Ad imageAd image

ಬಿ ಎಸ್ ಎಸ್ ಕೆ : ಸಾಲಕ್ಕೆ ಗ್ಯಾರಂಟಿ ಇಲ್ಲ, ಲೀಸ್ ಗೆ ಅನುಮತಿಯೂ ಇಲ್ಲ

Kannada Bimba Team
5 Min Read
ಬೀದರ್ ಸಹಕಾರ ಸಕ್ಕರೆ ಕಾರಖಾನೆ
ಬೀದರ್ ಸಹಕಾರ ಸಕ್ಕರೆ ಕಾರಖಾನೆ

 

ಕನ್ನಡ ಬಿಂಬ, ಬೀದರ್

ಬೀದರ್ ಸಹಕಾರ ಸಕ್ಕರೆ ಕಾರಖಾನೆ (ಬಿಎಸ್‍ಎಸ್‍ಕೆ) ಬಂದ್ ಆಗಿದೆ. ಎನ್‍ಸಿಡಿಸಿಯಿಂದ ಸಾಲ ಕೊಡಿಸಿ ಅಥವಾ ಖಾಸಗಿಯವರಿಗೆ ಲೀಸ್ ಕೊಟ್ಟು ಈ ಕಾರಖಾನೆಯನ್ನು ಪುನರಾರಂಭಿಸಬಹುದಾಗಿದೆ. ಆದರೆ, ಸರಕಾರ ಮತ್ತು ಸಚಿವರ ನಿರಾಸಕ್ತಿ, ನಿರ್ಲಕ್ಷ್ಯದಿಂದಾಗಿ ಈ ಕಾರಖಾನೆಗೆ ಮರುಹುಟ್ಟು ಕೊಡಬಹುದಾದ ಘಳಿಗೆ ಮಾತ್ರ ಕೂಡಿ ಬರುತ್ತಿಲ್ಲ.

ರಾಜ್ಯ ಸರಕಾರ ಖಾತರಿ ನೀಡಿದರೆ 550 ಕೋಟಿ ರೂ. ಸಾಲ ನೀಡಲಾಗುತ್ತದೆ ಎಂದು ಎನ್‍ಸಿಡಿಸಿ ಹಿಂದೆಯೇ ತಿಳಿಸಿದೆ. ಲೀಸ್ ಪಡೆಯಲು ಮುಂದೆ ಬಂದಿದ್ದ ಉದ್ಯಮಿಯೊಬ್ಬರು 40 ಕೋಟಿ ಠೇವಣಿ ಹಾಗೂ ವಾರ್ಷಿಕ 8 ಕೋಟಿ ರೂ. ನೀಡಲು ಒಪ್ಪಿದ್ದರು. ಆದರೆ, ಸರಕಾರದಲ್ಲಿ ಇರುವವರು ಸಕಾಲದಲ್ಲಿ ನಿರ್ಣಯ ಕೈಗೊಳ್ಳದಿದ್ದರಿಂದ ಎರಡೂ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಎನ್‍ಸಿಡಿಸಿ ಸಾಲಕ್ಕೆ ಗ್ಯಾರಂಟಿ ಕೊಡುವುದು ಕಷ್ಟವಾಗಿದ್ದಲ್ಲಿ, ಖಾಸಗಿಯವರಿಗೆ ಲೀಸ್ ಕೊಡುವ ತೀರ್ಮಾನವನ್ನಾದರೂ ಕೈಗೊಳ್ಳಬಹುದಿತ್ತು. ಆದರೆ, ಇದಕ್ಕೂ ಸರಕಾರ ಮನಸ್ಸು ಮಾಡದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.

ನಾಲ್ಕು ದಶಕಕ್ಕೂ ಹೆಚ್ಚು ಕಾಲ ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರ ಜೀವನಾಡಿಯಾಗಿ, ಆರ್ಥಿಕಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಈ ಕಾರಖಾನೆಗೆ ಮರುಜೀವ ಕೊಡುವ ವಿಷಯದಲ್ಲಿ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಭಾವನೆ ಕಬ್ಬು ಬೆಳೆಗಾರರಲ್ಲಿದೆ. ಕಾರಖಾನೆಯ ಬೆಲೆಬಾಳುವ ಜಮೀನನ್ನು ಹಸ್ತಗತ ಮಾಡಿಕೊಳ್ಳುವ ಯೋಜನೆಯ ಭಾಗವಾಗಿಯೇ ಲೀಸ್ ವಿಷಯದಲ್ಲಿ ತೀರ್ಮಾನ ಕೈಗೊಳ್ಳುತ್ತಿಲ್ಲ. ನಿವೇಶನ ರಚಿಸಿ ಲಾಭ ಮಾಡಿಕೊಳ್ಳುವ ಹಂಚಿಕೆಯೂ ಇತ್ತು ಎಂಬ ಚರ್ಚೆ ನಡೆಯುತ್ತಿದೆ.

`ಲೀಸ್ ಪಡೆಯುವ ಉದ್ಯಮಿಯನ್ನು ಹುಡುಕಿ ಎಂದು ಸಚಿವರು ಹೇಳಿದ್ದರು. ಉದ್ಯಮಿಯನ್ನು ಹುಡುಕಿ, ಸಚಿವರನ್ನು ಭೇಟಿ ಮಾಡಿಸಿದ್ದೇನೆ. ಎನ್‍ಸಿಡಿಸಿಯಿಂದ ಸಾಲ ಕೊಡಿಸಿ, ಅದು ಸಾಧ್ಯವಾಗದಿದ್ದಲ್ಲಿ ಖಾಸಗೀಯವರಿಗೆ ಲೀಸ್ ಕೊಡಿಸಿ, ಅದೂ ಬೇಡ ಎಂದಾದರೆ, ಕಾರಖಾನೆಗೆ ಸಾಲ ಕೊಟ್ಟಿರುವ ಬ್ಯಾಂಕು ಅಥವಾ ಜಿಲ್ಲೆಯ ಉದ್ಯಮಿಗಳು ಹೀಗೆ ಯಾರಾದರೂ ಮುಂದೆ ಬಂದು ಕಾರಖಾನೆಯನ್ನು ವಹಿಸಿಕೊಂಡು ಪುನರಾರಂಭಿಸಿ ಎಂದು ಕೇಳಿಕೊಂಡಿದ್ದೆನೆ. ಆದರೂ ಸರಕಾರ, ಸಚಿವರು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ, ಕಾರಖಾನೆ ಅಧ್ಯಕ್ಷ ಸುಭಾಷ ಕಲ್ಲೂರ್.

ಇದೇ ಕಾರಖಾನೆಯಲ್ಲಿ ಸುಮಾರು 38 ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ, ಕಾರಖಾನೆ ಮತ್ತೇ ಶುರುವಾಗಬೇಕು ಎಂಬ ಕಾಳಜಿ ಇರುವ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಸಹ ಕಾರಖಾನೆಯ ಪುನರಾರಂಭಕ್ಕಾಗಿ ಕಾಯುತ್ತಿದ್ದಾರೆ. ಕಾರಖಾನೆಯ ವೈಭವದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಅಧಿಕಾರಿ, ಏಳುಬೀಳುಗಳನ್ನೂ ಕಂಡಿದ್ದಾರೆ. ಈಗ ಕರ್ತವ್ಯದಲ್ಲಿ ಇಲ್ಲದಿದ್ದರೂ ಕಾರಖಾನೆಯ ಪುನರಾರಂಭಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ. ಸರಕಾರ, ಎನ್‍ಸಿಡಿಸಿ ಜೊತೆಗೆ ವ್ಯವಹರಿಸಲು ಬೇಕಾದ ಕಾಗದಪತ್ರಗಳನ್ನು, ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಕಾರಖಾನೆ ಆರಂಭವಾಗಬೇಕು ಎನ್ನುವುದಷ್ಟೇ ಇವರಿಗಿರುವ ಕಾಳಜಿ. ಅದರಾಚೆ ಯಾವುದೇ ನಿರೀಕ್ಷೆ ಇಲ್ಲ.

ಸಹಕಾರಿ ಕ್ಷೇತ್ರದ ಮೊಟ್ಟ ಮೊದಲ ಕಾರಖಾನೆ ಎಂಬ ಹೆಗ್ಗಳಿಕೆ ಇರುವ ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ನೋಂದಣಿ ಆಗಿದ್ದು  1961 ರಲ್ಲಿ.  1968 ರಲ್ಲಿ ಪ್ರಾಯೋಗಿಕವಾಗಿ ಕಬ್ಬು ನುರಿಸಲಾಯಿತು. ಆರಂಭದಲ್ಲಿ ದಿನಕ್ಕೆ 1250 ಟನ್ ಕಬ್ಬು ನುರಿಸುತಿತ್ತು. 1983-84 ರಲ್ಲಿ ಇದನ್ನು 2000 ಟನ್‍ಗೆ ಹೆಚ್ಚಿಸಲಾಯಿತು. 1993-94 ರಲ್ಲಿ ಇನ್ನಷ್ಟು ಆಧುನೀಕರಣ ಕೈಗೊಂಡು ಕಬ್ಬು ನುರಿಸುವ ಸಾಮಥ್ರ್ಯವನ್ನು 3500 ಟನ್‍ಗೆ ಹೆಚ್ಚಿಸಲಾಯಿತು. ಒಂದೇ ಹಂಗಾಮಿನಲ್ಲಿ 6.50 ಲಕ್ಷ ಟನ್ ಕಬ್ಬು ನುರಿಸಿದ ದಾಖಲೆ ಈ ಕಾರಖಾನೆ ಹೆಸರಿನಲ್ಲಿದೆ. ಹಾಗೆಯೇ ಅತ್ಯಧಿಕ ಸಕ್ಕರೆ ಇಳುವರಿ ಪಡೆದ ಸಾಧನೆಯನ್ನೂ ಮಾಡಿದೆ. ಉತ್ಪನ್ನಗಳ ಮಾರಾಟ, ಉತ್ಪಾದನಾ ವೆಚ್ಚದ ವಿಷಯದಲ್ಲಿ ಈ ಕಾರಖಾನೆಯದ್ದು ಮಾದರಿ ನಡೆ.

2012-13 ನೇ ಸಾಲಿನವರೆಗೆ ಹೆಚ್ಚಿನ ಸಮಸ್ಯೆ ಎದುರಾಗಲಿಲ್ಲ. ಪಕ್ಷ ರಾಜಕಾರಣದಿಂದಾಗಿ ಸಾಲ ಪಡೆಯುವಲ್ಲಿ ಆಗಲೂ ಸಮಸ್ಯೆ ಇದ್ದವು. ಆದರೂ, ಆಗ ಅಧಿಕಾರದಲ್ಲಿ ಇದ್ದವರು, ಕಾಳಜಿಯಿಂದ ಕೆಲಸ ಮಾಡಿದ್ದರಿಂದ ಕಾರಖಾನೆಯ ಹಣಕಾಸು ಸ್ಥಿತಿ ಮೇಲೆ ಹೆಚ್ಚಿನ ಪರಿಣಾಮ ಆಗಲಿಲ್ಲ ಎನ್ನುತ್ತಾರೆ, ಇದೇ ಕಾರಖಾನೆಯ ನಿವೃತ್ತ ಅಧಿಕಾರಿಯೊಬ್ಬರು.

ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆಯವರು ಈ ಕಾರಖಾನೆಯ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದು  2010 ರಲ್ಲಿ. ನಂತರ ಅಧ್ಯಕ್ಷರಾದವರು ಸುಭಾಷ ಕಲ್ಲೂರ್. 2015 ರಲ್ಲಿ ಸಂಜಯ ಖೇಣಿ ಅಧ್ಯಕ್ಷರಾದರು. ಹೆಚ್ಚು ಸಮಸ್ಯೆ ಆಗಿದ್ದು ಆಗಲೇ. ವಿಶೇಷವಾಗಿ ರಾಜಕೀಯ ಅಸಹಕಾರವು ತೀವ್ರವಾಗಿ ಕಾಡಿತ್ತು. ಆಡಳಿತ ಮಂಡಳಿಯಲ್ಲಿನ ಭಿನ್ನಾಭಿಪ್ರಾಯ ಮತ್ತಿತರ ಸಮಸ್ಯೆಗಳಿಂದಾಗಿ ಕ್ರಷಿಂಗ್‍ಗೆ ಅಡ್ಡಿಯುಂಟಾಯಿತು. ಬ್ಯಾಂಕುಗಳಿಂದ ಪಡೆದ ಸಾಲದ ನವೀಕರಣ ಮಾಡಿಕೊಳ್ಳಲಾಗಲಿಲ್ಲ. ಸಾಲದಷ್ಟೇ ಬಡ್ಡಿ ಬೆಳೆಯಿತು. ಆಡಳಿತ ಮಂಡಳಿಯಲ್ಲಿನ ಬದಲಾವಣೆ, ಹೊಸ ಅಧ್ಯಕ್ಷರ ಆಯ್ಕೆ, ಅವ್ಯವಹಾರ ಆರೋಪ, ತನಿಖೆ ಹೀಗೆ ಏನೇನೋ ನಡೆದವು. ಒಟ್ಟು ಕಾರಖಾನೆಯ ಆರ್ಥಿಕ ಆರೋಗ್ಯ ಪೂರ್ತಿ ಹಾಳಾಯಿತು. ಐದು ವರ್ಷಗಳ ಅವಧಿಯಲ್ಲಿ ಅತೀ ಕಡಿಮೆ ಕಬ್ಬು ನುರಿಸಿದರಿಂದ ನಷ್ಟದ ಪ್ರಮಾಣ ಬೆಟ್ಟದಂತೆ ಬೆಳೆಯಿತು.

ನಾಲ್ಕು ವರ್ಷಗಳ ಹಿಂದೆ ಸುಭಾಷ ಕಲ್ಲೂರ್ ಅವರು ಪುನ: ಕಾರಖಾನೆಯ ಅಧ್ಯಕ್ಷರಾದರು. ಇದು ನಡೆದಿದ್ದು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ. ಕಲ್ಲೂರ್ ಅವರು ಯಡಿಯೂರಪ್ಪ ಅವರ ಆಪ್ತವಲಯಕ್ಕೆ ಸೇರಿದ್ದರು. ಮುಖ್ಯಮಂತ್ರಿಯವರೇ ಆಪ್ತರಾಗಿರುವುದರಿಂದ ಸರಕಾರದಿಂದ ನೆರವು ಸಿಗಬಹುದು ಎಂಬ ವಿಶ್ವಾಸ ಇತ್ತು. ಆದರೆ, ಅಲ್ಪ ಕಾಲದಲ್ಲಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಖರ್ಚುಯಿಂದ ಕೆಳಗೆ ಇಳಿಯಬೇಕಾಯಿತು. ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಬಿಎಸ್‍ಎಸ್‍ಕೆ ಗೋಳು ಯಾರೂ ಕೇಳಲಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಸಚಿವರನ್ನು ಭೇಟಿಯಾಗಿದ್ದೇನೆ ಎಂದು ಸುಭಾಷ ಕಲ್ಲೂರ್ ಹೇಳುತ್ತಾರೆ. ಎನ್‍ಸಿಡಿಸಿಯಿಂದ ಸಾಲ ಪಡೆಯುವ ಪ್ರಕ್ರಿಯೆ ಶುರುವಾದಾಗ ಸಕ್ಕರೆ ಸಚಿವರು ಸ್ಪಂದಿಸಿದರು. ಕಾರಖಾನೆಯಿಂದ ಸಲ್ಲಿಸಿದ ಪ್ರಸ್ತಾವನೆಯನ್ನು  ಎನ್‍ಸಿಡಿಸಿಗೆ ಕಳುಹಿಸಿದರು. ಎನ್‍ಸಿಡಿಸಿ ನಡೆ ಸಕಾರಾತ್ಮಕವಾಗಿಯೇ ಇತ್ತು. ಸಹಕಾರಿ ಕ್ಷೇತ್ರದ ಸಕ್ಕರೆ ಕಾರಖಾನೆಗಳ ಪುನ:ಶ್ಚೇತನಕ್ಕೆ ಪ್ರತ್ಯೇಕ ನಿಧಿಯೂ ಇತ್ತು. ಆದರೆ, ನೆರವು ನೀಡಲು ಹಲವು ನಿಯಮಗಳು, ಷರತ್ತುಗಳು ಇದ್ದವು. ಕಾರಖಾನೆಯ ಸ್ಥಿತಿಯು ಎನ್‍ಸಿಡಿಸಿ ನಿಯಮಗಳನ್ನು ಪೂರ್ಣಗೊಳಿಸುವಂತಿರಲಿಲ್ಲ. ಹೀಗಾಗಿ ಎನ್‍ಸಿಡಿಸಿಯು ಸರಕಾರದ ಗ್ಯಾರಂಟಿ ಕೇಳಿತ್ತು ಎಂದು ಸುಭಾಷ ಕಲ್ಲೂರ್ ಮಾಹಿತಿ ನೀಡುತ್ತಾರೆ.

ಜಾರಿಯಲ್ಲಿರುವ ನಿಯಮಗಳಂತೆ ನೇರವಾಗಿ ಕಾರಖಾನೆಗೆ ಸಾಲ ನೀಡಲು ಬರುವುದಿಲ್ಲ. ಆದರೆ, ರಾಜ್ಯ ಸರಕಾರವು ಸ್ವತ: ಮೊದಲು ಸಾಲದ ಮೊತ್ತ  ಪಡೆದುಕೊಳ್ಳಬೇಕು. ನಂತರ ಕಾರಖಾನೆಗೆ ನೀಡಬೇಕು. ಸರಕಾರದ ಮೂಲಕವೇ ಸಾಲ ನೀಡಬಹುದು ಎಂದು ಎನ್‍ಸಿಡಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಎನ್‍ಸಿಡಿಸಿ ಸಾಲಕ್ಕೆ ಗ್ಯಾರಂಟಿ ಕೊಡಲು ಆಗದಿದ್ದಲ್ಲಿ ಲೀಸ್ ಕೊಡುವ ಬಗ್ಗೆಯಾದರೂ ಕ್ರಮ ಕೈಗೊಳ್ಳಬಹುದಿತ್ತು. ಅಧಿಕ ಸಾಲ ನೀಡಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಒಪ್ಪಿಸುವುದು ರಾಜ್ಯ ಸರಕಾರಕ್ಕೆ ಅಸಾಧ್ಯವೇನೂ ಅಲ್ಲ. ಕಾರಖಾನೆ ಪುನರಾರಂಭ ಆಗದಿದ್ದಲ್ಲಿ ಡಿಸಿಸಿ ಬ್ಯಾಂಕಿಗೂ ಕಷ್ಟವಾಗುತ್ತದೆ. ಬ್ಯಾಂಕು ಹಾಗೂ ಕಾರಖಾನೆಗಳೆರಡೂ ಸಹಕಾರಿ ಸಂಸ್ಥೆಗಳಾಗಿವೆ. ಬ್ಯಾಂಕಿನ ಅಧ್ಯಕ್ಷ ಅಮರ್ ಖಂಡ್ರೆ ಅವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹೋದರ ಆಗಿದ್ದಾರೆ. ಎರಡೂ ಸಂಸ್ಥೆಗಳ ಹಿತ ರಕ್ಷಣೆಗೆ ಸಚಿವ ಖಂಡ್ರೆ ಮುಂದಾಗಬೇಕು. ಎರಡೂ ಸಂಸ್ಥೆಗಳಿಗೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯ.

ಬಿಎಸ್‍ಎಸ್‍ಕೆ ಹಿಂದೊಮ್ಮೆ ಬಾಗಿಲು ಮುಚ್ಚಿದಾಗ ಮಾಜಿ ಸಚಿವ, ದಿ. ಮಿರಾಜುದ್ದಿನ್ ಪಟೇಲರು ಮರು ಜೀವ ನೀಡಿದ್ದರು. ಜಿಲ್ಲೆಯ ರೈತರು ಈಗಲೂ ಮಿರಾಜುದ್ದಿನ್ ಪಟೇಲರನ್ನು ಸ್ಮರಿಸುತ್ತಾರೆ. ಈಗ ಪುನ: ಕಾರಖಾನೆ ಬಂದ್ ಆಗಿದೆ. ಈಶ್ವರ ಖಂಡ್ರೆ ಸಚಿವರಾಗಿದ್ದಾರೆ. ಮಿರಾಜುದ್ದಿನ್ ಪಟೇಲರಂತೆ ಈಶ್ವರ ಖಂಡ್ರೆಯವರೂ ಈ ಕಾರಖಾನೆಯ ಪುನರಾರಂಭಕ್ಕೆ ಶ್ರಮಿಸಬೇಕು ಎನ್ನುವುದು ರೈತರ ಒತ್ತಾಸೆ.

Share This Article

You cannot copy content of this page