Ad imageAd image

ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆ: ಡಾ. ಸಂತೋಷ ಹಾನಗಲ್ಲ

Kannada Bimba Team
2 Min Read

 

ಕನ್ನಡ ಬಿಂಬ, ಬೀದರ್

ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆಯಾಗಿದೆ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹೇಳಿದರು.

ಬೀದರ್ ಬಳಿಯ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ‘ಭಾಷಾ ಸೌಹಾರ್ದ ಸಂಸ್ಕøತಿ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಇನ್ನೊಬ್ಬರ ಸಂಸ್ಕøತಿ, ಆಚಾರ-ವಿಚಾರ, ಉಡುಗೆ-ತೊಡುಗೆ, ಧಾರ್ಮಿಕ ವಿಧಾನ ಗೌರವಿಸುವುದೇ ಸೌಹಾರ್ದತೆ. ಇದು ಸಂವಿಧಾನದ ಆಶಯವೂ ಆಗಿದೆ. ಇವನಮ್ಮವ ಎಂಬುದು ಸೌಹಾರ್ದತೆ ಎಂದು ಅವರು ವಿಶ್ಲೇಷಿಸಿದರು.

ನಮ್ಮ ಸಂಸ್ಕøತಿಯನ್ನು ಮನೆಯ ಬಾಗಿಲ ಒಳಗೆ ಮಾತ್ರ ಇಟ್ಟುಕೊಳ್ಳಬೇಕು. ಬಾಗಿಲ ಹೊರಗೆ ಬಂದರೆ ರಾಜ್ಯ ಮತ್ತು ರಾಷ್ಟ್ರದ ವಿಚಾರಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು. ಆಡಳಿತದಲ್ಲಿ ಶೇ. 92 ರಷ್ಟು ಕನ್ನಡ ಬಳಸಬೇಕೆಂಬ ನಿಯಮವಿದೆ. ಆದರೆ ಕನ್ನಡ ಭಾಷೆ ಅಳಿಯುತ್ತಿರುವುದು ಜನಗಳ ಮಧ್ಯೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕನ್ನಡ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆ ಇಲ್ಲದಿದ್ದರೆ ಜಗತ್ತು ಕತ್ತಲೆಯಲ್ಲಿ ಇರುತಿತ್ತು. ಭಾಷೆ ಮತ್ತು ಸಂಸ್ಕøತಿ ಈರುಳ್ಳಿ ಪದರ ಇದ್ದಂತೆ. ಒಂದನೊಂದು ಬೇರ್ಪಡಿಸಲು ಸಾಧ್ಯವಿಲ್ಲ. ಇವೆರಡರ ಮುಂದುವರಿದ ಭಾಗವೇ ಸೌಹಾರ್ದತೆ. ಬೀದರನ ಅಷ್ಟೂರ ಗುಂಬಜ್, ಗುರುದ್ವಾರ, ಪಾಪನಾಶ, ಮದರಸಾಗಳು ಸೌಹಾರ್ದತೆಯ ಸಂಕೇತವಾಗಿವೆ. ಬೀದರ್ ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟವಾಗಿ ಸೌಹಾರ್ದತೆಯಿಂದ ಬದುಕುತ್ತಿದೆ ಎಂದರು.

ಸಂಶೋಧನಾ ಮಹಾಪ್ರಬಂಧಗಳ ಸಂಕಲನಗಳಿಂದ ಕೂಡಿದ ಶಂಖಲ ನಿಯತಕಾಲಿಕೆ ಬಿಡುಗಡೆಗೊಳಿಸಿದ ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಎಲ್ಲಾ ಭಾಷೆಗಳು ದೇವರ ಭಾಷೆಯಾಗಿವೆ. ಕೆಲವು ಸುಶಿಕ್ಷಿತರಿಗೆ ಕನ್ನಡ ಬರುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಮಾತೃಭಾಷೆಗೆ ಒತ್ತುಕೊಟ್ಟು ಕಲಿಯಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಕನಿಷ್ಠ 10ನೇ ತರಗತಿವರೆಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಮಾತನಾಡಿ ಸೌಹಾರ್ದತೆ ಎಂಬುದು ಅಂತಃಕರಣದ ಜೀವಕೇಂದ್ರವಾಗಿದೆ. ಭಾಷೆ, ಸಂಸ್ಕøತಿ ಸೌಹಾರ್ದತೆ ಕುರಿತು ಮೊಟ್ಟಮೊದಲು ತಿಳಿಸಿಕೊಟ್ಟವರು ಬಸವಾದಿ ಶರಣರು. ಉದಾತ್ತ ಭಾವನೆ, ಪರಿಶುದ್ಧ ಮನಸ್ಸು, ನಿರ್ಮಲ ಪ್ರೀತಿ ಸೌಹಾರ್ದತೆಯಲ್ಲಿವೆ. ಈ ನಿಟ್ಟಿನಲ್ಲಿ ಸೌಹಾರ್ದತೆ ಬಗ್ಗೆ ಮುಂದಿನ ಪೀಳಿಗೆಗೆ ವಿಚಾರ ತಿಳಿಸಿಕೊಡುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶಂಕರ ಗಣಗೊಂಡ ಹಾಗೂ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿದರು.

ವೇದಿಕೆ ಮೇಲೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರೊ. ಶ್ರೀಕಾಂತ ಪಾಟೀಲ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಉಪಸ್ಥಿತರಿದ್ದರು. ಡಾ. ರಾಜಕುಮಾರ ಅಲ್ಲೂರೆ ಸ್ವಾಗತಿಸಿದರು. ಡಾ. ಮಹಾದೇವಿ ಹೆಬ್ಬಾಳೆ ನಿರೂಪಿಸಿದರು. ದೇವೇಂದ್ರ ಬರಗಲೆ ವಂದಿಸಿದರು. ಡಾ. ಅಶೋಕ ಕೋರೆ, ಡಾ. ಸಂಜೀವಕುಮಾರ ತಾಂದಳೆ, ಡಾ. ಲಕ್ಷ್ಮೀಕಾಂತ ಸಿ.ಪಂಚಾಳ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share This Article

You cannot copy content of this page