
ಕನ್ನಡ ಬಿಂಬ, ಬೆಂಗಳೂರು
ಕೇಂದ್ರ ಸರಕಾರವು ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆ ಸಕ್ಕರೆಗೆ ಪ್ರತ್ಯೇಕ ವರ್ಗವಿರುವ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕಬ್ಬಿನ ಎಫ್‍ಆರ್‍ಪಿ, ಸಕ್ಕರೆ ಇಳುವರಿ ಮತ್ತು ಬೆಲೆ ನಿಗದಿ ಕುರಿತಂತೆ ರಾಜ್ಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿಯವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಬರೆದಿರುವ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಂಬಂಧಿತ ಸಕ್ಕರೆ ಮಾರಾಟದಿಂದ ಬರುವ ಹೆಚ್ಚಿನ ಲಾಭವನ್ನು ಕಬ್ಬಿನ ಬೆಲೆ ರೂಪದಲ್ಲಿ ರೈತರಿಗೆ ತಲುಪಿಸಬಹುದು ಎಂದು ಸಿಎಂ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರವು ಗಣನೀಯ ಆರ್ಥಿಕ ನೆರವು ಹಾಗೂ ಪೆÇ್ರೀತ್ಸಾಹ ಧನ ನೀಡಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು, ಕರ್ನಾಟಕದ ಕಾರ್ಖಾನೆಗಳಿಗೆ ಯಾವ ರೀತಿಯ ನೆರವು ನೀಡಲಾಗಿದೆ ಎನ್ನುವುದರ ಕುರಿತು ಅಂಕಿಸಂಖ್ಯೆ ನೀಡುವಂತೆ ಒತ್ತಾಯಿಸಿದ್ದಾರೆ. ಒಟ್ಟು ಎಷ್ಟು ಮೊತ್ತ ನೀಡಲಾಗಿದೆ, ನೆರವಿನ ಮಾದರಿ ಯಾವುದು, ಪ್ರಯೋಜನವಾದ ಅವಧಿ ಯಾವುದು ಎಂಬ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.
ಸಕ್ಕರೆ ಕಾರಖಾನೆಗಳು ಕೇಂದ್ರ ಸರಕಾರದಿಂದ ಪ್ರಯೋಜನ ಪಡೆದಿರುವುದು ನಿಜವಾಗಿದ್ದಲ್ಲಿ, ಈ ಪ್ರಯೋಜನವು ರೈತರಿಗೆ ನ್ಯಾಯಯುತ ಆದಾಯವಾಗಿ ಪರಿವರ್ತನೆಗೊಂಡಿದೆಯೇ ಎನ್ನುವುದನ್ನು ರಾಜ್ಯ ಸರಕಾರ ಹಾಗೂ ರೈತ ಪ್ರತಿನಿಧಿಗಳು ಪರಿಶೀಲಿಸಬಹುದು ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 7ರಂದು ಕಬ್ಬು ದರಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲ ಪಾಲುದಾರರನ್ನು ಆಹ್ವಾನಿಸಲಾಗಿದ್ದ ಸಭೆಗೆ ಕರ್ನಾಟಕದ ಯಾವೊಬ್ಬ ಕೇಂದ್ರ ಸಚಿವರೂ ಆಗಮಿಸಿರಲಿಲ್ಲ. ತಮ್ಮ ಧ್ವನಿಯನ್ನು ರಾಜ್ಯದ ಪ್ರತಿನಿಧಿಗಳು ದೆಹಲಿ ತಲುಪಿಸುತ್ತಾರೆ ಎಂಬ ಭರವಸೆಯನ್ನು ರೈತರು ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಯನ್ನು ಹುಸಿಗೊಳಿಸುವ ಮೂಲಕ ಮತ್ತೊಮ್ಮೆ ವಂಚಿಸಲಾಯಿತು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಎಥನಾಲ್ ಮಿಶ್ರಣದಿಂದ ಹಾಗೂ ಎಥನಾಲ್ ಖರೀದಿಯ ಪ್ರಮಾಣದ ಏರಿಕೆಯಿಂದ ಕಬ್ಬು ಬೆಳೆಯ ಕ್ಷೇತ್ರಕ್ಕೆ ಉತ್ತೇಜನ ಸಿಕ್ಕಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ. ಎಥನಾಲ್ ಮಿಶ್ರಣದ ಪ್ರಮಾಣವು 2023ರಲ್ಲಿ ಶೇ 10ಕ್ಕೆ ತಲುಪಿದ್ದು ಬಿಟ್ಟರೆ ವಾಸ್ತವದಲ್ಲಿ ಕೇಂದ್ರ ಸಚಿವರು ಹೇಳಿರುವಂತೆ ಬೇರೆ ಯಾವುದೇ ಬದಲಾವಣೆ ಆಗಿಲ್ಲ. ಕರ್ನಾಟಕದ ಡಿಸ್ಟಿಲ್ಲರಿಗಳಿಂದ ಎಥನಾಲ್ ಪೂರೈಕೆಯು ಕೊಂಚ ಏರಿಕೆಯಾಗಿದೆ. 2022-23ರಲ್ಲಿ 38 ಕೋಟಿ ಲೀಟರ್ ಪೂರೈಕೆಯಾಗಿತ್ತು. 2024-25ರಲ್ಲಿ ಇದು ಕೇವಲ 47 ಕೋಟಿ ಲೀಟರ್‍ಗೆ ತಲುಪಿದೆ. ಆದರೆ ಸ್ಥಾಪಿತ ಸಾಮಥ್ರ್ಯವು 270 ಕೋಟಿ ಲೀಟರ್ ಆಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವು ಹೇಳಿಕೊಳ್ಳುವಂತೆ ದೊಡ್ಡ ಪ್ರಮಾಣದ ಎಥನಾಲ್ ಖರೀದಿ ನಡೆದಿಲ್ಲ ಎನ್ನುವುದನ್ನು ಮರೆಯಬಾರದು ಎಂದು ಸಿಎಂ ಹೇಳಿದ್ದಾರೆ.
ಆದರೆ, ಎಥನಾಲ್ ಮಿಶ್ರಣದ ಲಾಭವನ್ನು ನಿಜಕ್ಕೂ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಎಥನಾಲ್ ಮಿಶ್ರಣವು ಕಬ್ಬಿನ ವಲಯದಲ್ಲಿ ತೆರಿಗೆ ಸಾಮಥ್ರ್ಯವನ್ನು ಕ್ರಮಬದ್ಧವಾಗಿ ಏರಿಕೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ರೈತರೇ ಆಗಿದ್ದಾರೆ. ಹೀಗಾಗಿ ಅವರೇ ನಿಜವಾದ ಲಾಭದ ಪಾಲುದಾರರಾಗಬೇಕು. 2013ರಲ್ಲಿ ಎಥನಾಲ್ ಮಿಶ್ರಣವು ಶೇ. 5ಕ್ಕಿಂತ ಕಡಿಮೆ ಇದ್ದರೂ ಹಾಗೂ ರಿಕವರಿ ದರ ಶೇ 9.5 ಇದ್ದರೂ ಯುಪಿಎ ಅವಧಿಯಲ್ಲಿ ಎಫ್‍ಆರ್‍ಪಿ ಅತ್ಯಂತ ನ್ಯಾಯಯುತವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಸದ್ಯ ಎಥನಾಲ್ ಮಿಶ್ರಣವು ಶೇ. 20 ಆಗಿದೆ ಮತ್ತು ರಿಕವರಿ ದರ ಶೇ. 10.25ರಷ್ಟಿದೆ. ಆದರೆ, ಸಿಎಜಿಆರ್ ಅಂದರೆ,
ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ ಅಂದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ಹೂಡಿಕೆಯ ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇ. 3.8ಕ್ಕೆ ಕುಸಿದಿದೆ. ಆದರೆ, ಕೇಂದ್ರ ಸರ್ಕಾರವು ಈ ಅಂಕಿ ಸಂಖ್ಯೆಗಳಿಗೆ ಅನುಗುಣವಾಗಿ ನ್ಯಾಯೋಚಿತ ಬೆಲೆ ನಿಗದಿ ಮಾಡುತ್ತಿಲ್ಲ. ಇದರ ಪರಿಣಾಮ ಕಬ್ಬಿನ ಉತ್ತಮ ಇಳುವರಿಯ ಹೊರತಾಗಿಯೂ ರೈತರು ಅವೈಜ್ಞಾನಿಕ ಎಫ್‍ಆರ್‍ಪಿ ಹಾಗೂ ರಿಕವರಿ ದರದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ ಮಿತವಾದ ಸಂಪನ್ಮೂಲಗಳಿಂದ ಕಬ್ಬು ಬೆಳೆಗಾರರಿಗೆ ಎಲ್ಲ ರೀತಿಯ ಸಾಧ್ಯ ಪರಿಹಾರವನ್ನು ವಿಸ್ತರಿಸುತ್ತಿರುವಾಗ, ಕೇಂದ್ರ ಸರ್ಕಾರವು ಕರ್ನಾಟಕದ ವಿಷಯದಲ್ಲಿ ಪದೇ ಪದೇ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಮುಖ್ಯಮಂತ್ರಿಯವರು ಆರೋಪಿಸಿದ್ದಾರೆ.


