
ಕನ್ನಡ ಬಿಂಬ, ಬೀದರ್
ಬೀದರ್ ನಗರದಲ್ಲಿ ರೋಟರಿ ಭವನ ನಿರ್ಮಾಣಕ್ಕೆ ಸಿಎ ನಿವೇಶನ ಒದಗಿಸಬೇಕು ಎಂದು ರೋಟರಿ ಭವನ ಕಟ್ಟಡ ಸಮಿತಿ ಪ್ರಮುಖರು ಆಗ್ರಹಿಸಿದ್ದಾರೆ. ಸಮಿತಿ ಪ್ರಮುಖರು ನಗರದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಜಿಲ್ಲೆಯಲ್ಲಿ 50 ವರ್ಷಗಳಿಂದ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದೆ. ಆದರೆ, ಸಂಸ್ಥೆಗೆ ಈವರೆಗೂ ನಗರದಲ್ಲಿ ಸ್ವಂತ ಕಟ್ಟಡ ಇಲ್ಲ ಎಂದು ರೋಟರಿ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಅವರು ಸಚಿವರ ಗಮನ ಸೆಳೆದರು.
ಜಿಲ್ಲೆಯಲ್ಲಿ 10 ರೋಟರಿ ಕ್ಲಬ್‍ಗಳು ಶಿಕ್ಷಣ, ಆರೋಗ್ಯ, ಪರಿಸರ, ನೈರ್ಮಲ್ಯ, ಮಹಿಳಾ ಸಬಲೀಕರಣ ಹಾಗೂ ಇತರ ಸಮುದಾಯ ಕಲ್ಯಾಣ ಕಾರ್ಯಗಳಿಗೆ ಕೊಡುಗೆ ನೀಡುತ್ತಾ ಬಂದಿವೆ. ಸದ್ಯ ಬೀದರ್‍ನ ಐ.ಎಂ.ಎ. ಹಾಲ್ ಬಾಡಿಗೆ ಪಡೆದು, ಚಟುವಟಿಕೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸ್ವಂತ ಕಟ್ಟಡ ಹೊಂದಿದ್ದರೆ ಇನ್ನೂ ಹೆಚ್ಚಿನ ಸೇವಾ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್‍ಗಳ ಸದಸ್ಯರ ವೈಯಕ್ತಿಕ ದೇಣಿಗೆಯಿಂದ ರೊಟರಿ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗಾಗಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಯೋಜಿಸಲಾಗಿದೆ. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನದ ನಿಗದಿತ ಶುಲ್ಕ ಪಾವತಿಗೂ ಸದಸ್ಯರು ಸಿದ್ಧರಿದ್ದಾರೆ ಎಂದು ಹೇಳಿದರು.
ಸಿಎ ಸೈಟ್‍ಗಾಗಿ 2023 ರಲ್ಲೂ ಜಿಲ್ಲಾಡಳಿತ ಹಾಗೂ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಿಎ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಿಎ ನಿವೇಶನ ಬೇಡಿಕೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಮಿತಿಯ ಪ್ರಮುಖರಾದ ಹಾವಶೆಟ್ಟಿ ಪಾಟೀಲ, ಸುಮೀತ್ ಸಿಂದೋಲ್ ಇದ್ದರು.


