
ಕನ್ನಡ ಬಿಂಬ, ಬೀದರ್
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್ ಬೀದರ್) ಸದ್ಯ ಸುದ್ದಿಯಲ್ಲಿದೆ. ಬ್ರಿಮ್ಸ್‍ನಲ್ಲಿ ಹಿಂದೆ ನಡೆದ, ಈಗ ನಡೆಯುತ್ತಿರುವ ವಿದ್ಯಮಾನಗಳು ಈ ಸಂಸ್ಥೆಯನ್ನು ಸುದ್ದಿಯ ಕೇಂದ್ರವಾಗಿಸಿವೆ. 2017 ರಲ್ಲಿ ನಡೆದ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕದಲ್ಲಿನ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಮಹತ್ವದ ತೀರ್ಪು ಹಾಗೂ ಈ ನೇಮಕದಲ್ಲಿ ನಡೆದ ನಿಯಮ ಉಲ್ಲಂಘನೆಯ ವಿವರಣೆ ಇಲ್ಲಿದೆ.
ಕ್ಲಿನಿಕಲ್ ಸೈಕಾಲೋಜಿಸ್ಟ್ ನೇಮಕಾತಿಯಲ್ಲಿ ನಡೆದ ನೇಮಕಾತಿ ಮಾನದಂಡಗಳ ಉಲ್ಲಂಘನೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್‍ನ ಏಕಸದಸ್ಯ ಪೀಠವು ಕಳೆದ ಸಾಲಿನ ಸೆಪ್ಟೆಂಬರ್ 23 ರಂದೇ ತೀರ್ಪು ನೀಡಿತ್ತು. ಬ್ರಿಮ್ಸ್ ಹಾಲಿ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಅವರು ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು. ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ.
ಈ ಪ್ರಕರಣದಲ್ಲಿ ಹೈಕೋರ್ಟ್‍ನ ಏಕಸದಸ್ಯ ಪೀಠವು, ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕದಲ್ಲಿ ಮಾನದಂಡ ಉಲ್ಲಂಘನೆ ಆಗಿದ್ದರ ಹಿನ್ನೆಲೆಯಲ್ಲಿ ನೇಮಕವನ್ನು ರದ್ದುಗೊಳಿಸಿತ್ತು. ನ್ಯಾಯಮೂರ್ತಿ ಎಚ್.ಪಿ. ಸಂದೇಶ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ದಿನಾಂಕ: 02-09-2025 ರಂದು ತೀರ್ಪು ನೀಡಿದ್ದು, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ವಿಳಂಬವಾಗಿ ರಿಟ್ ಅರ್ಜಿ ಸಲ್ಲಿಸಿದ ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಅವರಿಗೆ ಒಂದು ಲಕ್ಷ ರೂ. ದಂಡ ಸಹ ವಿಧಿಸಿದೆ.
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಕಲಬುರಗಿಯ ನಾಗವೇಣಿ ಎಂಬುವರು ಈ ಹುದ್ದೆಯ ನೇಮಕದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ, ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಹತಾ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದಿರುವ ತಮ್ಮನ್ನು ನಿರ್ಲಕ್ಷಿಸಿ, ಕಡಿಮೆ ಅಂಕ ಪಡೆದಿರುವ ಶಿವಕುಮಾರ ಎಂಬುವರನ್ನು ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಗೆ ನೇಮಕ ಮಾಡಲಾಗಿದೆ. ಶಿವಕುಮಾರ ನೇಮಕವನ್ನು ರದ್ದುಗೊಳಿಸಬೇಕು ಎಂದು ನಾಗವೇಣಿ ಕೋರಿದ್ದರು.
ಏನಿದು ಪ್ರಕರಣ ?
ಬ್ರಿಮ್ಸ್ ಬೀದರ್ ಇಲ್ಲಿ ಖಾಲಿ ಇರುವ 24 ಹುದ್ದೆಗಳ ಭರ್ತಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅನುಮೋದನೆ ನೀಡಿತ್ತು. ಈ ಹುದ್ದೆಗಳ ನೇಮಕಕ್ಕೆ 2017 ರ ಸೆಪ್ಟೆಂಬರ್ 11 ರಂದು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಈ 24 ಹುದ್ದೆಗಳಲ್ಲಿ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ಸಹ ಸೇರಿತ್ತು. ಅಧಿಸೂಚನೆಯ ಪ್ರಕಾರ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಯ ನೇರ ನೇಮಕಕ್ಕೂ 2017 ರ ಸೆಪ್ಟೆಂಬರ್ 11 ರಂದೇ ಸಂದರ್ಶನ ನಡೆಯಬೇಕಿತ್ತು.
ಆದರೆ, ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಯ ನೇಮಕಾತಿಗೆ ಪ್ರತ್ಯೇಕ ಸಂದರ್ಶನ ನಡೆಸಲು ಸಂಸ್ಥೆಯ (ಬ್ರಿಮ್ಸ್ ಬೀದರ್) ಹಂತದಲ್ಲಿಯೇ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದಕ್ಕಾಗಿ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆ ಪಡೆದಿರಲಿಲ್ಲ ಎಂಬ ವಿಷಯ ಬ್ರಿಮ್ಸ್ ಬೀದರ್ ಇದರ ಹಿಂದಿನ ನಿರ್ದೇಶಕ ಡಾ. ಶಿವಕುಮಾರ ಸಿ.ಆರ್. ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಸರಕಾರದ ಉಪಕಾರ್ಯದರ್ಶಿ ಎಂ. ಶಿಲ್ಪಾ ಅವರಿಗೆ ದಿನಾಂಕ 29-06-2020 ರಂದು ಬರೆದ ಪತ್ರದಲ್ಲಿದೆ.
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ಬೇರೆ. ಸೈಕಾಲೋಜಿಸ್ಟ್ ಹುದ್ದೆ ಬೇರೆ. ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಗಾಗಿ ಬೇಕಾದ ಶೈಕ್ಷಣಿಕ ಅರ್ಹತೆ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ ಸಂಖ್ಯೆ ಎಚ್‍ಎಫ್‍ಡಬ್ಲ್ಯೂ 158 ಸಿಜಿಇ 2012 ದಿನಾಂಕ: 03-12-2012 ರಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ. (Clinical Psychologist- Means a Mental Health Professional with qualification of Post graduate degree in Psychology from the University established by law with M-phil or Ph-D in clinical Psychology acquired after Two years course from the a accredited Institution ).
ಆದರೆ, ಬ್ರಿಮ್ಸ್‍ನಲ್ಲಿ ನಡೆದ ನೇಮಕಾತಿಯಲ್ಲಿ ಸರಕಾರದ ಮೇಲಿನ ಆದೇಶದಂತೆ ಅರ್ಹತೆಯ ಮಾನದಂಡ ನಿಗದಿಪಡಿಸಿರಲಿಲ್ಲ. ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಪೈಕಿ ಶೇ. 85 ರಷ್ಟನ್ನು ಪರಿಗಣಿಸಲಾಯಿತು. ಸಂದರ್ಶನಕ್ಕೆ 15 ಅಂಕ ನಿಗದಿಪಡಿಸಲಾಯಿತು. ಸಂದರ್ಶನದಲ್ಲಿ ಕೊಡಬಹುದಾದ ಈ 15 ಅಂಕಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿತ್ತು. ಪಿಎಚ್‍ಡಿ ಇದ್ದಲ್ಲಿ 4 ಅಂಕ, ಅರ್ಹತಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಲ್ಲಿ 1 ಅಂಕ, ಅನುಭವ ಇದ್ದಲ್ಲಿ, ಪ್ರತಿ ಒಂದು ವರ್ಷದ ಅನುಭವಕ್ಕೆ ಅರ್ಧ ಅಂಕ ನಿಗದಿಪಡಿಸಲಾಗಿತ್ತು. ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ಸಂದರ್ಶನಕ್ಕೆ 5 ಅಂಕ ನಿಗದಿಪಡಿಸಲಾಗಿತ್ತು.
ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ದೂರಿ ಸರಕಾರಕ್ಕೆ ದೂರು ಸಲ್ಲಿಸಿದ್ದ ಮತ್ತು ಹೈಕೋರ್ಟ್ ಮೊರೆ ಹೋಗಿದ್ದ ನಾಗವೇಣಿ ಅವರು ಅರ್ಹತಾ ಪರೀಕ್ಷೆಯಲ್ಲಿ ಶೇ. 72.35 ರಷ್ಟು ಅಂಕ ಪಡೆದಿದ್ದರು. ಇದರ ಶೇ. 85 ರ ಲೆಕ್ಕದಲ್ಲಿ ಅವರ ಅಂಕಗಳು 61.49 ಆಗಿದ್ದವು. ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಗೆ ಆಯ್ಕೆಯಾಗಿದ್ದ ಶಿವಕುಮಾರ ಎಂಬುವರು ಅರ್ಹತಾ ಪರೀಕ್ಷೆಯಲ್ಲಿ ಶೇ. 61.25 ಅಂಕ ಪಡೆದಿದ್ದರು. ಶೇ. 85 ರ ಲೆಕ್ಕದಲ್ಲಿ ಇವರ ಅಂಕ 52.25 ಆಗಿದ್ದವು. ಈ ಇಬ್ಬರ ಶೈಕ್ಷಣಿಕ ಅರ್ಹತೆ ಎಂ.ಎ. ಸೈಕಾಲಜಿ ಮಾತ್ರ ಆಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು, ನಾಗವೇಣಿ ಮತ್ತು ಶಿವಕುಮಾರ ಅವರು ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿತ್ತು. ಅರ್ಜಿಯಲ್ಲಿ ಉಲ್ಲೇಖಿಸಿದಂತೆ ಇಬ್ಬರೂ ಎಂ.ಎ. ಸೈಕಾಲಜಿ ಪದವಿ ಮಾತ್ರ ಪಡೆದಿದ್ದರು. ಪಿಎಚ್‍ಡಿ ಆಗಲಿ, ಚಿನ್ನದ ಪದಕವಾಗಲಿ ಪಡೆದಿರಲಿಲ್ಲ ಎನ್ನುವುದನ್ನು ಗಮನಿಸಿತು.
ಅಧಿಸೂಚನೆಯಲ್ಲಿನ ಮಾನದಂಡದಂತೆ ಆಯ್ಕೆ ಸಮಿತಿಯು ಈ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಆಧರಿಸಿ ಗರಿಷ್ಠ 10 ಅಂಕಗಳನ್ನು ಕೊಡಬಹುದಾಗಿತ್ತು. ಗುಲ್ಬರ್ಗ ಮೇಡಿಕಲ್ ಕಾಲೇಜಿನ ನಿರ್ದೇಶಕ, ಇದೇ ಕಾಲೇಜಿನ ಪ್ರಾಚಾರ್ಯರು, ಬ್ರಿಮ್ಸ್ ಬೀದರ್‍ನ ನಿರ್ದೇಶಕರು, ಬ್ರಿಮ್ಸ್ ಬೀದರ್‍ನ ಸಿಎಒ ಮತ್ತು ವಿಷಯ ತಜ್ಞರೊಬ್ಬರು ಸೇರಿ ಒಟ್ಟು ಐವರು ಈ ಆಯ್ಕೆ ಸಮಿತಿಯಲ್ಲಿದ್ದರು.
ಆಯ್ಕೆ ಸಮಿತಿಯಲ್ಲಿನ ಐದೂ ಜನ ತಜ್ಞರು ಶಿವಕುಮಾರ ಅವರಿಗೆ ಸರಾಸರಿ 12.47 ಅಂಕ ನೀಡಿದ್ದರು. ನಾಗವೇಣಿ ಅವರಿಗೆ ಮಾತ್ರ ಸರಾಸರಿ 3 ಅಂಕ ಕೊಟ್ಟಿದ್ದರು. ಇದರೊಂದಿಗೆ ಅರ್ಹತಾ ಪರೀಕ್ಷೆಯಲ್ಲಿನ ಅಂಕ 52.25 ಮತ್ತು ಸಂದರ್ಶನದಲ್ಲಿನ 12.47 ಅಂಕ ಸೇರಿ ಶಿವಕುಮಾರ ಅವರು ಶೇ. 64.53 ಅಂಕ ಪಡೆದಿದ್ದರು. ನಾಗವೇಣಿ ಅವರು ಅರ್ಹತಾ ಪರೀಕ್ಷೆಯಲ್ಲಿನ ಅಂಕ 61.49 ಮತ್ತು ಸಂದರ್ಶನದಲ್ಲಿನ 3 ಅಂಕ ಸೇರಿ 64.49 ಅಂಕ ಪಡೆದಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಸಲ್ಲಿಸಲಾಗಿದ್ದ ದಾಖಲಾತಿಗಳನ್ನು ಹೈಕೋರ್ಟ್ ಪೀಠ ಸಮಗ್ರವಾಗಿ ಪರಿಶೀಲಿಸಿತ್ತು. ನೇಮಕಾತಿ ಅಧಿಸೂಚನೆಯಲ್ಲಿ ಸಂದರ್ಶನಕ್ಕೆ ನಿಗದಿಪಡಿಸಲಾಗಿದ್ದ ಗರಿಷ್ಠ ಅಂಕಗಳು 10 ಆಗಿದ್ದರೂ, ಆಯ್ಕೆ ಸಮಿತಿಯವರು ಇದನ್ನು ಮೀರಿ, 12 ಅಂಕ ನೀಡಿದ್ದನ್ನು ಗಮನಿಸಿತು.
ಅರ್ಹತಾ ಪರೀಕ್ಷೆ ಅಂದರೆ, ಎಂ.ಎ. ಸೈಕಾಲಜಿಯಲ್ಲಿ ಶೇ. 61.25 ಅಂಕ ಪಡೆದಿದ್ದ ಶಿವಕುಮಾರ್‍ಗೆ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಗುಲ್ಬರ್ಗ ಮೇಡಿಕಲ್ ಕಾಲೇಜಿನ ನಿರ್ದೇಶಕರು 12.5, ಇದೇ ಮೇಡಿಕಲ್ ಕಾಲೇಜಿನ ಪ್ರಿನ್ಸಿಪಲ್ 12.5, ಬೀದರ್ ಮೇಡಿಕಲ್ ಕಾಲೇಜು (ಬ್ರಿಮ್ಸ್ ಬೀದರ್) ನಿರ್ದೇಶಕರು 12.6, ಬ್ರಿಮ್ಸ್ ಬೀದರ್‍ನ ಸಿಎಒ 12.25 ಮತ್ತು ವಿಷಯ ತಜ್ಞರೊಬ್ಬರು 12.5 ಅಂಕ ನೀಡಿದ್ದರು. ಅರ್ಹತಾ ಪರೀಕ್ಷೆಯಲ್ಲಿ ಶೇ. 72.35 ಅಂಕ ಪಡೆದಿದ್ದ ನಾಗವೇಣಿ ಅವರಿಗೆ ಎಲ್ಲ ಐದೂ ಜನ ಸದಸ್ಯರು ತಲಾ 3 ಅಂಕ ಮಾತ್ರ ನೀಡಿದ್ದರು.
ನೇಮಕಾತಿ ಅಧಿಸೂಚನೆಯಲ್ಲಿ ಸಂದರ್ಶನಕ್ಕೆ ನಿಗದಿಪಡಿಸಿದ್ದ 15 ಅಂಕಗಳ ಪೈಕಿ ಅಭ್ಯರ್ಥಿಗೆ ಗರಿಷ್ಠ 10 ಅಂಕಗಳನ್ನಷ್ಟೇ ಆಯ್ಕೆ ಸಮಿತಿ ನೀಡಬಹುದಾಗಿತ್ತು. ಯಾಕೆಂದರೆ, 5 ಅಂಕಗಳು ಪಿಎಚ್‍ಡಿ ಮತ್ತು ಚಿನ್ನದ ಪದಕಕ್ಕೆ ಮೀಸಲಿದ್ದವು. ಅಭ್ಯರ್ಥಿಗೆ ಕೊಡಬಹುದಾದ ಗರಿಷ್ಠ ಅಂಕಗಳ ಮಿತಿ 10 ಆಗಿದ್ದರೂ, ಆಯ್ಕೆ ಸಮಿತಿಯವರು ಅಭ್ಯರ್ಥಿ ಶಿವಕುಮಾರಗೆ 12 ಅಂಕ ನೀಡಿದ್ದರು. ನಾಗವೇಣಿ ಅವರಿಗೆ 3 ಅಂಕ ನೀಡಿದ್ದರು. ಶಿವಕುಮಾರ ಆಯ್ಕೆಯ ದಾರಿ ಸುಲಭಗೊಳಿಸುವುದಕ್ಕಾಗಿಯೇ 12 ಅಂಕಗಳನ್ನು ನೀಡಲಾಗಿದೆ. ಇದು ನಿಯಮಬಾಹಿರ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಲ್ಲದೆ, ಶಿವಕುಮಾರ ಸ್ಥಳಕ್ಕೆ ನಾಗವೇಣಿ ಅವರನ್ನು ನೇಮಕ ಮಾಡುವಂತೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಏಕಸದಸ್ಯ ಪೀಠವು ಕಳೆದ ಸಾಲಿನ ಸೆಪ್ಟೆಂಬರ್ 23 ರಂದು ತೀರ್ಪು ನೀಡಿತ್ತು. ಶಿವಕುಮಾರ ನೇಮಕವನ್ನು ರದ್ದುಗೊಳಿಸಬೇಕು. ಈ ಸ್ಥಾನಕ್ಕೆ ದೂರುದಾರರಾಗಿರುವ ನಾಗವೇಣಿ ಅವರನ್ನು ನೇಮಕ ಮಾಡಬೇಕು ಎಂಬ ಸ್ಪಷ್ಟ ಸೂಚನೆ ಈ ತೀರ್ಪಿನಲ್ಲಿತ್ತು. ಬ್ರಿಮ್ಸ್ ಬೀದರ್‍ನ ಈಗಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಈ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು.
ಈ ಪ್ರಕರಣದಲ್ಲಿ ಏಕಸದಸ್ಯ ಪೀಠ ನೀಡಿದ್ದ ತೀರ್ಪಿನಲ್ಲಿರುವ ಎಲ್ಲ ಅಂಶಗಳನ್ನು ದ್ವಿಸದಸ್ಯ ಪೀಠವು ಎತ್ತಿ ಹಿಡಿದಿದೆ. ಇಡೀ ಪ್ರಕರಣದಲ್ಲಿ ಏಕಸದಸ್ಯ ಪೀಠ ಉಲ್ಲೇಖಿಸಿರುವ ಅಂಶಗಳು ಸೂಕ್ತವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಏಕಸದಸ್ಯ ಪೀಠವು ತೀರ್ಪು ನೀಡಿದ 249 ದಿನಗಳ ನಂತರ ರಿಟ್ ಅರ್ಜಿ ಸಲ್ಲಿಸಿದ್ದನ್ನೂ ದ್ವಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದು, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾ ಮಾಡಿದೆ. ಜೊತೆಗೆ ಶಿವಕುಮಾರ ಶೆಟಕಾರ್ ಅವರಿಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ. ಇದರಲ್ಲಿ ಅರ್ಧ ಮೊತ್ತವನ್ನು ನಾಗವೇಣಿ ಅವರಿಗೆ ನೀಡಬೇಕು. ಉಳಿದ ಮೊತ್ತವನ್ನು ಸರಕಾರದಲ್ಲಿ ಜಮೆ ಮಾಡಬೇಕು. ಎರಡು ವಾರಗಳಲ್ಲಿ ದಂಡ ಪಾವತಿ ಮಾಡದಿದ್ದಲ್ಲಿ ಕಾನೂನುರೀತ್ಯ ಕ್ರಮ ಕೈಗೊಳ್ಳಬೇಕು ಎಂದೂ ದ್ವಿಸದಸ್ಯ ಪೀಠದ ತೀರ್ಪಿನಲ್ಲಿ ತಿಳಿಸಲಾಗಿದೆ.
ಹಿಂದಿನ ನಿರ್ದೇಶಕರಿಂದಲೂ ಸರಕಾರಕ್ಕೆ ವರದಿ
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕದಲ್ಲಿ ನೇಮಕಾತಿ ಮಾನದಂಡ ಉಲ್ಲಂಘಿಸಿ, ತಮಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ, ಈ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ನಾಗವೇಣಿ ಅವರು ದಿ.06-02-2019 ರಂದು ಸರಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟ ಅಭಿಪ್ರಾಯ ಮಂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಸರಕಾರದ ಉಪಕಾರ್ಯದರ್ಶಿ ಎಂ. ಶಿಲ್ಪಾ ಅವರು ಬ್ರಿಮ್ಸ್ ಬೀದರ್ ಇದರ ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಆಗ ಬ್ರಿಮ್ಸ್ ಬೀದರ್ ನಿರ್ದೇಶಕರಾಗಿದ್ದ ಡಾ. ಶಿವಕುಮಾರ ಸಿ.ಆರ್. ಅವರು ದಿನಾಂಕ 29-06-2020 ರಂದು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕ ಕುರಿತು ಮಾಹಿತಿ ನೀಡಿದ್ದರು. ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದ ಪ್ರಾಧಿಕಾರ, ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದಿರಲಿಲ್ಲ ಎಂಬ ವಿಷಯವನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬ್ರಿಮ್ಸ್ ಬೀದರ್ ಆಡಳಿತ ಮಂಡಳಿ ಸಭೆಯಲ್ಲಿ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಕ್ಲಿನಿಕಲ್ ಸೈಕಾಲೋಜಿಸ್ಟ್ ಬದಲು ಸೈಕಾಲೋಜಿಸ್ಟ್ ಹುದ್ದೆಯ ಅರ್ಹತಾ ನಿಯಮಗಳನ್ನು ನೇಮಕಾತಿ ಅಧಿಸೂಚನೆಯಲ್ಲಿ ನಮೂದಿಸಲಾಗಿತ್ತು ಎಂಬ ಉಲ್ಲೇಖ ಡಾ. ಶಿವಕುಮಾರ ಅವರ ವರದಿಯಲ್ಲಿದೆ.
ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆಗೆ 6 ಜನ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ನಾಗವೇಣಿ ಅವರು ಶೇ. 72.35 ಅಂಕ ಪಡೆದಿದ್ದರು. ಹುದ್ದೆಗೆ ಆಯ್ಕೆಯಾಗಿದ್ದ ಶಿವಕುಮಾರ ಅವರು ಶೇ. 61.25 ಅಂಕ ಪಡೆದಿದ್ದರು ಎಂಬ ವಿಷಯವೂ ವರದಿಯಲ್ಲಿದೆ.


