
ಕನ್ನಡ ಬಿಂಬ, ಬೀದರ್
ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಕಾರಖಾನೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೇರಿಕೊಂಡಿತು. ಜೊತೆಗೆ ಕಾರಖಾನೆ ಕುರಿತಂತೆ ಶೇರುದಾರ ಸದಸ್ಯರು, ಕಬ್ಬು ಬೆಳೆಗಾರರು ಮತ್ತು ರೈತರಲ್ಲಿ ಮನೆ ಮಾಡಿಕೊಂಡಿದ್ದ ಆತಂಕ ನಿವಾರಣೆಯಾಯಿತು.
ಕಾರಖಾನೆಯು ಈ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸುವ, ಆರ್ಥಿಕ ಸಮಸ್ಯೆಗಳ ಸುಳಿಯಿಂದ ಹೊರ ಬರುವ ವಿಶ್ವಾಸ ರೈತ ಸಮುದಾಯದಲ್ಲಿ ಮೂಡಿದೆ. ಡಿಸಿಸಿ ಬ್ಯಾಂಕು ಮತ್ತು ನಾರಂಜಾ ಕಾರಖಾನೆಯನ್ನು ಯಶಸ್ವಿಯಾಗಿ ನಡೆಸಿದ ಅನುಭವಿ, ಹಿರಿಯ ಸಹಕಾರಿ ನಾಯಕರಾದ ಉಮಾಕಾಂತ ನಾಗಮಾರಪಳ್ಳಿ ಅವರ ಮಾರ್ಗದರ್ಶನದಲ್ಲಿ, ಯುವ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಅವರ ಅಧ್ಯಕ್ಷತೆಯಲ್ಲಿ ಈ ಕಾರಖಾನೆಯು ಯಶಸ್ವಿಯಾಗಿ ಮುನ್ನಡೆಯಬಹುದೆಂಬ ವಿಶ್ವಾಸ ಇಮ್ಮುಡಿಗೊಂಡಿದೆ.
ಶುಕ್ರವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ನಿರೀಕ್ಷೆಯಂತೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಬಾಲಾಜಿ ಚಹ್ವಾಣ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆ ನಂತರ ನಾಗಮಾರಪಳ್ಳಿ ಪರಿವಾರದ ಬೆಂಬಲಿಗರು, ಹಿತೈಷಿಗಳು, ರೈತ ನಾಯಕರು, ಬೇರೆ ಬೇರೆ ಸಂಘ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಕಬ್ಬು ಬೆಳೆಗಾರರು ಹರ್ಷ ವ್ಯಕ್ತಪಡಿಸಿ, ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಎಲ್ಲರೂ ಅಭಿನಂದಿಸಿ, ಸನ್ಮಾನಿಸಿ, ಗೌರವಿಸಿದರು. ಕಾರಖಾನೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೇರ್ಪಡೆಯಾಗಿದೆ ಎಂದು ರೈತ ಮುಖಂಡರು ಹೇಳಿದರು.
ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ಆರ್ಥಿಕವಾಗಿ ಸಶಕ್ತಿಗೊಳಿಸಲು, ಉಪಉತ್ಪನ್ನ ಘಟಕಗಳನ್ನು ಸ್ಥಾಪಿಸಿ, ಆ ಮೂಲಕ ಲಭಿಸುವ ಹೆಚ್ಚುವರಿ ಸಂಪನ್ಮೂಲವನ್ನು ಶೇರುದಾರ ಸದಸ್ಯರಿಗೆ, ಕಬ್ಬು ಬೆಳೆಗಾರರಿಗೆ ತಲುಪಿಸಲು ಅತ್ಯಂತ ಪ್ರಾಮಾಣಿಕವಾಗಿ, ಅಷ್ಟೇ ಕಾಳಜಿಯಿಂದ ಶ್ರಮಿಸಲಾಗುತ್ತದೆ ಎಂದು ನೂತನ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಕಾರಖಾನೆಯ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ನೂತನ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷ ಬಾಲಾಜಿ ಚಹ್ವಾಣ್, ನಿರ್ದೇಶಕರಾದ ಕುಶಾಲರಾವ್ ಯಾಬಾ, ಸಂಗಮೇಶ ಪಾಟೀಲ್, ಸಂಜುಕುಮಾರ ಸಿದ್ದಾಪುರ, ಸಿದ್ರಾಮ ವಾಘಮಾರೆ, ರಾಜಕುಮಾರ ಕರಂಜಿ, ಚಂದ್ರಕಾಂತ ಹಿಪ್ಪಳಗಾಂವ್, ವಿಜಯಕುಮಾರ ಪಾಟೀಲ್, ಅಮರೇಶ ಗಂಗಪ್ಪ ನಾಗಮಾರಪಳ್ಳಿ, ಮಲ್ಲಮ್ಮ ಕಾಶಿನಾಥ ಪಾಟೀಲ್, ಶೋಭಾವತಿ ಶಂಕರೆಪ್ಪ ಪಾಟೀಲ್, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಮತ್ತಿತರ ಗಣ್ಯರು ಸಂಭ್ರಮೋತ್ಸವದಲ್ಲಿ ಭಾಗಿಯಾದರು. ವಿಜಯೋತ್ಸವ ಮೆರವಣಿಗೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಅವರು ಹೆಜ್ಜೆ ಹಾಕಿ, ಬೆಂಬಲಿಗರ ಖುಷಿ ಹೆಚ್ಚಿಸಿದರು.
ರೈತ ಹಿತ ಕಾಪಾಡುವೆ: ಸೂರ್ಯಕಾಂತ
ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಜಿಲ್ಲೆಯ ರೈತರ ಹಿತ ರಕ್ಷಿಸಲು ಹಗಲಿರುಳು ಶ್ರಮಿಸುವುದಾಗಿ ಕಾರ್ಖಾನೆಯ ನೂತನ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಹೀಗಾಗಿ ನನ್ನೆಲ್ಲ ಶಕ್ತಿ, ಸಾಮಥ್ರ್ಯವನ್ನು ಬಳಸಿಕೊಂಡು ಇದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಪ್ರಯತ್ನಿಸುವೆ ಎಂದು ತಿಳಿಸಿದರು.
ಹಿರಿಯ ಸಹೋದರ ಉಮಾಕಾಂತ ನಾಗಮಾರಪಳ್ಳಿ ಹಾಗೂ ರೈತರ ಮಾರ್ಗದರ್ಶನದಲ್ಲಿ ರೈತರ ಹಿತಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಗದಿತ ಸಮಯಕ್ಕೆ ಕಬ್ಬು ನುರಿಸುವ ಹಂಗಾಮು ಆರಂಭಿಸಿ, ರೈತರಿಗೆ ಸಕಾಲಕ್ಕೆ ಕಬ್ಬಿನ ಬಿಲ್ ಪಾವತಿಸಲಾಗುವುದು ಎಂದು ಹೇಳಿದರು.
ಸೂರ್ಯಕಾಂತ ಅವರು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಿವಿಧ ಜನಪರ ಯೋಜನೆಗಳ ಮೂಲಕ ಗಮನ ಸೆಳೆದಿದ್ದಾರೆ.


