Ad imageAd image

ಹಾಡಿನೊಳಗೊಂದು ಅದ್ಭುತ ಕಥೆ !

Kannada Bimba Team
5 Min Read
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಳಖಿಂಡಿ ಗ್ರಾಮದ ಸಿದ್ದಮ್ಮ ದಶರಥ ಕೋಡಂಬಲ್ ಅವರು ರೇಣುಕ ಯಲ್ಲಮ್ಮ ತಾಯಿ ಪೂಜೆಯಲ್ಲಿ ಹೆಜ್ಜೆ ಹಾಕುತ್ತಿರುವುದು.
News Photo
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಳಖಿಂಡಿ ಗ್ರಾಮದ ಸಿದ್ದಮ್ಮ ದಶರಥ ಕೋಡಂಬಲ್ ಅವರು ರೇಣುಕ ಯಲ್ಲಮ್ಮ ತಾಯಿ ಪೂಜೆಯಲ್ಲಿ ಹೆಜ್ಜೆ ಹಾಕುತ್ತಿರುವುದು.

ಉಧೋ  ಉಧೋ ಉಧೋ ಉಧೋ

ಯಲ್ಲಮ್ಮ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ

ಮಾತಂಗಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ

ರೇಣುಕತಾಯಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ

 

 

ಹುಟ್ಟಿ ಬಂದೆ ಯಲ್ಲಮ್ಮನಾಗಿ

ನಿನ್ನ ಮದುವಿ ಮಾಡಿ

ಕೊಟ್ಟಾರವ್ವ  ಜಮದಗ್ನಿಗಿ

ರೇಣುಕರಾಜ ನಿನ್ನ ತಂದಿ, ಭೋಗಾವತಿ ನಿನ್ನ ತಾಯಿ,

ಹುಟ್ಟಿ ಬಂದಿ ಹೊಟ್ಟೆಯಲ್ಲಿ, ಹಾಕಿ ತೂಗ್ಯಾರ ತೊಟ್ಟಿಲಲ್ಲಿ

ಹುಟ್ಟಿ ಬಂದೆ ಯಲ್ಲಮ್ಮನಾಗಿ…

 

ಸರ್ಪಿನ ಸಿಂಬಿ ತಲೆ ಮ್ಯಾಲೆ, ಉಸುಕಿನ ಕೊಡ ಅದರ ಮ್ಯಾಲೆ

ನೀರ ತುಂಬುತಾ ನದಿಯಲ್ಲಿ ಜೋಡ ಮೀನು ಕಂಡಿ ಅಲ್ಲಿ

ದೃಷ್ಟಿ ಹೋತ ಅದರ ಮ್ಯಾಲೆ, ಕೊಡ ಬಿತ್ತು ಭೂಮಿ ಮ್ಯಾಲೆ

ಹುಟ್ಟಿ ಬಂದಿ ಯಲ್ಲಮ್ಮನಾಗಿ…

 

ತಪವಿದ್ದ ಮುನಿಯಲ್ಲಿ

ಕೋಪವಾದ ನಿನ್ನ ಮ್ಯಾಲೆ

ಪತಿ ಶಾಪ ಕೊಟ್ಟಾನಲ್ಲಿ

ರೋಗ ಹೊಡಿತಾ ಮೈಯಲ್ಲಿ

ಕುಷ್ಠರೋಗ ಬಂತು ಮೈಲಿ

ತಿರುಗುತ್ತಿದ್ದೆ ಆ ವನದಲ್ಲಿ

ಎಕ್ಕಯ್ಯ ಜೋಗಯ್ಯ ಬಂದಾರಲ್ಲಿ

ಜನ್ಮ ಉದ್ಧಾರ ಮಾಡಿದರಲ್ಲಿ

 

ಹುಟ್ಟಿ ಬಂದಿ ಯಲ್ಲಮ್ಮನಾಗಿ…

 

 

ಮಾರುತಿ ಮಲ್ಲಪ್ಪ ಪೋಲಾ ಅವರ ಮಾರ್ಗದರ್ಶನದಲ್ಲಿ ನಡೆದ ರೇಣುಕಾದೇವಿ ಯಲ್ಲಮ್ಮ ಆಟದಲ್ಲಿ ವಾದ್ಯ ವೈಭವ ಇತ್ತು. ವಾದ್ಯ ವೈಭವನ್ನು ಮೀರುವ ಹಾಡುಗಳಿದ್ದವು. ಅಂತೆಯೇ ನೃತ್ಯವೂ ಇತ್ತು. ರೇಣುಕಾದೇವಿ, ಪರಶುರಾಮರ ವೇಷ ಧರಿಸಿದ ಭೂತೇರ ಕಲಾವಿದರು ಹಾಡುತ್ತಲೇ ಹೆಜ್ಜೆ ಹಾಕುತ್ತಾರೆ. ಹಾಡಿನ ಮೂಲಕವೇ ಕಥೆ ಕಟ್ಟಿಕೊಡುತ್ತಾರೆ. ತಾಯಿ ಯಲ್ಲಮ್ಮನನ್ನು ಆರಾಧಿಸುತ್ತಾರೆ. ಹಾಡಿನ ಮೂಲಕ ಕಥೆ ಹೇಳುವ ಪ್ರಕಾರವೂ ಭಿನ್ನ. ಕಥೆಗೆ ಅನುಗುಣವಾಗಿ ಹಾವಭಾವ, ಅಭಿನಯ. ಹಾಡಿನ ಮೂಲಕ ಹೇಳುವ ಕಥೆಯಲ್ಲಿ ತಾಯಿ ರೇಣುಕಾದೇವಿ, ಪರಶುರಾಮರು ಅಲ್ಲದೆ ಇತರ ಪಾತ್ರಧಾರಿಗಳೂ ಇರುತ್ತಾರೆ. ಜಗಳ ಹಚ್ಚುವ, ಕಾಮಿಡಿ ಮಾಡುವ ಜೋಗುಳಬಾಯಿ, ಸತ್ಯಮ್ಮ, ಮೇಲ್ ಪರಕಾರಮ್ಮ, ಯಲ್ಲಮ್ಮನನ್ನು ಕಾಪಾಡುವ ಮಾತಂಗಿ ಪ್ರಮುಖ ಪಾತ್ರಧಾರಿಗಳು.

ಯಲ್ಲಮ್ಮ ತಾಯಿ ಪೂಜೆಯಲ್ಲಿ ಹಬ್ಬದ ಸಂಭ್ರಮ. ಸಾಮಾನ್ಯವಾಗಿ ಹರಕೆ ಹೊತ್ತುಕೊಂಡವರು ಈ ಪೂಜೆಯ ಏರ್ಪಾಡು ಮಾಡುತ್ತಾರೆ. ಭರ್ಜರಿ ಭೋಜನ, ಭೋಜನದಲ್ಲಿ ಮಾಂಸಾಹಾರವೂ ಇರುತ್ತದೆ. ಸಂಬಂಧಿಕರು, ಆಪ್ತರು, ಗೆಳೆಯರು ಸೇರುತ್ತಾರೆ. ದಿನವಿಡೀ ಬಿಡುವಿಲ್ಲದಷ್ಟು ಚಟುವಟಿಕೆ. ನೆಂಟರು, ಗೆಳೆಯರಿಂದ ಮನೆ ತುಂಬಿಕೊಂಡಿರುತ್ತದೆ. ಸಂಜೆ ವೇಳೆಗೆ ಊಟ ಮುಗಿಯುತ್ತಲೇ ಭೂತೇರ ಕುಣಿತ ಅಥವಾ ರೇಣುಕಾ ಯಲ್ಲಮ್ಮ ತಾಯಿ ಆಟದ ಸಿದ್ಧತೆ ಶುರುವಾಗುತ್ತದೆ.

ಯಲ್ಲಮ್ಮ ತಾಯಿ ಆಟ ನಡೆಸಿಕೊಡಲು ಬರುವ ಭೂತೇರು ಪೂಜೆಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ದೀಪಾವಳಿ ಸಂದರ್ಭದಲ್ಲಿ ನಡೆಯುವ ಲಕ್ಷ್ಮೀ ಪೂಜೆ ಅಥವಾ ಇತರ ದೇವ ದೇವತೆಗಳ ಪೂಜೆಯಂತೆ ಇಲ್ಲೂ ಸಣ್ಣ ಮಂಟಪ, ಕಬ್ಬು ಮತ್ತು ಬಾಳೆಯ ಮರಗಳನ್ನು ಕಟ್ಟಲಾಗುತ್ತದೆ. ಯಲ್ಲಮ್ಮನ ಮುಖ ಸಿದ್ಧಪಡಿಸುವ ವಾಡಿಕೆ ಇದೆ. ತೆಂಗನ್ನು ಯಲ್ಲಮ್ಮ ತಾಯಿಯೆಂದು ಭಾವಿಸಿ ಪೂಜಿಸುವ ಪದ್ಧತಿಯೂ ಇದೆ. ತೆಂಗಿನ ಮೇಲೆ ಬಣ್ಣದ ಹೊಸ ಬಟ್ಟೆ ಹೊದಿಸಿ ಅಲಂಕಾರ ಮಾಡಲಾಗುತ್ತದೆ. ಹೂವಿನ ಅಲಂಕಾರವೂ ಇರುತ್ತದೆ. ಮುಂಭಾಗದಲ್ಲಿ ಆರತಿ ತಟ್ಟೆ. ಇದರ ಜೊತೆಗೆ ದೀವಿಗೆ ಅಥವಾ ದೀವಟಿಗೆ. ಪೂಜೆ ಆರಂಭದಲ್ಲಿ ಹೊತ್ತಿಸುವ ದೀವಿಗೆ ಇಡೀ ರಾತ್ರಿ ಉರಿಯುತ್ತಲೇ ಇರುತ್ತದೆ. ಸ್ನಾನ ಮಾಡಿ ಪೂಜೆಗೆ ಕುಳಿತುಕೊಳ್ಳುವ ವ್ಯಕ್ತಿಯೊಬ್ಬರು ಈ ದೀವಟಿಗೆಗೆ ಎಣ್ಣೆ ಹಾಕುತ್ತ ಇರಬೇಕಾಗುತ್ತದೆ. ರಾತ್ರಿ 9-10 ರ ಹೊತ್ತಿಗೆ ಶುರುವಾಗುವ ಯಲ್ಲಮ್ಮನ ಆಟ ಪ್ರದರ್ಶನ ಬೆಳಿಗ್ಗೆ 6-7 ಕ್ಕೆ ಕೊನೆಗೊಳ್ಳುತ್ತದೆ. ಪೂಜೆ ನಡೆಯುವಷ್ಟೂ ಹೊತ್ತು ದೀವಟಿಗೆ ಉರಿಯುತ್ತಿರುತ್ತದೆ.

ಆಟ ನಡೆಸಿಕೊಡುವ ತಂಡದಲ್ಲಿ ಸಾಮಾನ್ಯವಾಗಿ 6 ಜನ. ಇದಕ್ಕೂ ಹೆಚ್ಚೂ ಇರಬಹುದು. ಕಡಿಮೆಯೂ ಇರಬಹುದು. ಒಬ್ಬರು ಢೋಲು ಬಾರಿಸುತ್ತಾರೆ. ಮತ್ತೊಬ್ಬರು ತುಂತುಣಿ. ಇಬ್ಬರು ತಾಳ ಬಾರಿಸುತ್ತಾರೆ. ಪರಶುರಾಮ, ಯಲ್ಲಮ್ಮ ತಾಯಿ ಮತ್ತು ಮಾತಂಗಿ ಪಾತ್ರಧಾರಿಗಳು ಆಯಾ ವೇಷಕ್ಕೆ ಅನುಗುಣವಾಗಿ ವೇಷ ಭೂಷಣ ಧರಿಸುತ್ತಾರೆ. ರೇಣುಕಾದೇವಿ ಕತ್ತಿನ ತುಂಬ ಕವಡೆಗಳ ಸರ. ಎದೆ, ಹೊಟ್ಟೆ ಕಾಣಿಸದಷ್ಟು ಕವಡೆ ಸರಗಳು. ಸೊಂಟಕ್ಕೆ ಡಾಬು, ಕೈಯೊಳಗೆ ಹಸಿರು ಗಾಜಿನ ಬಳೆಗಳ ಜೊತೆಗೆ ಕವಡೆಗಳು. ಮೂಗಿನೊಳಗೆ ನತ್ತು. ಕಿವಿಯೊಳಗೆ ಬೆಂಡೋಲೆ, ಕಾಲಿಗೆ ಗೆಜ್ಜೆ. ತಲೆ ಮೇಲೆ ಅತ್ಯಂತ ಆಕರ್ಷಕವಾದ ಮುತ್ತುಗಳಿಂದ ಸಿದ್ಧಪಡಿಸಿದ ಕಿರೀಟ. ರೇಣುಕಾ ಯಲ್ಲಮ್ಮನಂತೆ ಪರಶುರಾಮನ ವೇಷವೂ ಆಕರ್ಷಕ.

ರೇಣುಕಾತಾಯಿಗೆ ಕೆಂಪು ಅಥವಾ ಹಸಿರು ಬಣ್ಣದ ಮಡಿ ಸೀರೆ. ಅದೇ ಬಣ್ಣದ ಕುಪ್ಪಸ. ಇತರ ಸ್ತ್ರೀ ಪಾತ್ರಧಾರಿಗಳೂ ಸೀರೆ ಧರಿಸುತ್ತಾರೆ. ಬಿಳಿಬಣ್ಣದ ಸೀರೆಯನ್ನೂ ಧರಿಸುವ ವಾಡಿಕೆ ಇದೆ.

ಪೂಜೆಯ ಸಿದ್ಧತೆ ಪೂರ್ಣಗೊಳ್ಳುತ್ತಲೇ ಪ್ರಾರ್ಥನೆಯೊಂದಿಗೆ ಹಾಡು, ನೃತ್ಯ ಶುರುವಾಗುತ್ತದೆ. ಯಲ್ಲಮ್ಮತಾಯಿ ಹುಟ್ಟು, ಆಕೆಯ ತಂದೆ ತಾಯಿ ವಿವರ, ಜಮದಗ್ನಿ ಜೊತೆಗಿನ ಮದುವೆ. ನಂತರ ಜಮದಗ್ನಿಯಿಂದ ಶಾಪ, ಮಗ ಪರಶುರಾಮನಿಂದ ತಲೆ ಕಡಿಯುವ ಶಿಕ್ಷೆ, ಮರುಜೀವ ಪಡೆದಿದ್ದು ಹೀಗೆ ರೇಣುಕಾ ಯಲ್ಲಮ್ಮ ತಾಯಿಯ ಸಂಪೂರ್ಣ ಚರಿತ್ರೆಯನ್ನು, ಮಹಿಮೆಯನ್ನು ಹಾಡುಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಹಾಡುಗಳನ್ನು ಹಾಡುವಾಗ ತಾಯಿ ರೇಣುಕಾ ಯಲ್ಲಮ್ಮ ತಾಯಿ ಕೈಯೊಳಗೆ ತ್ರಿಶೂಲ ಹಿಡಿದುಕೊಂಡು ನರ್ತಿಸುತ್ತಾರೆ. ತಾಯಿ ಜೊತೆಗೆ ಸಹಪಾತ್ರಧಾರಿಯು ಕೈಯೊಳಗೆ ಉರಿಯುವ ದೀವಟಿಗೆ ಹಿಡಿದುಕೊಂಡು ಹೆಜ್ಜೆ ಹಾಕುತ್ತಾರೆ.

ಈ ನರ್ತನ ಬರೀ ನರ್ತನ ಆಗಿರುವುದಿಲ್ಲ. ಹಾಡಿನೊಂದಿಗೆ ಹಾವಭಾವ. ಜೊತೆಗೆ ಮುದ್ರೆಗಳು. ಕುಷ್ಠರೋಗದ ಶಾಪಕ್ಕೆ ಒಳಗಾದ ಸಂದರ್ಭ ವಿವರಿಸುವ ಹಾಡು ಹಾಡುವಾಗ ಕೈ ಬೆರಳುಗಳನ್ನು ಮಡಚಿ, ಕುಷ್ಠರೋಗವನ್ನು ಸಾಂಕೇತಿಕವಾಗಿ ತೋರಿಸಲಾಗುತ್ತದೆ. ಹಾಡಿನೊಳಗಿನ ಕಥೆಗೆ ಅನುಗುಣವಾಗಿ ಮುಖದ ಮೇಲಿನ ಭಾವವೂ ಬದಲಾಗುತ್ತಿರುತ್ತದೆ. ಹಾಡಿನೊಳಗೆ ಕಷ್ಟ ಇದ್ದಾಗ ಪಾತ್ರಧಾರಿಯು ಕಣ್ಣೀರು ಹಾಕುತ್ತಾರೆ. ಇದು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಡೊಳ್ಳನ್ನು ಹೋಲುವಂತಹ ಢೋಲಕಿ ವಾದನ. ಅದಕ್ಕೆ ತಾಳಗಳ ಸಾಥ್. ಅದರೊಂದಿಗೆ ತುಂತುಣಿ. ಇವೆಲ್ಲವನ್ನು ಮೀರುವಂತಹ ಕರ್ಣಕಠೋರವಾದ ಹಾಡುಗಳು. ಹಾಡನ್ನು ಮೀರಿಸುವಂತಹ ನರ್ತನ. ಅದಕ್ಕೆ ಗೆಜ್ಜೆಗಳ ಸಾಥ್. ಈ ನರ್ತನ ವೇದಿಕೆಯ ತುಂಬ ನಡೆಯುತ್ತಿರುತ್ತದೆ. ಇದು ಒಂದೇ ಸ್ಥಳದಲ್ಲಿ ನಿಂತು ಮಾಡುವ ನರ್ತನ ಅಲ್ಲ. ವೃತ್ತಾಕಾರದಲ್ಲಿ ಸುತ್ತುತ್ತ ಕುಣಿಯುತ್ತಾರೆ. ಕೆಲವೊಮ್ಮೆ ಎರಡು ಬದಿಯಲ್ಲಿ ನಿಂತು, ಸುತ್ತು ಹಾಕುತ್ತ ಕುಣಿಯುತ್ತಾರೆ. ಒಟ್ಟು ಈ ನರ್ತನಕ್ಕೆ ಸಾಕಷ್ಟು ಸ್ಥಳ ಬೇಕಾಗುತ್ತದೆ. ವೇಷಧಾರಿಗಳು ತ್ರಿಶೂಲ, ಉರಿಯುವ ದೀವಟಿಗೆ ಹಿಡಿದುಕೊಂಡು ಹೆಜ್ಜೆ ಹಾಕುವುದರಿಂದ  ಅಕ್ಕಪಕ್ಕ ಜನ ಇರದಂತೆ ನೋಡಿಕೊಳ್ಳಲಾಗುತ್ತದೆ.

 

ಢೋಲಕಿ ಮತ್ತು ತುಂತುಣಿ ಬಾರಿಸುವವರು ಮಾತ್ರ ಒಂದೇ ಕಡೆ ನಿಲ್ಲುವುದುಂಟು. ಪಾತ್ರಧಾರಿಗಳ ಜೊತೆಗೆ ತಾಳ ಹಾಕುವವರೂ ಕುಣಿಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಪಾತ್ರಧಾರಿಗಳೇ ತಾಳ ಹಾಕುತ್ತಾರೆ. ತಾಳ ಹಾಕುತ್ತ ಕುಣಿಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ರಾತ್ರಿ ಹೊತ್ತಿನಲ್ಲಿ ನಡೆಯುವ ಈ ಕುಣಿತವನ್ನು ಪ್ರತಿಯೊಬ್ಬರು ಆನಂದಿಸುತ್ತಾರೆ. ನೋಡುವುದರಲ್ಲಿ ಮೈಮರೆಯುತ್ತಾರೆ. ಈ ಮೈಮರೆಯುವಿಕೆಯು ಎಲ್ಲರನ್ನೂ ಬೇರೊಂದು ಲೋಕಕ್ಕೆ ಕರೆದೊಯುತ್ತದೆ. ಕತ್ತಲೆ ಕಳೆದು ಬೆಳಕು ಹರಿಯುವವರೆಗೆ ಗಾಯನ, ನೃತ್ಯ ನಡೆಯುತ್ತದೆ. ಆದರೆ, ಸಮಯ ಕಳೆಯುವುದು ಗೊತ್ತೇ ಆಗಲ್ಲ. 6 ರಿಂದ 8 ಗಂಟೆಗಳಷ್ಟು ದೀರ್ಘಕಾಲ ಒಂದೇ ಕಡೆ ಕುಳಿತರೂ ಬೇಸರಿಸಲಾರರು. ಅಷ್ಟರಮಟ್ಟಿಗೆ ಈ ಗಾಯನ, ನರ್ತನ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ನೋಡಿಯೋ ಆನಂದಿಸಬೇಕು.

 

ಮಾರುತಿ ಸೋನಾರ್, ಬೀದರ್

 

Share This Article

You cannot copy content of this page