
ಕನ್ನಡ ಬಿಂಬ, ಬೀದರ್
ಬಸವಕಲ್ಯಾಣ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶಿವಸೃಷ್ಟಿ ಪಾರ್ಕ್ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದ 10 ಕೋಟಿ ರೂ.ಗಳನ್ನು ಈಗಿನ ಕಾಂಗ್ರೆಸ್ ಸರಕಾರ ವಾಪಸ್ ಪಡೆದುಕೊಂಡಿದೆ. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅವರ ಪ್ರಶ್ನಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಈ ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ಗಮನ ಸೆಳೆಯುವ ಸೂಚನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ನೀಡಿರುವ ಮತ್ತೊಂದು ಉತ್ತರದಲ್ಲೂ ಈ ವಿಷಯ ಇದೆ.
ಬಿಜೆಪಿ ಸರಕಾರ ಇದ್ದಾಗ ಸಚಿವ ಎಂ.ಟಿ.ಬಿ. ನಾಗರಾಜ ಅವರು ವಿಧಾನಸಭೆ ಅಧಿವೇಶನದಲ್ಲಿ ಬಸವಕಲ್ಯಾಣದಲ್ಲಿ ಶಿವಸೃಷ್ಟಿ ನಿರ್ಮಾಣಕ್ಕಾಗಿ 10 ಎಕರೆ ಜಮೀನು ಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ್ ಹಾಗೂ ಪುತ್ಥಳಿ ನಿರ್ಮಾಣ ಮಾಡಲು ಎಸ್ ಎಫ್‍ಸಿ ವಿಶೇಷ ಯೋಜನೆಯಡಿ 10 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಕುರಿತು 2020 ರ ನವೆಂಬರ್ 13 ರಂದು ಆದೇಶ ಹೊರಡಿಸಲಾಗಿತ್ತು.
ಶಿವಸೃಷ್ಠಿ ನಿರ್ಮಾಣಕ್ಕೆ ಮೊದಲು ಬಸವಕಲ್ಯಾಣ ತಾಲೂಕಿನ ಯರಂಡಿ ಗ್ರಾಮದ ಸರ್ವೆ ಸಂಖ್ಯೆ 36 ರಲ್ಲಿ 38 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ನಂತರ ಇದನ್ನು ರದ್ದುಪಡಿಸಿದ ಬೀದರ್ ಜಿಲ್ಲಾಧಿಕಾರಿಯವರು ಬಸವಕಲ್ಯಾಣ ಹೋಬಳಿಯ ತ್ರಿಪುರಾಂತ ಗ್ರಾಮದ ಸರಕಾರಿ ಪರಂಪೋಕ ಜಮೀನು ಸರ್ವೆ ನಂ. 141 ರಲ್ಲಿ 10 ಎಕರೆ ಜಮೀನನ್ನು ಉದ್ಯಾನ ನಿರ್ಮಾಣಕ್ಕೆ ಕಾಯ್ದಿರಿಸಿ 2023 ರ ಜನವರಿ 13 ರಂದು ಆದೇಶ ಹೊರಡಿಸಿದ್ದರು.
ಬಸವಕಲ್ಯಾಣ ನಗರಸಭೆಗೆ ಶಿವಸೃಷ್ಟಿ ನಿರ್ಮಾಣ ಯೋಜನೆಗೆ ಬಿಡುಗಡೆ ಆಗಿದ್ದ 10 ಕೋಟಿ ರೂ.ಗಳನ್ನು ರಾಜ್ಯ ಸರಕಾರ 2024 ರ ಡಿಸೆಂಬರ್ 21 ರಂದು ಹೊರಡಿಸಿದ ಆದೇಶದ ಪ್ರಕಾರ ವಾಪಸ್ ಪಡೆಯಲಾಗಿತ್ತು.
ಇದಕ್ಕೂ ಮುನ್ನ ಬಸವಕಲ್ಯಾಣ ನಗರಸಭೆ ಆಡಳಿತಾಧಿಕಾರಿಯೂ ಆಗಿದ್ದ ಬೀದರ್ ಜಿಲ್ಲಾಧಿಕಾರಿಯವರು 2024 ರ ನವೆಂಬರ್ 11 ರಂದು ಕೈಗೊಂಡಿದ್ದ ನಡುವಳಿ ಪ್ರಕಾರ ಮತ್ತು ಬಸವಕಲ್ಯಾಣ ಶಾಸಕರು 2024 ರ ನವೆಂಬರ್ 4 ರಂದು ಬರೆದ ಪತ್ರದ ಅನ್ವಯ ಪಾರ್ಕ್ ಸಂಬಂಧ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಮತ್ತು 10 ಕೋಟಿ ರೂ. ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಆದರೆ, ಈ ಕ್ರಿಯಾ ಯೋಜನೆ ಅನುಮೋದನೆಯಾಗುವ ಮೊದಲೇ ರಾಜ್ಯ ಸರಕಾರವು ಶಿವಸೃಷ್ಟಿ ಪಾರ್ಕ್ ನಿರ್ಮಾಣಕ್ಕಾಗಿ ಹಿಂದೆ ಬಿಡುಗಡೆ ಆಗಿದ್ದ ರೂ. 10 ಕೋಟಿ ಅನುದಾನವನ್ನು ವಾಪಸ್ ಪಡೆದು ಬೇರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮರುಹಂಚಿಕೆ ಮಾಡಿದ್ದರಿಂದ ಶಿವಸೃಷ್ಟಿ ಕುರಿತ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿರಲಿಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅವರು ಕಳೆದ ಮಾರ್ಚ್‍ನಲ್ಲಿ ನಡೆದ ಅಧಿವೇಶನದಲ್ಲಿ ಲಿಖಿತ ಪ್ರಶ್ನೆ ಕೇಳಿದ್ದರು. 2025ರ ಮಾರ್ಚ್ 18 ರಂದು ಇದಕ್ಕೆ ಲಿಖಿತ ಉತ್ತರ ನೀಡಿದ ಪೌರಾಡಳಿತ ಸಚಿವ ರಹೀಂ ಖಾನ್ ಅವರು, ಹಿಂದೆ ಬಿಡುಗಡೆ ಆಗಿದ್ದ 10 ಕೋಟಿ ರೂ. ಅನುದಾನವನ್ನು ಹಿಂದಕ್ಕೆ ಪಡೆದಿರುವ ಸಂಗತಿಯನ್ನು ಖಚಿತಪಡಿಸಿದ್ದರು.
ಶಿವಾಜಿ ಪಾರ್ಕ್, ಪುತ್ಥಳಿ ಸ್ಥಾಪನೆ ಮತ್ತು ಶಿಲ್ಪಗಳು ಸೇರಿದಂತೆ ಶಿವಸೃಷ್ಟಿ ನಿರ್ಮಾಣಕ್ಕೆ ಬಿಡುಗಡೆ ಆಗಿದ್ದ ಅನುದಾನವನ್ನು ವಾಪಸ್ ಪಡೆದಿರುವುದರಿಂದ ಮರಾಠಾ ಸಮಾಜಕ್ಕೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಗೆ ಅಗೌರವ ತೋರಿಸಿದಂತೆ ಆಗುವುದಿಲ್ಲವೆ ಎಂದೂ ಮುಳೆ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ರಹೀಂ ಖಾನ್, ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ್ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕುರಿತು ಹೊಸದಾಗಿ ಪ್ರಸ್ತಾವನೆ ಸ್ವೀಕೃತವಾದಲ್ಲಿ ಆರ್ಥಿಕ ಇಲಾಖೆಯ ಸಹಮತಿಯನ್ವಯ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.
ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಅವರೂ ಈ ವಿಷಯವನ್ನು ಮೊನ್ನೆ ಕೊನೆಗೊಂಡ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ನಿಯಮ 73 ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆ ಸಂಖ್ಯೆ 323 ಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ಲಿಖಿತ ಉತ್ತರ ನೀಡಿದ್ದಾರೆ.
`ಶಿವಸೃಷ್ಠಿ ನಿರ್ಮಾಣಕ್ಕೆ ನಾನು ಕೆಕೆಆರ್‍ಡಿಬಿ ಅನುದಾನದಲ್ಲಿ 3 ಕೋಟಿ ರೂ. ಕೊಟ್ಟಿರುತ್ತೇನೆ. ಆದರೂ ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿರುವುದಿಲ್ಲ. ಸದರಿ ಕಾಮಗಾರಿಗೆ ಯಾವಾಗ ಹಣ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸುತ್ತೀರಿ’ ಎಂದು ಶಾಸಕರು ಕೇಳಿದ್ದರು.
ಸಚಿವ ರಹೀಂ ಖಾನ್ ನೀಡಿರುವ ಉತ್ತರದಲ್ಲೂ ರೂ. 10 ಕೋಟಿ ಅನುದಾನವನ್ನು ವಾಪಸ್ ಪಡೆದಿರುವ ವಿಷಯ ಪ್ರಸ್ತಾಪಿಸಲಾಗಿದೆ. 2024-25 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಯೋಜನೆಯಡಿ ಶಿವಾಜಿ ಮಹಾರಾಜರ ಶಿವಸೃಷ್ಟಿ ಪಾರ್ಕ್, ಜಮೀನಿನ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ, ನಾಮಫಲಕ, ಕುಡಿಯುವ ನೀರಿಗಾಗಿ ಕೊಳವೆ ಬಾವಿ, ರಸ್ತೆ ಸಂಪರ್ಕ ಮತ್ತು ಮೂಲಭೂತ ಸೌಕರ್ಯ ಸಂಪರ್ಕ ಕಾಮಗಾರಿಗೆ 1 ಕೋಟಿ ರೂ. ಅನುದಾನ ಹಂಚಿಕೆ ಆಗಿರುತ್ತದೆ.
2025-26 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ಶಿವಾಜಿ ಮಹಾರಾಜರ ಶಿವಸೃಷ್ಟಿ ಪಾರ್ಕ್ ಮುಂದುವರೆದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಾಜಿ ಮಹಾರಾಜರ ಉದ್ಯಾನವನ ಹಾಗೂ ಪುತ್ಥಳಿ ಸ್ಥಾಪನೆ ಕಾಮಗಾರಿಗೆ ಅನುದಾನ ಮರುಹಂಚಿಕೆ ಕೋರಿ ಯಾವುದೇ ಪ್ರಸ್ತಾವನೆ ಸ್ವೀಕೃತವಾಗಿರುವುದಿಲ್ಲ. ಅನುದಾನ ಹಂಚಿಕೆ ಕೋರಿ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆರ್ಥಿಕ ಇಲಾಖೆಯ ಸಹಮತಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ ಸಚಿವ ರಹೀಂ ಖಾನ್ ಅವರ ಪತ್ರದಲ್ಲಿದೆ.
ಶಿವಸೃಷ್ಟಿ ಪಾರ್ಕ್ ನಿರ್ಮಾಣಕ್ಕೆ ಹಿಂದೆ ಬಿಡುಗಡೆ ಆಗಿದ್ದ 10 ಕೋಟಿ ರೂ. ಗಳನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ. ಕಂಪೌಂಡ್ ಮತ್ತಿತರ ಕಾಮಗಾರಿಗೆ ಕೆಕೆಆರ್‍ಡಿಬಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ, ಇನ್ನೂ 2 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.


