Ad imageAd image

ಔರಾದ್ ಶಾಸಕ ಚಹ್ವಾಣ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Kannada Bimba Team
2 Min Read
ದೀಪಕ್ ಪಾಟೀಲ ಚಾಂದೋರಿ
ದೀಪಕ್ ಪಾಟೀಲ ಚಾಂದೋರಿ

 

ಕನ್ನಡ ಬಿಂಬ, ಬೀದರ್

ಅಂಗನವಾಡಿ ಮಕ್ಕಳಿಗೆ ಪೂರೈಸುವ ಪೌಷ್ಟಿಕ ಆಹಾರದ ಟೆಂಡರ್‍ನಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಔರಾದ್‍ನ ಮುಖಂಡ ದೀಪಕ್ ಪಾಟೀಲ ಚಾಂದೋರಿ, ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಗುತ್ತಿಗೆಯ ಟೆಂಡರ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಸುಂದ್ರಮ್ಮ ಟ್ರೇಡಿಂಗ್ ಕಂಪನಿಯು ಭ್ರಷ್ಟಾಚಾರದ ಹಣ ಸಂಗ್ರಹಕ್ಕಾಗಿಯೇ ತೆರೆಯಲಾದ ಮುಂಬೈನಲ್ಲಿರುವ ಶಾಸಕ ಚವಾಣ್ ಮಾಲೀಕತ್ವದ ‘ಪ್ರಭು ಎಂಟರ್‍ಪ್ರೈಸೆಸ್’ಗೆ 2023-24 ರಿಂದ ಈವರೆಗೆ ರೂ. 1 ಕೋಟಿಗೂ ಅಧಿಕ ಹಣ ಸಂದಾಯ ಮಾಡಿದೆ ಎನ್ನುವುದು ದೂರುದಾರ ದೀಪಕ್ ಪಾಟೀಲ್ ಚಾಂದೋರಿ ಅವರ ಆರೋಪ.

ಪ್ರಭು ಎಂಟರ್‍ಪ್ರೈಸೆಸ್‍ನ ಬ್ಯಾಂಕ್ ಖಾತೆಯ ವಿವರಗಳನ್ನೂ ದೀಪಕ್ ಪಾಟೀಲ್ ಅವರು ಲೋಕಾಯುಕ್ತರಿಗೆ ಸಲ್ಲಿಸಿದ್ದು, ಇದರಲ್ಲಿ ಸುಂದ್ರಮ್ಮ ಟ್ರೇಡಿಂಗ್ ಕಂಪೆನಿಯಿಂದ ಪ್ರಭು ಎಂಟರ್‍ಪ್ರೈಸೆಸ್ ಬ್ಯಾಂಕ್ ಖಾತೆಗೆ ಜಮೆಯಾದ ಹಣದ ವಿವರ ಇದೆ.

ಸುಂದ್ರಮ್ಮ ಟ್ರೇಡಿಂಗ್ ಕಂಪನಿಯ ಖಾತೆಯಿಂದ ಪ್ರಭು ಎಂಟರ್‍ಪ್ರೈಸೆಸ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೀಪಕ್ ಪಾಟೀಲ್ ತಿಳಿಸಿದ್ದಾರೆ.

ಖಾತೆಯಿಂದ ಖಾತೆಗೆ ಹಣ ವರ್ಗಾವಣೆಯಾಗಿರುವುದು ಭ್ರಷ್ಟಾಚಾರ ಎಲ್ಲೆ ಮೀರಿರುವುದರ ಸಂಕೇತ. ಹೇಳುವವರು, ಕೇಳುವವರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿರುವುದರ ನಿದರ್ಶನ. ಮೊದಲು ಅಂಗನವಾಡಿ ಪೌಷ್ಟಿಕ ಆಹಾರ ಪೂರೈಕೆಗೆ ಟೆಂಡರ್ ಇರಲಿಲ್ಲ. ಶಾಸಕರು ಶಿಫಾರಸು ಮಾಡಿದವರಿಗೆ ಸರಬರಾಜು ಆದೇಶ ಕೊಡಲಾಗುತ್ತಿತ್ತು. 2018 ರಿಂದ 2023 ರ ವರೆಗೆ ಔರಾದ್ ಶಾಸಕರು ಹಾಗೆಯೇ ಸುಂದ್ರಮ್ಮ ಟ್ರೇಡಿಂಗ್ ಕಂಪನಿಗೆ ಅಂಗನವಾಡಿ ಪೌಷ್ಟಿಕ ಆಹಾರ ಪೂರೈಕೆ ಆದೇಶ ಕೊಡಿಸಿದ್ದರು. ಅದರ ಬದಲಾಗಿ, ಪ್ರತಿ ತಿಂಗಳು ಕಂಪನಿಗೆ ಹಣ ನಿಗದಿಪಡಿಸಿ, ನಗದು ರೂಪದಲ್ಲಿ ಪಡೆದಿದ್ದಾರೆ ಎಂದೂ ದೀಪಕ್ ಪಾಟೀಲ್ ಆರೋಪಿಸಿದ್ದಾರೆ.

ಸುಂದ್ರಮ್ಮ ಟ್ರೇಡಿಂಗ್ ಕಂಪನಿ ಶಾಸಕರ ಆಪ್ತರದ್ದಾಗಿದೆ. ಔರಾದ್ ಕ್ಷೇತ್ರದಲ್ಲಿ ಅಂಗನವಾಡಿಗಳಿಗೆ ವಾರ್ಷಿಕ ಸುಮಾರು ರೂ. 6 ಕೋಟಿಯ ಆಹಾರ ಪೂರೈಸುತ್ತಿದೆ. ಶಾಸಕರೊಂದಿಗಿನ ಒಪ್ಪಂದದಿಂದ ಪೌಷ್ಟಿಕ ಆಹಾರದ ಹೆಸರಲ್ಲಿ ಕಳಪೆ ಆಹಾರ ಸರಬರಾಜು ಮಾಡುತ್ತಿದೆ. ಬಡ ಮಕ್ಕಳ ಆಹಾರದಲ್ಲೂ ಶಾಸಕರು ಅವ್ಯವಹಾರ ನಡೆಸುತ್ತಿರುವುದು ಕಳವಳಕಾರಿ. ನಾ ಖಾವುಂಗಾ ನಾ ಖಾನೆ ದೂಂಗಾ ಬಿಜೆಪಿಯ ಘೋಷವಾಕ್ಯವಾಗಿದೆ. ಆದರೆ, ಔರಾದ್ ಕ್ಷೇತ್ರದ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ ಎಂದು ದೀಪಕ್ ಪಾಟೀಲ್ ದೂರಿದ್ದಾರೆ.

ಶಾಸಕರು ಸತ್ಯ ಬಯಲಿಗೆ ಎಳೆಯುವುವವರನ್ನು ಹೆದರಿಸುವುದು, ಬೆದರಿಸುವುದನ್ನು ಬಿಡಬೇಕು. ನೈತಿಕತೆ ಇದ್ದರೆ ಅಂಗನವಾಡಿ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ನಡೆದ ಅವ್ಯವಹಾರದ ಕುರಿತು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಂಗನವಾಡಿ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತ ಎಡಿಜಿಪಿ ಹಾಗೂ ಬೀದರ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರಿಗೆ ದೀಪಕ್ ಪಾಟೀಲ್ ದೂರು ಸಲ್ಲಿಸಿದ್ದಾರೆ.

ಔರಾದ್ ಶಾಸಕರು ಅವ್ಯವಹಾರದಿಂದ ಆದಾಯಕ್ಕೆ ಮೀರಿ ಆಸ್ತಿ ಗಳಿಸಿದ್ದಾರೆ. ಅವರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಬರುವ ದಿನಗಳಲ್ಲಿ ಕರ್ನಾಟಕ ಲೋಕಾಯುಕ್ತ ಹಾಗೂ ಸಂಬಂಧಪಟ್ಟವರಿಗೆ ದೂರು ಸಲ್ಲಿಸಲಾಗುವುದು. ಈ ವಿಷಯವನ್ನು ಬಿಜೆಪಿ ರಾಜ್ಯ ಅಧ್ಯಕ್ಷರ ಗಮನಕ್ಕೂ ತರಲಾಗಿದೆ. ಬಿಜೆಪಿ ನಾಯಕತ್ವವು ಚಹ್ವಾಣ್ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೋ, ಬೆಂಬಲಿಸುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ, ದೀಪಕ್ ಪಾಟೀಲ್, ಚಾಂದೋರಿ.

Share This Article

You cannot copy content of this page