Ad imageAd image

ಭಾಲ್ಕಿ ರಸ್ತೆಗಳು ಕಲ್ಯಾಣಕ್ಕೆ ಮಾದರಿ: ಈಶ್ವರ ಖಂಡ್ರೆ

Kannada Bimba Team
3 Min Read
ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.

 

ಕನ್ನಡ ಬಿಂಬ, ಬೀದರ್

ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಮಂಗಳವಾರ 5.21 ಕೋಟಿ ರೂ ಅನುದಾನದ ಡಾಂಬರೀಕರಣ, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣ ಸೇರಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಮುಂಗಾರಿನ ಹಂಗಾಮಿನಲ್ಲಿ ಬಿತ್ತನೆಯಾದ ಬಹುತೇಕ ಬೆಳೆಗಳು ಜಲಾವೃತಗೊಂಡಿದ್ದವು. ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದೆ. ಹೆಚ್ಚುವರಿ ಪರಿಹಾರ ಒದಗಿಸಲು ಸಿಎಂ ಅವರನ್ನು ಆಹ್ವಾನಿಸಿ ವೈಮಾನಿಕ ಸಮೀಕ್ಷೆ ನಡೆಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಜಿಲ್ಲೆಗೆ 300 ಕೋಟಿ ರೂ ಬೆಳೆಹಾನಿ ಪರಿಹಾರ ಒದಗಿಸಲಾಗಿದೆ. ಭಾಲ್ಕಿ ತಾಲೂಕಿಗೆ 60 ಕೋಟಿ ರೂ ಬೆಳೆಹಾನಿ ಪರಿಹಾರ ಬಿಡುಗಡೆಗೊಂಡಿದೆ ಎಂದರು.

ಕೆಲಕಡೆಗಳಲ್ಲಿ ಬೆಳೆಹಾನಿ ಸಮೀಕ್ಷೆ ಅಂತಿಮ ಹಂತದಲ್ಲಿದ್ದು ಸಮೀಕ್ಷೆ ಪೂರ್ಣಗೊಳ್ಳುತ್ತಲೇ ಮುಂದಿನ ಎರಡ್ಮೂರು ದಿನಗಳಲ್ಲಿ ರೈತರ ಖಾತೆಗೆ ಬೆಳೆಹಾನಿ ಪರಿಹಾರ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

 

ಗ್ಯಾರಂಟಿ ಜತೆಗೆ ಅಭಿವೃದ್ಧಿ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆ ಬಡ ಜನರಿಗೆ ವರವಾಗಿವೆ. ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗಿವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಜಿಲ್ಲೆಯಲ್ಲಿ 3.5 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು 70 ಕೋಟಿ ರೂ ಖರ್ಚಾಗುತ್ತಿದೆ ಎಂದರು. ತಾಲೂಕಿನ 60 ಸಾವಿರ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗುತ್ತಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆ ಬಗ್ಗೆ ವಿರೋಧಿಗಳು ಟೀಕೆ ಮಾಡುತ್ತಿದ್ದರು. ಈ ಐದು ಯೋಜನೆ ಜಾರಿಯಾದರೆ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಸರಕಾರ ದಿವಾಳಿ ಆಗುತ್ತದೆ. ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ ಎಂದು ಟೀಕಿಸುತ್ತಿದ್ದರು.

ಆದರೆ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವ ಜೊತೆಗೆ ಅಭಿವೃದ್ಧಿ ಪರ ಕೆಲಸಗಳಿಗೆ ಅಗತ್ಯ ಅನುದಾನ ನೀಡಿದೆ. ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ ಎಂದು ಸಚಿವರು ಹೇಳಿದರು.

 

5.21 ಕೋಟಿ ಅನುದಾನ:

ಭಾತಂಬ್ರಾ ಗ್ರಾಮದಲ್ಲಿ 2.75 ಕೋಟಿ ರೂ ಅನುದಾನದಲ್ಲಿ ರಸ್ತೆ ಮರುಡಾಂಬರೀಕರಣ, 1.96 ಕೋಟಿ ರೂ ಅನುದಾನದಲ್ಲಿ ಎಸ್ಸಿ ಮತ್ತು ಎಸ್ಟಿ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಗ್ರಾಮದಲ್ಲಿ ವಿವಿಧ ಭವನ, ದೇಗುಲ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಗಡಿಭಾಗದ ರಸ್ತೆಗಳು ಹೈವೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಇಇ ಶಿವಶಂಕರ ಕಾಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್, ಉಪಾಧ್ಯಕ್ಷೆ ಗೋದಾವರಿ ಬೀರಗೆ, ಸದಸ್ಯ ವಿಶ್ವ ಹೂಗಾರ, ಪ್ರಮುಖರಾದ ಶಂಕರ ಭೋರಾಳೆ, ಕಾಶಿನಾಥ ಲದ್ದೆ, ಭಯ್ಯ, ಅಂಬಾದಾಸ ಕೋರೆ, ಸಂತೋಷ ಬಿರಾದಾರ್, ಮುಸ್ತಾಕ ಅಹ್ಮೇದ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಇಒ ಸೂರ್ಯಕಾಂತ ಬಿರಾದಾರ್, ಲೋಕೋಪಯೋಗಿ ಎಇಇ ಅಲ್ತಾಫ್ ಸೇರಿದಂತೆ ಹಲವರು ಇದ್ದರು. ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

Share This Article

You cannot copy content of this page