
ಕನ್ನಡ ಬಿಂಬ, ಬೀದರ್
ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಹುದ್ದೆಯಿಂದ ಡಾ.ಶಿವಕುಮಾರ ಶೆಟಕಾರ್ ಅವರನ್ನು ಕೆಳಗಿಳಿಸುವ ಮತ್ತು ಅವರ ವಿರುದ್ದ ತನಿಖೆ ನಡೆಸುವ ಪ್ರಯತ್ನ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಶೆಟಕಾರ್ ಇದ್ದಲ್ಲಿಯೇ ಇದ್ದಾರೆ. ಅವರನ್ನು ಅಲುಗಾಡಿಸುವುದೂ ಸರಕಾರಕ್ಕೆ ಸಾಧ್ಯವಾಗಿಲ್ಲ.
ಡಾ.ಶಿವಕುಮಾರ ಶೆಟಕಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಿಂಜರಿಯುತ್ತಿದೆಯೇ ?, ನಿಯಮ ಉಲ್ಲಂಘನೆ ಆಗಿದೆ, ಅವ್ಯವಹಾರ ಆಗಿದೆ ಎಂದು ಸಚಿವರೇ ಹೇಳುತ್ತಾರೆ. ಆದರೆ, ಜಾರಿಯಲ್ಲಿರುವ ನಿಯಮಾನುಸಾರ, ಸರಿಯಾದ, ನಿಯಮಕ್ಕೆ ಅನುಗುಣವಾದ ಶಿಸ್ತು ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ?, ಕ್ರಮ ಕೈಗೊಳ್ಳುವುದು ಸರಕಾರಕ್ಕೇ ಬೇಕಿಲ್ಲವೇನೋ ?
ಬೀದರ್ ಮೇಡಿಕಲ್ ಕಾಲೇಜು (ಬ್ರಿಮ್ಸ್ ) ನಿರ್ದೇಶಕರ ವಿರುದ್ಧದ ಮೂರೂ ಅದೇಶಗಳು ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂದಿಡುತ್ತಿರುವ ಪ್ರಶ್ನೆಗಳಿವು. ಡಾ. ಶಿವಕುಮಾರ ಶೆಟಕಾರ್ ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡುವುದಕ್ಕಾಗಿಯೇ ಈ ರೀತಿ ತಪ್ಪು ಮಾಡಲಾಗುತ್ತಿರಬಹುದು ಎಂದೂ ಜನ ಅನುಮಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.
ನಿರ್ದೇಶಕ ಹುದ್ದೆಯಿಂದ ಬಿಡುಗಡೆ, ಜಿಲ್ಲಾಧಿಕಾರಿಯವರಿಂದ ತನಿಖೆ ಮತ್ತು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ರಾಜ್ಯ ಸರಕಾರ ಮೂರು ಬಾರಿ ಪ್ರತ್ಯೇಕ ಆದೇಶ ಹೊರಡಿಸಿದೆ. ಮೂರೂ ಬಾರಿ ಸರಕಾರಕ್ಕೆ ಹಿನ್ನಡೆ ಆಗಿದೆ. ಹಿನ್ನಡೆಯ ಹಿಂದಿರುವ ಕಾರಣ, ಬೈಲಾ ಮತ್ತು ನಾಗರಿಕ ಸೇವಾ ನಿಯಮಗಳ ಉಲ್ಲಂಘನೆ.
ಬೈಲಾ ನಿಯಮ ಮತ್ತು ನಾಗರಿಕ ಸೇವಾ ನಿಯಮಗಳ ಅರಿವು ರಾಜ್ಯ ಸರಕಾರಕ್ಕೆ ಇದ್ದಿರಲಿಲ್ಲವೇ, ಅರಿವು ಇದ್ದರೂ ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯಲ್ಲಿ ಲೋಪ ಉಂಟಾಗುವಂತೆ ಮಾಡಲಾಗಿದೆಯೇ ?, ಡಾ.ಶಿವಕುಮಾರ ಶೆಟಕಾರ್ ಅವರಿಗೆ ಕಾನೂನು ಕ್ರಮದಿಂದ ರಕ್ಷಣೆ ಸಿಗುವಂತೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆಯೇ ? ಈ ರೀತಿಯ ತಾಂತ್ರಿಕ ತಪ್ಪು ಯಾಕೆ ಮಾಡಲಾಯಿತು ? ಅದರ ಹಿಂದಿರುವ ಉದ್ದೇಶವಾದರೂ ಏನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ತಾಂತ್ರಿಕ ತಪ್ಪಿನಿಂದಾಗಿ ಡಾ. ಶೆಟಕಾರ್ ಅವರಿಗೆ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ಸಿಕ್ಕಂತಾಗಿದೆಯಲ್ಲವೇ, ಡಾ.ಶೆಟಕಾರ್ ಅವರನ್ನು ಉಳಿಸಲು ಮತ್ತು ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ದಾರಿ ಮಾಡಿ ಕೊಡುವುದಕ್ಕಾಗಿ ಬೇಕೆಂದೇ ಈ ತಪ್ಪುಗಳನ್ನು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳೂ ಎದುರಾಗಿವೆ.
2022 ರ ಅಕ್ಟೋಬರ್‍ನಲ್ಲಿ ಡಾ. ಶಿವಕುಮಾರ ಶೆಟಕಾರ್ ಅವರನ್ನು ಮೇಡಿಕಲ್ ಕಾಲೇಜಿನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಮೂರು ವರ್ಷ ಕಳೆದಿವೆ. ಬೈಲಾ ಪ್ರಕಾರ ಇನ್ನೊಂದು ವರ್ಷವಷ್ಟೇ ಬಾಕಿ ಇದೆ. ನಾಲ್ಕು ವರ್ಷಗಳ ಅವಧಿ ಪೂರ್ಣಗೊಳ್ಳುವ ಮುನ್ನ ಅವರನ್ನು ಕೆಳಗಿಸಲು ಸರಕಾರವೇನೋ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ಇಲ್ಲಿಯವರೆಗೆ ಅದು ಸಾದ್ಯವಾಗಿಲ್ಲ.
ಮೇಡಿಕಲ್ ಕಾಲೇಜಿನ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಡಲು ಈಗಾಗಲೇ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಲಾಗಿದೆ. ಮುಖ್ಯ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗಿದೆ. ಹಣಕಾಸು ಮತ್ತು ಆಡಳಿತ ಸಂಬಂಧಿ ವಿಷಯಗಳನ್ನು ನಿಯಂತ್ರಿಸಲು ಸರಕಾರ ಕ್ರಮ ಕೈಗೊಂಡಿದೆ. ಈ ನೇಮಕದ ನಂತರ ಹಣಕಾಸು ಮತ್ತು ಆಡಳಿತಾತ್ಮಕ ಸಂಗತಿಗಳಲ್ಲಿ ನಿಯಮ ಪಾಲನೆ ಖಚಿತಗೊಂಡಿರಬಹುದು. ಆದರೆ, ಅದಕ್ಕೂ ಹಿಂದಿನ ನಿಯಮ ಉಲ್ಲಂಘನೆಗಳ ವಿಷಯ ಏನಾಗಬಹುದು.
ಟೆಂಡರ್ ಬದಲು ಕೊಟೇಶನ್ ಮೂಲಕ ಖರೀದಿ, ಕೇಡರ್ ಬದಲಾವಣೆ ರದ್ದಾದರೂ ನರ್ಸ್ ಆಗಿದ್ದವರಿಗೆ ಕ್ಲರ್ಕ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ, ಚಾಲಕನಿಗೆ ಉಪಕರಣ ತಂತ್ರಜ್ಞ ಹುದ್ದೆ ಹೀಗೆ ಹತ್ತಾರು ನಿಯಮ ಉಲ್ಲಂಘನೆಗಳು ಡಾ. ಶೆಟಕಾರ್ ಅವಧಿಯಲ್ಲಿ ನಡೆದಿವೆ.
ಡಾ. ಚೆನ್ನಣ್ಣ ಅವರು ಕಾಲೇಜಿನ ನಿರ್ದೇಶಕ ಆಗಿದ್ದಾಗ ದಲಿತ ಮುಖಂಡ ಮಾರುತಿ ಕಂಟಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ಡಾ. ಶಿವಕುಮಾರ ಶೆಟಕಾರ್ ಅವರ ಹೆಸರೂ ಇದೆ. ಶೆಟಕಾರ್ ವಿರುದ್ಧವೂ ಎಫ್‍ಐಆರ್ ದಾಖಲಿಸಲು ರಾಜ್ಯ ಸರಕಾರ ಅನುಮತಿ ನೀಡಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಈ ಪ್ರಕರಣ ತಣ್ಣಗಾಗಿದೆ.
ಮೇಡಿಕಲ್ ಕಾಲೇಜಿನ ನಿರ್ದೇಶಕ ಸ್ಥಾನಕ್ಕೆ ಡಾ. ಶಿವಕುಮಾರ ಶೆಟಕಾರ್ ಅವರನ್ನು ನೇಮಕ ಮಾಡುವಾಗ, ಅವರ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಾಗಿರುವ ಸಂಗತಿ ಪ್ರಸ್ತಾಪವಾಗಿತ್ತು. ಆದರೆ, ಆಗಿನ ಬಿಜೆಪಿ ಸರಕಾರ ಒಂದು ಸಣ್ಣ ಷರತ್ತು ಹಾಕಿ, ಶೆಟಕಾರ್ ಅವರ ಹೆಸರನ್ನು ನಿರ್ದೇಶಕ ಸ್ಥಾನಕ್ಕೆ ಅಂತಿಮಗೊಳಿಸಿತ್ತು.
ಶೆಟಕಾರ್ ನೇಮಕದ ಸಂದರ್ಭದಲ್ಲಿ ಬಹಿರಂಗವಾಗಿ ಅಪಸ್ವರ ವ್ಯಕ್ತವಾಗಿರಲಿಲ್ಲ. ಎರಡು ವರ್ಷ ಅವರ ಆಡಳಿತ ಸುಲಭವಾಗಿಯೇ ನಡೆದಿತ್ತು. ಆದರೆ, 2024 ರಿಂದ ಮಾತ್ರ ಅವರು, ಆಡಳಿತ ಪಕ್ಷದ ನಾಯಕರಿಗೆ ಬೇಡವಾಗಲಾರಂಭಿಸಿದರು.
ಡಾ.ಶೆಟಕಾರ್ ಅವರನ್ನು ನಿರ್ದೇಶಕ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನ ಅದಾಗಲೇ ಶುರುವಾಗಿದ್ದವು. ಡಾ.ಶಿವಕುಮಾರ ಶೆಟಕಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಆದೇಶ ಹೊರಡಿಸಿದ್ದು, ಒಂದು ವರ್ಷದ ಹಿಂದೆ. 2024ರ ಅಕ್ಟೋಬರ್ 24 ರಂದು. ನಾಲ್ಕು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ಹೊರಡಿಸಿದ ಈ ಆದೇಶವನ್ನು ಡಾ.ಶೆಟಕಾರ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಬೈಲಾ ದಲ್ಲಿ ನಿರ್ದೇಶಕರ ಕಾರ್ಯಾವಧಿಯನ್ನು 4 ವರ್ಷ ನಿಗದಿಪಡಿಸಲಾಗಿತ್ತು. ಹೀಗಾಗಿ ಅಕ್ಟೋಬರ್ 24 ರ ಆದೇಶವನ್ನು ರಾಜ್ಯ ಸರಕಾರ ಸ್ವತ: ವಾಪಸ್ ಪಡೆಯುತ್ತಿರುವುದಾಗಿ ಹೈಕೋರ್ಟ್‍ಗೆ ತಿಳಿಸಬೇಕಾಯಿತು.
ನಿರ್ದೇಶಕ ಹುದ್ದೆಯಿಂದ ಬಿಡುಗಡೆ ಮಾಡಿ ಹೊರಡಿಸಲಾದ ಮೊದಲ ಆದೇಶ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಬೀದರ್ ಜಿಲ್ಲಾಧಿಕಾರಿಯವರ ಮೂಲಕ ಶೆಟಕಾರ್ ಅವಧಿಯಲ್ಲಿನ ಹಣಕಾಸು ಮತ್ತು ಆಡಳಿತಾತ್ಮಕ ತೀರ್ಮಾನಗಳ ಬಗ್ಗೆ ತನಿಖೆ ನಡೆಸಲು ಮುಂದಾಯಿತು. ಇದಕ್ಕಾಗಿ 2024 ರ ನವೆಂಬರ್ 7 ರಂದು ಬೀದರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ರಾಜ್ಯ ಸರಕಾರದ ಈ ಕ್ರಮವನ್ನೂ ಡಾ.ಶಿವಕುಮಾರ ಶೆಟಕಾರ್ ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ನಿರ್ದೇಶಕರ ವಿರುದ್ದದ ತನಿಖೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರ ಹುದ್ದೆಗಿಂತ ಕೆಳಗಿನ ಅಧಿಕಾರಿಯಿಂದ ಮಾಡಿಸಬಾರದು ಎಂಬ ಬೈಲಾ ನಿಯಮದ ಬಗ್ಗೆ ಶೆಟಕಾರ್ ವಕೀಲರು ಹೈಕೋರ್ಟ್‍ಗೆ ಮನವರಿಕೆ ಮಾಡಿಕೊಡುತ್ತಾರೆ. ನಂತರ ರಾಜ್ಯ ಸರಕಾರ ಈ ಪತ್ರವನ್ನೂ ವಾಪಸ್ ಪಡೆಯುತ್ತಿರುವುದಾಗಿ ಹೈಕೋರ್ಟ್‍ಗೆ ತಿಳಿಸುತ್ತದೆ.
ಇದಾದ ನಂತರ ರಾಜ್ಯ ಸರಕಾರ ಮೂರನೇ ಬಾರಿ ಶೆಟಕಾರ್ ವಿರುದ್ಧ ಕ್ರಮಕ್ಕೆ ಮುಂದಾಗುತ್ತದೆ. ಬೈಲಾ ಪ್ರಕಾರ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನಂತರ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡುತ್ತದೆ. ಆಡಳಿತ ಮಂಡಳಿ ಸಭೆ ನಡೆದಿದ್ದು 2025 ರ ಜುಲೈ 31 ರಂದು. ನಿವೃತ್ತ ನ್ಯಾಯಾಧೀಶರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದು 2025 ಅಕ್ಟೋಬರ್ 31 ರಂದು.
ರಾಜ್ಯ ಸರಕಾರದ ಮೂರನೇ ಆದೇಶದ ವಿರುದ್ಧವೂ ಡಾ.ಶಿವಕುಮಾರ ಶೆಟಕಾರ್ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಕರ್ನಾಟಕ ನಾಗರಿಕ ಸೇವಾ ನಿಯಮ ಪಾಲನೆ ಆಗಿಲ್ಲ ಎಂದು ಶೆಟಕಾರ್ ಪರ ವಕೀಲರು ಹೈಕೋರ್ಟ್‍ಗೆ ಮನವರಿಕೆ ಮಾಡಿಕೊಡುತ್ತಾರೆ. ಮೂರನೇ ಬಾರಿಯೂ ರಾಜ್ಯ ಸರಕಾರಕ್ಕೆ ಹಿನ್ನಡೆ ಆಗುತ್ತದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ಅನುಗುಣವಾಗಿ ತನಿಖೆಗೆ ಆದೇಶ ಹೊರಡಿಸಬೇಕು ಎಂಬ ಸೂಚನೆಯನ್ನೂ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೀಡಿದೆ.
ಹೀಗೆ ಮೂರೂ ಬಾರಿ ಸರಕಾರಕ್ಕೆ ಹಿನ್ನಡೆಯಾಗುತ್ತದೆ. ಆದರೂ, ಡಾ.ಶೆಟಕಾರ್ ಅವರನ್ನು ನಿಯಂತ್ರಿಸಲು ಸರಕಾರ ಒಂದಿಲ್ಲೊಂದು ಕ್ರಮ ಕೈಗೊಳ್ಳುತ್ತಲೇ ಇದೆ. ಹಣಕಾಸು ಸಲಹೆಗಾರರ ನೇಮಕ ಆಗಿದೆ. ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವ ಆದೇಶವನ್ನು ನಾಗರಿಕ ಸೇವಾ ನಿಯಮಗಳಿಗೆ ಅನುಗುಣವಾಗಿ ಹೊರಡಿಸಲೂಬಹುದು. ಆದರೆ, ಶೆಟಕಾರ ಅವಧಿ ಇನ್ನೊಂದೇ ವರ್ಷ ಉಳಿದಿದೆ. ಸರಕಾರದ ಆದೇಶ ಹೊರಬಿದ್ದು, ಅದು ಕಾರ್ಯಗತಗೊಳ್ಳುವುದರಲ್ಲಿ ಶೆಟಕಾರ್ ಅವರ ಅವಧಿ ಪೂರ್ಣಗೊಂಡರೂ ಅಚ್ಚರಿಪಡಬೇಕಿಲ್ಲ.


