
ಕನ್ನಡ ಬಿಂಬ, ಬೀದರ್
ನೀಲಾಂಬಿಕೆ ತಾಯಿಯವರು ಮಹಾಮನೆಯ ಮಹಾತಾಯಿ ಆಗಿದ್ದರು. ಮಹಾಮನೆಗೆ ಆಗಮಿಸಿದ ಎಲ್ಲರಿಗೆ ಪ್ರೀತಿಯಿಂದ ಬರಮಾಡಿಕೊಂಡು ಪ್ರಸಾದ ಮಾಡಿಸುತ್ತಿದ್ದರು. ಬಸವಣ್ಣನವರ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿ ನಿಂತಿದ್ದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ನೀಲಾಂಬಿಕೆ ತಾಯಿಯವರು ನೂರಾರು ವಚನಗಳಲ್ಲಿ ಬಸವಣ್ಣನವರ ಕುರಿತು ಹೃದಯ ತುಂಬಿ ಮಾತನಾಡಿದ್ದಾರೆ. ಅವರು ಬಸವಣ್ಣನವರ ವಿಚಾರ ಪತ್ನಿ ಎಂದು ಹೇಳುತ್ತಾರೆ. ಸಿದ್ಧರಸ ಪದ್ಮಗಂಧಿಯ ಮಗಳಾದ ನೀಲಾಂಬಿಕೆ ತಾಯಿಯವರು ಬಿಜ್ಜಳ ಅರಸನ ಸಾಕು ತಂಗಿಯಾಗಿದ್ದಳು. ಬಸವಣ್ಣನವರ ಸಮತಾ ರಾಜ್ಯದ ನಿರ್ಮಾಣದಲ್ಲಿ ನೀಲಾಂಬಿಕೆ ತಾಯಿಯವರು ನೀಡಿರುವ ಕೊಡುಗೆ ಅಪಾರವಾಗಿದೆ. ನೀಲಾಂಬಿಕೆ ತಾಯಿ ಮತ್ತು ಬಸವಣ್ಣನವರ ದಾಂಪತ್ಯ ಜೀವನ ಮಾದರಿಯಾಗಿತ್ತು. ಅವರ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ನಾವು ನಮ್ಮ ಜೀವನ ಸುಖಿಯಾಗಿಸಿಕೊಳ್ಳಬೇಕು ಎಂದು ಪೂಜ್ಯರು ಹೇಳಿದರು.
ಸಮಾರಂಭದಲ್ಲಿ ಆಳಂದ ಕ್ಷೇತ್ರದ ಶಾಸಕರದ ಬಿ.ಆರ್.ಪಾಟೀಲ್ ಪುತ್ರಿ ಡಾ.ತೇಜಸ್ವಿನಿ ಪಾಟೀಲ್ ಮತ್ತು ಶಶಿತಾಯಿ ಗುಂಡಾಳ ಅವರನ್ನು ಶ್ರೀಮಠದಿಂದ ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು. ಮಹಾನಂದಾ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಶಿವಾನಿ ಭಾಷಣ ಮಾಡಿದರು. ಶೋಭಾ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು. ಪ್ರಭುಲಿಂಗ ದೇವರು, ಶಿವಬಸವ ದೇವರು ಸಮ್ಮುಖ ವಹಿಸಿದ್ದರು. ಸಾಹಿತಿ ಡಾ.ಎಂ. ಮಕ್ತುಂಬಿ ಅನುಭಾವ ನೀಡಿದರು. ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ಆಡಳಿತಾಧಿಕಾರಿ ಮೋಹನ ರೆಡ್ಡಿ ಸೇರಿದಂತೆ ಹಲವರು ಇದ್ದರು.


