
ಕನ್ನಡ ಬಿಂಬ, ಬೀದರ್
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ರೈತರ ಹೋರಾಟವನ್ನು ಕೀಳು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಹರಿಹಾಯ್ದಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರೈತರ ಮೌನದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಹೋರಾಟ ನಡೆಸುತ್ತಿರುವ ರೈತರು ಎಚ್ಚರದಿಂದಿರಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷವು ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸೋಮವಾರ ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಭಾನುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಭಗವಂತ ಖೂಬಾ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಖೂಬಾ ತಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕೀಳು ಪದ ಬಳಸಿ ನಿಂದಿಸಿದ್ದಾರೆ. ಖೂಬಾ ಮಾತುಗಳನ್ನು ರೈತರು ತಡೆಯಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ರೈತರೂ ಮೌನವಾಗಿ ಈ ಕೀಳು ರಾಜಕೀಯದ ಟೀಕೆಗೆ ಸಾಕ್ಷಿಯಾದರು. ಇದು ವಿಷಾದಕರ ಎಂದು ಸಚಿವ ಖಂಡ್ರೆ ಬೇಸರದಿಂದ ಹೇಳಿದರು.
ಕಬ್ಬಿಗೆ ಅಧಿಕ ಬೆಲೆ ಕೊಡಬೇಕು ಎಂಬ ರೈತರ ಬೇಡಿಕೆ ನ್ಯಾಯುತವಾಗಿದೆ. ಇದಕ್ಕೆ ತಮ್ಮ ಬೆಂಬಲವಿದೆ. ಆದರೆ, ರೈತರೂ ವಸ್ತುಸ್ಥಿತಿಯನ್ನು ಅರಿತುಕೊಳ್ಳಬೇಕು. ಎಫ್‍ಆರ್‍ಪಿ, ಸಕ್ಕರೆ ಬೆಲೆ, ಸಕ್ಕರೆ ರಫ್ತು, ಎಥೆನಾಲ್ ಬೆಲೆ ಹೀಗೆ ಎಲ್ಲವೂ ಕೇಂದ್ರ ಸರಕಾರದ ಕೈಯಲ್ಲಿದೆ. ಸಕ್ಕರೆ ಉದ್ಯಮದ ಸಂಬಂಧ ಕೇಂದ್ರ ಸರಕಾರದ ತಪ್ಪು ನೀತಿಗಳೇ ಸಮಸ್ಯೆಗೆ ಕಾರಣವಾಗಿವೆ. ಎಥೆನಾಲ್ ಬೆಲೆ ಹೆಚ್ಚಿಸಬೇಕು. ಸಕ್ಕರೆ ಮೇಲಿನ ಜಿಎಸ್‍ಟಿ ಬಿಡಬೇಕು. ಇದರಿಂದ ಕಬ್ಬಿಗೆ ಇನ್ನಷ್ಟು ಅಧಿಕ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ರಾಜ್ಯ ಸರಕಾರ ಹಿಂದಿನಿಂದಲೂ ರೈತರನ್ನು ಬೆಂಬಲಿಸುತ್ತಿದೆ. ಕಾಂಗ್ರೆಸ್ ರೈತಪರವಾಗಿದೆ. ಬೆಲೆ ಬೇಡಿಕೆ ಈಡೇರಿಸಲು ಸರಕಾರದ ಪರವಾಗಿ 50 ರೂಪಾಯಿ ಮತ್ತು ಕಾರಖಾನೆಯಿಂದ 50 ರೂಪಾಯಿ ಕೊಡಿಸುವ ತೀರ್ಮಾನ ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಎಫ್‍ಆರ್‍ಪಿ ಪ್ರಕಾರ 2600 ಕೊಡಬಹುದು. ಜಿಲ್ಲಾಧಿಕಾರಿಯವರು ಸಭೆ ನಡೆಸಿ ರೂ. 2800 ಕ್ಕೆ ಒಪ್ಪಿಸಿದ್ದಾರೆ. ರಾಜ್ಯ ಸರಕಾರದ 50 ರೂ. ಮತ್ತು ಕಾರಖಾನೆಯ ರೂ. 50 ಸೇರಿದರೆ ಟನ್ ಕಬ್ಬಿಗೆ 2900 ಆಗುತ್ತದೆ ಎಂದು ಸಚಿವರು ವಿವರಿಸಿದರು. ಜಿಲ್ಲಾಧಿಕಾರಿಗಳು ಮತ್ತೊಂದು ಬಾರಿ ಸಭೆ ನಡೆಸುತ್ತಾರೆ. ನಾನೂ ಮಾತನಾಡುತ್ತೇನೆ. ಕಾರಖಾನೆಗಳೂ ಉಳಿಯಬೇಕು. ರೈತರಿಗೂ ಹೆಚ್ಚಿನ ಸಹಾಯ ಅಗಬೇಕು. ಈ ದಿಸೆಯಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಬ್ಬಿನ ಬೆಲೆ ಹೆಚ್ಚಳ ಬೇಡಿಕೆ ಕುರಿತು ಜಿಲ್ಲಾಧಿಕಾರಿಯವರು ಎಲ್ಲ ಮಾಹಿತಿ ನೀಡಿದ್ದಾರೆ. ಸಭೆಗಳನ್ನೂ ನಡೆಸಿದ್ದಾರೆ. ನಾನೂ ಜಿಲ್ಲೆಯ ಸಹಕಾರಿ ಸಕ್ಕರೆ ಕಾರಖಾನೆ ಅದ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಬೆಲೆ ಹೆಚ್ಚಳ ಕುರಿತು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಇನ್ನಷ್ಟು ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ರೈತರ ಬೇಡಿಕೆಯಂತೆ ಬೆಲೆ ಹೆಚ್ಚಳಕ್ಕೆ ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ರೈತರು ಹೋರಾಟವನ್ನು ಕೈಬಿಡಬೇಕು ಎಂದು ಸಚಿವ ಖಂಡ್ರೆ ಕೋರಿದರು.
ಪ್ರತಿಭಟನೆ ನಿಲ್ಲದು: ಸಚಿವರು ಬೆಲೆ ಹೆಚ್ಚಿಸುವ ಘೋಷಣೆ ಮಾಡಬಹುದು ಎಂದುಕೊಂಡಿದ್ದೇವು. ಆದರೆ, ಅವರು ಬರೀ ಭರವಸೆ ನೀಡಿದ್ದಾರೆ. ಹೀಗಾಗಿ ಧರಣಿ ಮುಂದುವರೆಸಲು ತೀರ್ಮಾನಿಸಿದ್ದೇವೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಭಾಲ್ಕಿ ತಿಳಿಸಿದ್ದಾರೆ.
ಬೆಲೆ ಹೆಚ್ಚಳ ಬೇಡಿಕೆ ಅಚಲವಾಗಿದೆ. ಸರಕಾರದ ನಿರ್ಲಕ್ಷ್ಯ ಮುಂದುವರೆದಲ್ಲಿ ದಿ. 21 ರಂದು ಜಿಲ್ಲೆಯಾದ್ಯಂತ ರಸ್ತೆತಡೆ ಚಳುವಳಿ ನಡೆಸಲಾಗುತ್ತದೆ ಎಂದು ಮಲ್ಲಿಕಾರ್ಜುನ ಸ್ವಾಮಿ ಮಾಹಿತಿ ನೀಡಿದ್ದಾರೆ.


