾನಾಗಿ ಹೆಚ್ಚುತ್ತದೆ. ನೈಸರ್ಗಿಕ, ಸಾವಯವ ಬೇಸಾಯ ಕೈಗೊಂಡು ಖರ್ಚಿಲ್ಲದೆ ಕøಷಿ ಕೈಗೊಂಡು ಮಾದರಿಯಾಗಿರುವ ರೈತರು ನಮ್ಮ ಎದುರು ಇದ್ದಾರೆ. ಇಂತಹ ಶೂನ್ಯ ಬಂಡವಾಳ ಕøಷಿಕರ ಬಗ್ಗೆ ಯುವಕರಿಗೆ ಮಾಹಿತಿ ನೀಡಬೇಕಾಗಿದೆ.
ಬೀಜ, ಗೊಬ್ಬರ, ಕೀಟನಾಶಕಗಳ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾಗಿದೆ. ಮನೆ ಬೀಜ, ಮನೆ ಗೊಬ್ಬರ, ಸಾವಯವ ಕೀಟನಾಶಕ ಬಳಸಿ, ಯಶಸ್ಸು ಪಡೆದಿರುವ ಮಾದರಿ ರೈತರನ್ನು ಯುವಕರ ಮುಂದಿಡಬೇಕಾಗಿದೆ. ಬೇಸಾಯ ಎಂದ ಮಾತ್ರಕ್ಕೆ ಎಲ್ಲವನ್ನೂ ಹೊರಗಿನಿಂದ ಕೊಂಡು ತರಬೇಕಾಗಿಲ್ಲ. ಸ್ವತಃ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ.
ಬೇಸಾಯದಿಂದ ಬದುಕಿಗೆ ಭದ್ರತೆ ಸಿಗದು ಎಂಬ ಆತಂಕ ಯುವಕರಲ್ಲಿದೆ. ಈ ಆತಂಕವನ್ನು ಗಟ್ಟಿಗೊಳಿಸುವ ರೀತಿಯಲ್ಲಿ ರೈತರ ಆತ್ಮಹತ್ಯೆ, ಬೆಲೆ ಕುಸಿತದಿಂದ ಬೆಳೆಗಳನ್ನು ರಸ್ತೆಯಲ್ಲಿ ಸುರಿದು ಪ್ರತಿಭಟಿಸುವ, ಬೆಲೆ ಕುಸಿತದ ಕಾರಣಕ್ಕಾಗಿ ಕಬ್ಬಿಗೆ ಬೆಂಕಿ ಹಾಕುವ, ರಸ್ತೆಯಲ್ಲಿ ಹಾಲು ಚೆಲ್ಲಿ ಪ್ರತಿಭಟಿಸುವ ಘಟನೆಗಳು ನಡೆಯುತ್ತಿವೆ. ಈ ನಕಾರಾತ್ಮಕ ಘಟನೆಗಳ ನಡುವೆಯೇ ಸಕಾರಾತ್ಮಕ ಘಟನೆಗಳನ್ನು ಯುವಕರ ಮುಂದಿಡುವ ಕೆಲಸ ಆಗಬೇಕಾಗಿದೆ. ಬೇಸಾಯ ಬದುಕಿಗೆ ಭದ್ರತೆ ನೀಡಬಲ್ಲದು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ನಾಡಿನ ನಾನಾ ಭಾಗಗಳಲ್ಲಿ ನೂರಾರು ಮಂದಿ ಬೇಸಾಯ ಕೈಗೊಂಡು ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ತಿಳಿಸಿಕೊಡಬೇಕಾಗಿದೆ.
ಬೇಸಾಯ ಶ್ರೇಷ್ಠ ಎನ್ನುವುದು ಮನವರಿಕೆ ಆದಲ್ಲಿ ಮಾತ್ರ ಯುವಕರು ಕøಷಿಯತ್ತ ಆಕರ್ಷಿತರಾಗಬಲ್ಲರು. ಕøಷಿಯಿಂದಲೇ ಬದುಕು ಕಟ್ಟಿಕೊಳ್ಳಬಲ್ಲರು. ಬೇಸಾಯದಲ್ಲಿಯೇ ನೆಲೆ ನಿಲ್ಲಬಲ್ಲರು.
ಮಾರುತಿ ಸೋನಾರ್, ಬೀದರ್


