Ad imageAd image

ಸಕ್ಕರೆ ಇಳುವರಿ ಕಳವು ಆರೋಪ, ಸರಕಾರದ ನಿರಾಸಕ್ತಿ

Kannada Bimba Team
5 Min Read

 

 

ಕನ್ನಡ ಬಿಂಬ, ಬೀದರ್

 

ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಸಕ್ಕರೆ ಕಾರಖಾನೆಗಳು ಇಳುವರಿಯನ್ನು ಕಡಿಮೆ ತೋರಿಸಿ, ಮೋಸ ಮಾಡುತ್ತಿವೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ.

ಟನ್ ಕಬ್ಬಿನಿಂದ ತಯ್ಯಾರಾಗುವ ಸಕ್ಕರೆಯ ಪ್ರಮಾಣವನ್ನು ಆಧರಿಸಿ ಇಳುವರಿ ನಿರ್ಧರಿಸುವ ವ್ಯವಸ್ಥೆ ಇದೆ. ಟನ್ ಕಬ್ಬಿನಿಂದ 100 ಕಿಲೋ ಸಕ್ಕರೆ ತಯ್ಯಾರಾದರೆ ಇಳುವರಿ ಪ್ರಮಾಣ ಶೇ. 10 ರಂದು ಗುರುತಿಸಲಾಗುತ್ತದೆ. ಆದರೆ, ಇಳುವರಿ ಪರೀಕ್ಷೆಯ ಫಲಿತಾಂಶ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ಹೇಳಿದ್ದೇ ಅಂತಿಮ ಎನ್ನುವ ಸ್ಥಿತಿ ಇದೆ.

ಇಳುವರಿ ಕಳ್ಳತನ ಅಥವಾ ಕಡಿಮೆ ಇಳುವರಿ ತೋರಿಸಿ ಮೋಸ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಈಗಿರುವ ವ್ಯವಸ್ಥೆ ಸಾಕಾಗುತ್ತಿಲ್ಲ. ಏಕಪ್ರಕಾರದ ಹವಾಮಾನ, ಮಣ್ಣು ಮತ್ತು ನೀರು ಇರುವ ಪ್ರದೇಶದ ಕಬ್ಬು ಪೂರೈಕೆ ಆದರೂ ಪ್ರತಿ ಕಾರಖಾನೆಯು ಸಕ್ಕರೆ ಇಳುವರಿ ಪ್ರಮಾಣ ಬೇರೆ ಬೇರೆಯೇ ಆಗಿರುವುದನ್ನು ಕಾಣಬಹುದು. ಕೆಲ ವರ್ಷಗಳ ಹಿಂದೆ ಈ ಅಂತರದ ಪ್ರಮಾಣ ಅಧಿಕವಾಗಿರುತಿತ್ತು. ಈಚೆಗೆ ಎಲ್ಲ ಕಾರಖಾನೆಗಳು ಏಕ ಪ್ರಕಾರದ ಸಕ್ಕರೆ ಇಳುವರಿ ತೋರಿಸುವ ಜಾಣ ನಡೆಯನ್ನು ಅನುಸರಿಸುತ್ತಿವೆ.

ಸಕ್ಕರೆ ಇಳುವರಿ ತೋರಿಸುವಲ್ಲಿ ಅನ್ಯಾಯ ಮಾಡಲಾಗುತ್ತಿದೆ, ಇಳುವರಿ ಕಡಿಮೆ ತೋರಿಸಿ ಪ್ರತಿ ಟನ್ ಕಬ್ಬಿಗೆ 20 ರಿಂದ 25 ಕಿಲೋ ಸಕ್ಕರೆ  ಕಳವು ಮಾಡಲಾಗುತ್ತಿದೆ ಎನ್ನುವುದು ರೈತ ನಾಯಕರ ಆರೋಪ. ಇಳುವರಿ ಕುರಿತ ಆರೋಪವು ಸಕ್ಕರೆ ಕಾರಖಾನೆಗಳಷ್ಟೇ ಹಳೆಯದು. ಹಿಂದೆಯೂ ಈ ಆರೋಪ ಇತ್ತು. ಈಗಲೂ ಇದೆ.

ಸಕ್ಕರೆ ಇಳುವರಿಯ ವಾಸ್ತವಿಕ ಪ್ರಮಾಣವನ್ನು ರೈತರ ಮುಂದಿಡುವ ಯಾವುದೇ ವ್ಯವಸ್ಥೆ ಸದ್ಯಕ್ಕಿಲ್ಲ. ಸಕ್ಕರೆ ಕಾರಖಾನೆಗಳು ಹೇಳಿದ್ದೇ ಸತ್ಯ ಎನ್ನುವಂತಹ ಸ್ಥಿತಿ ಇದೆ. ಇದನ್ನು ಬದಲಾಯಿಸುವ ಪ್ರಯತ್ನ ಅಷ್ಟಾಗಿ ನಡೆದಿಲ್ಲ. ಸಕ್ಕರೆ ಕಾರಖಾನೆಗಳ ಆಡಳಿತ ಮಂಡಳಿಯನ್ನು ಅಪನಂಬಿಕೆಯಿಂದ ನೋಡುವಂತೆ ಮಾಡುವ ಇಳುವರಿ ವಿಷಯದಲ್ಲಿ ಸರಕಾರವೂ ಆಸಕ್ತಿ ತೋರುತ್ತಿಲ್ಲ. ಈ ವಿಷಯದಲ್ಲಿ ಪಾರದರ್ಶಕತೆ ತರಲಾಗುತ್ತಿಲ್ಲ ಎನ್ನುವುದು ರೈತರ ಆರೋಪ.

ಇಳುವರಿ ಕಳವು ತಡೆಗೆ ಆಧುನಿಕ ತಂತ್ರಜ್ಞಾನ ಬಳಸಿ, ಜಿಲ್ಲಾಧಿಕಾರಿಗಳ ಪರಿವೀಕ್ಷಣೆಯಲ್ಲಿ ಅತ್ಯುನ್ನತವಾದ, ಸರಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯವನ್ನು ಎಲ್ಲ ಕಾರಖಾನೆಗಳಲ್ಲಿ ಸ್ಥಾಪಿಸಬೇಕು. ಪ್ರತಿ ದಿನ ವರದಿ ಪಡೆದು, ಸರ್ಕಾರಕ್ಕೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ನೀಡುವ ವ್ಯವಸ್ಥೆ ಮಾಡಬೇಕು. ಅಂದಾಗಲೇ ಇಳುವರಿಯ ಹಿಂದಿರುವ ಮಾಯಾಲೋಕವನ್ನು ಸಾರ್ವಜನಿಕವಾಗಿ ತೆರೆದಿಟ್ಟಂತಾಗುತ್ತದೆ ಎನ್ನುತ್ತಾರೆ, ರೈತರು.

ಕಬ್ಬಿನ ಹಣ ಪಾವತಿ ವಿಷಯದಲ್ಲಿಲ್ಲೂ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಕಾಣಬಹುದು. ಹಣ ಪಾವತಿಯ ವಿಷಯದಲ್ಲಿ ಸರಕಾರದ ಯಾವುದೇ ನಿಯಮವನ್ನು ಸಕ್ಕರೆ ಕಾರಖಾನೆಗಳು ಪಾಲಿಸುವುದಿಲ್ಲ. ನಿಯಮ ಉಲ್ಲಂಘನೆ ಆಗಿದೆ ಎಂದು ಸಕ್ಕರೆ ಕಾರಖಾನೆ ವಿರುದ್ಧ ಯಾರೇ ಕಬ್ಬು ಬೆಳೆಗಾರರು ದೂರು ಸಲ್ಲಿಸಿದ ನಿದರ್ಶನಗಳೂ ಇದ್ದಿರಲಿಕ್ಕಿಲ್ಲ. ಕಬ್ಬಿನ ಹಣ ಪಾವತಿಯಲ್ಲಿನ ವಿಳಂಬವು ಜಿಲ್ಲಾ ಆಡಳಿತಕ್ಕೆ ತಿಳಿದಿರುವುದಿಲ್ಲ ಎಂದೇನಿಲ್ಲ. ಆದರೂ, ರೈತರಿಗೆ ಸಂಬಂಧಿಸಿದ ವಿಷಯ ಆಗಿದ್ದರಿಂದ ನಿರ್ಲಕ್ಷ್ಯ ತೋರಲಾಗುತ್ತದೆ ಎನ್ನುವುದು ಕಬ್ಬು ಬೆಳೆಗಾರರ ದೂರು.

ಸಕ್ಕರೆ ಕಾರಖಾನೆಗೆ ಕಬ್ಬು ಪೂರೈಕೆಯಾದ 14 ದಿನಗಳಲ್ಲಿ ಹಣ ಪಾವತಿಸುವುದು ಕಡ್ಡಾಯ ಎನ್ನುತ್ತದೆ ನಿಯಮ. ಭಾರತ ಸರ್ಕಾರದ ಕಬ್ಬು ನಿಯಂತ್ರಣ ಆದೇಶ 1966 ರ ಷರತ್ತು 3(1) ಪ್ರಕಾರ ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿಸದಿದ್ದರೆ, ಷರತ್ತು 3 (3ಎ) ಪ್ರಕಾರ ಶೇ. 15 ಬಡ್ಡಿ ಸಹಿತ ಪಾವತಿಸಬೇಕಾಗುತ್ತದೆ ಹಾಗೂ ಷರತ್ತು 9ರ (2) ಪ್ರಕಾರ ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಕ್ಕರೆ ಉತ್ಪಾದಕರಿಂದ ಅಥವಾ ಅವರ ಏಜೆಂಟ್ ಗಳಿಂದ ನಿರ್ದಿಷ್ಟಪಡಿಸಿದ ಮೊತ್ತವನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲು ಅಧಿಕಾರವಿರುತ್ತದೆ. ಕಬ್ಬು ಸರಬರಾಜು ಆದ 14 ದಿನಗಳ ಒಳಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯ (ಎಫ್‍ಆರ್‍ಪಿ) ಪಾವತಿಸಲು ವಿಫಲವಾದರೆ, 1955 ರ ಅಗತ್ಯ ವಸ್ತುಗಳ ಕಾಯ್ದೆಯ ಕಲಂ 7 ರ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ.

ಇನ್ನು ಕಟಾವು ಗ್ಯಾಂಗುಗಳ ಶೋಷಣೆ, ಕಬ್ಬು ಕೊಂಡೊಯ್ಯುವಂತೆ ಸಕ್ಕರೆ ಕಾರಖಾನೆ ಸಿಬ್ಬಂದಿಯನ್ನು ಬೇಡಿಕೊಳ್ಳುವುದು ಕೊನೆಗೊಳ್ಳುವುದೇ ಇಲ್ಲ. ಮೊದಲು ಕಬ್ಬು ಕೊಂಡೊಯ್ಯುವಂತೆ ಕಾರಖಾನೆ ಸುತ್ತ ಓಡಾಡಬೇಕು. ನಂತರ ಕಬ್ಬಿನ ಹಣಕ್ಕಾಗಿ. ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆಯೂ ದೂರುಗಳಿವೆ. ಈ ಎಲ್ಲ ಕಾರಣಗಳಿಂದಾಗಿ ಕಬ್ಬು ರೈತರ ಪಾಲಿಗೆ ಸಿಹಿ ಆಗುವುದೇ ಅಪರೂಪ. ಆದರೂ, ನೀರಾವರಿ ಸೌಲಭ್ಯ ಇರುವ ರೈತರ ಮೊದಲ ಆಯ್ಕೆಯಾಗಿ ಕಬ್ಬು ಮುಂದುವರೆದಿದೆ.

ಸಕ್ಕರೆ ಕಾರಖಾನೆಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೂ ಅವೇ ಕಾರಣ ಆಗಿರಬಹುದು. ಹಣಕಾಸು ವಿಷಯದಲ್ಲಿನ ಅಶಿಸ್ತು ಸೇರಿದಂತೆ ಹಲವು ಸಮಸ್ಯೆಗಳಿವೆ. ರಾಸಾಯನಿಕ ಮತ್ತಿತರ ಸಾಮಗ್ರಿಗಳ ಖರೀದಿ ಹಾಗೂ ಸಕ್ಕರೆ ಮತ್ತಿತರ ಉತ್ಪನ್ನಗಳ ಮಾರಾಟದಲ್ಲಿ ನಡೆಯುವ ವ್ಯವಹಾರದ ಬಗ್ಗೆ ಹಲವು ಆರೋಪಗಳಿವೆ. ಸಕ್ಕರೆ ಇಳುವರಿಯಂತೆ ಈ ಖರೀದಿ ಮತ್ತು ಮಾರಾಟದ ವ್ಯವಹಾರವನ್ನೂ ಅನುಮಾನದಿಂದ ನೋಡುವಂತಹ ಸ್ಥಿತಿ ಇದೆ.

ಈ ಸಾಲಿನಲ್ಲಿ ಶೇ.10.25 ಇಳುವರಿಗೆ 3,550 ರೂ. ಎಫ್‍ಆರ್‍ಪಿ ನಿಗದಿಪಡಿಸಲಾಗಿದೆ. ಶೇ.9.5 ಮತ್ತು ಅದಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬಂದಲ್ಲಿ ಪ್ರತಿ ಟನ್ ಕಬ್ಬಿಗೆ 3,290 ರೂ. ಕೊಡಲಾಗುತ್ತದೆ. ಬೀದರ್ ಜಿಲ್ಲೆಯ ಕಾರಖಾನೆಗಳು ತೋರಿಸುವ ಸಕ್ಕರೆ ಇಳುವರಿ ಪ್ರಮಾಣ ಶೇ. 9 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿರುವುದನ್ನು ಕಾಣಬಹುದು. ಸಕ್ಕರೆ ಇಳುವರಿ ಪ್ರಮಾಣ ಶೇ. 10 ತಲುಪಿದ್ದು ತುಂಬಾ ಕಡಿಮೆ. ಈ ಬಾರಿಯೂ ಹಿಂದಿನ ಸಾಲಿನಂತೆ ಶೇ. 9 ಅಥವಾ ತುಸು ಹೆಚ್ಚಬಹುದು. ಈ ಲೆಕ್ಕದಲ್ಲಿ ಬೀದರ್ ಜಿಲ್ಲೆಯ ರೈತರಿಗೆ ಎಫ್‍ಆರ್‍ಪಿಯಂತೆ ಟನ್ ಕಬ್ಬಿಗೆ 3,290 ರೂ. ಸಿಗಬಹುದು. ಆದರೆ, ಇಷ್ಟೂ ಮೊತ್ತ ರೈತರಿಗೆ ಸಿಗದು. ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತ ಮಾಡಿದ ನಂತರ ನಿವ್ವಳವಾಗಿ ಸಿಗಬಹುದಾದ ಹಣ ಇನ್ನೂ ಕಡಿಮೆಯಾಗಬಹುದು.

ಕಳೆದ ವರ್ಷ ಬೀದರ್ ಜಿಲ್ಲೆಯಲ್ಲಿ ಟನ್ ಕಬ್ಬಿಗೆ 2700 ರೂ. ನಿಗದಿಪಡಿಸಲಾಗಿತ್ತು. ಇದು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಹೊರತುಪಡಿಸಿ, ನಿವ್ವಳವಾಗಿ ರೈತರಿಗೆ ಕೊಡುವ ದರ ಆಗಿತ್ತು. ಆದರೆ, ಒಂದು ಕಾರಖಾನೆ 2650 ರೂ.ಗಳಂತೆ ಪಾವತಿ ಮಾಡಿತ್ತು. ಮತ್ತೊಂದು ಕಾರಖಾನೆ ಟನ್ ಕಬ್ಬಿಗೆ 2600 ರೂ. ಮಾತ್ರ ಪಾವತಿಸಿತು. ಜಿಲ್ಲಾ ಆಡಳಿತದ ಸಮ್ಮುಖದಲ್ಲಿ ಒಪ್ಪಿಕೊಂಡ ಬೆಲೆಯನ್ನೂ ಈ ಕಾರಖಾನೆಗಳು ಪಾವತಿ ಮಾಡಿರಲಿಲ್ಲ ಎನ್ನುವುದನ್ನು ಗಮನಿಸಬೇಕು.

ಈ ಬಾರಿಯೂ ಕಬ್ಬಿನ ಬೆಲೆ ನಿಗದಿ ಪ್ರಯತ್ನ ನಡೆಯುತ್ತಿದೆ. ಜಿಲ್ಲಾಧಿಕಾರಿ, ಕಾರಖಾನೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ. ಎಫ್‍ಆರ್‍ಪಿಯಂತೆ ಬೆಲೆ ಪಾವತಿಸುವುದಾಗಿ ಕಾರಖಾನೆ ಮುಖ್ಯಸ್ಥರು ಹೇಳುತ್ತಿದ್ದಾರೆ. ಇದಕ್ಕೆ ರೈತ ನಾಯಕರು ಒಪ್ಪುತ್ತಿಲ್ಲ. ನವೆಂಬರ್ 10 ರೊಳಗೆ ನಿರ್ಧಾರ ಕೈಗೊಳ್ಳುವಂತೆ ರೈತ ಹೋರಾಟಗಾರರು ಗಡುವು ನೀಡಿದ್ದಾರೆ. 10 ರಂದು ಜಿಲ್ಲಾ ಆಡಳಿತ ಮತ್ತು ಕಾರಖಾನೆ ಮುಖ್ಯಸ್ಥರ ಮತ್ತೊಂದು ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಬೆಲೆ ನಿಗದಿ ವಿಷಯವು ಒಂದು ಹಂತಕ್ಕೆ ಬರಬಹುದು.

Share This Article

You cannot copy content of this page