
ಕನ್ನಡ ಬಿಂಬ, ಬೀದರ್
ಚಿಟಗುಪ್ಪ ತಾಲೂಕಿನ ಮನ್ನಾಎಕ್ಕೆಳ್ಳಿ ಗ್ರಾಮದ ವೀರಶೆಟ್ಟಿ ಕುಂಬಾರ ಅವರು ವಾಸ್ತವಿಕವಾಗಿ ಹೊಂದಿರುವುದು ಒಂದೇ ಎಕರೆ ಜಮೀನು. ಆದರೆ, ತಹಸಿಲ್ ಕಚೇರಿಯ ದಾಖಲೆಯಲ್ಲಿ ವೀರಶೆಟ್ಟಿ ಅವರು 7 ಎಕರೆ ಜಮೀನು ಹೊಂದಿರುವ ಮಾಹಿತಿ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ವೀರಶೆಟ್ಟಿ ಕುಂಬಾರ್ ಅವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ, ಎಪಿಎಲ್ ಪಡಿತರ ಚೀಟಿಯನ್ನಾಗಿ ಬದಲಾಯಿಸಲಾಗಿದೆ.
ತಾವು ಮನ್ನಾಎಕ್ಕೆಳ್ಳಿಯಲ್ಲಿ ಹೊಂದಿರುವುದು ಒಂದೇ ಎಕರೆ ಜಮೀನು. ಆದರೆ, ತಹಸಿಲ್ ದಾಖಲೆಯಲ್ಲಿ ಇದನ್ನು 7 ಎಕರೆ ಎಂದು ದಾಖಲಿಸಲಾಗಿದೆ. 7 ಎಕರೆ ಜಮೀನು ಯಾವ ಊರಿನಲ್ಲಿ, ಯಾವ ಸರ್ವೆ ಸಂಖ್ಯೆಯಲ್ಲಿ ಇದೆ ಎನ್ನುವುದನ್ನು ತೋರಿಸಬೇಕು ಎಂದು ಒತ್ತಾಯಿಸುತ್ತಾರೆ, ವೀರಶೆಟ್ಟಿ ಕುಂಬಾರ್.
ಈ ಕುರಿತು ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ವಾರದೊಳಗೆ ತಮ್ಮ ಬಿಪಿಎಲ್ ಪಡಿತರ ಕಾರ್ಡ್ ಅನ್ನು ಮರುಸ್ಥಾಪಿಸದಿದ್ದಲ್ಲಿ ಚಿಟಗುಪ್ಪ ತಹಸಿಲ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇರುವುದು ಒಂದೇ ಎಕರೆ ಜಮೀನು. ಬೇರಾವ ಆದಾಯದ ಮೂಲ ಇಲ್ಲ. ಆದರೆ, ಅಧಿಕಾರಿಗಳು ತಮಗಿರುವ ಒಂದೇ ಎಕರೆ ಜಮೀನನ್ನು ಅದು ಹೇಗೆ 7 ಎಕರೆಗೆ ಹೆಚ್ಚಿಸಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಈ ಲೋಪವನ್ನು ತಕ್ಷಣ ಸರಿಪಡಿಸಬೇಕು ಎಂದು ವೀರಶೆಟ್ಟಿ ಕುಂಬಾರ್ ಒತ್ತಾಯಿಸಿದ್ದಾರೆ.


