
ಕನ್ನಡ ಬಿಂಬ, ಬೀದರ್
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಡಾಕ್ಟರ್, ಇಂಜಿನೀಯರ್ ಆಗಲು ಶ್ರಮಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಇಲ್ಲಿ ಬಣ್ಣಿಸಿದರು.
ನಗರದ ರಂಗಮಂದಿರದಲ್ಲಿ ಡಾ. ಅಬ್ದುಲ್ ಖದೀರ್ ಅಭಿನಂದನ ಸಮಿತಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 17 ಮಕ್ಕಳಿಂದ ಪ್ರಾರಂಭಿಸಿದ ಸಂಸ್ಥೆಯಲ್ಲಿ ಇಂದು 35 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ರಾಜ್ಯ, ರಾಷ್ಟ್ರದ ಜೊತೆಗೆ ವಿದೇಶಗಳಲ್ಲೂ ಅಭ್ಯಾಸ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದು ರಾಜಶೇಖರ ಪಾಟೀಲ್ ಹೇಳಿದರು.
ಯಾವುದೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ತನು ಮನ ಧನದಿಂದ ಸಹಕರಿಸುವ ಕೊಡುಗೈ ದಾನಿ ಡಾ. ಅಬ್ದುಲ್ ಖದೀರ್.ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅಲಿಗಡ ವಿಶ್ವವಿದ್ಯಾಲಯ ಪ್ರತಿಷ್ಠಿತ ಸರ್ ಸಯ್ಯದ್ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ, ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶಾಹೀನ್ ಶಿಕ್ಷಣ ಸಂಸ್ಥೆ ಬಾನೆತ್ತರಕ್ಕೆ ಬೆಲೆಯಲಿ ಎಂದು ಹಾರೈಸಿದರು.
ಸಾನಿಧ್ಯ ವಹಿಸಿದ ನಾಡೋಜ ಡಾ ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ವಿದೇಶದಲ್ಲಿಯೂ ಸಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಅದನ್ನ ಬೆಳೆಸುವಂತಹ ಶಕ್ತಿ ಇರುವ ಉತ್ತರ ಕರ್ನಾಟಕ ಭಾಗದ ಏಕೈಕ ವ್ಯಕ್ತಿ ಡಾ.ಅಬ್ದುಲ್ ಖದೀರ್ ಎಂದು ಬಣ್ಣಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆ ಬಸವಣ್ಣನ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬಡವರಿಗೆ, ಹಿಂದುಳಿದವರಿಗೆ, ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಡಾ ಖದೀರ್ ಅವರು ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ಭಿಕ್ಷಾಟನೆ ಮುಕ್ತ ಬೀದರ ಜೊತೆ ಗುಟ್ಕಾ, ಸಿಗರೇಟ್ ಬಂದ್ ಆಗಬೇಕು. ಆಡಂಬರದ ಮದುವೆ ಹಾಗೂ ಕಾರ್ಯಕ್ರಮಗಳು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಅವರು ಬೀದರ ನಾಗರಿಕ ಸನ್ಮಾರ್ಗ ಸಮಿತಿಯ ಮೂಲಕ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪೂಜ್ಯರು ಸಂತಸ ವ್ಯಕ್ತಪಡಿಸಿದರು.
ಬಸವ ಸೇವಾ ಪ್ರತಿμÁ್ಠನದ ಡಾ ಗಂಗಾಂಬಿಕಾ ಅಕ್ಕ ಮಾತನಾಡಿ, ಹಣವಂತರ ಮಕ್ಕಳಿಗೆ ಮಾತ್ರ ಮೆಡಿಕಲ್ ಸೀಟ್ ದೊರೆಯುತ್ತದೆ ಎಂಬ ಕಾಲಘಟ್ಟದಲ್ಲಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಡವರ ಮಕ್ಕಳಿಗೂ ಎಂಬಿಬಿಎಸ್ ಸೀಟ್ ದೊರೆಯುವಂತೆ ಮಾಡಿದವರು ಡಾ. ಅಬ್ದುಲ್ ಖದೀರ್ ಎಂದು ಶ್ಲಾಘಿಸಿದರು.
ಬಸವ ಯೋಗಾಶ್ರಮದ ಡಾ. ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ಡಾ ಖದೀರ್ ಅವರು ಶಿಕ್ಷಣದ ಜೊತೆಗೆ ಸಾಹಿತ್ಯ ಕಲೆ ಸಂಸ್ಕøತಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಡಾ. ಅಬ್ದುಲ್ ಖದೀರ್, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಶಸ್ತಿಯು ಜಿಲ್ಲೆಯ ಜನತೆಗೆ ಸಲ್ಲಬೇಕು.ಜಿಲ್ಲೆಯ ಜನರ ಸಹಕಾರದಿಂದಲೇ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಪೂಜ್ಯ ಮಹ್ಮದ ತಸದುಕ ನದವಿ, ಪೂಜ್ಯ ಮೌಲಾನಾ ಅಬ್ದುಲ್ ಗನಿ ಖಾನಸಾಬ್ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಫಾದರ್ ವಿಲ್ಸನ್, ಅಭಿನಂದನ ಸಮಿತಿಯ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಮಾತನಾಡಿದರು. ಪೆÇ್ರ. ಸಿದ್ರಾಮಪ್ಪ ಮಾಸಿಮಾಡೆ ಅಭಿನಂದನಾ ನುಡಿ ಹೇಳಿದರು. ಡಾ. ರಜನೀಶ್ ವಾಲಿ, ಸೋಮಶೇಖರ್ ಬಿರಾದರ್ ಚಿದ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಭಿನಂದನ ಸಮಿತಿಯ ಕಾರ್ಯದರ್ಶಿ ಸುರೇಶ ಚನ್ನಶೆಟ್ಟಿ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಕ.ಸಾ.ಪ. ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು. ಬೀದರ ಸನ್ಮಾರ್ಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ ವಡಗಾವೆ ವಂದಿಸಿದರು.


