
ಕನ್ನಡ ಬಿಂಬ, ಬೀದರ್
ಕಳೆದ ತಿಂಗಳಷ್ಟೇ (ಅಕ್ಟೋಬರ್ 17) ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ ಸಾಲಿನ ರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಬೀದರ್‍ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಗೆ ಅಮೂಲ್ಯ ಕೊಡುಗೆ ನೀಡಿದ ಮತ್ತು ಅಸಾಧಾರಣ, ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಸ್ಕೌಟ್ಸ್ ಗೈಡ್ಸ್ ಸಂಸ್ಥೆ ನೀಡುವ ಈ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವದಕ್ಕೆ ಪ್ರತ್ಯೇಕವಾಗಿ ರಾಷ್ಟ್ರೀಯ ಪ್ರಶಸ್ತಿ ಸಮಿತಿಯೂ ಇದೆ. ಈ ಸಮಿತಿಯು ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯದೊಳಗೆ ಅತ್ಯುತ್ತಮ ಕೊಡುಗೆ ನೀಡಿದ ಹಾಗೂ ಅನುಕರಣೀಯ ಮತ್ತು ಮಾದರಿ ನಾಯಕತ್ವ ಹೊಂದಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. 2022-23 ನೇ ಸಾಲಿನ ಪ್ರಶಸ್ತಿ ಪುರಸ್ಕøತರ ಪಟ್ಟಿ ಬಿಡುಗಡೆಯಾಗಿದ್ದು, ಡಾ.ಅಬ್ದುಲ್ ಖದೀರ್ ಅವರನ್ನು ಸಿಲ್ವರ್ ಎಲಿಫೆಂಟ್ ಅವಾರ್ಡ್‍ಗೆ ಆಯ್ಕೆ ಮಾಡಲಾಗಿದೆ.
ಉತ್ತರ ಪ್ರದೇಶ ರಾಜಧಾನಿ ಲಕ್ನೋದ ರಾಜಭವನದಲ್ಲಿ ನವೆಂಬರ್ 26 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಭವ್ಯ ಸಮಾರಂಭದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ. ಕೆ.ಕೆ. ಖಂಡೇಲವಾಲ ತಿಳಿಸಿದ್ದಾರೆ.
ಡಾ. ಅಬ್ದುಲ್ ಖದೀರ್ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಬೀದರ್‍ನಲ್ಲಿ 2024 ರಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮೊದಲ ಜಾಂಬೊರೇಟ್ ಮಾದರಿಯಾಗಿ ಸಂಘಟಿಸಿದ ಹಿರಿಮೆ ಅವರದ್ದಾಗಿದೆ. ಹಿಂದೆ ರಾಜ್ಯಮಟ್ಟದಲ್ಲಿ ಜಾಂಬೊರೇಟ್ ನಡೆಸಿಕೊಂಡು ಬರಲಾಗುತ್ತಿತ್ತು. ವಿಭಾಗಮಟ್ಟದಲ್ಲೂ ಜಾಂಬೊರೇಟ್ ಆಯೋಜನೆಗೆ ಕಾರಣರಾದವರು ಡಾ. ಅಬ್ದುಲ್ ಖದೀರ್. ಅವರಿಂದಾಗಿ ಈಗ ವಿಭಾಗಮಟ್ಟದಲ್ಲಿ ಕೂಡ ಜಾಂಬೊರೇಟ್‍ಗಳು ನಡೆಯುತ್ತಿವೆ.
ಡಾ. ಅಬ್ದುಲ್ ಖದೀರ್ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಡಾ. ಅಬ್ದುಲ್ ಖದೀರ್ ಅವರಿಗೆ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದಕ್ಕೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜೂಜಾರೆ ಹಾಗೂ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಸಂತಸ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.


