Ad imageAd image

ಬೀದರಿನಲ್ಲಿ ರಾಜ್ಯದ ಮೊದಲ ವಿವಾಹಪೂರ್ವ ಸಂವಾದ ಕೇಂದ್ರ !

Kannada Bimba Team
3 Min Read
ಬೀದರ್ ನಲ್ಲಿ ತೇರೆ ಮೇರೆ ಸಪ್ನೆ ವಿವಾಹ ಪೂರ್ವ ಸಂವಾದ ಕೇಂದ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಉದ್ಘಾಟಿಸಿದರು
ಬೀದರ್ ನಲ್ಲಿ ತೇರೆ ಮೇರೆ ಸಪ್ನೆ ವಿವಾಹ ಪೂರ್ವ ಸಂವಾದ ಕೇಂದ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಉದ್ಘಾಟಿಸಿದರು.

 

ಕನ್ನಡ ಬಿಂಬ, ಬೀದರ್

ಬೀದರ್  ನಗರದ ಬ್ರಿಮ್ಸ್  ಆಸ್ಪತ್ರೆ ಆವರಣದಲ್ಲಿ ರಾಜ್ಯದ ಮೊದಲ ತೇರೆ ಮೇರೆ ಸಪ್ನೆ ವಿವಾಹ ಪೂರ್ವ ಸಂವಾದ ಕೇಂದ್ರ ಆರಂಭವಾಗಿದೆ.

ಕೇಂದ್ರವು ವಿವಾಹ ಪೂರ್ವದಲ್ಲೇ ಯುವಜನರಿಗೆ ದಾಂಪತ್ಯದ ಮಹತ್ವ ಮನವರಿಕೆ ಮಾಡಿಕೊಡಲಿದೆ. ಹೊಂದಾಣಿಕೆಯ ಗೌರವಯುತ ದಾಂಪತ್ಯದ ಸೂತ್ರಗಳನ್ನು ಹೇಳಿಕೊಡಲಿದೆ. ಮದುವೆ ನಂತರದ ಗೊಂದಲ, ಮಹಿಳಾ ದೌರ್ಜನ್ಯ ನಿವಾರಣೆ, ವಿವಾಹ ವಿಚ್ಛೇದನಗಳ ನಿಯಂತ್ರಣಕ್ಕೆ ನೆರವಾಗುವ ಕಾರ್ಯವನ್ನೂ ಈ ಕೇಂದ್ರ ಮಾಡಲಿದೆ.

ರಾಷ್ಟ್ರೀಯ ಮಹಿಳಾ ಆಯೋಗದ ಮಾರ್ಗದರ್ಶನದಲ್ಲಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ ಎಂದು ಡಿಸೆಂಬರ್ 31 ರಂದು ನಡೆದ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.

ಕೇಂದ್ರದಲ್ಲಿ ಇಬ್ಬರು ಆಪ್ತ ಸಮಾಲೋಚಕರು ಇರಲಿದ್ದಾರೆ. ಯುವಕ, ಯುವತಿಯರಿಗೆ ಪ್ರತ್ಯೇಕ, ನಂತರ ಪಾಲಕರೊಂದಿಗೆ ಜಂಟಿಯಾಗಿ ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಮದುವೆಗೆ ಸಂಬಂಧಿಸಿದ ಸಂದೇಹ ನಿವಾರಿಸಲಿದ್ದಾರೆ. ಉತ್ತಮ ದಾಂಪತ್ಯಕ್ಕೆ  ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಯುವಕ, ಯುವತಿಯರಿಗೆ ವಿವಾಹ ಪೂರ್ವ ಆಪ್ತ ಸಮಾಲೋಚನೆ ಅವಶ್ಯಕವಾಗಿದೆಯೇ ಹೊರತು ಪ್ರಿ ವೆಡ್ಡಿಂಗ್‍ಶೂಟ್ ಅಲ್ಲ. ಪ್ರಿ  ವೆಡ್ಡಿಂಗ್  ಶೂಟ್‍ನಿಂದ ದುಂದುವೆಚ್ಚವಾಗುತ್ತಿದೆ. ಅದರ ನಂತರವೂ ಅನೇಕ ಮದುವೆಗಳು ಮುರಿದು ಬೀಳುತ್ತಿವೆ. ಕಾರಣ, ಅಪ್ತ ಸಮಾಲೋಚನೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು 2.21 ಲಕ್ಷ ವಿವಾಹ ವಿಚ್ಛೇದನ ಪ್ರಕರಣಗಳು ನ್ಯಾಯಾಲಯಗಳ ಮುಂದೆ ಇವೆ. ಇದು, ಆರೋಗ್ಯಕರ ಬೆಳವಣಿಗೆ ಅಲ್ಲ. ದೇಶದ ಸಾಮಾಜಿಕ, ಆರ್ಥಿಕ ಹಿನ್ನೆಡೆಗೆ ಕಾರಣವಾಗಲಿದೆ. ಆದರ್ಶ ದಾಂಪತ್ಯದ ಸೂತ್ರ ತಿಳಿಸುವ ಹಾಗೂ ವಿವಾಹ ವಿಚ್ಛೇದನಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಶಿವಯಯ್ಯ ಸ್ವಾಮಿ ಹೇಳಿದರು.

ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕೇಂದ್ರವು ವಿವಾಹದ ಬಗೆಗಿನ ಯುವಕ, ಯುವತಿಯರ ಅನೇಕ ಸಂದೇಹಗಳನ್ನು ನಿವಾರಣೆ ಮಾಡಲಿದೆ. ಪ್ರೀತಿ, ವಿಶ್ವಾಸದ ದಾಂಪತ್ಯಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕೇಂದ್ರ ಸ್ಥಾಪಿಸಿದ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕೇಂದ್ರಕ್ಕೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಸೂಚಿಸಿದರು.

ಕೇಂದ್ರದ ವಿವಾಹಪೂರ್ವ ಸಂವಾದ ಪುಸ್ತಕವನ್ನು ಬೀದರ್  ವಿಶ್ವವಿದ್ಯಾಲಯದ ಸಿಂಡಿಕೇಟ್  ಸದಸ್ಯ ನಾಗಭೂಷಣ ಕಮಠಾಣೆ ಬಿಡುಗಡೆ ಮಾಡಿದರು. ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸನ್ಮುಕಯ್ಯ ಬಿ.ಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ ಎಂ.ಎಸ್,  ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಂ.ಡಿ. ಅಹೆಮದೊದ್ದೀನ್, ಭಾರತೀಯ ವೈದ್ಯಕೀಯ ಸಂಘದ ಬೀದರ್  ಘಟಕದ ಅಧ್ಯಕ್ಷ ಡಾ. ವಿಜಯ ಬಲ್ಲೂರಕರ್,  ಮಹಾನಗರ ಪಾಲಿಕೆಯ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ, ಮೇರಾಯುವ ಭಾರತ್‍  ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ವಿ. ಶಿವಪ್ರಕಾಶ್ ಮಾತನಾಡಿದರು.

ಬೀದರ್  ವಿಶ್ವವಿದ್ಯಾಲಯದ ಸಿಂಡಿಕೇಟ್  ಸದಸ್ಯ ಅಬ್ದುಲ್  ಸತ್ತಾರ್, ಮಹಾನಗರ ಪಾಲಿಕೆ ಸದಸ್ಯೆ ಜ್ಯೋತಿ ಶಿವರಾಜ ಗುಮ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ವೈರಾಗೆ, ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿ ಪ್ರಿಯಂಕಾ ಕೆ.ಪಾಟೀಲ, ಸಂವಾದ ಕೇಂದ್ರದ ಆಡಳಿತಾಧಿಕಾರಿ ಸಂಗೀತಾ ಪಾಟೀಲ, ಸಮಾಲೋಚಕಿ  ಚೆನ್ನಾಂಬಿಕಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಪ್ರವೀಣ್ ಸ್ವಾಮಿ, ನಾಗರಾಜ ಮಠ, ಪ್ರಮುಖರಾದ ಓಂಪ್ರಕಾಶ ರೊಟ್ಟೆ, ವರದಯ್ಯ ಸ್ವಾಮಿ, ಮಹೇಶ ಪಾಟೀಲ, ಶಿವಶಂಕರ ಬೆಳಮಗಿ, ಚಂದ್ರಕಾಂತ ಚೆನ್ನಳ್ಳಿ, ಅಂಬರೀಷ್  ಕಮಠಾಣೆ, ನಾಗಯ್ಯ ಸ್ವಾಮಿ, ಶ್ರೀಕಾಂತ ಹೊನ್ನಿಕೇರಿ ಮತ್ತಿತರರು ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಅಧಿಕಾರಿ ರೂಪಾ ಸ್ವಾಗತಿಸಿದರು. ಬಿ.ವಿ.ಬಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾದೇವಿ ಮಳ್ಳಿ ನಿರೂಪಿಸಿದರು. ಸಂವಾದ ಕೇಂದ್ರದ ಸಂಯೋಜಕಿ ಕಾವೇರಿ ವಂದಿಸಿದರು.

 

Share This Article

You cannot copy content of this page